ವಿಶ್ವ ಮನ್ನಣೆ ಗಳಿಸುತ್ತಿರುವ ಭಾರತದ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಮೇಲೇರುತ್ತಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯಕ್ಕೆ ಈ ವರ್ಷ 7ನೇ ಸ್ಥಾನ ಲಭಿಸಿದೆ. ಭಾರತ ವಿಶ್ವದಲ್ಲೇ ಅತ್ಯಂತ ಮೌಲ್ಯಯುತವಾದ ಏಳನೇ ಬ್ರ್ಯಾಂಡ್ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಬ್ರ್ಯಾಂಡ್ ಮೌಲ್ಯದಲ್ಲಿ ಶೇ 32ರಷ್ಟು ಹೆಚ್ಚಳವಾಗಿ, 13,735 ಕೋಟಿ ರೂ.ಗೆ ಏರಿಕೆ ಆಗಿದೆ.
ಬ್ರಿಟನ್ ಮೂಲದ 'ಬ್ರ್ಯಾಂಡ್ ಫೈನಾನ್ಸ್' ಸಲಹಾ ಸಂಸ್ಥೆ ಸಿದ್ಧಪಡಿಸಿರುವ ವಾರ್ಷಿಕ ಪಟ್ಟಿಯಲ್ಲಿ, ಅಮೆರಿಕ ದೇಶದ ಬ್ರ್ಯಾಂಡ್‌ಗೆ ಅಗ್ರಸ್ಥಾನ ಸಿಕ್ಕಿದೆ. ಕಳೆದ ವರ್ಷವೂ ಅದು ಮೊದಲ ರ‌್ಯಾಂಕಿಂಗ್ ಗಳಿಸಿತ್ತು. ಅಮೆರಿಕದ ಬ್ರ್ಯಾಂಡ್ ಮೌಲ್ಯ 1,28,848 ಕೋಟಿ ರೂ.ನಷ್ಟಿದೆ. ಚೀನಾ ಮತ್ತು ಜರ್ಮನಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
ಬ್ರಿಟನ್ ನಾಲ್ಕನೇ ಸ್ಥಾನ ಗಳಿಸಿದ್ದರೆ, ಜಪಾನ್ 5ನೇ ರ‌್ಯಾಂಕ್ ಪಡೆದಿದೆ. ಫ್ರಾನ್ಸ್‌ಗೆ ಪಟ್ಟಿಯಲ್ಲಿ 6ನೇ ಸ್ಥಾನ. ಗಮನಾರ್ಹ ಸಂಗತಿ ಎಂದರೆ ಫ್ರಾನ್ಸ್ ಮತ್ತು ಭಾರತ ತಲಾ ಒಂದು ಸ್ಥಾನ ಮೇಲೇರಿವೆ. ಟಾಪ್ ಐದು ರಾಷ್ಟ್ರಗಳು ಕಳೆದ ವರ್ಷ ಹೊಂದಿದ್ದ ತಮ್ಮ ಸ್ಥಾನಗಳನ್ನು ಕಾಪಾಡಿಕೊಂಡಿವೆ.
ವಿಶ್ವದ ಅತ್ಯಂತ ಮೌಲ್ಯಯುತ ನೇಷನ್ ಬ್ರ್ಯಾಂಡ್‌ಗಳ ವಾರ್ಷಿಕ ಪಟ್ಟಿಯಲ್ಲಿ ಪ್ರಕಟಿಸಿರುವ 20 ರಾಷ್ಟ್ರಗಳ ಪೈಕಿ ಭಾರತವೊಂದೇ ಹೆಚ್ಚಿನ ಮೌಲ್ಯಾಂಕಗಳನ್ನು ಗಳಿಸಿದ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯ. ಚೀನಾ ಬ್ರ್ಯಾಂಡ್ ಮೌಲ್ಯದಲ್ಲಿ ಶೇ 1ರಷ್ಟು ಕುಸಿದರೂ, ಅದು ತನ್ನ 2ನೇ ಸ್ಥಾನವನ್ನು ಉಳಿಸಿಕೊಂಡಿದೆ. ಅದರ ಮೌಲ್ಯವೀಗ 41,205 ಕೋಟಿ ರೂ.ನಷ್ಟಿದೆ.
ವಿವಿಧ ರಾಷ್ಟ್ರಗಳ ಬಹುದೊಡ್ಡ ಕಂಪನಿ(ಬಹುರಾಷ್ಟ್ರೀಯ ಕಂಪನಿಗಳು)ಗಳ ಆದಾಯ, ಅಲ್ಲಿನ ರಾಜಧನ ಪರಿಹಾರ ವ್ಯವಸ್ಥೆ, ಆಯಾ ರಾಷ್ಟ್ರಗಳ ಜಿಡಿಪಿ ಬೆಳವಣಿಗೆಗೆ ಅವು ನೀಡುತ್ತಿರುವ ಕೊಡುಗೆ ಇತ್ಯಾದಿ ಮಹತ್ವದ ಅಂಶಗಳನ್ನು ಪರಿಗಣಿಸಿ, ವಿಶ್ವದ 100 ರಾಷ್ಟ್ರಗಳ ಬ್ರ್ಯಾಂಡ್ ಮೌಲ್ಯ ಮತ್ತು ಅವುಗಳ ಬಲವನ್ನು ಅಳೆಯಲಾಗಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ತಿಳಿಸಿದೆ.
ಪ್ರತಿ ರಾಷ್ಟ್ರದ ಎಲ್ಲಾ ಬ್ರ್ಯಾಂಡ್‌ಗಳ ಐದು ವರ್ಷಗಳ ಭವಿಷ್ಯದ ಮಾರಾಟ ಮತ್ತು ಜಿಡಿಪಿ ದರ ಆಧರಿಸಿದ ಸಂಕೀರ್ಣ ವಿಧಾನದಲ್ಲಿ ಬ್ರ್ಯಾಂಡ್ ಮೌಲ್ಯದ ಅಳತೆಗೋಲು ಮಾಡಲಾಗಿದೆ ಎಂದು ಅದು ತಿಳಿಸಿದೆ.
ಭಾರತದ 'ಇನ್‌ಕ್ರೆಡಿಬಲ್ ಇಂಡಿಯಾ' ಘೋಷಣೆಯು ಬ್ರ್ಯಾಂಡ್ ಮೌಲ್ಯದ ಅಳತೆಗೋಲಿಗೆ ಉತ್ತಮವಾಗಿ ಕೆಲಸ ಮಾಡಿದೆ. ಆದರೆ ಜರ್ಮನಿ ವೋಕ್ಸ್‌ವ್ಯಾಗನ್ ಬಿಕ್ಕಟ್ಟಿನಿಂದ ಬಳಲುತ್ತಿದೆ ಎಂದು ಬೊಟ್ಟು ಮಾಡಿರುವ 'ಬ್ರ್ಯಾಂಡ್ ಫೈನಾನ್ಸ್', ಅಮೆರಿಕ ಶಕ್ತಿಶಾಲಿ ಬ್ರ್ಯಾಂಡ್ ಆಗಿ ಮುಂದುವರಿದಿದ್ದು, ಅಲ್ಲಿನ ವ್ಯಾಪಾರ ಮತ್ತು ವಹಿವಾಟು ಪರಿಸರ ಆಕರ್ಷಕವಾಗಿದೆ ಎಂದು ತಿಳಿಸಿದೆ.
ಅಮೆರಿಕದಲ್ಲಿರುವ 'ವಿಶ್ವವನ್ನೇ ಮುನ್ನಡೆಸುವ ಉನ್ನತ ಶಿಕ್ಷಣ ವ್ಯವಸ್ಥೆ', ಸಂಗೀತ ಮತ್ತು ಮನರಂಜನಾ ಉದ್ಯಮಗಳ ಪ್ರಾಬಲ್ಯದಿಂದ ಹೆಚ್ಚಾಗುತ್ತಿರುವ ಅಂತಾರಾಷ್ಟ್ರೀಯ ಸಂಬಂಧವು ಅಲ್ಲಿನ ಬ್ರ್ಯಾಂಡ್ ಮೌಲ್ಯ ವರ್ಧನೆಗೆ ಮಹತ್ವದ ಕೊಡುಗೆ ನೀಡಿದೆ.
ಚೀನಾದ ಇತ್ತೀಚಿನ ಷೇರು ಮಾರುಕಟ್ಟೆ ತೀವ್ರ ಕುಸಿತ ಮತ್ತು ಅರ್ಥ ವ್ಯವಸ್ಥೆಯ ಮಂದಗತಿಯು ಅಮೆರಿಕದ ಬ್ರ್ಯಾಂಡ್ ಮೌಲ್ಯ ಟಾಪ್ ಸ್ಥಾನ ಕಾಯ್ದುಕೊಳ್ಳಲು ನೆರವಾಗಿದೆ ಎಂದು ವರದಿ ತಿಳಿಸಿದೆ.
ಬ್ರಿಕ್ಸ್ ರಾಷ್ಟ್ರಗಳ ಪೈಕಿ ಭಾರತವೊಂದೇ ಅತ್ಯಂತ ಹೆಚ್ಚಿನ ಬ್ರ್ಯಾಂಡ್ ಮೌಲ್ಯವರ್ಧನೆ ಗಳಿಸಿದೆ. ಉದಯೋನ್ಮುಖ ರಾಷ್ಟ್ರಗಳ ಸಾಲಿನಲ್ಲಿ ಭಾರತ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ದೇಶವಾಗಿ ಹೊರಹೊಮ್ಮಿದೆ.
ಬ್ರ್ಯಾಂಡ್ ಫೈನಾನ್ಸ್ ಏನಿದು?
ವಿವಿಧ ರಾಷ್ಟ್ರಗಳ ಮತ್ತು ಅಲ್ಲಿನ ಬೃಹತ್ ಕಂಪನಿಗಳ ಅಮೂರ್ತ ಸ್ವತ್ತಿನ ಮೌಲ್ಯಮಾಪನ ನಡೆಸುವ ಸ್ವತಂತ್ರ ಸಲಹಾ ಸಂಸ್ಥೆಯೇ ಬ್ರ್ಯಾಂಡ್ ಫೈನಾನ್ಸ್. ಲಂಡನ್ ಮೂಲದ ಈ ಸಲಹಾ ಸಂಸ್ಥೆಯು ಉತ್ತಮ ವಹಿವಾಟು, ಹೆಚ್ಚಿನ ಆದಾಯ ಮತ್ತು ಸ್ವತ್ತು ಹಾಗೂ ಖ್ಯಾತಿ ಗಳಿಸುವ ಕಂಪನಿಗಳು ಮತ್ತು ಸಂಸ್ಥೆಗಳ ಮೌಲ್ಯಮಾಪನ ನಡೆಸಿ, ವರದಿ ಪ್ರಕಟಿಸುತ್ತದೆ. ಯಾವುದೇ ಕಂಪನಿ ತನ್ನ ಉತ್ಪನ್ನ ಅಥವಾ ಬ್ರ್ಯಾಂಡ್ ಅಥವಾ ಅಮೂರ್ತ ಸ್ವತ್ತಿನ ಪರಿಣಾಮಕಾರಿ ನಿರ್ವಹಣೆ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಅದು ಸಲಹಾ ಸೇವೆ ಒದಗಿಸುತ್ತಿದೆ. ಐಎಸ್‌ಒ 10668 ಪ್ರಮಾಣೀಕೃತ ಸಂಸ್ಥೆಯಾಗಿರುವ ಬ್ರ್ಯಾಂಡ್ ಫೈನಾನ್ಸ್ ಅನ್ನು ಪ್ರೈಸ್ ವಾಟರ್‌ಹೌಸ್‌ನ ಹೆಸರಾಂತ ಲೆಕ್ಕ ಪರಿಶೋಧಕ ಡೇವಿಡ್ ಹೇಗ್ ಅವರು 1996ರಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಖೆ ಇದೀಗ 20ಕ್ಕಿಂತ ಅಧಿಕ ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ