''ದೇಶದ ಅಲ್ಪಸಂಖ್ಯಾತರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಅವರಲ್ಲಿ ವಿಶ್ವಾಸ ತುಂಬುವುದು ಸರಕಾರದ ಕರ್ತವ್ಯ,'' ಎಂದು ಅವರು ಹೇಳಿದ್ದಾರೆ.
''ನಾನು ರಾಜಕಾರಣಿಯಲ್ಲ. ರಾಜಕೀಯದಲ್ಲಿ ನನಗೆ ಆಸಕ್ತಿಯೂ ಇಲ್ಲ. ಆದ್ದರಿಂದ ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಭಾರತದಲ್ಲಿ ಇಂದು ಅಲ್ಪಸಂಖ್ಯಾತರಲ್ಲಿ ಸಾಕಷ್ಟು ಆತಂಕ ಮನೆ ಮಾಡಿರುವುದಂತೂ ನಿಜ,'' ಎಂದು ನಾರಾಯಣಮೂರ್ತಿ ಹೇಳಿದರು.
''ಈ ಮೊದಲು ಬೇರೊಂದು ಪ್ರದೇಶಕ್ಕೆ ಸೇರಿದವರು ಮತ್ತೊಂದು ಕಡೆ ವಾಸಿಸಲು ಹೆದರುತ್ತಿದ್ದರು,'' ಎನ್ನುವ ಮೂಲಕ 1960ರ ದಶಕದಲ್ಲಿ ಮುಂಬಯಿಯಲ್ಲಿ ವಾಸಿಸುವ ದಕ್ಷಿಣ ಭಾರತೀಯರನ್ನು ಶಿವಸೇನೆ ಟಾರ್ಗೆಟ್ ಮಾಡಿದ್ದನ್ನು ಪ್ರಸ್ತಾಪಿಸಿದರು.
''ಕೇಂದ್ರವೇ ಇರಲಿ, ರಾಜ್ಯವೇ ಇರಲಿ ಯಾವುದೇ ಸರಕಾರದ ಜವಾಬ್ದಾರಿ ಎಂದರೆ, ಜನರಲ್ಲಿ ವಿಶ್ವಾಸ ಮೂಡಿಸುವುದು, ಚೈತನ್ಯ ತುಂಬುವುದು, ಪ್ರತಿಯೊಬ್ಬ ಭಾರತೀಯನ ಮನದಲ್ಲಿ ನಂಬಿಕೆ ಹುಟ್ಟಿಸುವುದೇ ಆಗಿರುತ್ತದೆ,'' ಎಂದು ಮೂರ್ತಿ ಅಭಿಪ್ರಾಯಪಟ್ಟರು.
''ಜನರಲ್ಲಿ ಆಶಾಂತಿ, ಆತಂಕ ಮನೆ ಮಾಡಿದ್ದರೆ, ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ತುಳಿಯುತ್ತ, ಅವರ ಇಚ್ಛೆಯಂತೆ ಅವರನ್ನು ಬದುಕಲು ಬಿಡಲಿಲ್ಲ ಎಂದರೆ ಅಂತಹ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ,'' ಎಂದು ಉದ್ಯಮ ದಿಗ್ಗಜ ಹೇಳಿದರು. ಇದಕ್ಕೆ ಚಿಂತಕ ಎಂ.ಎಂ ಕಲ್ಬುರ್ಗಿ ಅವರ ಹತ್ಯೆಯನ್ನು ಪ್ರಸ್ತಾಪಿಸಿ, ''ಅವರಿಗೆ ಏನಾಯಿತು ಎನ್ನುವುದೇ ಇದಕ್ಕೆ ದೊಡ್ಡ ಉದಾಹರಣೆ'' ಎಂದರು.
-----
ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಮುಖಂಡರು ಪ್ರತಿಷ್ಠಿತ ಶಾಲೆಗಳಲ್ಲಿ ಓದಿ ವಿದೇಶಿ ಸ್ಟೈಲ್‌ನಲ್ಲಿ ಮಾತನಾಡುವಂತಿದ್ದರೆ, ಈ 'ಪ್ರತಿಷ್ಠಿತ ಜನರು' ಇವರ ವಿರುದ್ಧ ಇಷ್ಟೊಂದು ಬೊಬ್ಬೆ ಹೊಡೆಯುತ್ತಿರಲಿಲ್ಲ
-ಚೇತನ್ ಭಗತ್, ಲೇಖಕ
**
ಹೊಂದಾಣಿಕೆ, ಬಹುತ್ವವೇ ದೇಶದ ಶಕ್ತಿ: ಪ್ರಣಬ್
ಹೊಸದಿಲ್ಲಿ: ದೇಶದ ಬಹುತ್ವ ಗುಣವನ್ನು ಸಂರಕ್ಷಿಸಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದಿದ್ದಾರೆ. ಹೊಂದಾಣಿಕೆ ಮತ್ತು ಸಹಿಷ್ಣುತೆಯ ಶಕ್ತಿಯಿಂದಾಗಿಯೇ ಭಾರತ ಏಳ್ಗೆಯಾಗಿದೆ ಎಂದು ಅವರು ಹೇಳಿದರು.
ಕಳೆದ ಮೂರು ವಾರಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅಸಹಿಷ್ಣುತೆ ವಿರುದ್ಧ ದನಿ ಎತ್ತಿದ್ದ ಪ್ರಣಬ್ ಮುಖರ್ಜಿ, ದಿಲ್ಲಿ ಹೈಕೋರ್ಟ್‌ನ ಸುವರ್ಣ ಮಹೋತ್ಸವದಲ್ಲೂ ಅಸಹನೆ ವಿರುದ್ದ ಮತ್ತೆ ಗುಡುಗಿದರು.
''ನಮ್ಮ ದೇಶ ಅರಗಿಸಿಕೊಳ್ಳುವ ಮತ್ತು ತಾಳಿಕೊಳ್ಳುವ ಗುಣದಿಂದಲೇ ಈ ಹಂತಕ್ಕೆ ಬಂದಿದೆ. ಎಂಥದೇ ವಿಷಮ ಸ್ಥಿತಿಯಲ್ಲೂ ಇದರ ಬಹುತ್ವ ನಾಶವಾಗದೇ ಉಳಿದಿದೆ. ನಮ್ಮ ನಾಗರಿಕತೆ ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ವೈವಿಧ್ಯತೆಯನ್ನು ಏನೇ ಆದರೂ ಉಳಿಸಿಕೊಳ್ಳಬೇಕು. ಇದನ್ನೇ ನಮ್ಮ ಸಂವಿಧಾನ ಎತ್ತಿ ಹಿಡಿದಿದೆ,'' ಎಂದು ಮುಖರ್ಜಿ ಹೇಳಿದರು.
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ವಿರುದ್ಧ ಹಲವು ಕ್ಷೇತ್ರದ ಗಣ್ಯರ ಆಕ್ರೋಶಕ್ಕೆ ಇನ್ಫೋಸಿಸ್ ಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ದನಿಗೂಡಿಸಿದ್ದಾರೆ.