ರಾಂಚಿಯಲ್ಲಿ ಶನಿವಾರ ನಡೆದ ಆರೆಸ್ಸೆಸ್ ರಾಷ್ಟ್ರೀಯ ಕಾರ‌್ಯಕಾರಿಣಿಯಲ್ಲಿ ಇಂತಹ ಒಂದು ನಿರ್ಣಯ ಕೈಗೊಳ್ಳಲಾಗಿದ್ದು, ಸಂವಿಧಾನದ ಮುಂದೆ ಯಾವ ಧರ್ಮವೂ ದೊಡ್ಡದಲ್ಲ ಎಂದು ಪ್ರತಿಪಾದಿಸಿದೆ.
2011ರ ಜನಗಣತಿ ಅನುಸಾರ ಸಿಖ್ಖರು, ಹಿಂದೂಗಳು, ಬುದ್ಧರು, ಜೈನರ ಜನಸಂಖ್ಯೆ ಕಳೆದ ಐದು ದಶಕಗಳಲ್ಲಿ ಶೇಕಡ 88ರಿಂದ 83.8ಕ್ಕೆ ಇಳಿದಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇಕಡ 9.8ರಿಂದ 14.23ಕ್ಕೆ ಏರಿಕೆಯಾಗಿದೆ. ಕುಟುಂಬ ಕಲ್ಯಾಣ ಯೋಜನೆ ಆಯ್ಕೆಗೆ ಧರ್ಮ ಅಡ್ಡಿಯಾದರೆ ಮುಂದೊಂದು ದಿನ ಸಮುದಾಯಗಳ ನಡುವೆ ಅಸಮಾನತೆ ಹೆಚ್ಚಲಿದೆ. ಹಾಗಾಗಿ ನಾವೆಲ್ಲರೂ ರಾಷ್ಟ್ರೀಯತೆ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಆರೆಸ್ಸೆಸ್ ಹೇಳಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಹ ಕಾರ‌್ಯವಹಾ ಡಾ.ಕೃಷ್ಣ ಗೋಪಾಲ್ ಅವರು, ''ದೇಶಕ್ಕೆ ಸ್ವಾತಂತ್ರ ಬಂದ ಹೊಸ್ತಿಲಲ್ಲಿ ಅಸ್ಸಾಂನ ದಿಬ್ರು ಜಿಲ್ಲೆಯಲ್ಲಿ ಶೇಕಡ 80ರಷ್ಟಿದ್ದ ಹಿಂದೂ ಜನಸಂಖ್ಯೆ ಇಂದು ಅಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅಸ್ಸಾಂನ ಇತರೆ ಜಿಲ್ಲೆಗಳಲ್ಲೂ ಮುಸ್ಲಿಮರದ್ದೇ ಪ್ರಾಬಲ್ಯವಿದ್ದು, ಬಾಂಗ್ಲಾದೇಶದ ಒಳನುಸುಳುಕೋರ ಹಾವಳಿಯಿಂದಲೇ ಇಂತಹ ವೈಪರಿತ್ಯಗಳಾಗುತ್ತಿವೆ. ಸರಕಾರ ಕಠಿಣ ಕ್ರಮಗಳ ಮೂಲಕ ಇದಕ್ಕೆಲ್ಲಾ ಕಡಿವಾಣ ಹಾಕಬೇಕು,'' ಎಂದು ಆಗ್ರಹಿಸಿದರು.
ರಾಂಚಿ : ಧರ್ಮ ಅಸಹಿಷ್ಣುತೆ ಕುರಿತಂತೆ ದೇಶಾದ್ಯಂತ ವಾದ-ಪ್ರತಿವಾದ ಬಿಸಿ ಕಾವೇರುತ್ತಿರುವ ಮಧ್ಯೆಯೇ ಆರೆಸ್ಸೆಸ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಜನಸಂಖ್ಯೆಯಲ್ಲಿ ಅಸಮತೋಲನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರೂ ಸೇರಿದಂತೆ ಎಲ್ಲ ಧರ್ಮದವರಿಗೂ ಏಕರೂಪದ ಕುಟುಂಬ ಕಲ್ಯಾಣ ಯೋಜನೆಯನ್ನು ಕೇಂದ್ರ ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬ ನಿರ್ಣಯವನ್ನು ಕೈಗೊಂಡಿದೆ. ಒಂದೊಮ್ಮೆ ಇದು ಸಾಧ್ಯವಾಗದಿದ್ದಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.