ಅಕ್ರಮ ಕಾಮಗಾರಿಯನ್ನು ಬಹಿರಂಗಪಡಿಸಿದ ಆರ್‌ಟಿಐ ಕಾರ್ಯಕರ್ತನ ಮೇಲೆ ಲಾತೂರ್‌ನಲ್ಲಿ ಶಿವಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿ, ಕಪ್ಪು ಮಸಿ ಸುರಿದಿರುವ ವಿಚಾರ ತಿಳಿಯಿತು. ನಮ್ಮ ಪಕ್ಷ ಅಂಥ ಘಟನೆಯನ್ನು ಬಲವಾಗಿ ಖಂಡಿಸುತ್ತದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಟ್ವೀಟ್ ಮೂಲಕ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದ ಅಬ್ಸರ್ವರ್ ರೀಸರ್ಚ್ ಫೌಂಡೇಷನ್‌ನ ಅಧ್ಯಕ್ಷ ಸುದೀಂಧ್ರ ಕುಲಕರ್ಣಿ ಅವರ ಮೇಲೆ ಮುಂಬಯಿಯಲ್ಲಿ ಶಿವಸೇನೆ ಕಾರ್ಯಕರ್ತರು ಕಪ್ಪು ಮಸಿ ಸುರಿದ ಘಟನೆ ದೇಶದೆಲ್ಲೆಡೆ ವಿವಾದಕ್ಕೆ ನಾಂದಿ ಹಾಡಿದ್ದ ಬೆನ್ನಲ್ಲೇ ಲಾತೂರಿನಲ್ಲಿ ನಡೆದ ಅದೇ ಮಾದರಿಯ ಕೃತ್ಯ ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಮಲ್ಲಿಕಾರ್ಜುನ ಭಾವಿಕಟ್ಟಿ ಎಂಬ ಲಾತೂರ್‌ನ ಆರ್‌ಟಿಐ ಕಾರ್ಯಕರ್ತನ ಮೇಲೆ ಶುಕ್ರವಾರವಷ್ಟೇ ಶಿವಸೇನೆ ಕಾರ್ಯಕರ್ತರು ಮಸಿ ಸುರಿದು ಪ್ರತಿಭಟಿಸಿದ್ದರು. ಭಾವಿಕಟ್ಟಿ ಅವರು ಸ್ಥಳೀಯ ಶಾಲೆ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣವಾದ ಕಟ್ಟಡದ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಈ ದಾಳಿ ನಡೆದಿತ್ತು. ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಭಾವಿಕಟ್ಟಿಯನ್ನು ಹೊರಗೆಳೆದು ಮನಸೋ ಇಚ್ಛೆ ಥಳಿಸಿ ಮುಖದ ಮೇಲೆ ಕಪ್ಪು ಮಸಿ ಸುರಿಯಲಾಗಿತ್ತು, ಶಿವಸೇನೆ ಕಾರ್ಯಕರ್ತರ ದಾಂಧಲೆಯಿಂದ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಲಾತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಈ ನಡುವೆ ಲಾತೂರು ಪೊಲೀಸರು ಘಟನೆಗೆ ಸಂಬಂಧಿಸಿದಂತೆ 26 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಂಬಯಿ: ಮರಾಠವಾಡ ಪ್ರಾಂತ್ಯದ ಲಾತೂರ್‌ನಲ್ಲಿ ಆರ್‌ಟಿಐ ಕಾರ್ಯಕರ್ತನಿಗೆ ಮಸಿ ಬಳಿದ ಶಿವಸೈನಿಕರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.