ಮುಂಬಯಿ/ಲಖನೌ: ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.
ಮುಂಬಯಿನ ಕಲ್ಯಾಣ್-ದೊಂಬಿವಿಲಿ ಪಾಲಿಕೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಮೇಲಾಟದಲ್ಲಿ ಪ್ರತಿಪಕ್ಷಗಳು ನೆಲಕಚ್ಚಿರುವುದು ವಿಶೇಷ. 122 ಸ್ಥಾನಗಳ ಪಾಲಿಕೆಯಲ್ಲಿ 52 ಸ್ಥಾನಗಳನ್ನು ಗೆದ್ದಿರುವ ಶಿವಸೇನೆ, ಬಿಜೆಪಿಯನ್ನು ಹಿಂದಿಕ್ಕಿದೆ. ಕಮಲ ಪಕ್ಷ 42 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ರಾಜ್ಯದಲ್ಲಿ ಮೈತ್ರಿ ಸರಕಾರ ರಚಿಸಿರುವ ಬಿಜೆಪಿ-ಶಿವಸೇನೆ, ರಾಜಕೀಯ ಭಿನ್ನಾಭಿಪ್ರಾಯದ ಪರಿಣಾಮ, ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಎರಡೂ ಪಕ್ಷಗಳ ನಾಯಕರು ಇನ್ನಿಲ್ಲದಂತೆ ಕಚ್ಚಾಡಿದ್ದರು. ಈ ಮಾತಿನ ಚಕಮಕಿ ರಾಜ್ಯ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಶಿವಸೇನೆ ಬೆದರಿಕೆ ಹಾಕುವಲ್ಲಿವರೆಗೂ ಬೆಳೆದಿತ್ತು.
ಒಟ್ಟಾರೆ ಚುನಾವಣೆಯಲ್ಲಿ ಅತಂತ್ರ ಪಾಲಿಕೆ ನಿರ್ಮಾಣಗೊಂಡಿರುವುದರಿಂದ, ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ, ಆಡಳಿತ ಪಡೆಯಲು ಕಾಂಗ್ರೆಸ್-ಎನ್‌ಸಿಪಿ ಸದಸ್ಯರ ಬೆಂಬಲ ಪಡೆಯಬೇಕು. ಅದಿಲ್ಲದಿದ್ದರೆ 'ಹಳೆ ಗಂಡನ ಪಾದವೇ ಗತಿ' ಎಂಬ ನಾಣ್ನುಡಿಯಂತೆ ಬಿಜೆಪಿ ಸಹಾಯ ಪಡೆಯುವುದು ಅನಿವಾರ‌್ಯವಾಗಿದೆ.
ಉತ್ತರಪ್ರದೇಶದಲ್ಲೂ ಹಿನ್ನಡೆ
ಉತ್ತರಪ್ರದೇಶದಲ್ಲಿ ನಡೆದ ಪಂಚಾಯತಿ ಚುನಾವಣೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಪಂಚಾಯತಿಯ 58 ಸ್ಥಾನಗಳ ಪೈಕಿ ಕಮಲ ಪಕ್ಷಕ್ಕೆ ಕೇವಲ 8 ಸ್ಥಾನ ಸಿಕ್ಕಿರುವುದು ತೀವ್ರ ಮುಖಭಂಗವಾಗಿದೆ. ಬಿಜೆಪಿಯ ಸೋಲಿನ ಕತೆ ಪಕ್ಷದ ಪ್ರಮುಖ ನಾಯಕರು ಪ್ರತಿನಿಧಿಸುವ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದೆ. 2017ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ತಾಲೀಮು ಎಂದೇ ಪರಿಗಣಿಸಲಾಗಿರುವ ಈ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿರುವ ಸೋಲು ಪಕ್ಷದ ನಾಯಕರನ್ನು ತೀವ್ರ ಚಿಂತೆಗೀಡು ಮಾಡಿದೆ.
ಸ್ಥಳೀಯ ಚುನಾವನೆಯಲ್ಲಿ ಬಿಜೆಪಿಗೆ ಹಿನ್ನಡೆ/ ಮೋದಿ ಕ್ಷೇತ್ರದಲ್ಲೇ ಕೇವಲ 8 ಕ್ಷೇತ್ರಗಳಲ್ಲಿ ಗೆಲುವು