ನವೆಂಬರ್ 2ರಂದು ಕರಾಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಅವರ ಪುಸ್ತಕ ಬಿಡುಗಡೆ ನಡೆಯಲಿದ್ದು, ಕುಲಕರ್ಣಿಗೂ ಆಹ್ವಾನ ಬಂದಿದೆ.
ಇದಕ್ಕೂ ಮುನ್ನ ಖುರ್ಷಿದ್ ಮಹಮೂದ್ ಕಸೂರಿ ಅವರ 'ನೈದರ್ ಎ ಹಾಕ್, ನಾರ್ ಎ ಡವ್: ಆ್ಯನ್ ಇನಸೈಡರ್ ಅಕೌಂಟ್ ಆಫ್ ಪಾಕಿಸ್ತಾನ್ಸ್ ಫಾರಿನ್ ಪಾಲಿಸಿ' ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅಕ್ಟೋಬರ್ 12ರಂದು ಮುಂಬಯಿಯಲ್ಲಿ ಏರ್ಪಡಿಸಿದ್ದಾಗ ಮಸಿ ಪ್ರಕರಣ ನಡೆದಿತ್ತು. ಇದೀಗ ಇನ್ನೊಮ್ಮೆ ಅದೇ ಪುಸ್ತಕದ ಬಿಡುಗೆಗಾಗಿ ಸುಧೀಂದ್ರ ಕುಲಕರ್ಣಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
ತಾವು ಪಾಕಿಸ್ತಾನಕ್ಕೆ ತೆರಳುವುದನ್ನು ಖಚಿತಪಡಿಸಿರುವ ಕುಲಕರ್ಣಿ, ನಾನು ಕಸೂರಿ ಆಹ್ವಾನವನ್ನು ಸ್ವೀಕರಿಸಿದ್ದೇನೆ. 'ನೈದರ್ ಎ ಹಾಕ್, ನಾರ್ ಎ ಡವ್: ಆ್ಯನ್ ಇನಸೈಡರ್ ಅಕೌಂಟ್ ಆಫ್ ಪಾಕಿಸ್ತಾನ್ಸ್ ಫಾರಿನ್ ಪಾಲಿಸಿ' ಕೃತಿ ಬಿಡುಗಡೆ ವೇಳೆ ಪಾಕಿಸ್ತಾನ ಹಾಗೂ ಭಾರತ ಪ್ರಮುಖ ಗಣ್ಯರೊಂದಿಗೆ ಉಪಸ್ಥಿತನಿರುವೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಮುಂಬಯಿಯಲ್ಲಿ ಸುಧೀಂದ್ರ ಕುಲಕರ್ಣಿ ನೇತೃತ್ವದಲ್ಲಿ ನಿಗದಿಪಡಿಸಿದ್ದ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೆಹಮೂದ್ ಕಸೂರಿ ಅವರ ಕೃತಿ ಬಿಡುಗಡೆಗೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕುಲಕರ್ಣಿ ಹಾಗೂ ಕಸೂರಿ ಈ ವಿರೋಧಕ್ಕೆ ಸೊಪ್ಪು ಹಾಕಿರಲಿಲ್ಲ.
ಅಕ್ಟೋಬರ್ 12ರಂದು ಮುಂಬಯಿಯಲ್ಲಿ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಕಪ್ಪಿ ಮಸಿ ಬಳಿದು ಶಿವಸೇನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಕಾರ್ಯಕ್ರಮಕ್ಕೆ ವಿರೋಧವಿದ್ದರೂ ಮುಂಬಯಿಯಲ್ಲಿ ಬಿಗಿ ಭದ್ರತೆಯಲ್ಲಿ ಪುಸ್ತಕ ಬಿಡುಗಡೆಗೊಂಡಿತ್ತು.
ಅದಕ್ಕೂ ಮುನ್ನ ಮುಂಬಯಿಯಲ್ಲಿ ನಿಗದಿಯಾಗಿದ್ದ ಪಾಕಿಸ್ತಾನಿ ಗಾಯಕ ಗುಲಾಮ್ ಅಲಿ ಸಂಗೀತ ಸಂಜೆ ಕಾರ್ಯಕ್ರಮ, ಶಿವಸೇನೆ ತೀವ್ರ ವಿರೋಧದ ಕಾರಣಕ್ಕೆ ರದ್ದುಗೊಂಡಿತ್ತು.
ಮುಂಬಯಿ: ಶಿವಸೇನೆ ಕಾರ್ಯಕರ್ತರಿಂದ ಮಸಿ ದಾಳಿಗೆ ತುತ್ತಾಗಿದ್ದ ಒಬ್ಸರ್ವರ್ ರೀಸರ್ಚ್ ಪೌಂಡೇಷನ್‌ನ ಅಧ್ಯಕ್ಷ ಸುಧೀಂದ್ರ ಕುಲಕರ್ಣಿ ಪಾಕಿಸ್ತಾನದ ಕರಾಚಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.