Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ರಾಜ್ಯಗಳ ನಡುವೆ ನಂಟು ಬೆಸೆಯಲು ಹೊಸ ಉಪಕ್ರಮ

$
0
0

ರಾಷ್ಟ್ರೀಯ ಏಕತಾ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ/ ರಾಜ್ಯಗಳ ನಂಟು ಬೆಸೆಯುಲು ಹೊಸ ಅಭಿಯಾನ
ಹೊಸದಿಲ್ಲಿ: ವಿವಿಧ ರಾಜ್ಯಗಳ ನಡುವೆ ನಂಟು ಬೆಸೆಯಲು ಹಾಗೂ ಸಾಂಸ್ಕೃತಿಕ ಸಂಸರ್ಗವನ್ನು ಹೆಚ್ಚು ಮಾಡುವ ಸಲುವಾಗಿ ಕೇಂದ್ರ ಸರಕಾರ ಶೀಘ್ರದಲ್ಲೇ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140ನೇ ಜನ್ಮಜಯಂತಿ ದಿನವಾದ ಶನಿವಾರ ರಾಷ್ಟ್ರೀಯ ಏಕತಾ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಈ ವಿಷಯ ಪ್ರಕಟಿಸಿದ್ದಾರೆ. ಪ್ರತಿಯೊಂದು ರಾಜ್ಯವೂ ತನಗೆ ಇಷ್ಟಬಂದ ಮತ್ತೊಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು ತನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರಸರಣ ಮಾಡುವುದು ಈ ಕಾರ್ಯಕ್ರಮದ ತಿರುಳು,'' ಎಂದು ಮೋದಿ ವಿವರಿಸಿದ್ದಾರೆ.

''ಈ ಕಾರ್ಯಕ್ರಮದ ಸ್ವರೂಪದ ಕುರಿತು ವಿಧಿವಿಧಾನಗಳನ್ನು ರೂಪಿಸುವ ಸಲುವಾಗಿ ಒಂದು ಪುಟ್ಟ ಸಮಿತಿಯನ್ನು ರಚಿಸಿದ್ದೇನೆ,'' ಎಂದು ಅವರು ಹೇಳಿದ್ದಾರೆ. ಈ ಉದ್ದೇಶಿತ ಯೋಜನೆಯನ್ನು ರಾಜ್ಯಗಳ ಸಹಕಾರದಿಂದ ಜಾರಿಗೊಳಿಸಲಾಗುವುದು.

ಏನಿದು ಸ್ಕೀಮು?

ಇದನ್ನು ಮೋದಿ ಅವರೇ ಸ್ಪಷ್ಟವಾಗಿ ವಿವರಿಸಿದ್ದಾರೆ.'' ಪ್ರತಿ ವರ್ಷ ಒಂದು ರಾಜ್ಯ ಭಾರತದ ಯಾವುದೇ ರಾಜ್ಯದ ಜತೆ ಬಾಂಧವ್ಯ ಕಲ್ಪಿಸಿಕೊಳ್ಳಬೇಕು. 2016ಕ್ಕೆ ಹರಿಯಾಣ , ತಮಿಳು ನಾಡು ಜತೆ ನಂಟು ಕಟ್ಟಿಕೊಳ್ಳುತ್ತದೆ ಎಂದು ಭಾವಿಸೋಣ. ಆಗ ಹರಿಯಾಣದ ನೂರು ಶಾಲೆಗಳಲ್ಲಿ ಕನಿಷ್ಟ ನೂರು ತಮಿಳು ವಾಕ್ಯಗಳನ್ನು ಕಲಿಸಬೇಕಾಗುತ್ತದೆ. ತಮಿಳಿನ ಒಂದು ಹಾಡನ್ನು ಹೇಳಿಕೊಡಬೇಕು. ಆಹಾರ ಮೇಳ ನಡೆಸಬೇಕು. ತಮಿಳುನಾಡು ಜನತೆ, ಹರಿಯಾಣಕ್ಕೆ, ಹರಿಯಾಣದವರು ತಮಿಳುನಾಡಿಗೆ ಪ್ರವಾಸ ಹೋಗಬೇಕು. 2017ಕ್ಕೆ ಹರಿಯಾಣಾ ಮತ್ತೊಂದು ರಾಜ್ಯದ ಜತೆ ಬಂಧವನ್ನು ಸಾಧಿಸಬೇಕು. ಹೀಗೆ ಈ ಸರಪಣಿ ಮುಂದುವರೆಯುತ್ತದೆ. ಭಾರತದ ಏಕತೆ ಮತ್ತು ಸಮಗ್ರತೆಯ ಅರಿವು ಇದರಿಂದಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಲಾಂ ಸ್ಫೂರ್ತಿ

ರಾಮೇಶ್ವರಂನಿಂದ ದಿಲ್ಲಿಗೆ ಮೊದಲಬಾರಿಗೆ ಪ್ರಯಾಣಿಸಿದಾಗ ನನಗೆ ಭಾರತದ ವೈವಿಧ್ಯ ಚೆನ್ನಾಗಿ ಅರಿವಾಯಿತು ಎಂದು ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಹೇಳಿದ್ದನ್ನು ಮೋದಿ ಸ್ಮರಿಸಿಕೊಂಡರು. ಯಾವುದೇ ಪುಸ್ತಕಕ್ಕಿಂತ ಮಿಗಿಲಾಗಿ ಅನುಭವ ಎಂಬುದು ದೇಶದ ಸಂಸ್ಕೃತಿ ಮತ್ತು ವಿವಿಧತೆಯ ಪರಿಚಯ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದನ್ನು ಮೋದಿ ಮೆಲುಕು ಹಾಕಿದರು.

ವಂಶಾಡಳಿತದ ವಿರುದ್ಧ ಕಿಡಿ

ದೇಶದ ರಾಜಕೀಯದಲ್ಲಿ ಈಗ ವ್ಯಾಪಕವಾಗಿ ಬೇರೂರುತ್ತಿರುವ ವಂಶಾಡಳಿತದ ವಿರುದ್ಧ ಇದೇ ಸಂದರ್ಭದಲ್ಲಿ ಪ್ರಧಾನಿ ಕಿಡಿ ಕಾರಿದರು. ''ಪಟೇಲರು ತಮ್ಮ ಬಂಧುಗಳಲ್ಲಿ ಯಾರೊಬ್ಬರನ್ನೂ ಅವರು ರಾಜಕೀಯದಲ್ಲಿ ಮೇಲಕ್ಕೆ ತರಲು ಹೆಣಗಾಡಲಿಲ್ಲ .ವಂಶಾಡಳಿತ ಎಂಬುದು ನಮ್ಮ ರಾಜಕೀಯ ರಚನೆಯ ದೊಡ್ಡ ಪೀಡೆಯಾಗಿದೆ,''ಎನ್ನುವುದರ ಮೂಲಕ ಪ್ರಧಾನಿ ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿರುವ ವಂಶಾಡಳಿತವನ್ನು ಕುಟುಕಿದರು.

ಐಕ್ಯತೆಯೇ ನಮ್ಮ ಶಕ್ತಿ

ಐಕ್ಯತೆಯೇ ನಮ್ಮ ದೊಡ್ಡ ಶಕ್ತಿ. ಐಕ್ಯತೆ, ಶಾಂತಿ ಮತ್ತು ಸಹಬಾಳ್ವೆಯ ಮಂತ್ರದೊಂದಿಗೆ ನಾವು ಮುನ್ನಡೆಯಬೇಕು.ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಅಟಕ್‌ನಿಂದ ಕಟಕ್‌ವರೆಗೆ ಯಾವುದೇ ಭಾಷೆ, ಭಾವನೆ, ತತ್ತ್ವ, ಸಿದ್ಧಾಂತಗಳನ್ನೂ ಮೀರಿ ಜಗತ್ತಿನಲ್ಲೇ ಭಾರತವನ್ನು ಹೊಸ ಎತ್ತರಕ್ಕೆ ಮುಟ್ಟಿಸಬೇಕಾದರೆ ಅದಕ್ಕೆ ಮೊದಲ ಷರತ್ತೆಂದರೆ ಐಕ್ಯತೆ, ಶಾಂತಿ ಮತ್ತು ಸಾಮರಸ್ಯ,'' ಎಂದು ಪ್ರಧಾನಿ ಘೋಷಿಸಿದರು.


Viewing all articles
Browse latest Browse all 12761

Trending Articles



<script src="https://jsc.adskeeper.com/r/s/rssing.com.1596347.js" async> </script>