- ಗಿರೀಶ್ ಕೋಟೆ ಬೆಂಗಳೂರು ಉಗ್ರ ಸಂಘಟನೆ ಐಸಿಸ್ ಸಂಪರ್ಕದಲ್ಲಿರುವ ಶಂಕಿತ ಉಗ್ರರ ಸಂಖ್ಯೆ ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚುತ್ತಿರುವುದರಿಂದ ಅಲ್ಲಿಯ ಸರಕಾರಗಳು ಉಗ್ರ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದರೆ, ರಾಜ್ಯದಲ್ಲಿ ಉಗ್ರ ಪ್ರಕರಣಗಳ ತನಿಖೆಯೇ ನೆಲ ಕಚ್ಚಿದೆ! ರಾಜಧಾನಿಯ ಏಳು ಗಂಭೀರ ಸ್ವರೂಪದ ಸ್ಫೋಟ ಮತ್ತು ಉಗ್ರ ಚಟುವಟಿಕೆಗಳ ಪ್ರಕರಣ ಸೇರಿ ರಾಜ್ಯದಲ್ಲಿ ಒಟ್ಟು 29 ಪ್ರಮುಖ ಪ್ರಕರಣಗಳಿವೆ. ಸ್ಫೋಟ, ದಾಳಿ, ದಾಳಿಗೆ ಸ್ಕೆಚ್ ಸಿದ್ಧಪಡಿಸಿದ್ದು, ದೇಶದ ನಾನಾ ಕಡೆಗಳಲ್ಲಿ ನಡೆದ ಸ್ಫೋಟಗಳಿಗೆ ರಾಜ್ಯ ಹಾಗೂ ರಾಜ್ಯದ ಮೂಲಕ ಸ್ಫೋಟಕಗಳು ಸರಬರಾಜಾಗಿದ್ದು, ಬೇರೆ ರಾಜ್ಯಗಳಿಗೆ ಬೇಕಾಗಿದ್ದ ಉಗ್ರರಿಗೆ ಬೆಂಗಳೂರು ಅಡಗುತಾಣವಾಗಿದ್ದೂ ಸೇರಿ ನಾನಾ ರೀತಿಯ ಚಟುವಟಿಕೆಗಳು ಆಗಿಂದಾಗ್ಗೆ ವರದಿ ಆಗುತ್ತಲೇ ಇವೆ. ಕೇರಳ ಮತ್ತು ಮಂಗಳೂರು ಮೂಲಕ ಐಸಿಸ್‌ನ ಬೇರುಗಳು ವಿಸ್ತರಿಸುತ್ತಿವೆ ಎನ್ನುವ ಆತಂಕವೂ ಇದ್ದೇ ಇದೆ. ಇಷ್ಟೆಲ್ಲಾ ಅಪಾಯಗಳು ಸುತ್ತುವರಿದಿರುವಾಗ ರಾಜ್ಯದಲ್ಲಿ ಉಗ್ರ ಪ್ರಕರಣಗಳ ತನಿಖೆಯೇ ನಿಂತು ಹೋಗಿದೆ. ಸಿಸಿಬಿಯ ವಿಶೇಷ ತನಿಖಾ ವಿಭಾಗದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ವರ್ಗಾವಣೆಗಳ ಪರಿಣಾಮ ಯಾವೊಂದು ಪ್ರಕರಣವೂ ತಾತ್ವಿಕ ಅಂತ್ಯ ಕಾಣುತ್ತಿಲ್ಲ. ಭಯೋತ್ಪಾದನಾ ಸಂಘಟನೆಗಳ ಮಾಹಿತಿ ಹೊಂದಿರುವ, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಹೊಂದಿರುವ, ಕ್ಷೇತ್ರಕಾರ್ಯದಲ್ಲಿ ಅನುಭವ ಹೊಂದಿರುವ, ದೇಶದ ಇತರೆ ತನಿಖಾ ಸಂಸ್ಥೆಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿರುವ ನುರಿತ ತಜ್ಞ ಅಧಿಕಾರಿಗಳ ಕೊರತೆ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಬೆರಳೆಣಿಕೆಯಷ್ಟು ಅಧಿಕಾರಿಗಳೂ ಇಲ್ಲ. ಇಲ್ಲಿಗೆ ಬರುವವರಿಗೆ ಉಗ್ರ ಪ್ರಕರಣಗಳಲ್ಲಿ ಕನಿಷ್ಠ ಆಸಕ್ತಿಯೂ ಇಲ್ಲದ ಸ್ಥಿತಿ ಇದೆ. ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ತರಬೇತಿ ಪಡೆದಿದ್ದ, ಕ್ಷೇತ್ರಕಾರ್ಯದಲ್ಲಿ ಇದುವರೆಗೂ 14 ಮಂದಿ ಉಗ್ರರನ್ನು ದೇಶದ ನಾನಾ ಕಡೆಯಿಂದ ಬಂಧಿಸಿ ಕರೆತಂದಿರುವ ಅನುಭವ ಹೊಂದಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ ಸಿಸಿಬಿಯಲ್ಲಿ ಇರುವವರೆಗೂ ತನಿಖೆ ಚುರುಕಾಗಿತ್ತು. ಈಗ ಅವರ ವರ್ಗಾವಣೆ ನಂತರ ಈ ಬಗ್ಗೆ ಆಸಕ್ತಿ ತೋರಿಸುವವರೇ ಇಲ್ಲವಾಗಿದೆ. ಪ್ರಮುಖ ಪ್ರಕರಣಗಳು ಮಲ್ಲೇಶ್ವರಂ ಸ್ಫೋಟ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸ್ಫೋಟ, ಬೆಂಗಳೂರು ಸರಣಿ ಸ್ಫೋಟ, ಚರ್ಚ್‌ಸ್ಟ್ರೀಟ್ ಸ್ಫೋಟ, ಮಾಗಡಿ ರಸ್ತೆಯಲ್ಲಿ ಒಮಿನಿ ಕಾರಿನಲ್ಲಿ ಸಂಭವಿಸಿದ ಸ್ಫೋಟ, ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಫೋಟದ ಎರಡು ಘಟನೆಗಳು, ಜಾಲಹಳ್ಳಿ ಇಸ್ರೋ ಸೆಂಟರ್‌ಗೆ ಉಗ್ರರ ಬೆದರಿಕೆ ಬಂದಿದ್ದು, ಹುಬ್ಬಳ್ಳಿ ಕೋರ್ಟ್ ಆವರಣದಲ್ಲಿ ನಡೆದ ಸ್ಫೋಟ... ಈ ಎಲ್ಲಾ ಪ್ರಕರಣಗಳಲ್ಲೂ ತನಿಖೆ ಪೂರ್ಣಗೊಂಡಿಲ್ಲ. ಎಲ್ಲಾ ಆರೋಪಿಗಳೂ ಸಿಕ್ಕಿ ಬಿದ್ದಿಲ್ಲ. ಸಿಎಂ ಮಾತು ಏನಾಯಿತು? ಬೆಂಗಳೂರಿನಲ್ಲಿ ಉಗ್ರ ನಿಗ್ರಹಕ್ಕೆ 'ಸೆಂಟ್ರಲ್ ಕಮಾಂಡ್ ಸೆಂಟರ್' ರಚನೆ ಮಾಡಲಾಗುವುದು ಎಂದು ಮಾ.13 ರಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದಾಗಿ ಎಂಟು ತಿಂಗಳಾಯಿತು. ಇದುವರೆಗೂ ಕಮಾಂಡ್ ಸೆಂಟರ್‌ನ ಕುರುಹೇ ಇಲ್ಲ. ''ತುರ್ತು ಸಂದರ್ಭಗಳಲ್ಲಿ ಉಗ್ರರ ದಾಳಿ ನಿಯಂತ್ರಿಸಲು, ಕೇಂದ್ರೀಕೃತ ಪ್ರತಿದಾಳಿ ನಡೆಸಲು, ಪರಿಣಾಮಕಾರಿಯಾಗಿ ಮಾಹಿತಿ ಸಂಗ್ರಹಿಸಲು, ಉಗ್ರ ಸಂಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಡಾಟಾ ನಿರ್ವಹಣೆ ಮಾಡಲು ಈ ಕಮಾಂಡ್ ಸೆಂಟರ್ ಕೆಲಸ ಮಾಡಲಿದೆ,'' ಎಂದು ಹೇಳಿದ್ದರು. ಮಾಹಿತಿ ವಿನಿಮಯವೇ ಇಲ್ಲ! ಬೆಂಗಳೂರು ಸಿಸಿಬಿ ವಿಶೇಷ ತನಿಖಾ ಘಟಕದ ಎಸಿಪಿ ವೆಂಕಟೇಶ್ ಪ್ರಸನ್ನ ತಂಡ ತ್ರಿಪುರಾ ರಾಜಧಾನಿ ಅಗರ್ತಲದಿಂದ ಲಷ್ಕರೆ ತೊಯ್ಬಾ ಸಂಘಟನೆಯ ಹಬೀಬ್ ಮಿಯಾನನ್ನು ಮಾ.18ರಂದು ಅಲ್ಲಿಗೇ ತೆರಳಿ ಬಂಧಿಸಿತ್ತು. ಅತ್ಯಂತ ಕಠಿಣವಾಗಿದ್ದ ಈ ಕಾರ್ಯಾಚರಣೆಗೆ ಮೂಲ ಮಾಹಿತಿ ನೀಡಿದ್ದು ಗುಜರಾತ್ ಭಯೋತ್ಪಾದಕ ನಿಗ್ರಹದಳ. ಈಗ ಈ ರೀತಿ ಮಾಹಿತಿ ವಿನಿಮಯವೇ ನಿಂತುಹೋಗಿದೆ. ಮೋಸ್ಟ್ ವಾಂಟೆಡ್ ಉಗ್ರರು ಸದ್ಯ ಆಂತರಿಕಾ ಭದ್ರತಾ ವಿಭಾಗದ ಅಧಿಕಾರಿಗಳ ಪ್ರಕಾರ ಶಿಹಬ್ ಫೈಸಲ್, ಉಮರ್ ಫಾರೂಕ್, ಇಬ್ರಾಹಿಂ ಮೌಲ್ವಿ, ಅಯೂಬ್ ಸಲೀಂ, ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಬಲಿ ರೆಹಾನ್, ಸಮೀರ್, ಮುಬಶೀರ್ ಶಾಹಿದ್, ಹಫೀಕ್, ಸಲೀಂ ಸುಲ್ತಾನ್, ಮೊಹಿಸಿನ್ ಚೌದರಿ, ಶಾಹಿದ್ ಶಫಿ ಮೊಹಮ್ಮದ್, ಅಬೂಬ್‌ಕರ್ ಸಿದ್ಧಕಿ ಅವರು ರಾಜ್ಯದ ಮೋಸ್ಟ್ ವಾಂಟೆಡ್ ಉಗ್ರರಾಗಿದ್ದಾರೆ.
ರಾಜ್ಯದ ಉಗ್ರ ಪ್ರಕರಣಗಳ ತನಿಖೆಗೆ ಗರ
ಡಿಜಿಟಲ್‌ನಲ್ಲಿ ಹಿಂದೆ, ಕಾಗದದಲ್ಲಿ ಮುಂದೆ, ಆದರೆ ಓದುಗರೇ ಇಲ್ಲ!
ಸಾಹಿತ್ಯ ಸಮ್ಮೇಳನವೆಂದರೆ ಅದೊಂದು ನುಡಿ ಜಾತ್ರೆ. ಸಾಹಿತ್ಯಾಸಕ್ತರು ಒಂದೆಡೆ ಸೇರಿ ಸಂಭ್ರಮಿಸುವ ಅವಕಾಶ. ಪುಸ್ತಕೋದ್ಯಮಿಗಳ ಪಾಲಿಗೆ ದೊಡ್ಡದೊಂದು ಮಾರುಕಟ್ಟೆ. ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕೋದ್ಯಮದ ಸದ್ಯದ ಹೊಸ ಟ್ರೆಂಡ್‌ಗಳು ಮತ್ತು ಇಕ್ಕಟ್ಟು ಬಿಕ್ಕಟ್ಟುಗಳತ್ತ ಒಂದು ನೋಟ. - ಹ.ಚ.ನಟೇಶ ಬಾಬು ಆರೋಗ್ಯಕರ ಸಮಾಜದ ನಿರ್ಮಾಣ ಮತ್ತು ಬೌದ್ಧಿಕ ವಿಕಸನಕ್ಕೆ ಪುಸ್ತಕಗಳ ಕೊಡುಗೆ ದೊಡ್ಡದು. ಆದರೆ, ಸೋಷಿಯಲ್ ಮೀಡಿಯಾ ಮತ್ತು ಟೀವಿ ಚಾನೆಲ್‌ಗಳಲ್ಲಿನ ತೌಡು ಕುಟ್ಟುವ ಚರ್ಚೆ-ಸಂವಾದಗಳನ್ನು ನೋಡಿದರೆ ಜನರ ಬೌದ್ಧಿಕ ಮಟ್ಟದ ಕುಸಿತ ಬಯಲಾಗುತ್ತದೆ. ಪುಸ್ತಕಗಳಿಂದ ವಿಮುಖರಾಗುತ್ತಿರುವ ಈ ಪೀಳಿಗೆಯ ನಾಳೆಗಳು ಕಳವಳ ಹುಟ್ಟಿಸುವಂತಿವೆ. ಇದು ಎಲ್ಲ ಭಾಷೆಗಳಿಗೂ ಅನ್ವಯವಾಗುವ ಸಂಗತಿಯಾದರೂ, ಕನ್ನಡಕ್ಕೆ ಹೆಚ್ಚು ಸಮೀಪ. ಒಟ್ಟಾರೆ ಓದು ಕಡಿಮೆಯಾಗಿದೆಯಾ ಎಂದರೆ, ಅಲ್ಲಿ ಉತ್ತರ ಸರಳ ರೇಖೆಯಂತಿಲ್ಲ. ಆದರೆ, ಓದಿನ ಮಾದರಿ ಮತ್ತು ಆಯ್ಕೆಗಳಲ್ಲಿ ಪಲ್ಲಟವಂತೂ ಆಗಿದೆ. ವರ್ಷಕ್ಕೆ ಕನ್ನಡದಲ್ಲಿ 6000ದಿಂದ 7000 ಪುಸ್ತಕಗಳು ಪ್ರಕಟವಾಗುತ್ತವೆ. ವರ್ಷದಿಂದ ವರ್ಷಕ್ಕೆ ಪುಸ್ತಕಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದರೆ, ಓದುಗರ ಸಂಖ್ಯೆ ಅದರಲ್ಲೂ ಯುವ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ! ಇದೊಂದು ಒಗಟಿನಂತೆ ಕಂಡರೂ ವಾಸ್ತವ ಸ್ಥಿತಿ. ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಹೇಳುವಂತೆ, ''ಪುಸ್ತಕಗಳ ಸಂಖ್ಯೆ ಏರಿಕೆಗೆ ಕಾರಣ ಗ್ರಂಥಾಲಯ. ಶೇ.80ರಷ್ಟು ಪುಸ್ತಕಗಳು ಮಾರುಕಟ್ಟೆಗೆ ಬರುವುದಿಲ್ಲ. ಪ್ರಾಧಿಕಾರ ಮತ್ತು ಗ್ರಂಥಾಲಯಕ್ಕೆ ನೇರವಾಗಿ ಸೇರ್ಪಡೆಯಾಗುತ್ತವೆ. ನಮ್ಮ ಮಳಿಗೆಗೆ ಬರುವ ಓದುಗರಲ್ಲಿ 40 ಪ್ಲಸ್ ವಯಸ್ಸಿನವರೇ ಹೆಚ್ಚು. ಈ ವರ್ಗ ನಂತರದ ದಿನಗಳಲ್ಲಿ ಸಾಹಿತ್ಯದಿಂದ ಅಧ್ಯಾತ್ಮದ ಕಡೆಗೆ ಹೋಗುತ್ತದೆ. ಆಗ ಕನ್ನಡ ಪುಸ್ತಕಗಳನ್ನು ಕೇಳೋರಾರಯರು? ಇನ್ನು 20 ವರ್ಷದವರಲ್ಲಿ ಬಹುತೇಕರು ಕುವೆಂಪು, ಬೇಂದ್ರೆ ಪುಸ್ತಕಗಳಿಂದ ದೂರ. ಕಳೆದ 20 ವರ್ಷಗಳಲ್ಲಿ ಯುವ ಓದುಗರು ಸಷ್ಟಿಯಾಗಿಲ್ಲ. ಏಕೆ ಇಂಥ ಪರಿಸ್ಥಿತಿ ಎಂದರೆ, ಇಂಗ್ಲಿಷ್ ಮೀಡಿಯಂನ ಕನ್ನಡ ಹುಡುಗರು ಕಣ್ಣೆದುರು ನಿಲ್ಲುತ್ತಾರೆ''. ಅವರ ಪ್ರಕಾರ - ಸರಕಾರವೇನಾದರೂ ಕನ್ನಡ ಪುಸ್ತಕ ಖರೀದಿ ನಿಲ್ಲಿಸಿದರೆ, 2000 ಪುಸ್ತಕಗಳಷ್ಟೇ ವರ್ಷಕ್ಕೆ ಪ್ರಕಟವಾಗುತ್ತವೆ. ಅದರಲ್ಲಿ ಓದುಗರು ಖರೀದಿಸೋದು, ಓದೋದು ಎಷ್ಟು? ಇತ್ತೀಚೆಗಷ್ಟೇ ರವಿ ಬೆಳಗೆರೆಯ ಬಿಬಿಸಿ, ನುಡಿ ಪುಸ್ತಕ ಸೇರಿದಂತೆ ನಾನಾ ಪ್ರಕಾಶಕರು ತಮ್ಮ ಮಳಿಗೆಗಳನ್ನು ಮುಚ್ಚಿದ್ದಾರೆ. ಕೆಲವು ಪ್ರಕಾಶಕರು ಉದ್ಯಮಕ್ಕೆ ಕೈಮುಗಿದಿದ್ದಾರೆ. ಇದೇ ಮಾತನ್ನು ಕನ್ನಡದ ಇತರೆ ಪ್ರಮುಖ ಪ್ರಕಾಶಕರೂ ಅನುಮೋದಿಸುತ್ತಾರೆ. ಕನ್ನಡದಲ್ಲಿ 300 ಕಾಪಿ ಮಾರುವಷ್ಟರಲ್ಲಿ ಬೆವರಲ್ಲ, ರಕ್ತವೇ ಬರುತ್ತೆ. ಕನ್ನಡದಲ್ಲಿ ಬುಕ್ ಕಲ್ಚರ್ ಬೆಳೆದಿಲ್ಲ ಎಂದು ಪ್ರಕಾಶಕರು ದೂರುತ್ತಾರೆ. - ನಷ್ಟ ಅಂದೋರು ಯಾರು? - ಕೆಲವು ಪ್ರಕಾಶಕರು ಸುಖವಾಗಿಯೇ ಇದ್ದಾರೆ. ಕತೆಗಾರ ಮತ್ತು ಪ್ರಕಾಶಕರೂ ಆದ ವಸುಧೇಂದ್ರ ಅವರು ತಮ್ಮ ಪ್ರಕಾಶನದ ಪುಸ್ತಕಗಳನ್ನು ಸಾವಿರಗಟ್ಟಲೇ ಮಾರುತ್ತಿದ್ದಾರೆ. ಅವರ 'ಅಮ್ಮ ಅಂದ್ರೆ ನಂಗಿಷ್ಟ' ಪುಸ್ತಕದ 18 ಸಾವಿರ ಪ್ರತಿಗಳು ಮಾರಾಟವಾಗಿವೆ. 'ಮೋಹನ ಸ್ವಾಮಿ' ಕನ್ನಡದಲ್ಲಿ 5000, ಇಂಗ್ಲಿಷ್‌ನಲ್ಲಿ 2000 ಪ್ರತಿಗಳು ಮಾರಾಟವಾಗಿವೆ. ಸ್ಪ್ಯಾನಿಷ್‌ನಲ್ಲಿ 6000 ಪ್ರತಿಗಳನ್ನು ಮುದ್ರಿಸಲಾಗಿದೆ. ಎಸ್.ಎಲ್.ಭೈರಪ್ಪನವರ ಪುಸ್ತಕಗಳು ಒಂದೇ ವಾರದಲ್ಲಿ ಎರಡನೇ ಮುದ್ರಣಕ್ಕೆ ಅಣಿಯಾಗುತ್ತವೆ. 20 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗುತ್ತವೆ. ನಾಲ್ಕು ದಿನಗಳಲ್ಲೇ ಜೋಗಿ ಅವರ 'ಪ್ರೀತಿಸುವವರನ್ನು ಕೊಂದು ಬಿಡಿ' ಪುಸ್ತಕ ಖಾಲಿಯಾಗಿದೆ. ಜಮೀಲ್ ಅವರ ಸಾವಣ್ಣ ಪ್ರಕಾಶನದ ಪುಸ್ತಕಗಳು ಬಿಸಿ ದೋಸೆಯಂತೆ ಬಿಡುಗಡೆಗೆ ಮೊದಲೇ ಆರ್ಡರ್‌ಗಳನ್ನು ಪಡೆಯುತ್ತವೆ. ಏನಿದು ಎನ್ನುವ ಪ್ರಶ್ನೆಗೆ, ''ಜನರಿಗೆ ಟೈಮಿಲ್ಲ. ಅವರಿಗೆ ಯಾವ ಅಭಿರುಚಿ ಮತ್ತು ಅಗತ್ಯ ಇದೆಯೋ ಅಂಥ ಪುಸ್ತಕಗಳನ್ನು ಕೊಡಬೇಕು. ಸಮಸ್ಯೆಗೆ ಪರಿಹಾರ ನೀಡುವಂಥ ಪುಸ್ತಕಗಳನ್ನು ಕೈಗಿಡಬೇಕು. ನನ್ನನ್ನು ಕಮರ್ಷಿಯಲ್ ಪ್ರಕಾಶಕ ಎಂದು ಬೇಕಾದರೆ ಕರೆಯಿರಿ. ಆದರೆ, ಕನ್ನಡದಲ್ಲಿದ್ದ ನಿರ್ವಾತವನ್ನು ನಮ್ಮ ಪ್ರಕಾಶನ ಭರ್ತಿ ಮಾಡಿದೆ. ರಿಲೇಷನ್‌ಶಿಪ್, ಕರಿಯರ್, ಮನಿ ಮತ್ತು ಹೆಲ್ತ್ ಈ ನಾಲ್ಕು ವಿಷಯಗಳಿಗೆ ಆದ್ಯತೆ ನೀಡಿದ್ದು, ಮನುಷ್ಯರಿಗೆ ಬೇಕಾದ ಪುಸ್ತಕಗಳನ್ನು ನೀಡುತ್ತಿದ್ದೇವೆ. ಯಶ್ ಮದುವೆಗೆ 1300 ಪುಸ್ತಕವನ್ನು ಆಹ್ವಾನ ಪತ್ರಿಕೆ ಜತೆ ಹಂಚಲಾಯಿತು. ವಾಟ್ಸ್‌ಆಪ್ ಮಾಡಿದರೂ ಸಾಕು. ಹಳ್ಳಿಹಳ್ಳಿಗೆ ಪುಸ್ತಕ ಡೆಲಿವರಿ ಕೊಡ್ತೀವಿ. ನಮಗೇನೂ ತೊಂದರೆಯಿಲ್ಲ, ಎಂದು ಮಾರುಕಟ್ಟೆಯ ಹೊಸ ಸಾಧ್ಯತೆಗಳತ್ತ ಕೈ ತೋರುತ್ತಾರೆ.'' ವೃತ್ತಿಯಲ್ಲಿ ಟೆಕ್ಕಿಯಾಗಿ ಕನ್ನಡ ಪುಸ್ತಕ ಮಾರಾಟಕ್ಕೆ ಮುನ್ನೋಟಮಳಿಗೆ ಆರಂಭಿಸಿರುವ ವಸಂತ್ ಅವರು, ಕನ್ನಡ ಪುಸ್ತಕಗಳ ಮಾರಾಟಕ್ಕೆ ಹೊಸ ಹಾದಿಗಳನ್ನು ಹುಡುಕುವಲ್ಲಿ ಉತ್ಸುಕರಾಗಿದ್ದಾರೆ. ''ಕನ್ನಡದ ಪ್ರಕಾಶಕರು ಆನ್‌ಲೈನ್ ಮಾರಾಟ ಕ್ಷೇತ್ರವನ್ನು ಸರಿಯಾಗಿ ಸ್ಪರ್ಷಿಸಿಯೇ ಇಲ್ಲ. ಸೋಷಿಯಲ್ ಮೀಡಿಯಾಗಳನ್ನು ಪುಸ್ತಕ ಪ್ರಚಾರಕ್ಕೆ ಬಳಸಿಕೊಳ್ಳಬೇಕಿದೆ. ನಾವು ಗಿಫ್ಟ್ ಕೂಪನ್, ಪುಸ್ತಕ ತಾಂಬೂಲ ಎನ್ನುವ ಹೊಸ ಪರಿಕಲ್ಪನೆಗಳನ್ನು ಜಾರಿಗೆ ತಂದಿದ್ದೇವೆ,'' ಎನ್ನುತ್ತಾರೆ ಅವರು. - ಮಹತ್ವದ ಪಲ್ಲಟ - ಪುಸ್ತಕಗಳೆಂದರೆ ಕತೆ, ಕವಿತೆ, ಪ್ರಬಂಧ ಎನ್ನುವ ಸ್ಥಿತಿ ಈಗಿಲ್ಲ. ಕೆಲವೇ ಕೆಲವು ಸ್ಟಾರ್ ಲೇಖಕ, ಕವಿಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಕತೆ, ಕವಿತೆ, ವಿಮರ್ಶೆ, ಪ್ರಬಂಧ, ನಾಟಕ, ಸಂಸ್ಕೃತಿಯ ಪುಸ್ತಕಗಳನ್ನು ಕೇಳೋರಿಲ್ಲ. ಲೈಫ್‌ಸ್ಟೈಲ್, ಅಡುಗೆ, ಅಧ್ಯಾತ್ಮ, ಯೋಗ, ಆರೋಗ್ಯ, ಪರ್ಸನಲ್ ಫೈನಾನ್ಸ್ - ಹೀಗೆ ಸೆಲ್ಫ್ ಹೆಲ್ಪ್ ಬುಕ್‌ಗಳು ಈಗ ಬೇಡಿಕೆಯಲ್ಲಿವೆ. ಸತ್ಯನಾರಾಯಣ ವ್ರತ, ಅಷ್ಟೋತ್ತರದ ಪುಸ್ತಕಗಳಷ್ಟೇ ಲಕ್ಷಗಟ್ಟಲೇ ಮಾರಾಟವಾಗುತ್ತವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಮಾದರಿಯೂ ಬದಲಾಗಿದೆ. ಅದ್ಧೂರಿ ಸಮಾರಂಭಗಳು, ಸೋಷಿಯಲ್ ಮೀಡಿಯಾಗಳಲ್ಲಿ ಪುಸ್ತಕ ಪ್ರಚಾರದ ವಿಡಿಯೊಗಳು ಸೇರಿದಂತೆ ಎಲ್ಲ ಆಯ್ಕೆಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಗೂಗಲ್ ಮಾಡಿರುವ ಸಮೀಕ್ಷೆ ಪ್ರಕಾರ ಇಂಟರ್‌ನೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುವ ಭಾಷಿಗರಲ್ಲಿ ಹಿಂದಿ, ತಮಿಳು ಬಿಟ್ಟರೇ ಕನ್ನಡಕ್ಕೆ ಮೂರನೇ ಸ್ಥಾನ. ತಂತ್ರಜ್ಞಾನಕ್ಕೆ ಕನ್ನಡಿಗರು ತ್ವರಿತವಾಗಿ ಅಪ್‌ಡೇಟ್ ಆಗುತ್ತಿದ್ದಾರೆ. ಆದಾಗ್ಯೂ, ಇ-ಪಬ್ಲಿಷಿಂಗ್, ಆಡಿಯೊ ಬುಕ್ ಮತ್ತಿತರ ಕ್ಷೇತ್ರಗಳಲ್ಲಿ ಪ್ರವೇಶವಷ್ಟೇ ಸಾಧ್ಯವಾಗಿದೆ. ಇನ್ನೂ ಅಮೆಜಾನ್‌ನ ಕಿಂಡಲ್‌ಗೆ ಎಂಟ್ರಿ ಸಾಧ್ಯವಾಗಿಲ್ಲ. - ಸಮ್ಮೇಳನವೆಂಬ ಮಾರುಕಟ್ಟೆ - ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರಕಾಶಕರು ಮತ್ತು ಓದುಗರ ಪಾಲಿಗೆ ಸೇತುವೆಗಳಿದ್ದಂತೆ. ಮೂರು ದಿನ ನಡೆಯುವ ಸಮ್ಮೇಳನದ ನೂರಾರು ಮಳಿಗೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಲಕ್ಷಾಂತರ ಪುಸ್ತಕಗಳು ಸಾಹಿತ್ಯಾಸಕ್ತರ ಜೋಳಿಗೆ ಸೇರುತ್ತವೆ. ಆಕರ್ಷಕ ರಿಯಾಯಿತಿಗಳೂ ಓದುಗರ ಸೆಳೆಯುತ್ತವೆ. ಮಾರಾಟವೊಂದೇ ಅಲ್ಲ, ಪುಸ್ತಕಗಳ ಜಾಹೀರಾತಿಗೂ ಸಹಾಯಕ. ಸಮ್ಮೇಳನಕ್ಕೆ ಸರಕಾರ ಈ ಸಲ ಅತಿ ಹೆಚ್ಚು ಎಂದರೆ 8 ಕೋಟಿ ರೂ. ಅನುದಾನ ನೀಡಿದೆ. ಕನ್ನಡ ನೆಲ ಮತ್ತು ಲೇಖಕನ ಸಾಧ್ಯತೆಗಳನ್ನು ವಿಸ್ತರಿಸುವ ಮತ್ತು ಜಗತ್ತಿಗೆ ತೆರೆದಿಡುವ ನಿಟ್ಟಿನಲ್ಲಿ ಘಾಚರ್‌ಘೋಚರ್‌ನ ಯಶಸ್ಸು ಒಂದು ಉದಾಹರಣೆ. ವಿವೇಕ ಶಾನುಭಾಗರ ಈ ಪುಸ್ತಕ ಅಮೆರಿಕದ ಪ್ರತಿಯೊಂದು ಗ್ರಂಥಾಲಯದಲ್ಲಿದೆ. ಹಳ್ಳಿಹಳ್ಳಿಗಳನ್ನು ತಲುಪಿದೆ. ಇಂಥದ್ದೆಲ್ಲ ಆಗಬೇಕು. - ವಸುಧೇಂದ್ರ, ಕತೆಗಾರ/ಪ್ರಕಾಶಕ ಈಗ ಬ್ಲಾಗ್, ಫೇಸ್‌ಬುಕ್, ಪತ್ರಿಕೆಗಳಲ್ಲಿ ಅಂಕಣ ಸೇರಿದಂತೆ ಬರೆಯೋರು ಜಾಸ್ತಿ. ಯುವ ಓದುಗರು ಸೃಷ್ಟಿಯಾಗುತ್ತಿಲ್ಲ. ಬಳ್ಳಾರಿ, ಹಾವೇರಿ, ಬೆಳಗಾವಿ ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರಾದ ಪುಸ್ತಕ ಮಳಿಗೆಗಳೂ ಇಲ್ಲ. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಶಿವವೊಗ್ಗದಂಥ ಕೆಲವು ಜಿಲ್ಲೆಗಳಲ್ಲಷ್ಟೇ ಪರಿಸ್ಥಿತಿ ಆಶಾದಾಯಕ. - ಪ್ರಕಾಶ್ ಕಂಬತ್ತಳ್ಳಿ, ಅಂಕಿತ ಪ್ರಕಾಶನ, ಬೆಂಗಳೂರು ವಾಚನಾಭಿರುಚಿಯ ಪೀಳಿಗೆಯನ್ನು ಸೃಷ್ಟಿಸುವ ಹೊಣೆ ಪ್ರಾಧಿಕಾರದ ಮೇಲಿದೆ. ಈ ನಿಟ್ಟಿನಲ್ಲಿ ಅಚ್ಚು ಮೆಚ್ಚಿನ ಪುಸ್ತಕ ಎನ್ನುವ ಕಾರ್ಯಕ್ರಮವನ್ನು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಾಧಿಕಾರ ಹಮ್ಮಿಕೊಂಡಿದೆ. ಪಿಯುಸಿ ಕಾಲೇಜುಗಳಲ್ಲಿ ಜಾಣಜಾಣೆಯರ ಬಳಗಗಳನ್ನು ಕಟ್ಟಿ, ಸಾಹಿತ್ಯ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇವೆ. - ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತು, ಅಕಾಡೆಮಿಗಳು, ವಿಶ್ವವಿದ್ಯಾಲಯಗಳು, ಕುವೆಂಪು ಭಾಷಾ ಪ್ರಾಧಿಕಾರ ಹೀಗೆ ಪುಸ್ತಕ ಪ್ರಕಟಣೆಗೆ ಸಾಕಷ್ಟು ಸಂಸ್ಥೆಗಳಿವೆ. ಆದರೆ, ಪ್ರಕಾಶನಕ್ಕಿರುವ ಆಸಕ್ತಿ ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ಇಲ್ಲ. -ವಸಂತ್, ಮುನ್ನೋಟ.ಕಾಮ್ ಪುಸ್ತಕ ಮಳಿಗೆ, ಬೆಂಗಳೂರು ಇ-ಪುಸ್ತಕ, ಕಿಂಡಲ್‌ನಂಥ ಉಪಕರಣಗಳು ಬಂದರೂ ಸಹ ಪುಸ್ತಕೋದ್ಯಮಕ್ಕೆ ಅದರಿಂದ ಯಾವುದೇ ಹಾನಿ ಆಗಲಾರದು. ಭೌತಿಕವಾಗಿ ಪುಸ್ತಕವೊಂದನ್ನು ಕೈನಲ್ಲಿ ಹಿಡಿದು ಓದುವ ಖುಷಿಯನ್ನು ಓದುಗ ಎಂದಿಗೂ ಬಯಸುತ್ತಾನೆ. - ಕೆ.ಬಿ.ಪರಶಿವಪ್ಪ, ಸ್ನೇಹ ಬುಕ್ ಹೌಸ್, ಬೆಂಗಳೂರು ಕನ್ನಡ ಓದುಗರನ್ನು ನಾವು ಹುಡುಕುತ್ತಿಲ್ಲ. ಬಿಎ ಅಂತಿಮ ವರ್ಷದಲ್ಲಿರುವ ನಾನು ಮತ್ತು ನಮ್ಮ ಗೆಳೆಯರು ಕಾವ್ಯಮನೆ ಪ್ರಕಾಶನ ಆರಂಭಿಸಿ 4 ಪುಸ್ತಕ ಪ್ರಕಟಿಸಿದ್ದೇವೆ. ಪ್ರಕಟಿಸಿದ ಎಲ್ಲ ಪುಸ್ತಕಗಳನ್ನೂ ನೇರವಾಗಿ ಓದುಗರಿಗೆ ತಲುಪಿಸಿದ್ದೇವೆ. ನಷ್ಟವಂತೂ ಆಗಿಲ್ಲ. -ಕಪಿಲ ಪಿ ಹುಮನಾಬಾದೆ, ವಿದ್ಯಾರ್ಥಿ/ಪ್ರಕಾಶಕ, ಕಲಬುರ್ಗಿ
ಸಮ್ಮೇಳನಾಧ್ಯಕ್ಷರು ಶಕ್ತಿಕೇಂದ್ರವಲ್ಲ, ಸಮಾಲೋಚಕರು
- ವೆಂಕಟೇಶ್ ಕೆ. ಬಂಡಾಯ ಸಾಹಿತ್ಯದ ಮುಂಚೂಣಿ ಲೇಖಕರಾದ ಬರಗೂರು ರಾಮಚಂದ್ರಪ್ಪ ಕಳೆದ ವರ್ಷ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಸಾಹಿತ್ಯ, ಸಿನಿಮಾ, ಸಮುದಾಯ ಸಂಘಟನೆ, ಹೋರಾಟ- ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಬರಗೂರು ಒಂದು ವರ್ಷದಲ್ಲಿ ಸಾಹಿತ್ಯ ಪರಿಷತ್‌ನ ಕಾರ್ಯ ಚಟುವಟಿಕೆಗಳಲ್ಲಿ ಯಾವ ಪಾತ್ರ ವಹಿಸಿದ್ದರು? ಪರಿಷತ್ ಅವರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿತ್ತೆ? ಪರಿಷತ್ ಅಧ್ಯಕ್ಷರು ಮತ್ತು ಸಮ್ಮೇಳನಾಧ್ಯಕ್ಷರ ನಡುವಣ ಕಾರ್ಯಶೀಲ ನಂಟುಗಳು ಹೇಗಿರಬೇಕು, ಹೇಗಿತ್ತು ಎಂಬುದರ ಕುರಿತು ಎಂಬುದರ ಕುರಿತು 'ವಿಕ'ದ ಜತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎನ್ನುವುದು ಒಂದು ಹುದ್ದೆಯಲ್ಲ; ಅದು ಗೌರವದ ಸ್ಥಾನ. ಆದರೆ ಪರಿಷತ್ ಅಧ್ಯಕ್ಷರದು ಒಂದು ಹುದ್ದೆ. ಅವರು ಲಕ್ಷಾಂತರ ಸದಸ್ಯರಿಂದ ಆಯ್ಕೆಯಾಗಿರುತ್ತಾರೆ. ಸಾಹಿತ್ಯ ಪರಿಷತ್‌ಗೆ ಎರಡೆರಡು ಶಕ್ತಿಕೇಂದ್ರಗಳು ನಿರ್ಮಾಣವಾಗಬಾರದು. ಗೌರವದ ಸ್ಥಾನ ಹೇಗಿರಬೇಕು, ಹೇಗೆ ತೊಡಗಿಸಿಕೊಳ್ಳಬೇಕು ಎಂಬುದು ಪರಿಷತ್‌ಗೆ ಸಂಬಂಧಿಸಿದ ವಿಷಯ. ಷರಿಷತ್ ಅಧ್ಯಕ್ಷರನ್ನು 'ಮೀರಿ' ಏನೇನೋ ಮಾಡಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ. ಸಮ್ಮೇಳನದ ಅಧ್ಯಕ್ಷರನ್ನು ಸಮಾಲೋಚಕರಾಗಿ ಪರಿಗಣಿಸಬಹುದು ಅಷ್ಟೆ. ಪರಿಷತ್ ಕೈಗೊಳ್ಳುವ ಯೋಜನೆ, ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆಯನ್ನು ಅಪೇಕ್ಷಿಸಬಹುದು. ಚುನಾಯಿತರಿಂದ ಆಯ್ಕೆಯಾದವರು ನಾವು ಎಂಬುದನ್ನು ಮರೆಯಬಾರದು. ಇದಿಷ್ಟು ಸಮ್ಮೇಳನಾಧ್ಯಕ್ಷರು ಮತ್ತು ಪರಿಷತ್ ಅಧ್ಯಕ್ಷರ ಪಾತ್ರದ ಕುರಿತು ತಾತ್ವಿಕ ಸಂಗತಿ. ಹೊರನಾಡ ಕನ್ನಡಿಗರಿಗೆ ಮೀಸಲು ಇನ್ನು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿಗೆ ಅತಿಯಾದ ಪ್ರಾಮುಖ್ಯತೆಯನ್ನು ಹೇರುವ ಪರಿಪಾಠವಿದೆ. ಹಾಗೆ ನೋಡಿದರೆ ಇವು ಸಮ್ಮೇಳನ ಕೈಗೊಂಡ ನಿರ್ಣಯಗಳಲ್ಲ; ಪರಿಷತ್ ಕಾರ್ಯಕಾರಿ ಸಮಿತಿ ಅಂಗೀಕರಿಸಿದ ನಿರ್ಣಯಗಳು. ಅವುಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗುತ್ತದೆ; ಇದರಲ್ಲಿ ಸಮ್ಮೇಳನಕ್ಕೆ ಬಂದವರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಾಗಲಿ, ಚರ್ಚೆಯಾಗಲಿ ಇರುವುದಿಲ್ಲ, ಇಡೀ ಪ್ರಕ್ರಿಯೆ ಯಾಂತ್ರಿಕವಾಗಿ ನಡೆಯುತ್ತದೆ. ಆದರೆ ಕೆಲವು ಸಾರ್ವಜನಿಕ ಬದುಕಿಗೆ ಸಂಬಂಧಿಸಿದ ವಿಷಯಗಳಿದ್ದಾಗ ಸಹಜವಾಗಿ ಅದಕ್ಕೊಂದು ಮಹತ್ವಪ್ರಾಪ್ತಿಯಾಗಿರುತ್ತದೆ. ಸರಕಾರದ ಮೇಲೆ ಒತ್ತಡ ಹೇರಿ ಅದನ್ನು ಸಾಕಾರಗೊಳಿಸಬೇಕಾಗುತ್ತದೆ. ಹೊರನಾಡ ಕನ್ನಡಿಗರಿಗೆ ಶಿಕ್ಷಣ-ಉದ್ಯೋಗವಲಯಗಳಲ್ಲಿ ಮೀಸಲು ಮತ್ತಿತರ ಸೌಲಭ್ಯ ಒದಗಿಸಬೇಕು ಎನ್ನುವ ನಿರ್ಣಯದ ಕುರಿತು ನಾನೇ ಅಧ್ಯಕ್ಷರನ್ನು ಕರೆದುಕೊಂಡು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಓದಿರುವ ಅಭ್ಯರ್ಥಿಗಳಿಗೆ ಯಾವ್ಯಾವ ಸೌಲಭ್ಯ ಸಿಗುತ್ತದೆಯೋ ಅದೆಲ್ಲವೂ ಹೊರನಾಡ ಕನ್ನಡ ಅಭ್ಯರ್ಥಿಗಳಿಗೂ ಸಿಗುವ ಆದೇಶವನ್ನು ಸರಕಾರ ಮಾಡಿದೆ. ಪ್ರಮುಖ ನಿರ್ಣಯವೊಂದು ಪರಿಪೂರ್ಣವಾಗಿ ಜಾರಿಯಾಗಿದೆ. ಇದರ ಬಗ್ಗೆ ನನಗೆ ಸಮಾಧಾನವಿದೆ. ಸಮಾನ ಶಾಲಾ ಶಿಕ್ಷಣ ನೀತಿ ಕುರಿತ ಇನ್ನೊಂದು ನಿರ್ಣಯ ಬಜೆಟ್‌ನಲ್ಲಿ ಪ್ರಸ್ತಾಪವಾಗಿ, ಅಲ್ಲಿಗೇ ನಿಂತಿದೆ. ರಾಷ್ಟ್ರಕವಿ ಆಯ್ಕೆ ನಿಲ್ಲಬಾರದು ಎಂದು ಹೇಳಿದ್ದೆವು. ಅದು ಸರಕಾರದ ಪರಿಶೀಲನೆಯಲ್ಲಿದೆ. ಏಕೀಕರಣ ಪುಸ್ತಕ ಮಾಲೆ ಇದಲ್ಲದೆ ಕರ್ನಾಟಕ ಏಕೀಕರಣ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವುದರಿಂದ ಏಕೀಕರಣ ಎಂಬುದು ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿ ಬೀರಿದ ಪ್ರಭಾವಗಳನ್ನು ಅರಿಯುವ, ಏಕೀಕರಣ ಹೋರಾಟಗಾರರನ್ನು ಸ್ಮರಿಸುವ 'ಏಕೀಕರಣ ಪುಸ್ತಕ ಮಾಲೆ'ಯನ್ನು ಹೊರತರಬೇಕು ಎನ್ನುವ ಸಲಹೆಯನ್ನು ನೀಡಿರುವೆ. ಇದೊಂದು ಸ್ವಯಂಪ್ರೇರಿತ ಕ್ರಿಯಶೀಲತೆ. ಈ ಯೋಜನೆಯನ್ನು ಪರಿಷತ್ ಅಂಗೀಕರಿಸಿದೆ. ಸಮ್ಮೇಳನ ಮುಗಿದ ನಂತರ ಈ ಕಾರ್ಯಕ್ಕೆ ವೇಗ ಸಿಗಲಿದೆ. ಪರಿಷತ್ ಕುರಿತ ನನ್ನ ಅಕ್ಷೇಪವೂ ಇದೆ. ಸಮ್ಮೇಳನವೊಂದನ್ನೇ ಪರಮ ಆದ್ಯತೆ ಎಂದು ಪರಿಗಣಿಸಬಾರದು. ಲಕ್ಷಕ್ಕೂ ಮಿಕ್ಕ ಸದಸ್ಯರನ್ನು ಕೇವಲ ಚಂದಾದಾರರು ಎಂದು ಭಾವಿಸಬಾರದು. ಇವರನ್ನು ಕನ್ನಡದ ಶಕ್ತಿಯಾಗಿ ಕಟ್ಟುವ ಕಾರ್ಯಸೂಚಿಯನ್ನು ಹೊಂದಬೇಕು. ಹೋರಾಟದ ದಿಕ್ಕು ಕನ್ನಡ ಕೇವಲ ಭಾಷೆಯಲ್ಲ; ಜನತೆ ಮತ್ತು ಅವರ ಬದುಕೂ ಹೌದು. ಕನ್ನಡಿಗರ ಬದುಕನ್ನು ಸಮಾನತೆಯ ಆಧಾರದ ಮೇಲೆ ರೂಪಿಸುವ ಪ್ರಯತ್ನಗಳು ಮತ್ತು ನಡೆಸುವ ಹೋರಾಟಗಳು ಕನ್ನಡಕ್ಕೆ ಸಲ್ಲಿಸುವ ಸೇವೆಯೇ ಆಗಿರುತ್ತದೆ. ಕನ್ನಡಿಗರು ಕನ್ನಡಿಗರನ್ನೇ ಶೋಷಿಸುತ್ತಿರುವುದು ಕನ್ನಡಾಭಿಮಾನಿಗಳು ಗಮನಿಸಬೇಕಾಗಿದೆ. ಕನ್ನಡ ಬಂಡವಾಳಿಗ ಕನ್ನಡ ಕೂಲಿಕಾರನನ್ನು; ಕನ್ನಡ ಜಮೀನ್ದಾರ ಕನ್ನಡ ರೈತನನ್ನು ಶೋಷಿಸುವ; ಜಾತಿಯ ಆಧಾರದ ಮೇಲೆ ಕನ್ನಡಿಗರ ನಡುವೆಯೇ ಗೋಡೆಯೆದ್ದಿರುವ ಸ್ಥಿತಿ ಎದ್ದು ಕಾಣಿಸುತ್ತದೆ. ಕನ್ನಡ ಭಾಷೆಯ ಉದ್ಧಾರವನ್ನು ಬಯಸುವವರು ಬಡ ಕನ್ನಡಿಗರ ಉದ್ಧಾರದಲ್ಲಿಯೇ ಅದು ಅಡಗಿದೆಯೆಂಬುದನ್ನು ಅರಿಯಬೇಕಾಗಿದೆ. ಭಾಷೆಯ ಶ್ರೀಮಂತಿಕೆಯ ಬಗ್ಗೆ ಉಬ್ಬುತ್ತ ಕನ್ನಡಿಗರ ಬಡತನವನ್ನು ಮರೆಯುವುದು ಹೋರಾಟ ಒಂದು ಮುಖ್ಯ ಅಂಶವನ್ನೇ ಕೈ ಬಿಟ್ಟಂತಾಗುತ್ತದೆ. ಇಷ್ಟು ಹೇಳುವಾಗಲೂ ಭಾಷಾ ಪ್ರಾಧಾನ್ಯತೆಗೆ ನಡೆಸುವ ಹೋರಾಟವನ್ನು ನಾನು ತೀರ ಗೌಣವಾಗಿ ಕಾಣುತ್ತಿಲ್ಲ.
ಸಾಹಿತ್ಯವನ್ನು ನುಂಗಿ ಹಾಕುತ್ತಿರುವ ಸಮಾಜಶಾಸ್ತ್ರ
ಕೊನೆಗೂ ಸಾಹಿತ್ಯಾಸಕ್ತರಿಗೆ ಸಮ್ಮೇಳನದಲ್ಲಿ ಆಕರ್ಷಕವಾಗಿ ಉಳಿಯುವುದು ಪುಸ್ತಕ ಮಳಿಗೆಗಳ ಸಂಕೀರ್ಣವೇ ಹೊರತು ಮತ್ತೇನೂ ಅಲ್ಲ ಎನ್ನುವ ಭ್ರಮನಿರಸನ ನನಗೆ ಪ್ರತಿ ವರ್ಷವೂ ಆಗುತ್ತಿದೆ. - ವಸುಧೇಂದ್ರ ಇತ್ತೀಚೆಗೆ ನಾನು ಚಂಡೀಗಡ್ ಲಿಟರೇಚರ್ ಫೆಸ್ಟಿವಲ್‌ಗೆ ಹೋಗಿದ್ದೆ. ಅಲ್ಲಿ 'ಮುನ್ನು- ಒಬ್ಬ ಕಾಶ್ಮೀರಿ ಹುಡುಗ' ಎನ್ನುವ ಇಂಗ್ಲಿಷ್ ಗ್ರಾಫಿಕ್ ಕಾದಂಬರಿಯ ಚರ್ಚಾಗೋಷ್ಠಿಯಿತ್ತು. ಶ್ರೀನಗರದಿಂದ ಬಂದಿದ್ದ ಅದರ ಲೇಖಕ ಮತ್ತು ಕಲಾವಿದ ಮಾಲಿಕ್ ಸಜದ್‌ನಿಗೆ ಇನ್ನೂ ಮೂವತ್ತರ ವಯಸ್ಸು. ಈ ಪುಸ್ತಕವು ಕಾಶ್ಮೀರಿ ಹುಡುಗನ ಕಣ್ಣಿನ ಮೂಲಕ ಅಲ್ಲಿ ನಡೆಯುವ ದೌರ್ಜನ್ಯದ ಕುರಿತ ಕಥೆಯನ್ನೊಳಗೊಂಡಿದೆ. ಅತ್ಯಂತ ಅದ್ಭುತವಾದ ರೇಖಾಚಿತ್ರಗಳ ಮೂಲಕ ಕತೆಯನ್ನು ಹೇಳಲಾಗಿದೆ. ಪುಸ್ತಕದಲ್ಲಿರುವ ಅಪರೂಪದ ಚಿತ್ರಗಳ ಪ್ರಾತ್ಯಕ್ಷಿಕೆ ಮಾಡಿ, ಅನಂತರ ಪುಸ್ತಕ ರೂಪಗೊಂಡ ಕ್ರಮದ ಕುರಿತು ಲೇಖಕನ ಜೊತೆಯಲ್ಲಿ ಮತ್ತೊಬ್ಬ ಯುವಲೇಖಕ ಸೊಗಸಾದ ಸಂವಾದವನ್ನುನಡೆಸಿಕೊಟ್ಟ. ಅನಂತರ ಪ್ರೇಕ್ಷ ಕರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟರು. ಅಲ್ಲಿಗೆ ಕಾಶ್ಮೀರಿ ಪಂಡಿತರ ಕುಟುಂಬದ ವ್ಯಕ್ತಿಯೊಬ್ಬ ಬಂದಿದ್ದ. ಆತ ಎದ್ದು ನಿಂತು ''ನಿನ್ನ ಸೊಗಸಾದ ಚಿತ್ರಗಳನ್ನು ಗೌರವಿಸುತ್ತೇನೆ. ಆದರೆ ನೀನಿನ್ನೂ ಚಿಕ್ಕವನು. ನನ್ನ ತಂದೆಯನ್ನು ಮತ್ತು ಅಣ್ಣನನ್ನು ಶ್ರೀನಗರದಲ್ಲಿ ಉಗ್ರಗಾಮಿಗಳು ಕೊಂದಿದ್ದು ನಿನಗೆ ಗೊತ್ತಿರಲಿಕ್ಕಿಲ್ಲ. ನಮ್ಮ ಅತ್ತಿಗೆಯನ್ನು ಅವರು ಅತ್ಯಾಚಾರ ಮಾಡಿ ಕೊಂದಿದ್ದೂ ನಿನಗೆ ತಿಳಿದಿರಲಿಕ್ಕಿಲ್ಲ. ಅನಂತರ ನಮ್ಮ ಇಡೀ ಸಂಸಾರವನ್ನೇ ಒಕ್ಕಲೆಬ್ಬಿಸಿದ್ದೂ ನಿನಗೆ ಗೊತ್ತಿರಲಿಕ್ಕಿಲ್ಲ. ಕೇವಲ ಕಾಶ್ಮೀರಿಗಳ ಮೇಲೆ ಸದ್ಯಕ್ಕೆ ನಡೆಯುತ್ತಿರುವ ದೌರ್ಜನ್ಯ ಮಾತ್ರ ನಿನಗೆ ಕಾಣುತ್ತಿದೆ. ನಿನ್ನ ಪುಸ್ತಕ ಏಕಮುಖಿ ಅನ್ನಿಸುವುದಿಲ್ಲವೆ?'' ಎಂದು ಪ್ರಶ್ನಿಸಿದರು. ಅವರು ಪ್ರಶ್ನೆ ಕೇಳುವಾಗಲೇ ದುಃಖ ಮತ್ತು ಸಿಟ್ಟಿನಿಂದ ಅವರ ಧ್ವನಿ ತಾರಕಕ್ಕೇರಿತ್ತು. ಅನಂತರ ಆ ಸಭೆಯಲ್ಲಿದ್ದ ಸಾಕಷ್ಟು ಕಾಶ್ಮೀರಿ ಪಂಡಿತ ಕುಟುಂಬಗಳೂ ತಮ್ಮ ಸಿಟ್ಟನ್ನು ಹೊರಹಾಕಲಾರಂಭಿಸಿದರು. ಕೆಲವರಂತೂ ಅಳತೊಡಗಿದರು. ಕಡೆಗೆ ಸಭೆಯನ್ನು ಮುಂದುವರೆಸಲು ಸಾಧ್ಯವಾಗದೆ, ಪೋಲಿಸರನ್ನು ಕರೆಸಬೇಕಾಯ್ತು. ಸಭೆಯ ನಂತರವೂ ಕಾಶ್ಮೀರಿ ಜನರ ಸಮಸ್ಯೆಯ ಚರ್ಚೆ ಮುಂದುವರೆದಿತ್ತು. ಕೆಲವರು ಕಾಶ್ಮೀರಿ ಪಂಡಿತರ ಪರವಾಗಿ, ಮತ್ತೆ ಕೆಲವರು ಸದ್ಯದ ಅಲ್ಲಿಯ ಜನರ ಪರವಾಗಿ ಮಾತನಾಡುತ್ತಲೇ ಇದ್ದರು. ಅದರ ಪ್ರಭಾವಕ್ಕೆ ಒಳಗಾದ ನಾನು ತಕ್ಷ ಣವೇ ಆ ಪುಸ್ತಕವನ್ನು ಕೊಂಡುಕೊಂಡೆ. ಈ ಸನ್ನಿವೇಶವನ್ನು ಸೂಕ್ಷ ್ಮವಾಗಿ ಗಮನಿಸಿ. ಸಾಹಿತ್ಯದ ಕೃತಿಯೊಂದರ ಚರ್ಚೆಯ ಮೂಲಕ ಸಮಾಜದ ಸಮಸ್ಯೆಯೊಂದರ ಚರ್ಚೆಯು ಮುನ್ನೆಲೆಗೆ ಬಂತು. ಆ ಕಾರಣದಿಂದಾಗಿಯೇ ನನಗೆ ಆ ಪುಸ್ತಕವನ್ನು ತಕ್ಷ ಣವೇ ಓದಬೇಕೆಂಬ ಕುತೂಹಲವನ್ನೂ ಹುಟ್ಟಿಸಿಬಿಟ್ಟಿತು. ಅಲ್ಲಿದ್ದ ಬಹುತೇಕ ಸಾಹಿತ್ಯಾಭಿಮಾನಿಗಳೂ ಆ ಪುಸ್ತಕವನ್ನು ಕೊಂಡುಕೊಂಡರು. ನನಗೆ ತಿಳಿದಂತೆ ಜಗತ್ತಿನ ಸಾಹಿತ್ಯದ ಉತ್ಸವಗಳು ನಡೆಯುವುದು ಭಾಗಶಃ ಇದೇ ಮಾದರಿಯಲ್ಲಿ. ಆದರೆ ಅದು ಯಾಕೋ ಗೊತ್ತಿಲ್ಲ, ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಕೃತಿಗಳು ಹಿನ್ನೆಲೆಗೆ ಸರಿದು, ಕೇವಲ ಸಾಮಾಜಿಕ ಸ್ಥಿತಿಗತಿಗಳ ಚರ್ಚೆಯೇ ಎಲ್ಲಾ ವೇದಿಕೆಗಳಲ್ಲಿ ಪ್ರಧಾನವಾಗಿ ನಡೆಯುತ್ತದೆ. ಒಂದರ್ಥದಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳು ಸಮಾಜಶಾಸ್ತ್ರ ಸಮ್ಮೇಳನಗಳಾಗಿ ಮಾರ್ಪಾಡಾಗಿವೆ. ಈ ಸಂವಾದಗಳಲ್ಲಿ ಕನ್ನಡದ ಸದ್ಯದ ಪುಸ್ತಕಗಳ ಬಗ್ಗೆ ಎಲ್ಲೋ ಒಂದು ಮಾತು ಬಂದರೂ ಬಂತು, ಇಲ್ಲದಿದ್ದರೂ ಇಲ್ಲ. ಯಾರಿಗೂ ಅದರ ಬಗ್ಗೆ ಕಾಳಜಿ ಇರುವುದಿಲ್ಲ. ಇದರಿಂದಾಗಿ ಇಡೀ ಮೂರು ದಿನ ನಿರಂತರವಾಗಿ ನೀವು ಗೋಷ್ಠಿಗಳಲ್ಲಿ ಭಾಗವಹಿಸಿದರೂ, ಊರಿಗೆ ಮರಳುವಾಗ ಯಾವ ಮೂರು ಹೊಸ ಕನ್ನಡ ಪುಸ್ತಕಗಳನ್ನು ಓದಬೇಕು ಎನ್ನುವ ಪಟ್ಟಿ ದಕ್ಕುವುದಿಲ್ಲ. ಕೊನೆಗೆ ನೀವು ಪುಸ್ತಕ ಮಳಿಗೆಗಳಲ್ಲಿ ನಿಮಗೆ ತೋಚಿದ ಪುಸ್ತಕಗಳನ್ನು ಕೊಂಡು ಮರಳುತ್ತೀರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತ್ಯಕ್ಕಿಂತಲೂ ಸಮಾಜಶಾಸ್ತ್ರ ಪ್ರಮುಖವಾದದ್ದು ಎನ್ನುವ ವಿಶೇಷ ಮನೋಭಾವವಿದೆ. ಆ ಕಾರಣದಿಂದಲೇ ನಮಗೆ 'ಸಾಹಿತ್ಯ ವಿಮರ್ಶಕ' ಎನ್ನುವುದಕ್ಕಿಂತಲೂ 'ಸಾಂಸ್ಕೃತಿಕ ವಿಮರ್ಶಕ' ಎನ್ನುವ ಬಿರುದಾವಳಿ ಮುಖ್ಯವೆಂಬ ಭಾವವಿದೆ. 'ಸಾಹಿತ್ಯ ಚಿಂತಕ'ಕ್ಕಿಂತಲೂ 'ದೇಶೀ ಚಿಂತಕ' ಎಂದರೆ ಅದರ ವಜನು ಜಾಸ್ತಿಯಾಗುತ್ತದೆ. ಈ ಮನೋಧರ್ಮದಿಂದಾಗಿ ನಮ್ಮ ಸಮ್ಮೇಳನಗಳಲ್ಲಿ ಸಾಹಿತ್ಯವನ್ನು ಸಮಾಜಶಾಸ್ತ್ರವು ಸಂಪೂರ್ಣವಾಗಿ ತಿಂದು ಹಾಕಿಬಿಡುತ್ತಿದೆ. ಅಧ್ಯಕ್ಷ ರ ಆಯ್ಕೆಯಿಂದ ಹಿಡಿದು, ವಂದನಾರ್ಪಣೆ ಅರ್ಪಿಸುವವರ ತನಕ ಸಾಹಿತ್ಯಕ್ಕಿಂತಲೂ ಸಮಾಜಶಾಸ್ತ್ರೀಯ ಕಾರಣಗಳೇ ಪ್ರಾಮುಖ್ಯ ವಹಿಸುತ್ತವೆ. ಸಾಹಿತ್ಯ ಮತ್ತು ಸಮಾಜಶಾಸ್ತ್ರಗಳೆರಡೂ ಸಮಾನ ಗೌರವವನ್ನು ಬಯಸುತ್ತವೆ. ಆದರೆ ಸದ್ಯದ ಉತ್ಸವದಲ್ಲಿ ಸಾಹಿತ್ಯಕ್ಕೆ ಪ್ರಾಮುಖ್ಯತೆ ಇರಬೇಕು ಎನ್ನುವ ಮನೋಭಾವ ಯಾಕೋ ಯಾರಲ್ಲಿಯೂ ಕಾಣುವುದಿಲ್ಲ. ಆ ಕಾರಣದಿಂದಾಗಿಯೇ ಏನೋ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾಷಣಕ್ಕೆ ಒಪ್ಪಿಕೊಂಡ ಸಾಹಿತಿಗಳನ್ನು ಬಿಟ್ಟರೆ ಹಾಗೇ ಸುಮ್ಮನೆ ಸಾಹಿತಿಯೊಬ್ಬರು ಬಂದು ಭಾಗವಹಿಸುವುದು ಬಹಳ ಅಪರೂಪವಾಗಿಬಿಟ್ಟಿದೆ. ಪ್ರತಿ ವರ್ಷದಂತೆ ಕಳೆದ ವರ್ಷವೂ ಕನ್ನಡದಲ್ಲಿ ಅದ್ಭುತ ಪುಸ್ತಕಗಳು ಪ್ರಕಟಗೊಂಡಿವೆ. ಉತ್ತಮ ಕೃತಿಗಳ ರಚನೆಯ ಕೃಷಿಗೆ ಕನ್ನಡ ಸಾಹಿತ್ಯ ಲೋಕ ಎಂದೂ ಬರಗಾಲವನ್ನು ಅನುಭವಿಸಿಲ್ಲ. ಡಾ. ವಿಜಯಾ ಅವರ 'ಕುದಿ ಎಸರು', ಎಚ್.ಎಸ್. ವೆಂಕಟೇಶಮೂರ್ತಿಯವರ 'ಋುಗ್ವೇದ ಸ್ಫುರಣ', ಕಂಬಾರರ 'ಶಿವನ ಡಂಗುರ', ಡಾ. ಗುರುಪ್ರಸಾದ್ ಕಾಗಿನೆಲೆ ಅವರ 'ಹಿಜಾಬ್', ಚಂದ್ರಶೇಖರ ಮಂಡೆಕೋಲು ಅವರ 'ಅಗ್ನಿದಿವ್ಯದ ಹುಡುಗಿ', ಕೆ. ಸತ್ಯನಾರಾಯಣ ಅವರ 'ವೃತ್ತಿ ವಿಲಾಸ', ಷ. ಶೆಟ್ಟರ್‌ರವರ 'ಹಳಗನ್ನಡ'- ನನಗೆ ತಕ್ಷ ಣಕ್ಕೆ ನೆನಪಾಗುತ್ತಿವೆ. ಆದರೆ ಈ ಯಾವ ಪುಸ್ತಕಗಳನ್ನೂ ಕೊಳ್ಳಲೇಬೇಕೆಂಬ ಉತ್ಸಾಹ ಹುಟ್ಟಿಸುವಂತಹ ಗೋಷ್ಠಿಗಳು ನನಗೆ ಆಹ್ವಾನ ಪತ್ರಿಕೆಯಲ್ಲಿ ಕಾಣುತ್ತಿಲ್ಲ. ಕಳೆದ ವರ್ಷ ವಿವೇಕ ಶಾನಭಾಗರ ಘಾಚರ್ ಘೋಚರ್ ಕಾದಂಬರಿಯು ಇಂಗ್ಲೀಷಿಗೆ ಅನುವಾದಗೊಂಡಿತು. ಈ ಪುಸ್ತಕ ಅದೆಂತಹ ಅದ್ಭುತ ಯಶಸ್ಸನ್ನು ಜಗತ್ತಿನಲ್ಲಿ ಕಂಡಿದೆಯೆಂದರೆ, ಅಮೆರಿಕದ ಪುಟ್ಟ ಹಳ್ಳಿಯ ಗ್ರಂಥಾಲಯದಲ್ಲಿಯೂ ಅದರ ಆರು ಪ್ರತಿಗಳು ಇವೆಯಂತೆ! ಯುರೋಪಿನ ಬಹುತೇಕ ಭಾಷೆಗಳಲ್ಲೂ ಅದು ಅನುವಾದಗೊಂಡು ಸದ್ಯದಲ್ಲಿಯೇ ಪ್ರಕಟಗೊಳ್ಳುತ್ತಿದೆ. ಜಗತ್ತಿನ ಸರ್ವಶ್ರೇಷ್ಠ ಪತ್ರಿಕೆಗಳೆಲ್ಲವೂ ಈ ಪುಸ್ತಕವನ್ನು ಮುಕ್ತವಾಗಿ ಕೊಂಡಾಡಿವೆ. ಅದರಿಂದಾಗಿ ಜಗತ್ತಿನ ಓದುಗರು ಕನ್ನಡ ಸಾಹಿತ್ಯದ ಬಗ್ಗೆ ಕುತೂಹಲಗೊಂಡಿದ್ದಾರೆ. ಇಂಗ್ಲಿಷ್ ಪ್ರಕಾಶಕರು ಇತರ ಕನ್ನಡದ ಉತ್ತಮ ಲೇಖಕರ ಹುಡುಕಾಟದಲ್ಲಿ ತೊಡಗಿದ್ದಾರೆ. ನನಗೆ ತಿಳಿದ ಮಟ್ಟಿಗೆ ಈ ಹಿಂದೆ ಇಂಥ ಯಶಸ್ಸನ್ನು ಯಾವ ಕನ್ನಡ ಕೃತಿಯೂ ಸಾಧಿಸಿಲ್ಲ. ಓದುಗರಿಲ್ಲದೆ ಒದ್ದಾಡುತ್ತಿರುವ ಕನ್ನಡ ಲೇಖಕರಿಗೆ ಈ ಯಶಸ್ಸು ಹೊಸಬೆಳಕೊಂದನ್ನು ತೋರಿಸುತ್ತಿದೆ. ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸಬಹುದಾದ ಈ ಯಶಸ್ಸನ್ನು ಕುರಿತ ಒಂದು ಗೋಷ್ಠಿಯಾಗಲಿ, ಸಂಭ್ರಮವಾಗಲಿ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಇಲ್ಲವೆಂದರೆ ಹೇಗೆ? ಕನ್ನಡ ಸಾಹಿತ್ಯ ಸಮ್ಮೇಳನವು ಜಗತ್ತಿನ ಸಾಹಿತ್ಯಕ್ಕೆ ಮತ್ತು ಸಾಹಿತಿಗಳಿಗೆ ತೆರೆದುಕೊಳ್ಳುವ ಅವಶ್ಯಕತೆಯಿದೆ. ನಮ್ಮ ನೆರೆ-ಹೊರೆಯ ರಾಜ್ಯದಲ್ಲಿರುವ ಪ್ರಮುಖ ಸಾಹಿತಿಗಳನ್ನೂ, ಹೊರದೇಶದ ಮಹತ್ವದ ಲೇಖಕರನ್ನು ನಾವು ಆಹ್ವಾನಿಸಿ, ಅವರೊಡನೆ ಚರ್ಚೆ ಮಾಡಬೇಕು. ಅವರಿಗೆ ಕನ್ನಡ ಬರದಿದ್ದರೂ ಅಡ್ಡಿಯಿಲ್ಲ, ಅವರ ಮಾತುಗಳನ್ನು ತರ್ಜುಮೆಗೊಳಿಸುವ ಸೌಲಭ್ಯವನ್ನು ನಾವು ಏರ್ಪಡಿಸಬೇಕು. ಕನ್ನಡೇತರ ಸಾಹಿತ್ಯಲೋಕದೊಡನೆ ಉತ್ತಮ ನಂಟನ್ನು ಬೆಸೆಯುವುದಕ್ಕೆ ನಮ್ಮ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಬೇಕು. ಅದೇ ರೀತಿ ಕರ್ನಾಟಕದಲ್ಲಿಯೇ ಬಹಳಷ್ಟು ಜನ ಇಂಗ್ಲಿಷಿನಲ್ಲಿ ಅಥವಾ ಬೇರೆ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಿದ್ದಾರೆ. ಅವರ ಕತೆ-ಕಾದಂಬರಿಗಳಲ್ಲೂ ಕನ್ನಡದ ಜಗತ್ತು ತೆರೆದುಕೊಳ್ಳುತ್ತಿದೆ. ಅವರಿಗೂ ನಾವು ಗೋಷ್ಠಿಗಳನ್ನು ಮಾಡಿಕೊಡುವ ಅವಶ್ಯಕತೆಯಿದೆ. ಬೆಂಗಳೂರು ಲಿಟರೇಚರ್ ಫೆಸ್ಟಿವಲ್‌ನಲ್ಲಿ ಕನ್ನಡ ಸಾಹಿತ್ಯಕ್ಕೂ ಅವಕಾಶ ಇರಲೇಬೇಕೆಂದು ಹೇಳುವ ನಾವು, ಕರ್ನಾಟಕದ ಇಂಗ್ಲಿಷ್ ಸಾಹಿತಿಗಳಿಗೆ ನಮ್ಮ ಸಮ್ಮೇಳನದಲ್ಲಿ ಒಂದು ವೇದಿಕೆ ಮಾಡಿಕೊಡದಿದ್ದರೆ ಯಾವ ನ್ಯಾಯ? ವಿಚಿತ್ರವೆಂದರೆ ಐಶ್ವರ್ಯಾ ರೈ ಮತ್ತು ದೀಪಿಕಾ ಪಡುಕೋಣೆಯವರನ್ನು ನಮ್ಮ ಸಾಹಿತ್ಯ ಸಮ್ಮೇಳನಕ್ಕೆ ಕರೆಯಬೇಕೆಂದು ತುದಿಗಾಲಿನಲ್ಲಿ ನಿಲ್ಲುವ ನಾವು, ಪಕ್ಕದ ರಾಜ್ಯದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳನ್ನು ಕರೆಸುವುದಕ್ಕೆ ಉತ್ಸಾಹ ತೋರಿಸುವುದಿಲ್ಲ. ಕೊನೆಗೂ ಸಾಹಿತ್ಯಾಸಕ್ತರಿಗೆ ಸಮ್ಮೇಳನದಲ್ಲಿ ಆಕರ್ಷಕವಾಗಿ ಉಳಿಯುವುದು ಪುಸ್ತಕ ಮಳಿಗೆಗಳ ಸಂಕೀರ್ಣವೇ ಹೊರತು ಮತ್ತೇನೂ ಅಲ್ಲ ಎನ್ನುವ ಭ್ರಮನಿರಸನ ನನಗೆ ಪ್ರತಿ ವರ್ಷವೂ ಆಗುತ್ತಿದೆ.
ಕಾಲವು ಕಾಲವನ್ನೇ ಕಟ್ಟುವ ಬಗೆ
ಸಾಹಿತ್ಯವೆಂಬ ಹಣ್ಣಿಗೆ ಅದರ ತಿರುಳೇ ವೈಚಾರಿಕತೆ; ಕಾವ್ಯಗುಣವೇ ಅದರ ಬೀಜ; ಇವೆರಡನ್ನೂ ಆಲಿಂಗಿಸಿರುವ ಸಿಪ್ಪೆಯೇ ಭಾಷೆಯೆಂಬ ಹೊದಿಕೆ. ಒಂದನ್ನು ಮತ್ತೊಂದರಿಂದ ಬೇರ್ಪಡಿಸಿ ನೋಡುವುದು ಸಾಧ್ಯವೂ, ಸಾಧುವೂ ಅಲ್ಲ. ಯಾವುದು ಯಾವುದಕ್ಕೆ ಹೇಗೆ ಪೂರಕ ಎಂಬುದು ಪ್ರತಿಯೊಬ್ಬ ಲೇಖಕನ ಹುಡುಕಾಟದ ಗಮ್ಯ. - ಜ.ನಾ.ತೇಜಶ್ರೀ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಕಟ್ಟಿಕೊಳ್ಳುವುದೆಂದರೆ ಅದರ ತಾತ್ವಿಕತೆಯ ವಿನ್ಯಾಸಗಳು ಬದಲಾದ ಬಗೆಯ ಅಧ್ಯಯನವೇ ಆಗಿದೆ. ಕನ್ನಡ ಸಾಹಿತ್ಯದ ತಾತ್ವಿಕತೆಯ ಸ್ವರೂಪವನ್ನು ಕಾವ್ಯದ ಅನುಸಂಧಾನದಿಂದಲೇ ಗ್ರಹಿಸಬೇಕು. ನಾನಿಲ್ಲಿ 'ಕಾವ್ಯ' ಎಂಬ ಪದವನ್ನು ಒಂದು ಸಾಹಿತ್ಯಪ್ರಕಾರ ಎನ್ನುವ ಅರ್ಥದಲ್ಲಿ ಬಳಸುತ್ತಿಲ್ಲ, ಬದಲಾಗಿ ಯಾವುದೇ ಬರಹವು ಹೆಚ್ಚು ಹೆಚ್ಚು ದಾರ್ಶನಿಕವೂ ಪಾರದರ್ಶಕವೂ ಆದಂತೆ ಸಹಜವಾಗಿಯೇ ಒಳಗೊಳ್ಳುವ ಕಾವ್ಯಗುಣ ಎಂಬ ನೆಲೆಯಲ್ಲಿ ಬಳಸುತ್ತಿದ್ದೇನೆ. ಅನುಭವಗಳು ಹೇಗೆ ತಮ್ಮೆಲ್ಲ ಸಂಕೀರ್ಣತೆ, ಪಾರದರ್ಶಕತೆಯೊಂದಿಗೆ ನಮಗೆ ಎದುರಾಗುತ್ತವೆಯೋ ಹಾಗೆಯೇ ಆ ಅನುಭವಗಳನ್ನು ಅಕ್ಷರರೂಪದಲ್ಲಿ ಆಗುಮಾಡುವ ಲೇಖಕನ ಕೆಲಸವೂ ಪಾರದರ್ಶಕವಾಗಿದ್ದಾಗ ಅಂತಹ ಬರಹವು ಕಾವ್ಯದ ಸಾಧ್ಯತೆಗಳನ್ನು, ಬೆಳಕನ್ನು ಪಡೆದಿರುತ್ತವೆ ಎಂದು ಎನಿಸುತ್ತದೆ. ಒಂದು ವರ್ಗದ ಕೇಳುಗರು ಮತ್ತು ಓದುಗರಿಗಷ್ಟೇ ಸೀಮಿತವಾಗಿದ್ದ ಪಂಪ, ಕುಮಾರವ್ಯಾಸರನ್ನು ನಿಜವಾದ ಅರ್ಥದಲ್ಲಿ 'ಧರ್ಮ'ದ ಬಂಧನದಿಂದ ಬಿಡುಗಡೆಗೊಳಿಸಿದ್ದು ನವೋದಯದ ಕಾಲಘಟ್ಟ. ಹಳಗನ್ನಡ ಕಾವ್ಯಗಳನ್ನು ಮರುವ್ಯಾಖ್ಯಾನ ಮಾಡುವುದರ ಮೂಲಕ, ಹೊಸ ಬಗೆಯ, ಜಾತ್ಯತೀತವಾದ 'ಕನ್ನಡ ಕಾವ್ಯಪರಂಪರೆ'ಯನ್ನು ಈ ಕಾಲದ ಲೇಖಕರು ರೂಪಿಸಿದರು. 'ಧರ್ಮ'ದ ಹಿಡಿತದೊಳಗಿದ್ದ ಸಾಹಿತ್ಯಕೃತಿಗಳನ್ನು 'ಕನ್ನಡಿಗ'ರ ಕೃತಿಯಾಗಿಸಿದ ಮುದ್ರಣ ತಂತ್ರಜ್ಞಾನವನ್ನು ಋುಜುವಾಗಿ ಬಳಸಿದ ಕಾಲ ಇದು. ಹಳಗನ್ನಡ ಮತ್ತು ನವೋದಯಗಳ ನಡುವೆ ಮೂಡಿಬಂದ ವಚನಸಾಹಿತ್ಯವು ಸಾಹಿತ್ಯದ ತಾತ್ವಿಕತೆಗೆ ಹೊಸ ಆಯಾಮವನ್ನು ಸೇರಿಸಿದ ಕಾಲ. ಸಮಾಜದ ಹಲವು ಜಾತಿ-ವರ್ಗಗಳ, ಹಲವು ಹಿನ್ನೆಲೆಯ ಜನರು ಕಾವ್ಯರಚನೆಯಲ್ಲಿ ತೊಡಗಿಕೊಂಡ ಈ ಕಾಲವು ಜಾತಿಗಳ ಬಿಗುವು ಮತ್ತು ಬಿಗಿಯನ್ನು ಸಡಿಲಗೊಳಿಸಿತು. ಜೊತೆಗೆ, ಸರಳ ಕನ್ನಡದಲ್ಲಿ ಬರೆಯುವ ಮೂಲಕ ಭಾಷೆಯನ್ನು ಅರಳಿಸಿ ನಿಜವಾದ ಕ್ರಾಂತಿ ಮಾಡಿತು. ಒಂದು ಭಾಷೆಯ ಒಳಗೇ ಇದ್ದು, ಅದಕ್ಕೆ ಒಳಗಾಗದೆ ಬರೆಯುವುದು ಮತ್ತು ಆ ಮೂಲಕ ಹೊಸ ಭಾಷೆಯನ್ನು ಕಟ್ಟುತ್ತಾ ಶಿಷ್ಟವಾಗುವುದು ವಚನಸಾಹಿತ್ಯವು ನಮಗೆ ತೋರಿಸಿಕೊಟ್ಟ ಮಾದರಿ. ವಚನಗಳ ನಂತರ ಕನ್ನಡ ಸಾಹಿತ್ಯವು ಪೂರ್ಣಪ್ರಮಾಣದಲ್ಲಿ ಅರಳಿರುವುದು ನವೋದಯದ ಕಾಲಘಟ್ಟದಲ್ಲಿಯೇ. ವಚನಕಾಲದಂತೆಯೇ ಇಲ್ಲಿಯೂ ಹಲವು ಹಿನ್ನೆಲೆಗಳ ಮತ್ತು ಹೊಸ ಪ್ರಭಾವಗಳಿಗೆ ಪಕ್ಕಾದ ಲೇಖಕರು ಒಟ್ಟಿಗೆ ಬರೆಯತೊಡಗಿದರು ಮತ್ತು ಪರಂಪರೆಯನ್ನು ಮುರಿದು ತಮ್ಮ ಹುಡುಕಾಟದ ಅಗತ್ಯಕ್ಕೆ ತಕ್ಕಂತೆ ವೈಚಾರಿಕತೆ, ಕಾವ್ಯತ್ವ ಮತ್ತು ಭಾಷಿಕ ನೆಲೆಗಳಲ್ಲಿ ಹೊಸದಾಗಿ ಕಟ್ಟುವ ಪ್ರಯತ್ನ ಮಾಡಿದರು. ಈ ಮೂರೂ ಆಯಾಮಗಳು ಬೇರೆಬೇರೆಯಲ್ಲ, ಇವು ಒಂದರ ಮೂಲಕವೇ ಮತ್ತೊಂದು ಮೂಡಿಬರುವ ಸಂಗತಿಗಳು. ಕವಿಯಾಗಲೀ ಓದುಗನಾಗಲಿ ಈ ಮೂರು ಘಟಕಗಳನ್ನು ಬೇರೆಬೇರೆಯೆಂದು ಭಾವಿಸತೊಡಗಿದರೆ ಕಾವ್ಯದ ರಚನೆಯೂ ಸಾಧ್ಯವಿಲ್ಲ, ಗ್ರಹಿಕೆಯೂ ಸಾಧ್ಯವಿಲ್ಲ. ಪ್ರತ್ಯೇಕವಾಗಿಟ್ಟು ನೋಡಿದರೆ ಸಾಹಿತ್ಯ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಹಾಗಾಗುವುದಿಲ್ಲ. ನವೋದಯದ ನಂತರ ಮುನ್ನೆಲೆಗೆ ಬಂದ ನವ್ಯಸಾಹಿತ್ಯವು ಶಿಷ್ಟತೆ ಮತ್ತು ವೈವಿಧ್ಯಗಳನ್ನು ಒಳಗೊಳ್ಳುವ ಹಾದಿಯಲ್ಲಿ ಮಹತ್ವದ ಕೆಲಸ ಮಾಡಿತು. ಇಲ್ಲಿಯೂ ಕಾವ್ಯಪರಂಪರೆಯನ್ನು ಮುರಿದು ಹೊಸದಾಗಿ ಕಟ್ಟುವ ಕೆಲಸ ನಡೆಯಿತು. 'ಕಾವ್ಯ'ದ ಪರಿಕಲ್ಪನೆಯು ಕೊಂಚ ಬದಲಾದರೂ ಅದರ ಗೈರುಹಾಜರಿ ಇರಲಿಲ್ಲ. ಅದರ ಬಳಿಕ ಬಂದ ದಲಿತ ಮತ್ತು ಬಂಡಾಯ ಚಳುವಳಿಗಳು ಹೋರಾಟದ, ರೊಚ್ಚಿನ ನುಡಿಗಟ್ಟನ್ನು ರೂಪಿಸಿದವು. ಆದರೆ, ಈ ಕಾಲಘಟ್ಟದಲ್ಲಿ ಸಾಹಿತ್ಯ ಪರಂಪರೆಯನ್ನು ತನ್ನೊಳಗೆ ತೆಗೆದುಕೊಂಡು, ಮರುರೂಪಿಸಿ ಅದರ ಮೂಲಕವೇ ತನ್ನ ಆಶಯವನ್ನು ಮುನ್ನಡೆಸುವ ಇಚ್ಛಾಶಕ್ತಿ ಇತ್ತೇ ಎಂಬ ಸಂಗತಿಯು ಇನ್ನೂ ನಿಷ್ಠುರವಾದ ಅಧ್ಯಯನಕ್ಕೆ ಒಳಪಡಬೇಕಿದೆ. ಈ ಹಿನ್ನೆಲೆಯಿಂದ ಸಾಹಿತ್ಯವು ಬೆಳೆದು ಬಂದ ಬಗೆಯನ್ನು ನಾವು ಗಮನಿಸಿದರೆ, ಒಂದು ಕಾಲಘಟ್ಟವು ಇನ್ನೊಂದು ಕಾಲಘಟ್ಟವನ್ನು ಹೇಗೆ ರೂಪಿಸುತ್ತದೆ ಎನ್ನುವುದು ತಿಳಿಯುತ್ತದೆ. ಭಾಷೆಯು ಕೇವಲ ವಾಹಕವಾಗಿ, ಕಾವ್ಯವು ಕೇವಲ ವಕೀಲಿಯಾಗಿರುವ ಈ ಹೊತ್ತಲ್ಲಿ ಪರಂಪರೆಯ ಸಾತತ್ಯ, ಅದರೊಂದಿಗಿನ ಅನುಸಂಧಾನದ ಕೊಂಡಿ ಸಡಿಲಗೊಂಡಿದೆಯೇ ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ನೋವಿನ ಅಭಿವ್ಯಕ್ತಿ, ಇತ್ಯಾದಿ ಹಲವಾರು ಬೇಡಿಕೆಗಳ ಮಂಡನೆಗೆ ಕಾವ್ಯವು ವೇದಿಕೆಯಾಗುತ್ತಾ, ಎಲ್ಲವುದರ ಆಚೆಗೆ ಅಂತಿಮವಾಗಿ 'ಕಾವ್ಯವು ಕಾವ್ಯಕ್ಕೆ ಮಾತ್ರ' ಎಂಬ ಆಲೋಚನೆಯು ನಮ್ಮಿಂದ ಹೊರಟುಹೋಗಿದೆಯೇ? ಭಾಷೆಯ ಮೂಲಕವೇ ಅಭಿವ್ಯಕ್ತಿಗೊಳ್ಳದ ಬರಹಕ್ಕೆ ನಿಗೂಢತೆ, ಸಂಕೀರ್ಣತೆ, ಹೊಳಪು ಸಾಧ್ಯವೆ? ಕಾಣುವ ಕ್ರಮ ಮತ್ತು ಕಟ್ಟುವ ಕ್ರಮಗಳು ಪರಸ್ಪರ ಬೇರೆಯೆ? ಈ ಎಲ್ಲ ಪ್ರಶ್ನೆಗಳಿಗೆ ನಮ್ಮ ಕಾಲದ ಸಾಹಿತ್ಯದ ಬಿಕ್ಕಟ್ಟು ತೆರೆದಿದೆ; ಮತ್ತು ಪ್ರತಿಯೊಂದು ಕಾಲಘಟ್ಟವೂ ತನ್ನ ಪರಂಪರೆಯನ್ನು ತಾನು ಕಟ್ಟಿಕೊಂಡ ಹಾಗೆ ಈ ಕಾಲಘಟ್ಟವೂ ತನ್ನ ಪರಂಪರೆಯನ್ನು ಕಟ್ಟಿಕೊಳ್ಳಬಹುದಾದ ಹಾದಿಗಳೂ ಇದೇ ಪ್ರಶ್ನೆಗಳಲ್ಲಿವೆ ಅನಿಸುತ್ತದೆ. ಸಾಹಿತ್ಯವೆಂಬ ಹಣ್ಣಿಗೆ ಅದರ ತಿರುಳೇ ವೈಚಾರಿಕತೆ; ಕಾವ್ಯಗುಣವೇ ಅದರ ಬೀಜ; ಇವೆರಡನ್ನೂ ಆಲಿಂಗಿಸಿರುವ ಸಿಪ್ಪೆಯೇ ಭಾಷೆಯೆಂಬ ಹೊದಿಕೆ. ಒಂದನ್ನು ಮತ್ತೊಂದರಿಂದ ಬೇರ್ಪಡಿಸಿ ನೋಡುವುದು ಸಾಧ್ಯವೂ, ಸಾಧುವೂ ಅಲ್ಲ. ಯಾವುದು ಯಾವುದಕ್ಕೆ ಹೇಗೆ ಪೂರಕ ಎಂಬುದು ಪ್ರತಿಯೊಬ್ಬ ಲೇಖಕನ ಹುಡುಕಾಟದ ಗಮ್ಯ. ಪರಿವರ್ತನೆ ಮತ್ತು ಸಾತತ್ಯಗಳು ಕಾವ್ಯಕ್ಕೆ ಅನಿವಾರ್ಯ. ಆದರೆ ಕತೆಯು ಕಲೆಯೆಂಬ ಸಂಗತಿಯನ್ನು ಮರೆತ ಕ್ಷಣವೇ ಅದಕ್ಕೆ ಅಪಾಯ ಅಮರಿಕೊಳ್ಳುತ್ತದೆ. ಅತ್ಯಂತ ಪ್ರಾಮಾಣಿಕನೂ ದಿಟ್ಟನೂ ಆದ ಹೋರಾಟಗಾರನು, ಆ ಕಾರಣದಿಂದಲೇ ಕವಿಯಾಗುವುದಿಲ್ಲ. ಈ ದೃಷ್ಟಿಯಿಂದಲೇ ಕವಿ/ಲೇಖಕನೆಂದರೆ ಪಾತಾಳಗರುಡ. ಅವನಿಗೆ ಪಾತಾಳದಲ್ಲಿ ಅಡಗಿರುವ ಅಮೂಲ್ಯ ಸಂಗತಿಗಳನ್ನು ಹುಡುಕಲು ಗರುಡನ ತೀಕ್ಷ್ಣ ಮತ್ತು ಸೂಕ್ಷ್ಮ ಕಣ್ಣು ಬೇಕು. ಅಷ್ಟೇ ಅಲ್ಲ, ಕಾಲ-ಪಾತಾಳದಲ್ಲಿ ಅಡಗಿರುವ ನಿನ್ನೆಗಳನ್ನು ಮತ್ತು ಗರುಡನಂತೆ ಹಾರಲಿರುವ ನಾಳೆಗಳನ್ನು ನೋಡುವುದಕ್ಕೆ ವರ್ತಮಾನದಲ್ಲಿ ಬೇರುಬಿಟ್ಟ ಸಮತೋಲಿತ ದೃಷ್ಟಿ ಇರಬೇಕು. ನಿನ್ನೆ-ಇಂದು-ನಾಳೆಗಳನ್ನು ಬರಹದಲ್ಲಿ ಆಗುಮಾಡುವುದು ಹೇಗೆನ್ನುವುದು ನಮ್ಮ ಮುಂದಿರುವ ಸವಾಲು. ಭಾಷೆಯ ಬಗೆಗೆ, ಲೋಕದ ಬಗೆಗೆ ಮತ್ತು ಸೃಷ್ಟಿಯ ಬಗೆಗೆ ಈಗಿರುವುದಕ್ಕಿಂತ ಭಿನ್ನವಾದ ಅನಿಸಿಕೆಗಳು, ಲೋಕದೃಷ್ಟಿಗಳು ಬಂದಾಗ ಬರಹದಲ್ಲಿಯೂ ಬದಲಾವಣೆ ಸಾಧ್ಯ. ಹೊರಗಿನ ಲೋಕವನ್ನು ನೋಡುವ ಹಾಗೆ ಒಳಗಿನ ತಲ್ಲಣಗಳನ್ನು; ಕನ್ನಡದ ನಿನ್ನೆಗಳನ್ನು ಕಾಣುವ ಹಾಗೆ ಅದರ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಲೇಖಕನಿಗೆ ಸಾಧ್ಯವಾಗಬೇಕು. ಹಾಗಾದಾಗ ಮಾತ್ರ ಪರಂಪರೆಯನ್ನು ಧಿಕ್ಕರಿಸಿದ ಬರಹ/ಕವಿತೆಯು ಅದರ ಸಮರ್ಥ ಮುಂದುವರಿಕೆಯಾಗುತ್ತದೆ ಮತ್ತು ಈ ಕಾಲಘಟ್ಟವು ತನ್ನ 'ಪರಂಪರೆ'ಯನ್ನು ತಾನು ಸೃಷ್ಟಿಸಿಕೊಳ್ಳತೊಡಗುತ್ತದೆ.
ಕೆರೆಯ ನೀರನು ಕೆರೆಗೆ ಚೆಲ್ಲುವ ಕುಬೇರರು
ಇನ್ಫೋಸಿಸ್‌ನ ಸಹ ಸಂಸ್ಥಾಪಕ ಹಾಗೂ ಹಾಲಿ ಕಾರ‍್ಯಕಾರಿಯೇತರ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ಇತ್ತೀಚೆಗೆ ತಮ್ಮ ಸಂಪತ್ತಿನ ಬರೋಬ್ಬರಿ ಅರ್ಧ ಭಾಗವನ್ನೇ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ದಾನ ನೀಡುವುದಾಗಿ ವಾಗ್ದಾನ ಕೊಟ್ಟಿದ್ದಾರೆ. ವಾಸ್ತವವಾಗಿ ಗಿವಿಂಗ್ ಪ್ಲೆಜ್‌ಗೆ ಸಹಿ ಹಾಕಿದ ನಾಲ್ಕನೆಯವರೇ ನಿಲೇಕಣಿ ದಂಪತಿ. ಈ ಮೊದಲು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಶೋಭಾ ಡೆವಲಪರ್ಸ್‌ನ ಗೌರವಾಧ್ಯಕ್ಷ ಪಿ.ಎನ್.ಸಿ ಮೆನನ್ ಕೂಡ ಹೀಗೆ ಮಾಡಿದ್ದಾರೆ. ಈ 'ಗಿವಿಂಗ್ ಪ್ಲೆಜ್' ಅಭಿಯಾನಕ್ಕೆ ದೊಡ್ಡ ಕೊಡುಗೆ ಅಮೆರಿಕ ಮೂಲದ ಶತ ಕೋಟ್ಯಧಿಪತಿಗಳದ್ದೇ. 2015ರ ಡಿಸೆಂಬರ್ 1ರಂದು ಫೇಸ್‌ಬುಕ್‌ನ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ಸಂಪತ್ತಿನ ಶೇ.99 ಭಾಗವನ್ನು ಲೋಕಕಲ್ಯಾಣಕ್ಕೆ ಸಮರ್ಪಿಸುವುದಾಗಿ ಘೋಷಿಸಿದರು. ಮಗಳು ಮ್ಯಾಕ್ಸ್‌ಳ ಜನ್ಮ ದಿನಾಚರಣೆಯ ಸಂದರ್ಭ ಈ ನಿರ್ಧಾರ ತಳೆದ ಜುಕರ್‌ಬರ್ಗ್, 'ವಾಸಿಸಲು ಸುಂದರವಾದ ತಾಣವಾಗಿ ವಿಶ್ವವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಸಂಪತ್ತಿನ ದಾನ ಮಾಡುತ್ತಿರುವುದಾಗಿ' ಹೇಳಿದರು. ಉದ್ಯಮಿಗಳಿಂದ ಹಿಂದೆಂದೂ ಕಂಡು ಕೇಳರಿಯದ ಇಂಥ ದಾನಾದಿಗಳಿಗೆ ಕಾರಣವೇನು? ಇದೇ ರೀತಿ ಉಳ್ಳವರು ದಾನ ಮಾಡುತ್ತಾ ಬಂದರೆ, ಬಡತನ, ಹಣಕಾಸು ಅಸಮಾನತೆ ಬಗೆಹರಿಯುವುದೇ? ಇದು ಬಿಲಿಯನ್ ಡಾಲರ್ ಪ್ರಶ್ನೆ. ವಾಸ್ತವವಾಗಿ ಭಾರತದಲ್ಲಿ ಟಾಟಾ ಸಮೂಹ, ಗೋದ್ರೆಜ್ ಸೇರಿದಂತೆ ಹಲವಾರು ದಿಗ್ಗಜ ಕಂಪನಿಗಳು ಸಾಮಾಜಿಕ ಉದ್ದೇಶಕ್ಕಾಗಿ ದೊಡ್ಡ ಮೊತ್ತದ ಕೊಡುಗೆಗಳನ್ನು ಹಿಂದಿನಿಂದಲೇ ಕೊಡುತ್ತಾ ಬಂದಿವೆ. ಅನೇಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ ವೈಯಕ್ತಿಕವಾಗಿ ಉದ್ಯಮಪತಿಗಳು ಸಾವಿರಾರು ಕೋಟಿ ರೂ.ಗಳನ್ನು ನೀಡುವ ವಾಗ್ದಾನ ಕೊಡುತ್ತಿರುವುದು ಅಪರೂಪ. ಯಾಕಾಗಿ ಮಹಾ ದಾನ? ವಾಸ್ತವವಾಗಿ ಜಗತ್ತಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಆಗರ್ಭ ಶ್ರೀಮಂತರು ಹಾಗೂ ಸಾಮಾನ್ಯರ ನಡುವಣ ಅಸಮಾನತೆ ಅಗಾಧ ಕಂದಕವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣಗಳು ಹಲವು. ಆದರೆ ವಿಶ್ವದ ಆರ್ಥಿಕತೆಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಹೆಚ್ಚುತ್ತಿದೆ. 'ವಿಶ್ವದ 8 ಮಂದಿ ಅತಿ ಶ್ರೀಮಂತರ ಸಂಪತ್ತು ಪ್ರಪಂಚದ ಅರ್ಧದಷ್ಟು ಬಡವರ ಸಂಪತ್ತಿಗೆ ಸಮವಾಗಿದೆ' ಎನ್ನುತ್ತದೆ ಬ್ರಿಟನ್ ಮೂಲದ ಓಕ್ಸ್‌ಫಾಮ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಸಂಶೋಧನಾ ವರದಿ. ಕಳೆದ ಹಲವಾರು ವರ್ಷಗಳಿಂದ ಈ ದಾನಧರ್ಮ (Phಜ್ಝಿa್ಞಠಿh್ಟಟphy) ನಡೆಯುತ್ತಿದ್ದರೂ, ಆರ್ಥಿಕ ಅಸಮಾನತೆಯ ಮೇಲೆ ಅದರ ಪರಿಣಾಮ ಸೀಮಿತವಾಗಿದೆ. ಸಂಪತ್ತಿನ ಹಂಚಿಕೆಯಲ್ಲಿ ಉಂಟಾಗಿರುವ ಭಾರಿ ಅಸಮತೋಲನ, ಅತಿರಥ-ಮಹಾರಥ ಶ್ರೀಮಂತರಿಗೂ ಕೆಲವು ತೊಂದರೆಗಳನ್ನೂ ಸೃಷ್ಟಿಸಿದೆ. ಪ್ರತ್ಯೇಕ ದ್ವೀಪಗಳಂತಾಗಿರುವ ಈ ಸಿರಿವಂತರು, ಬಡವರಿಗೆ ಶಿಕ್ಷಣ, ಸ್ಕಾಲರ್‌ಶಿಪ್, ಆರೋಗ್ಯ, ಮನೆ ನಿರ್ಮಾಣ ಇತ್ಯಾದಿ ನೂರೆಂಟು ಯೋಜನೆ, ಸೇವಾ ಪ್ರತಿಷ್ಠಾನಗಳ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯ ಗುರಾಣಿಯನ್ನು ಹಿಡಿಯುತ್ತಿದ್ದಾರೆ. ಹೀಗಿದ್ದರೂ, ಈ ದಾನಗಳನ್ನು ಸ್ವಾಗತಿಸಬೇಕು. ಯಾಕೆಂದರೆ ಇವುಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿ ಸಂಚಲನ ಮೂಡಿಸುತ್ತವೆ. ಸಾರ್ವಜನಿಕ ಜೀವನದಲ್ಲಿ ಖಾಸಗಿ ಸಂಪತ್ತಿನ ಬಳಕೆ, ಸಾಮಾಜಿಕ ವಿಕಾಸದಲ್ಲಿ ಖಾಸಗಿ ವ್ಯಕ್ತಿಗಳ ಹಣದ ಪಾತ್ರದ ಬಗ್ಗೆ ಚರ್ಚೆ ಆರಂಭವಾಗಿದೆ. ದಾನಗಳನ್ನು ಘೋಷಿಸಿದ ನವ ದಾನ ಶೂರರು, ಮಹತ್ವಾಕಾಂಕ್ಷೆಯ ಉದ್ದೇಶಗಳನ್ನು ತಿಳಿಸಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆ ತಡೆಯುವುದು, ಸಾರ್ವಜನಿಕ ಶಿಕ್ಷಣಕ್ಕೆ ಕಾಯಕಲ್ಪ, ಮಲೇರಿಯಾ ನಿರ್ಮೂಲನೆ, ಎಚ್‌ಐವಿ ವಿರುದ್ಧದ ಹೋರಾಟ, ಎಲ್‌ಜಿಬಿಟಿ ಜನರ ವಿರುದ್ಧದ ತಾರತಮ್ಯ ನಿವಾರಣೆ ಇತ್ಯಾದಿ ಘನ ಉದ್ದೇಶಗಳನ್ನು ಸಾರಿದ್ದಾರೆ. ಅಮೆರಿಕದಂತಹ ರಾಷ್ಟ್ರದಲ್ಲಂತೂ ಫಿಲಾಂತ್ರಫಿ ವಿಸ್ತಾರವಾಗಿ ಹರಡಿದೆ. ದಾನ ಕೊಡುವುದರಿಂದ ಕೊಡುವವರ ಮನಸ್ಸಿಗೆ ಸಮಾಧಾನ, ಸಂತೃಪ್ತಿಯೂ ಸಿಗುತ್ತದೆ. ಅವರ ವರ್ಚಸ್ಸೂ, ಪ್ರಭಾವ ಕೂಡ ಹೆಚ್ಚುತ್ತದೆ. ಯಾರಿವರು ಹೊಸ ದಾನಶೂರ ಸಿರಿವಂತರು? ಈ ದಿನಗಳಲ್ಲಿ ತಂತ್ರಜ್ಞಾನ ಉದ್ದಿಮೆ ವಲಯ ಹೊಸ, ದಾನಶೂರ ಸಿರಿವಂತರನ್ನು ಸೃಷ್ಟಿಸುತ್ತಿದೆ. ಡಿಜಿಟಲೀಕರಣದ ಯುಗದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ಕುಬೇರರಾಗುತ್ತಿದ್ದಾರೆ. ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂದಾ ಗೇಟ್ಸ್ ಅವರು 2000ರಲ್ಲಿ 2700 ಕೋಟಿ ಡಾಲರ್‌ಗಳೊಂದಿಗೆ ತಮ್ಮದೇ ಫೌಂಡೇಷನ್ ಸ್ಥಾಪಿಸಿದರು. 2010ರ ಸುಮಾರಿನಲ್ಲಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ನ್ಯೂಯಾರ್ಕಿನ ಶಾಲೆಗಳ ಕಾಯಕಲ್ಪಕ್ಕೆ ಕೋಟ್ಯಂತರ ಡಾಲರ್ ದಾನ ನೀಡುವ ಮೂಲಕ ಕೊಡುಗೈ ದಾನಿಯಾದರು. ಆರೇಕಲ್‌ನ ಸಹ ಸಂಸ್ಥಾಪಕ ಲಾರೆನ್ಸ್ ಜೋಸೆಫ್ ಎಲಿಸನ್ ಕೂಡ ತಮ್ಮ ಸಂಪತ್ತಿನ ಬಹುಪಾಲನ್ನು ದಾನ ನೀಡುವ ಘೋಷಣೆ ಮಾಡಿದ್ದಾರೆ. ಗಿವಿಂಗ್ ಪ್ಲೆಜ್ ಪಟ್ಟಿಯಲ್ಲಿ ಇಂಥ ತಂತ್ರಜ್ಞಾನ ಉದ್ಯಮಿಗಳ ದೊಡ್ಡ ಪಟ್ಟಿಯೇ ಇದೆ. ಟೀಕೆಗಳೇನು? ಮೆಗಾ ದಾನಿಗಳಿಗೆ ಸರಕಾರದ ಮೇಲೆ ಉನ್ನತ ಮಟ್ಟದಲ್ಲಿ ಪ್ರಭಾವ ಬೀರಲು ಹಾದಿ ಸುಗಮವಾಗುತ್ತದೆ. ಹೀಗಾಗಿ ದಾನ ಕೂಡ ಕಾರ್ಪೊರೇಟ್ ಕಾರ‍್ಯತಂತ್ರವಾಗಿ ಬಿಡುತ್ತದೆ ಎನ್ನುವ ಟೀಕೆ ಇದೆ. ''ಆಗರ್ಭ ಶ್ರೀಮಂತರು ದೊಡ್ಡ ಮೊತ್ತದ ದಾನವನ್ನೇನೋ ಘೋಷಿಸುತ್ತಿದ್ದಾರೆ. ಆದರೆ ಅದರ ಬದ್ಧತೆಯ ಬಗ್ಗೆ ಸಂದೇಹಗಳು ಬಗೆಹರಿದಿಲ್ಲ. ಜತೆಗೆ ದಾನ ಘೋಷಣೆಯ ನಂತರ ಅವರ ಫೌಂಡೇಷನ್‌ಗಳಿಗೆ ಬಾಹ್ಯ ಪ್ರಾಧಿಕಾರಗಳ, ನಿಯಂತ್ರಕರ ಜತೆಗಿನ ಉತ್ತರದಾಯಿತ್ವ ಕಡಿಮೆಯಾಗುತ್ತದೆ. ಹಾಗಂತ ಎಲ್ಲರೂ ಇಂಥ ಸ್ವಹಿತಕ್ಕಾಗಿ ದಾನ ಮಾಡುತ್ತಾರೆ ಎನ್ನಲಾಗದು. ಆದರೆ ಅವರು ವಾಗ್ದಾನವಾಗಿ ಘೋಷಿಸಿದ ಹಣದ ಮೊತ್ತ ಕೊನೆಗೆ ಏನಾಯಿತು? ಹೇಗೆ ಬಳಕೆಯಾಯಿತು? ಎನ್ನುವುದು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತಾಗಬೇಕು'' ಎನ್ನುತ್ತಾರೆ ಕಾರ್ಪೊರೇಟ್ ಸಾಮಾಜಿಕ ವ್ಯವಹಾರಗಳ ವಿಶ್ಲೇಷಕ ಡೇವಿಡ್ ಕಾಲ್‌ಹನ್. ಮೇರು ದಾನಿಗಳ ಒಡೆತನದಲ್ಲಿರುವ ಬೃಹತ್ ಕಂಪನಿಗಳು ಲಕ್ಷಾಂತರ, ಕೋಟ್ಯಂತರ ಡಾಲರ್ ತೆರಿಗೆ ವಂಚನೆ, ಸಬ್ಸಿಡಿ ದುರ್ಬಳಕೆ ಇತ್ಯಾದಿ ಕೇಸ್‌ಗಳನ್ನೂ ಎದುರಿಸಿವೆ. ನಂದನ್ ನಿಲೇಕಣಿ ಹೇಳುವುದೇನು? ನಿಲೇಕಣಿ ದಂಪತಿ ಗಿವಿಂಗ್ ಪ್ಲೆಜ್‌ಗೆ ಈ ಸಂಬಂಧ ಬರೆದಿರುವ ಪತ್ರದಲ್ಲಿ, 'ಕರ್ಮಣ್ಯೇವಾಧಿಕಾರಸ್ಥೇ ಮಾಫಲೇಷು ಕದಾಚನ' ಎಂಬ ಭಗವದ್ಗೀತೆಯ ಲೋಕಪ್ರಸಿದ್ಧ ಸಂದೇಶವನ್ನು ಸ್ಮರಿಸಿದ್ದು, ದಾನ ನೀಡಲು ಇದುವೇ ಪ್ರೇರಣೆ ಎಂದಿದ್ದಾರೆ. ಇದರ ಜತೆಗೆ ಗಮನಿಸಲೇಬೇಕಾದ ಸಂಗತಿಯನ್ನೂ ನಿಲೇಕಣಿಯನ್ನೂ ಪ್ರಸ್ತಾಪಿಸಿದ್ದಾರೆ. ''ಬಹುತೇಕ ರಾಷ್ಟ್ರಗಳಲ್ಲಿ ಅಸಮಾನತೆ ಹೆಚ್ಚುತ್ತಿದೆ. ಪರಸ್ಪರ ಅಂತರ ಸಂಪರ್ಕ ಹೊಂದಿರುವ ಈ ಜಗತ್ತಿನಲ್ಲಿ ಯುವಜನತೆ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆ, ಆತಂಕದಲ್ಲಿದ್ದಾರೆ. ಹೆಚ್ಚುತ್ತಿರುವ ರಾಜಕೀಯ ವಿಕೇಂದ್ರೀಕರಣದ ಅಪಾಯವನ್ನೂ ಅವರು ವಿವರಿಸಿದ್ದಾರೆ. ಇಂಥ ಸನ್ನಿವೇಶದಲ್ಲಿ ಅತಿ ಶ್ರೀಮಂತರು ಏನು ಮಾಡಬೇಕು? ಸಾಮಾಜಿಕ ಬದಲಾವಣೆಗಾಗಿ ಕನಿಷ್ಠ ಪ್ರಯತ್ನಿಸಬೇಕು'' ಎಂದಿದ್ದಾರೆ. ಭಾರತದ ಕಾರ್ಪೊರೇಟ್ ವಲಯದ ದಾನಿಗಳು 1. ಅಜೀಂ ಪ್ರೇಮ್‌ಜೀ: ಕೊಡುಗೆ 63,000 ಕೋಟಿ ರೂ. (2001ರಿಂದ) ಬೆಂಗಳೂರಿನ ವಿಪ್ರೊ ಕಂಪನಿಯ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇತರ ಹಲವು ಕ್ಷೇತ್ರಗಳಲ್ಲಿ ಬಿಸಿನೆಸ್ ಹೊಂದಿದ್ದಾರೆ. 2. ಸುನಿಲ್ ಮಿತ್ತಲ್: ಕೊಡುಗೆ 7,000 ಕೋಟಿ ರೂ. ಭಾರ್ತಿ ಎಂಟರ್‌ಪ್ರೈಸಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಮಿತ್ತಲ್ ಅವರು ಟೆಲಿಕಾಂ, ವಿಮೆ, ರಿಯಲ್ ಎಸ್ಟೇಟ್, ಮಾಲ್, ಆಸ್ಪತ್ರೆ, ಕೃಷಿ, ಆಹಾರ ವಲಯಗಳಲ್ಲಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. 3. ನಂದನ್ ನಿಲೇಕಣಿ: ಕೊಡುಗೆ 5,600 ಕೋಟಿ ರೂ. ಬೆಂಗಳೂರಿನ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಹಾಗೂ ಹಾಲಿ ಕಾರ‍್ಯಕಾರಿಯೇತರ ಅಧ್ಯಕ್ಷ. 4. ಕಿರಣ್ ಮಜುಂದಾರ್: ಕೊಡುಗೆ 8,400 ಕೋಟಿ ರೂ. ಬೆಂಗಳೂರಿನ ಬಯೊಕಾನ್ ಕಂಪನಿಯ ಅಧ್ಯಕ್ಷೆ. 5. ಪಿಎನ್‌ಸಿ ಮೆನನ್: ಕೊಡುಗೆ 4,900 ಕೋಟಿ ರೂ. ರಿಯಾಲ್ಟಿ ವಲಯದ ಶೋಭಾ ಕಂಪನಿಯ ಸ್ಥಾಪಕ ಮತ್ತು ಅಧ್ಯಕ್ಷ. ಮೂಲತಃ ಕೇರಳದ ತ್ರಿಶ್ಶೂರ್‌ನವರು ಏನಿದು ಗಿವಿಂಗ್ ಪ್ಲೆಜ್? ಬಿಲ್ ಗೇಟ್ಸ್ ದಂಪತಿ ಮತ್ತು ವಾರೆನ್ ಬಫೆಟ್ ಅವರು 2010ರಲ್ಲಿ ಆರಂಭಿಸಿದ ಗಿವಿಂಗ್ ಪ್ಲೆಜ್ ಅಭಿಯಾನವು ವಿಶ್ವಾದ್ಯಂತ ಶ್ರೀಮಂತರನ್ನು ಸಂಪರ್ಕಿಸಿ, ತಮ್ಮ ಅರ್ಧದಷ್ಟು ಸಂಪತ್ತನ್ನು ಸಮಾಜ ಕಲ್ಯಾಣ ಯೋಜನೆಗಳಿಗೆ ದಾನವಾಗಿ ನೀಡುವಂತೆ ಮನವೊಲಿಸುತ್ತದೆ. ಮೊದಲಿಗೆ ಅಮೆರಿಕದ 40 ಮಂದಿ ಇದಕ್ಕೆ ಕೈ ಜೋಡಿಸಿದರು. ಈಗಾಗಲೇ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಸೇರಿದಂತೆ ಹಲವಾರು ಮಂದಿ ಸಿರಿವಂತರು ಈ ಅಭಿಯಾನದ ಜತೆಗೆ ಕೈ ಜೋಡಿಸಿದ್ದಾರೆ. ಇದುವರೆಗೆ 21 ದೇಶಗಳಿಗೆ ಸೇರಿದ 171 ಮಂದಿ ಶ್ರೀಮಂತರು ತಮ್ಮ ಅರ್ಧದಷ್ಟು ಸಂಪತ್ತು ನೀಡುವ ವಾಗ್ದಾನವನ್ನು ನೀಡಿದ್ದಾರೆ. ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜರ್ಮನಿ, ಇಸ್ರೇಲ್, ಸೌದಿ ಅರೇಬಿಯಾ, ರಷ್ಯಾ, ಇಂಡೊನೇಷ್ಯಾ, ಮಲೇಷ್ಯಾದಿಂದಲೂ ಸಿರಿವಂತರು ಸೇರಿದ್ದಾರೆ. 'ಇದೊಂದು ಸರಳ ಪರಿಕಲ್ಪನೆ. ಶತಕೋಟ್ಯಧಿಪತಿಗಳಿಗೆ ಮುಕ್ತ ಆಹ್ವಾನ. ತಮ್ಮ ಬಹುಪಾಲು ಸಂಪತ್ತನ್ನು ವಿಶ್ವದ ಒಳಿತಿಗಾಗಿ ನೀಡುವಂತೆ ಪ್ರೇರೇಪಿಸುವುದು ಇದರ ಉದ್ದೇಶ. ಹೆಚ್ಚು ಸಿರಿವಂತರು ಹೆಚ್ಚು ಮೊತ್ತವನ್ನು , ಬೇಗನೆ, ಪ್ರಜ್ಞಾಪೂರ್ವಕವಾಗಿ ಜಗತ್ತಿನ ಹಿತಕ್ಕೆ ನೀಡಬೇಕು ಎನ್ನುವುದೇ ಧ್ಯೇಯ ಎನ್ನುತ್ತದೆ ಗಿವಿಂಗ್ ಪ್ಲೆಜ್ ಅಭಿಯಾನ. ಯಾರು ದಾನ ಮಾಡಬಹುದು? ಶತಕೋಟ್ಯಧಿಪತಿಗಳನ್ನು ಗಿವಿಂಗ್ ಪ್ಲೆಜ್ ಗುರಿಯಾಗಿಸಿಕೊಂಡಿದೆ. ಆರಂಭದಲ್ಲಿ ಅಮೆರಿಕದಲ್ಲಿನ ಸಿರಿವಂತ ಕುಟುಂಬಗಳನ್ನು ಸಂಪರ್ಕಿಸಲಾಗುತ್ತಿತ್ತು. ನಂತರ ಇತರ ಕಡೆಗಳಿಗೆ ವಿಸ್ತರಿಸಿತು. ವಾಗ್ದಾನ ಯಾಕೆ? ಸಮಾನಮನಸ್ಕರನ್ನು ಒಗ್ಗೂಡಿಸಲು, ದಾನಕ್ಕೆ ಪ್ರೇರಣೆ ನೀಡುವ ಸಲುವಾಗಿ ವಾಗ್ದಾನದ ಅಗತ್ಯ ಇದೆ. ವಾಗ್ದಾನ ನೀಡುವವರು ಬಹಿರಂಗವಾಗಿ ಮಾಡುತ್ತಾರೆ. ವರ್ಷಕ್ಕೊಮ್ಮೆ ಸಭೆ ಸೇರಿ, ವಾಗ್ದಾನದ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಹಣವನ್ನು ಗಿವಿಂಗ್ ಪ್ಲೆಜ್ ಸಂಗ್ರಹಿಸುತ್ತದೆಯೇ? ಗಿವಿಂಗ್ ಪ್ಲೆಜ್ ದಾನಿಗಳಿಂದ ಸ್ವತಃ ಹಣ ಸ್ವೀಕರಿಸುವುದಿಲ್ಲ. ಇಂಥ ಯೋಜನೆಗಳನ್ನೇ ಮಾಡಿ ಎಂದೂ ಹೇಳುವುದಿಲ್ಲ. ದಾನಿಗಳು ತಮ್ಮದೇ ಅಥವಾ ಇತರ ಯಾವುದಾದರೂ ಸೇವಾ ಸಂಸ್ಥೆಗಳ ಮೂಲಕ ದಾನ ನೀಡುವುದು ಸಾಮಾನ್ಯವಾಗಿದೆ. ವಾಗ್ದಾನ ಎನ್ನುವುದು ಕಾನೂನು ಅಲ್ಲ ಗಿವಿಂಗ್ ಪ್ಲೆಜ್‌ನಲ್ಲಿ ವಾಗ್ದಾನ ಎನ್ನುವುದು ಕಾನೂನು ಬದ್ಧತೆಯಲ್ಲ, ನೈತಿಕ ಬದ್ಧತೆಯಷ್ಟೇ. -ಕೇಶವ ಪ್ರಸಾದ್.ಬಿ.
ಅಮೆರಿಕದ ಮೈಕ್ರೊಸಾಫ್ಟ್ ಕಂಪನಿಯ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಹೂಡಿಕೆದಾರ ವಾರೆನ್ ಬಫೆಟ್ ಆರಂಭಿಸಿರುವ 'ದಿ ಗಿವಿಂಗ್ ಪ್ಲೆಜ್' ಅಭಿಯಾನದ ಅಡಿಯಲ್ಲಿ ಈ ದೊಡ್ಡ ದೇಣಿಗೆಯ ವಚನ ನೀಡಿದ್ದಾರೆ. ಶಿಕ್ಷಣ ಸೇರಿದಂತೆ ನಾನಾ ವಲಯಗಳಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ದಾನ ನೀಡುವುದಾಗಿ ನಿಲೇಕಣಿ ದಂಪತಿ ತಿಳಿಸಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ ನಂದನ್ ನಿಲೇಕಣಿಯವರ ಸಂಪತ್ತು 1.7 ಶತಕೋಟಿ ಡಾಲರ್ (ಅಂದರೆ ಸುಮಾರು 11,050 ಕೋಟಿ ರೂ.) ಇದರಲ್ಲಿ ಅರ್ಧ ಎಂದರೆ ಸುಮಾರು 5,525 ಕೋಟಿ ರೂ.ಗಳಾಗುತ್ತದೆ! ಖುದ್ದು ಬಿಲ್ ಗೇಟ್ಸ್ ನಂದನ್ ನಿಲೇಕಣಿ ದಂಪತಿಯನ್ನು ಅಭಿನಂದಿಸಿದ್ದಾರೆ. ಇದೇನಪ್ಪಾ ಎಂದು ಭಾರತೀಯರು ಚಕಿತರಾಗುತ್ತಿದ್ದಾಗಲೇ, ಮತ್ತೊಬ್ಬ ಕಾರ್ಪೊರೇಟ್ ದಿಗ್ಗಜ, ಭಾರ್ತಿ ಸಮೂಹ ಕೂಡ ಅಧ್ಯಕ್ಷ ಸುನಿಲ್ ಮಿತ್ತಲ್ ನೇತೃತ್ವದಲ್ಲಿ 7,000 ಕೋಟಿ ರೂ.ಗಳನ್ನು ದಾನ ಮಾಡುವುದಾಗಿ ಘೋಷಿಸಿದೆ.
ಸೇನೆಯಲ್ಲಿ ಮುಧೋಳ ನಾಯಿಗಳು
ಸೆಟೆದು ನಿಂತರೆ ಸಾಕು ನೋಡುಗರಲ್ಲಿ ಭಯ ಮೂಡಿಸುವ ಭಂಗಿ. ಸಿಟ್ಟಿಗೆಬ್ಬಿಸಿದರೆ ಎದುರಾಳಿ ಮೈಮೇಲೆ ಎರಗುವ ಎದೆಗಾರಿಕೆ. ನೋಡಲು ತೆಳ್ಳಗೆ ಇದ್ದರೂ ಬೇಟೆಯಾಡಲು ಎತ್ತಿದ ಕೈ. ಮಹಾರಾಜರ ಕಾಲದಲ್ಲೇ ಪ್ರಾಣಿಗಳ ಬೇಟೆಯಾಡಿ ಮೆಚ್ಚುಗೆಗೆ ಪಾತ್ರವಾದ ಮುಧೋಳ ತಳಿ ನಾಯಿ, ಈಗ ದೇಶದ್ರೋಹಿಗಳನ್ನೂ ಬೇಟೆಯಾಡಲು ಸಜ್ಜಾಗಿದೆ. ಭಯೋತ್ಪಾದಕ ನಿಗ್ರಹ ದಳ ಸೇರಲು ಸಿದ್ಧವಾಗಿದ್ದು, ಕನ್ನಡಿಗರ ಹೆಮ್ಮೆ ಹೆಚ್ಚಿಸಿದೆ. ಇದರ ಸಂಪೂರ್ಣ ಚಿತ್ರಣ ಇಲ್ಲಿದೆ...
- ಎಂ.ಎಚ್.ನದಾಫ್ ಮುಧೋಳ
ನಿಯತ್ತಿನಲ್ಲಿ ಮನುಜರನ್ನು ಮೀರಿಸಿದ ಬಾಗಲಕೋಟ ಜಿಲ್ಲೆ ರನ್ನ ನಾಡಿನ ಹೆಮ್ಮೆಯ ಮುಧೋಳ ಶ್ವಾನಗಳು ಆಸ್ತಿ-ಪಾಸ್ತಿಗೆ ಕಾವಲಿಗಷ್ಟೇ ಸೀಮಿತವಾಗಿಲ್ಲ. ಇದೇ ಮೊದಲ ಬಾರಿ ಭಾರತೀಯ ಸೈನ್ಯ ಸೇರಿ ದೇಶ ಸಂರಕ್ಷಣೆಯ ಹೊಣೆ ಹೊರಲು ಸಜ್ಜಾಗಿವೆ. ಈಗಾಗಲೇ ಭಯೋತ್ಪಾದಕರ ಚಲನವಲನ, ಗೂಢಚರ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಸೈನಿಕರಿಗೆ 8 ಶ್ವಾನಗಳ ಸಾಥ್ ಶೀಘ್ರವೇ ಸಿಗಲಿದೆ.
ಉತ್ತರಪ್ರದೇಶದ ಮೀರತ್‌ನಲ್ಲಿರುವ ಭಾರತೀಯ ಸೇನೆಯ ರಿಮೌಂಟ್ ಮತ್ತು ವೆಟರ್ನರಿ ಕಾರ್ಫ್ಸ್‌ನಲ್ಲಿ ತರಬೇತು ಪಡೆದಿರುವ ಇವುಗಳೀಗ ಭಯೋತ್ಪಾದಕರ ಸುಳಿವು, ಶಸ್ತ್ರಾಸ್ತ್ರಗಳು, ಗೂಢಚರ್ಯೆ ಮತ್ತು ಡ್ರಗ್ಸ್ ಇಟ್ಟುಕೊಂಡಿದ್ದನ್ನು ಪತ್ತೆ ಹಚ್ಚುವ ಕೆಲಸ ಮಾಡಲಿವೆ. ಉಳಿದ ಶ್ವಾನಗಳಿಗಿಂತ ಬೇಗ, ಬರೀ 40 ಸೆಕೆಂಡ್‌ನಲ್ಲಿ ಪತ್ತೆ ಹಚ್ಚುತ್ತವೆ. ಮೀರತ್‌ನಲ್ಲಿ 2015ರಿಂದ ತರಬೇತಿ ಪಡೆದಿರುವ ಅಷ್ಟ ಶ್ವಾನಗಳು ಸೈನಿಕರಿಗೆ ಎಲ್ಲ ಹಂತದಲ್ಲಿ ಸಾಥ್ ನೀಡುವ ತರಬೇತಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿವೆ.
ನಂಬಿಗಸ್ಥ ಪ್ರಾಣಿ
ಮನುಷ್ಯರಿಗಿಂತ ಅತೀ ಹೆಚ್ಚು ವಿಶ್ವಾಸ ಹೊಂದಿರುವ ಶ್ವಾನಗಳಿಗೆ ಎಲ್ಲಿಲ್ಲದ ಮಹತ್ವ. ಅಂದಿನ ರಾಜ ಮಹಾರಾಜರ ಕಾಲದಲ್ಲಿಯೂ ಯುದ್ಧ ಮಾಡುತ್ತಿದ್ದಾಗ ನಾಯಿಗಳನ್ನು ಬಳಕೆ ಮಾಡುತ್ತಿದ್ದರು. ಶಾಹುಜಿ ಮಹಾರಾಜರ ಕಾಲದಲ್ಲಿ ಬೇಟೆ ನಾಯಿಗಳು ಹುಲಿಯೊಂದಿಗೆ ಹೋರಾಡಿ, ಅದನ್ನು ಸಾಯಿಸಿದ್ದನ್ನು ಇತಿಹಾಸದಿಂದ ತಿಳಿಯುತ್ತೇವೆ. 1985ರಲ್ಲಿ ಭಾರತೀಯ ಸೇನೆಯ ಆರ್‌ವಿಸಿ (ರಿಮೌಂಟ್ ಆ್ಯಂಡ್ ವೆಟರ್ನರಿ ಕಾರ್ಫ್ಸ್) ಪ್ರಾಣಿ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಸಾಧಿಸಲು ಮುಂದಾಯಿತು.
ಪರಿಣಾಮ 2700ರಷ್ಟಿದ್ದ ಪ್ರಾಣಿಗಳ ಸಂಖ್ಯೆಯನ್ನು 3973ಕ್ಕೆ ಹೆಚ್ಚಿಸಿಕೊಂಡಿತು. ಲಡಾಖ್‌ನಲ್ಲಿ ಝನ್ಸಾರ್ ಪೋನಿ ಬ್ರೀಡಿಂಗ್ ಆ್ಯಂಡ್ ಟ್ರೈನಿಂಗ್ ತೆರೆದಿದ್ದು, ಇದು ಸಮುದ್ರ ಮಟ್ಟಕ್ಕಿಂತ 3146 ಮೀಟರ್ ಎತ್ತರದಲ್ಲಿದೆ. ವಿಶ್ವದ ಅತಿ ಎತ್ತರದ ಸ್ಟಡ್ ಫಾರ್ಮ್ ಎಂದು ಲಿಮ್ಕಾ ಘೋಷಿಸಿದೆ. ಇಲ್ಲಿ ಜನಿಸ್ಕರಿ ತಳಿಯ ಕುದುರೆಗಳ ಸಂತಾನೋತ್ಪತ್ತಿ ನಡೆಯುತ್ತಿದೆ. ಇದೀಗ ದೇಶ ರಕ್ಷಣೆಯಂಥ ನಾಜೂಕಿನ ಕಾರ್ಯಕ್ಕೆ ಶ್ವಾನಗಳ ಬಳಕೆಗೆ ಸೈನ್ಯ ಮೊದಲ ಬಾರಿ ಮುಂದಾಗಿದೆ. ಕರ್ನಾಟಕ ರಾಜ್ಯದ ಮುಧೋಳ ತಳಿ ನಾಯಿ ಸೇನೆಯ ಕರ್ತವ್ಯಕ್ಕಾಗಿ ಮೀರತ್‌ನಲ್ಲಿ ತರಬೇತಿ ಪಡೆದ ಮೊದಲ ಭಾರತೀಯ ತಳಿಯ ನಾಯಿ ಎಂಬುದು ಹೆಮ್ಮೆಯ ಸಂಗತಿ.
ಮುಧೋಳ ಶ್ವಾನದ ವೈಶಿಷ್ಟ್ಯ
ಮುಧೋಳ ಶ್ವಾನವು ಬಲಿಷ್ಠವಾದ ಸ್ನಾಯುಗಳಿಂದ ಕೂಡಿದ ದೇಹ, ಉದ್ದ ಹಾಗೂ ಆಳವಾದ ಎದೆ, ತೆಳುವಾದ ಹೊಟ್ಟೆಯ ಭಾಗ, ನೀಳವಾದ ಕಾಲುಗಳು ಇರುವಂಥದು. ಬೇಟೆಗೆ ಇಲ್ಲವೇ ಓಟದ ಸ್ಪರ್ಧೆಗೆ ಸದಾ ಸಜ್ಜು. ಸೂಕ್ಷ್ಮಾತಿಸೂಕ್ಷ್ಮ ಸುಳಿವುಗಳಿಗೆ ತತ್‌ಕ್ಷ ಣವೇ ಸ್ಪಂದಿಸುತ್ತದೆ. ವಿಶಿಷ್ಟವಾಗಿ ಜಿಗಿಯುವುದು, ಓಡಾಡುವುದಕ್ಕಿಂತ ಮೇಲೆತ್ತರಕ್ಕೆ ಹಾರುವುದು ಇದರ ವೈಶಿಷ್ಟ್ಯತೆಗಳಲ್ಲೊಂದು.
ಯೋಧನ ಸ್ಫೂರ್ತಿ
ಸಿಯಾಚಿನ್ ಪ್ರದೇಶದಲ್ಲಿ ಹಿಮದಲ್ಲಿ ಸಿಲುಕಿದ ಬೆಟದೂರಿನ ಯೋಧ ಹಣಮಂತಪ್ಪ ಕೊಪ್ಪದ ಅವರ ಶವ ಪತ್ತೆ ಹಚ್ಚುವಲ್ಲಿ ಸೈಬೀರಿಯನ್ ತಳಿಯ ಶ್ವಾನ ಮಹತ್ವದ ಪಾತ್ರ ವಹಿಸಿತ್ತು. ಭೂಸೇನೆಯ ಅಧಿಕಾರಿಗಳು ಇದರಂತೆಯೇ ಮುಧೋಳ ಬೇಟೆ ನಾಯಿಯನ್ನು ಏಕೆ ತರಬೇತುಗೊಳಿಸಬಾರದು ಎಂಬ ಉದ್ದೇಶದಿಂದ 2016ರಿಂದ ತರಬೇತಿಗೊಳಿಸಿದರು. ಇದರ ಫಲವಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ದಳಕ್ಕೆ ನಮ್ಮ ಮುಧೋಳ ಬೇಟೆ ನಾಯಿ ಸಾಥ್ ನೀಡುತ್ತಿದೆ.
ಆದಿಲ್‌ಶಾಹಿ ಉಡುಗೊರೆ
ಕ್ರಿ.ಶ. 500ರ ನಂತರದಲ್ಲಿ ಭಾರತಕ್ಕೆ ನಾನಾ ವಿದೇಶಿಯರು ವ್ಯಾಪಾರಕ್ಕೆಂದು ಬಂದರು. ಹಲವು ರಾಜರು ಆಕ್ರಮಣ ಮಾಡಿದರು. ತಮ್ಮ ಜತೆಯಲ್ಲಿ ಸ್ಲೋಹಿ ಸಾಲೂಕಿ ಮತ್ತು ಗ್ರೇಹೌಂಡ್ ಶ್ವಾನಗಳನ್ನು ಬೇಟೆ, ಕಾವಲು, ಶತ್ರುಗಳ ಚಲನವಲನ ಅರಿಯಲು ಹಾಗೂ ರಕ್ಷ ಣೆಗಾಗಿ ಕರೆತಂದರು. ಅವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದರಿಂದ ರೈತರು ಸಾಕಲು ಆರಂಭಿಸಿದರಂತೆ.
ಮೊಘಲ್ ಸಾಮ್ರಾಜ್ಯದ ಔರಂಗಜೇಬನ ಕಾಲದಲ್ಲಿ ಪರ್ಷಿಯನ್ ದೇಶದಿಂದ ಈ ಬೇಟೆ ನಾಯಿ ಬಂದಿಂತೆಂದು ಇತಿಹಾಸದಲ್ಲಿ ಹೇಳಲಾಗುತ್ತಿದೆ. ಅಂದು ಆದಿಲ್‌ಶಾಹಿ ಆಧೀನದಲ್ಲಿದ್ದ ಮುಧೋಳ ಸಂಸ್ಥಾನದ ಮಹಾರಾಜರಿಗೆ ಆದಿಲ್‌ಶಾಹಿ ರಾಜನು ಉಡುಗೊರೆಯಾಗಿ ಬೇಟೆ ನಾಯಿಯನ್ನು ಕೊಟ್ಟಿದ್ದರಿಂದ ಮಾಲೋಜಿರಾವ್ ಘೋರ್ಪಡೆ ಮಹಾರಾಜರ ಆಸ್ಥಾನದಲ್ಲಿ ಈ ನಾಯಿಗೆ ಮಹತ್ವ ಬಂದಿತ್ತು. ತದನಂತರ 1969ರಲ್ಲಿ ರಾಷ್ಟ್ರೀಯ ಕೆನೆಲ್ ಕ್ಲಬ್‌ನಿಂದ ಅಂಗೀಕೃತಗೊಂಡಿದೆ. 1990ರಿಂದ ಮೈಸೂರು ಕೆನೆಲ್ ಕ್ಲಬ್ ಕೂಡಾ ಮುಧೋಳ ತಳಿ ಶ್ವಾನಗಳಿಗಾಗಿ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಪ್ರಾಮುಖ್ಯತೆ ನೀಡಿದರು.
ಮುಧೋಳ ಶ್ವಾನ ತಳಿ ಸಂಶೋಧನೆ
2010ರಲ್ಲಿ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಮುಧೋಳ ನಾಯಿ ತಳಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದೆ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಶಾಸಕ ಗೋವಿಂದ ಕಾರಜೋಳ ಅವರ ಶ್ರಮವಿದೆ. ಕರ್ನಾಟಕ ಸರಕಾರವು ಈ ಶ್ವಾನ ತಳಿಯ ಸಂಶೋಧನೆ, ಸಂರಕ್ಷ ಣೆ, ಸಂತಾನೋತ್ಪತ್ತಿ ಹಾಗೂ ಮಾರುಕಟ್ಟೆಯಂತಹ ನಾನಾ ಚಟುವಟಿಕೆಗಳಿಗೆ ಪ್ರೋತ್ಸಾಹಕ್ಕಾಗಿ ಬೀದರ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗಿದೆ. 2012ರಿಂದ ಈ ಕೇಂದ್ರ 40 ಎಕರೆ ವಿಸ್ತ್ರೀರ್ಣದ ಜಾಗೆಯಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದೆ. ಸದ್ಯ ಇಲ್ಲಿ 40 ಮುಧೋಳ ಹೌಂಡ್ ಇವೆ.
ಸಾಕಣೆ ಹೇಗೆ?
ಶ್ವಾನ ಸಾಕಣೆಗೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರದಲ್ಲಿ ಮಾಹಿತಿ ನೀಡಲಾಗುತ್ತಿದೆ. ತಳಿ ಆರೋಗ್ಯ ಕಾಪಾಡಲು ಉಚಿತ ಮಾಹಿತಿ, ಔಷಧ ಮಾತ್ರೆ ನೀಡಲಾಗುತ್ತಿದೆ. ಮೈಕ್ರೋಚಿಪ್ ಅಳವಡಿಸಿದ್ದರಿಂದ ನಕಲಿ ಅಸಲಿ ಪತ್ತೆ ಹಚ್ಚಲು ಸಹಾಯಕ. ವಂಶಾವಳಿಯನ್ನು ಪತ್ತೆ ಹಚ್ಚುವುದು ಇದರ ಮೂಲೋದ್ದೇಶ. ಕೇಂದ್ರದಲ್ಲಿ ಈಗಾಗಲೇ 45ಕ್ಕೂ ಅಧಿಕ ನಾಯಿಗಳಿವೆ. ನಿತ್ಯ ಎರಡು ಹೊತ್ತು ಉಪಹಾರ, ಊಟ ನೀಡಲಾಗುತ್ತಿದೆ. ಈಗಿದ್ದ ನಾಯಿಗಳಿಗೆ ಯಾವುದೇ ಮಾಂಸ ನೀಡುವುದಿಲ್ಲ. ಕೇಂದ್ರದಲ್ಲಿ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಿಸಲಾಗುತ್ತಿದೆ.
ಶ್ವಾನ ಪ್ರದರ್ಶನ
ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾನಾ ಶ್ವಾನಗಳ ಮಧ್ಯ ಮುಧೋಳ ತಳಿ ಶ್ವಾನಗಳನ್ನು ಪ್ರದರ್ಶನಕ್ಕೆ ಕಳುಹಿಸಲಾಗುತ್ತಿದೆ. ಪ್ರದರ್ಶನದಲ್ಲಿ ಮುಧೋಳ ನಾಯಿಯೇ ಕೇಂದ್ರ ಆಕರ್ಷಣೆ. ಅವುಗಳ ನಿಲುವು, ರಚನೆ, ಕಾಂತಿ, ಚಲನವಲನದ ವೈಖರಿ, ಬಣ್ಣ, ಹಲ್ಲು, ಕಣ್ಣುಗಳನ್ನೆಲ್ಲ ಪರೀಕ್ಷಿಸಿ ಆರಿಸಿಕೊಂಡು ಹೋಗುತ್ತಾರೆ. ಅಖಿಲ ಭಾರತ ವಿಶೇಷ ತಳಿಯ ಶ್ವಾನಗಳ ಪ್ರದರ್ಶನಗಳು ಶ್ವಾನಪ್ರಿಯರ ಉತ್ಸುಕತೆಯನ್ನು ಹೆಚ್ಚಿಸಿವೆ.
ಉಪಜೀವನಕ್ಕೂ ಆಧಾರ
ಚಿತ್ರಬಾನುಕೋಟೆ, ಹಲಗಲಿ, ಮೆಳ್ಳಿಗೇರಿ, ಕಿಶೋರಿ, ಮಂಟೂರು, ಶಿರೋಳ, ಲೋಕಾಪುರ, ತಿಮ್ಮಾಪೂರ, ಮುದ್ದಾಪುರ, ಮುಧೋಳದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಶ್ವಾನ ತಳಿಗಳ ಸಂರಕ್ಷ ಣೆ ಮಾಡುವ ಕೆಲಸ ನಡೆಯುತ್ತಿದೆ. ಸಾವಿರಾರು ರೈತರು, ಕೃಷಿ ಕಾರ್ಮಿಕರು, ನಿರುದ್ಯೋಗಿಗಳಿಗೆ ಉಪಜೀವನಕ್ಕೆ ಆಧಾರವಾಗಿದೆ. ಆದರೆ, ಸರಕಾರದ ಮಟ್ಟದಲ್ಲಿ ಇನ್ನಷ್ಟು ಸಹಾಯ, ಸಹಕಾರ ಬೇಕಾಗಿದೆ. ತಮ್ಮ ಮನೆಗೆ ಬೇಕಾದ ಆಹಾರ ಕಡಿಮೆಯಾಗಿದ್ದರೂ ಶ್ವಾನಕ್ಕೆ ಕಡಿಮೆ ಮಾಡುವುದಿಲ್ಲ. ಹೆತ್ತ ಮಕ್ಕಳಿಗಿಂತ ಪ್ರೀತಿಯಿಂದ ಸಾಕುತ್ತಾ ಬಂದಿದ್ದಾರೆ.
ಅಜ್ಜ ಮುತ್ತಜ್ಜರ ಕಾಲದಿಂದಲೂ ಶ್ವಾನ ಸಾಕುತ್ತಿದ್ದೇವೆ. ನಮ್ಗೆ ಏನೇ ಕಡಿಮೆಯಿದ್ದರೂ, ನಾಯಿಗಳಿಗೆ ಯಾವುದೇ ಆಹಾರ ಕಡಿಮೆ ಮಾಡುವದಿಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ಪ್ರದರ್ಶನಕ್ಕೆ ತೆರಳಿದಾಗ ಬಹುಮಾನವಿಲ್ಲದೇ ಮರಳಿ ಬಂದಿಲ್ಲ.
- ಬಸವರಾಜ ಗಸ್ತಿ, ನಾಯಿ ಸಾಕಣೆದಾರರು ಮುಧೋಳ
ಭೂಸೇನೆಯ ಮೀರತ್ ತರಬೇತಿ ಕೇಂದ್ರದಲ್ಲಿ ಮುಧೋಳ ಶ್ವಾನಗಳನ್ನು ತರಬೇತುಗೊಳಿಸಲಾಗಿದೆ. ಅಧಿಕೃತ ವರದಿ ಬಂದ ಬಳಿಕ ಜಮ್ಮು ಹಾಗೂ ಕಾಶ್ಮೀರಕ್ಕೆ ಕಳುಹಿಸುವ ಆಲೋಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
- ಡಾ.ಮಹೇಶ ದೊಡಮನಿ, ಸಹಾಯಕ ನಿರ್ದೇಶಕರು, ಸಂಶೋಧನಾ ಕೇಂದ್ರ ತಿಮ್ಮಾಪೂರ
ಭೂ ಸೇನೆಯ ಸೈನಿಕರಲ್ಲಿ ತರಬೇತಿ ಪಡೆದ ಮುಧೋಳ ಶ್ವಾನಗಳು ನಿಗ್ರಹ ದಳಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ದೊಡ್ಡ ಜವಾಬ್ದಾರಿ ನಿಭಾಯಿಸುವ ಶಕ್ತಿ ಅವುಗಳಿಗೆ ಇದೆ.
- ಗೋವಿಂದ ಕಾರಜೋಳ, ಶಾಸಕರು ಮುಧೋಳ
ಸಂಬಂಧಗಳಿಂದ ಸಾಹಿತ್ಯ ಜೀವ ಪಡೆದುಕೊಳ್ಳಲಿ
- ಜಯಂತ್ ಕಾಯ್ಕಿಣಿ ಕನ್ನಡದ ಪರಿಸರವನ್ನು ಜೀವಂತವಾಗಿಡಲು ಇಲ್ಲಿ ಬಂದಿರುವ ಎಲ್ಲ ಮನಸ್ಸುಗಳಿಗೆ ನನ್ನ ದೊಡ್ಡ ನಮಸ್ಕಾರ. ಸಾಹಿತ್ಯ ಸಮ್ಮೇಳನದ ನೆಪದಲ್ಲಿ ನಾವು ಕನ್ನಡಿಗರೆಲ್ಲ ಸೇರಿದ್ದೇವೆ. ಕನ್ನಡದ ಆತ್ಮಸಾಕ್ಷಿ, ಕನ್ನಡದ ಆತ್ಮಸಂಹಿತೆ, ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸುವಂಥ ಪರಿಸರವಿದು. ನನಗೆ ಖುಷಿ ಯಾಕೆಂದರೆ, ಕಾವ್ಯ ಎಂಬ ಉದ್ಯೋಗಕ್ಕೆ ನನ್ನನ್ನು ತಳ್ಳಿದ ಇಬ್ಬರು ಹಿರಿಯರು ಇಲ್ಲಿದ್ದಾರೆ; ಚಂದ್ರಶೇಖರ ಪಾಟೀಲ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ. ನನ್ನ ಮೊದಲ ಕವನವನ್ನು 'ಸಂಕ್ರಮಣ'ದಲ್ಲಿ ಪ್ರಕಟಿಸಿದವರೇ ಅವರು. ಅವರ ಹೆಜ್ಜೆಗುರುತುಗಳನ್ನು ನೋಡಿಕೊಂಡು ಬೆಳೆದೆ. ಸಮಾಜಮುಖಿ ಚೈತನ್ಯದ ಇವರು ಇಲ್ಲಿರುವುದು ನಮಗೆ ಪ್ರೇರಣೆ. ಕವಿಗಳಾದ ನಾವು ಮಾಡುವುದೇನೆಂದರೆ, ಕನ್ನಡದ ಆತ್ಮಸಾಕ್ಷಿಯ ಸೊಲ್ಲುಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಹೇಳುವುದು. ಬೇಂದ್ರೆಯವರು ಹೇಳಿದಂತೆ ''ನಾವು ಕನ್ನಡಿಸುತ್ತಾ'' ಇದ್ದೇವೆ ಅಷ್ಟೆ. ನನ್ನ ಪ್ರೀತಿಯ ಗೆಳೆಯ, ಕನ್ನಡದ ಮಹತ್ವದ ಕವಿ ಎಸ್.ಮಂಜುನಾಥ್ ನೆನಪಾಗುತ್ತಾರೆ. ಅವರ ಕಾವ್ಯದ ಮೂಲಕ ನನ್ನ ಮಾತು ಮುಂದುವರಿಸುವೆ. ಅವರ ಒಂದು ಕವಿತೆಯಲ್ಲಿ ತಾಯಿ ''ನಾವು ಆ ಪಾತ್ರೆ ತಂದ್ವಿ, ಈ ಬಕೆಟ್ ತಂದ್ವಿ, ಈ ಹ್ಯಾಂಗರ್ ತಂದ್ವಿ. ಎಲ್ಲ ವಸ್ತುಗಳನ್ನು ತಂದ್ವಿ. ಆದ್ರೆ ಹಳೆ ಮನೆಯಲ್ಲಿ ಗೋಡೆಯಲ್ಲಿ ನಮ್ಮ ಮಗು ಗೋಡೆಯಲ್ಲಿ ಬರೆದಿಟ್ಟಂತಹ ಚಿತ್ರ ಅಲ್ಲೇ ಉಳಿದುಹೋಯ್ತಲ್ಲಾ..'' ಎಂದು ಹೇಳುತ್ತಾಳೆ. ಇದು ಒಬ್ಬ ಕವಿ ಕಾಣುವ ಜೀವನದ ವಿವರ. ಇನ್ನೊಂದು ವಿಷಯ, ಅವರು ಬಹಳ ಬೇಗನೆ ತಾಯಿಯನ್ನು ಕಳೆದುಕೊಂಡವರು. ಅವರ ಚಿತ್ರ ಮನೆಯಲ್ಲಿರಲಿಲ್ಲ. ಯಾವುದೋ ಕಾರಣಕ್ಕೆ ಗೋಕರ್ಣಕ್ಕೆ ಬಂದಿದ್ದರು. ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ ಮಂಜುನಾಥ್‌ಗೆ ಅವರ ತಂಗಿ ಹೇಳ್ತಾಳೆ: ''ಅಣ್ಣಾ, ನಿನ್ನ ಕನಸಿನಲ್ಲೇನಾದರೂ ಅಮ್ಮ ಬಂದರೆ ಆಕೆಯ ಚಿತ್ರ ಬಿಡಿಸು. ಅದಕ್ಕೆ ಕಟ್ಟು ಹಾಕಿಸಿ ಮನೆಯಲ್ಲಿಟ್ಟುಕೊಳ್ಳೋಣ..'' ಇದು ಒಂದು ಕವಿತೆಯಲ್ಲಿದೆ. ಅವರ ಒಂದು ಕವಿತೆಯ ಮೂರು ಸಾಲು: ಸಮುದ್ರ ಶುರುವಾಗುವುದು ದೋಣಿಯ ಮೂತಿಯಿಂದ ಅಲ್ಲಿ ಅದರ ತುಟಿ, ಎದೆ, ಉಂಟಾಗುವುದು ತೆರೆಗಳೆದ್ದು ಸಮುದ್ರವನು ನೋಡೇ ಇಲ್ಲ ಎಂಬುದರಿಯದ ಮಗಳು ಕಾಗದದ ದೋಣಿಯನು ಮಾಡಿ ಇಟ್ಟಳು ಸಮುದ್ರವೇ ಇಲ್ಲದ ನಡುಮನೆಯೊಳಗೆ ಸಮುದ್ರವುಕ್ಕಿತು, ನೆಲದವರೆಲ್ಲ ಅದ್ದಿಹೋದೆವು ಜಲದಲ್ಲಿ ನಾವು ನಾವೇ ಅಲೆಗಳಾಗಿ ಏರಿಳಿಯತೊಡಗಿದೆವು. ಕಾವ್ಯ ಅಂದ್ರೆ ಏನು ಎಂಬುದಕ್ಕೆ ನಾನಾ ವ್ಯಾಖ್ಯಾನಗಳಿವೆ. ಆ ಜಿಜ್ಞಾಸೆಗೆ ನಾನು ಹೋಗುವುದಿಲ್ಲ. ಅದಕ್ಕೆ ಸುಂದರವಾದ ವ್ಯಾಖ್ಯೆ ನನಗೆ ಸಿಕ್ಕಿದ್ದು ಬನ್ನಂಜೆ ಗೋವಿಂದಾಚಾರ‍್ಯರ ಲೇಖನದಲ್ಲಿ: ''ಯಾವುದನ್ನು ಹೇಳೋದಿಕ್ಕೇ ಆಗುವುದಲ್ಲವೋ, ಅದನ್ನು ಹೇಳಲಿಕ್ಕಾಗುವ ಸಂಗತಿಗಳ ಮೂಲಕ ಧ್ವನಿಸುವುದೇ ಕಾವ್ಯ''. ಬಹಳ ಮಹತ್ವದ ಮಾತು. ಆದರೆ ಕಾವ್ಯ ಎಂಬುದು ನಮ್ಮೆಲ್ಲರಲ್ಲೂ ಜೀವಂತವಾಗಿರುವ ಮಾನವೀಯತೆಯ ಸೆಲೆ. ನಿನ್ನೆಯಿಂದ ನಾವು ವೈಚಾರಿಕತೆಯ ಸ್ವಾತಂತ್ರ್ಯಕ್ಕಾಗಿ, ಹದಗೆಟ್ಟಿರುವ ವಾತಾವರಣಕ್ಕಾಗಿ ನಾವು ಮಾತಾಡ್ತಾನೇ ಇದ್ದೇವೆ. ಈ ಎಲ್ಲ ಮಾತುಗಳಿಗೆ ಜೀವ ಬರಬೇಕಾಗುವುದು ನಮ್ಮೊಳಗಿನ ಅಂತಃಕರಣ ಸ್ಪಂದಿಸುತ್ತಾ ಇದ್ದಾಗ ಮಾತ್ರ. ಸಮಾಜದೊಳಗೆ ವ್ಯಕ್ತಿ ಇರುತ್ತಾನೆ, ಆದರೆ ವ್ಯಕ್ತಿಯೊಳಗೆ ಒಂದು ಸಮಾಜ ಇರಬೇಕಲ್ಲ? ಇವನ ಇಷ್ಟು ಸಣ್ಣ ಹೃದಯದೊಳಗೆ ಇಡೀ ಸಮಾಜ, ಅವನ ಸಹಜೀವಿಗಳ ಪರಿಸರ ಜೀವಂತವಾಗಿ ಇರಬೇಕಾದ್ದು ಮುಖ್ಯ. ಕಾವ್ಯ ಅನ್ನುವುದು ವ್ಯಕ್ತಿಯೊಳಗೆ ಇರುವ ಸಮಾಜಕ್ಕೆ ಸಂಬಂಧಪಟ್ಟ, ಆ ಸಮಾಜದ ಸೊಲ್ಲುಗಳನ್ನು ಅಭಿವ್ಯಕ್ತಿಸುವ ಕೆಲಸ. ಕಾವ್ಯಕ್ಕೆ ಸ್ಫೂರ್ತಿ ಬರುವುದು ಪುಸ್ತಕದ ಕಪಾಟುಗಳಿಂದಲ್ಲ. ಅದು ಬರುವುದು ಜನರಿಂದ, ಜನರ ಸೊಲ್ಲುಗಳಿಂದ. ಕುಮುದಾ ಶರ್ಮಾ ಎಂಬವರು 'ಪ್ರಸೂತಿಗೃಹದ ಪ್ರಸಂಗಗಳು' ಅಂತ ಪುಸ್ತಕ ಬರೆದಿದ್ದಾರೆ. ಅದರಲ್ಲಿರುವ ಒಂದು ಸಣ್ಣ ಘಟನೆ: ಒಬ್ಬಾಕೆ ಬಡ ತಾಯಿಗೆ ಅವಳಿ ಮಕ್ಕಳು ಹುಟ್ಟಿದವು. ಇಬ್ಬರು ಮಕ್ಕಳನ್ನು ಸಾಕುವ ಶಕ್ತಿಯಿಲ್ಲದ ಆ ತಾಯಿ ಬೇಸರ ಮಾಡಿಕೊಳ್ತಾಳೆ. ಆಗ ಡಾಕ್ಟರ್ ದಂಪತಿ, 'ಒಂದು ಮಗುವನ್ನು ನಾವು ಸಾಕ್ಕೋತೀವಮ್ಮ' ಅನ್ನುತ್ತಾರೆ. ತಾಯಿಗೆ ಖುಷಿಯಾಗುತ್ತದೆ. ಆಕೆ ಎರಡು ಮಕ್ಕಳಲ್ಲಿ ಯಾವುದು ಚಂದವಿದೆ ಎಂದು ನೋಡಿ, ಗುರುತಿಗಾಗಿ ಅದರ ಕೈಗೊಂದು ದಾರ ಕಟ್ಟುತ್ತಾಳೆ. ಆ ಮಗುವನ್ನು ತಗೊಂಡು ಹೋಗೋಣ ಅಂತ. ಆದರೆ ಮರುದಿನ ಬಂದಾಗ, ಇನ್ನೊಂದು ಮಗು ಆಕೆಗೆ ಚಂದ ಕಾಣುತ್ತದೆ. ದಾರವನ್ನು ಆ ಮಗುವಿಗೆ ಬದಲಿಸುತ್ತಾಳೆ. ಹೀಗೆ ಐದು ದಿನ ದಾರ ಆ ಮಗುವಿನಿಂದ ಈ ಮಗುವಿಗೆ ಓಡಾಡುತ್ತದೆ. ಕಡೆಗೆ ಎರಡೂ ಮಕ್ಕಳಲ್ಲಿ ಯಾವುದನ್ನೂ ಬಿಡಲಾಗದೆ, ಎರಡನ್ನೂ ತಗೊಂಡು ಮನೆಗೆ ಹೋಗ್ತಾಳೆ. ಇದೊಂದು ಹೃದಯಂಗಮವಾದ ಬದುಕಿನ ನೆರಳು ಬೆಳಕಿನ ಆಟ. ಹೀಗೆ ಆ ಕೈಯಿಂದ ಈ ಕೈಗೆ ಓಡಾಡುವ ಬ್ಯಾಂಡ್‌ನಂತೆ ನಮ್ಮ ಸಾಹಿತ್ಯ ಕೃತಿಗಳು ಇರುವಂಥದ್ದು. ಸಾಹಿತ್ಯ, ಕಲೆ, ಇದೇ ಇಂದಿನ ಅಧ್ಯಾತ್ಮ ಎಂಬುದು ನನ್ನ ನಂಬಿಕೆ. ಅಧ್ಯಾತ್ಮ ಎಂಬುದು ಬೇರೆಲ್ಲೂ ಇಲ್ಲ. ಇಂದು ಅಧ್ಯಾತ್ಮ ಎಂದು ಕರೆಸಿಕೊಳ್ಳುತ್ತಿರುವುದು ಹಿಂದೊಮ್ಮೆ ಕಾವ್ಯ ಆಗಿದ್ದಿರಬಹುದು. ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಒಂದೇ ಕೆಲಸವನ್ನು ಮಾಡುತ್ತವೆ. ಎರಡೂ ಮನುಷ್ಯನನ್ನು, ಯಾತನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡುತ್ತವೆ. ವೈದ್ಯಕೀಯದಲ್ಲಿ ಕಣ್ಣಿನ ತಜ್ಞರು, ಹೃದಯ ತಜ್ಞರು ಇರುವಂತೆ ನಮ್ಮಲ್ಲಿ ಕವಿಗಳು, ನಾಟಕಕಾರರು, ಕತೆಗಾರರಿದ್ದಾರೆ. ಆಸ್ಪತ್ರೆ ಅನ್ನುವುದು ಕೂಡ ಒಂದು ಅದ್ಭುತ ಮನುಷ್ಯಲೋಕ. ಅಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡಿದರೆ, ಮನುಷ್ಯನನ್ನು ಒರೆಗೆ ಹಚ್ಚುವ ಕ್ಷಣಗಳು ಅಲ್ಲಿ ಘಟಿಸುತ್ತಿರುತ್ತವೆ. ಅಲ್ಲಿ ಆತ ದುರ್ಬಲ, ವಿನೀತನಾಗಿರುತ್ತಾನೆ. ನಮ್ಮ ತಂದೆ ಗೌರೀಶ ಕಾಯ್ಕಿಣಿಯವರಿಗೆ ಆರಾಮಿಲ್ಲದ ವೇಳೆ, ಮಣಿಪಾಲ ಆಸ್ಪತ್ರೆಯಲ್ಲಿದ್ದರು. ಅವರ ಪಕ್ಕದ ಬೆಡ್‌ನಲ್ಲಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳಿದ್ದಳು. ಬಹುಶಃ ಕ್ಯಾನ್ಸರ್. ಕೂತ್ಕೊಳೋಕೆ ಶಕ್ತಿಯಿರಲಿಲ್ಲ. ಅಲ್ಲಿ ಪ್ರತಿದಿನ ಒಂದು ದೃಶ್ಯ ಕಾಣಿಸುತ್ತಿತ್ತು. ಆಕೆಯ ಗಂಡ ಮಗಳನ್ನು ಶಾಲೆಗೆ ರೆಡಿ ಮಾಡಿ, ಯುನಿಫಾರ್ಮ್ ಹಾಕಿಸಿ, ಜಡೆ ಕಟ್ಟಿ, ಕರೆದುಕೊಂಡು ಬಂದು ತಾಯಿಗೆ ಟಾಟಾ ಮಾಡಿಸಿ ಶಾಲೆಗೆ ಕರೆದೊಯ್ಯುತ್ತಿದ್ದ. ನಿಶ್ಶಕ್ತ ತಾಯಿ ಮಗಳನ್ನು ಎತ್ತಿ ತನ್ನ ಬೆಡ್ ಮೇಲೆ ಕೂರಿಸಿಕೊಂಡು, ತಂದೆ ಕಟ್ಟಿದ ಜಡೆಯನ್ನು ಬಿಚ್ಚಿ, ಸರಿಪಡಿಸಿ ಕಟ್ಟಿ, ಮತ್ತೆ ಪೌಡರ್ ಹಚ್ಚಿ, ಮುತ್ತುಕೊಟ್ಟು ಶಾಲೆಗೆ ಕಳಿಸುತ್ತಿದ್ದಳು. ಈ ದೃಶ್ಯ ಬದುಕಿನ ಸೌಂದರ‍್ಯವನ್ನು ನನಗೆ ತೋರಿಸುತ್ತಿತ್ತು. ಸಾವಿನ ಸಮ್ಮಖದಲ್ಲಿ ಬದುಕಿನ ದೃಷ್ಟಿ. ಜೀವನದಲ್ಲಿ ಸೌಂದರ‍್ಯವನ್ನು ಕಾಣುವ ಆ ತಾಯಿಯ ದೃಶ್ಯ ನನ್ನನ್ನು ಯಾವತ್ತೂ ಕಾಡುತ್ತೆ. ಸಾಹಿತ್ಯದಿಂದ ಹುಟ್ಟುವ ಸಾಹಿತ್ಯ- ಕುಟುಂಬದೊಳಗಿನ ಸಂಬಂಧದಲ್ಲಿ ಮದುವೆಯಾದಂತೆ- ಆರೋಗ್ಯಕರವಾಗಿರುವುದಿಲ್ಲ. ಬದುಕಿನಿಂದ ಹುಟ್ಟುವ ಸಾಹಿತ್ಯ, ಬದುಕಿನ ನಿತ್ಯ ಜಂಜಡಗಳಿಂದ ಹುಟ್ಟಿದ, ಬಗ್ಗಡಗಳಿಂದ ಸ್ಫೂರ್ತಿ ಪಡೆದ, ಬದುಕನ್ನು ಕರುಣೆಯಿಂದ ನೋಡುವ ಸಾಹಿತ್ಯ ಸ್ಪಂದನಶೀಲವಾಗಿ ಬೆಳೆಯುತ್ತದೆ. ಕವಿ ಈ ಬಗೆಯ ಸಣ್ಣಸಣ್ಣ ಬೆಳಕಿಂಡಿಗಳನ್ನು ತೆರೆಯುತ್ತಾನೆ. ಮಧುರಚೆನ್ನ ಮತ್ತು ಬೇಂದ್ರೆ ಆಪ್ತ ಸ್ನೇಹಿತರು. ಮಧುರಚೆನ್ನರನ್ನು ಮಣ್ಣು ಮಾಡಿದಾಗ ಬೇಂದ್ರೆ ಹೇಳಿದರಂತೆ: ''ಮಧುರಚೆನ್ನರನ್ನು ಮಣ್ಣು ಮಾಡಿಲ್ಲ, ಅವರನ್ನು ಬಿತ್ಯಾರ''. ಇದು ಒಂದು ಕಾವ್ಯ. ಇದು ನಮ್ಮ ಅಳವನ್ನೂ ಮೀರಿದ, ವಿಶಾಲವಾದ ಒಂದರ ಜತೆಗೆ ಸಂಪರ್ಕವನ್ನು ಸಾಧಿಸುವ ಒಂದು ಆವರಣ. ಕಾವ್ಯ ಅನ್ನುವುದು ಪ್ರಶಸ್ತಿ, ವಿಸಿಟಿಂಗ್ ಕಾರ್ಡಿಗೆ ಸಂಬಂಧಪಟ್ಟಿದ್ದಲ್ಲ. ಅದು ನಮ್ಮ ಬಯೋಡಾಟಾಗಳನ್ನು ಮೀರುವಂಥ, ಮೀರಿ ಸಂಯುಕ್ತವಾದ ಆವರಣದಲ್ಲಿ ಲೀನವಾಗುವಂಥ ಒಂದು ಸಾಧ್ಯತೆ. ಮಗು ಕನಸು ಕಾಣುತ್ತದೆ. ಕನಸಲ್ಲಿ ಆಟಿಕೆ ಮುರಿದು ಅಳುತ್ತಿರುತ್ತದೆ. ಎದ್ದಾಗಲೂ ಅದರ ಕಣ್ಣಲ್ಲಿ ನೀರಿರುತ್ತದೆ. ಆ ಕಂಬನಿ ಯಾವ ಲೋಕದ್ದು? ಅದು ಕನಸಿನ ಲೋಕದ್ದೋ, ಎಚ್ಚರದ ಲೋಕದ್ದೋ? ನಾವು ಬರೆಯುವ ಕಾವ್ಯವೂ ಹಾಗೆಯೇ. ಕನಸಿನ ಲೋಕದಲ್ಲಿ ನಿಜವಾಗುವಂಥ, ನಿಜಲೋಕಕ್ಕೂ ಒಂದು ಕನಸನ್ನು ಕೊಡುವಂಥ ಒಂದು ಕಂಬನಿ ಅದು. ಕವಿಗಳಿಗೆ ''ಯಾವುದರ ಮೇಲೆ ಬರೀತೀರಿ? ಇದಕ್ಕೆ ಸ್ಫೂರ್ತಿ ಏನು?'' ಎಂದೆಲ್ಲ ಕೇಳುವವರಿದ್ದಾರೆ. ಹಾಗಿಲ್ಲ. ಕವಿ, ಕತೆಗಾರನಿಗೆ ಅವನ ಬರವಣಿಗೆಯಷ್ಟು ಸತ್ಯವಾದದ್ದು ಬೇರಾರಯವುದೂ ಇರುವುದಿಲ್ಲ. ಇದಕ್ಕೆ ಉದಾಹರಣೆ ಹೇಳುವೆ. 'ಮೂರು ದಾರಿಗಳು' ಕಾದಂಬರಿ ಬರೆದ ಯಶವಂತ ಚಿತ್ತಾಲರ ಮನೆಗೆ ಆಗಾಗ ಹೋಗುತ್ತಿದ್ದೆ. ಒಮ್ಮೆ ಅವರಲ್ಲಿಗೆ ಹೋಗುವಾಗ ಲೇಟಾಯಿತು. ''ದಾದರ್ ಸ್ಟೇಶನ್‌ನಲ್ಲಿ ರಶ್ ಇತ್ತು. ಅದಕ್ಕೇ ತಡವಾಯ್ತು'' ಎಂದೆ. ಚಿತ್ತಾಲರು ''ದಾದರ್ ಸ್ಟೇಶನ್ನಾ? ದಾದರ್ ಅಂದ ಕೂಡಲೇ ಒಂದು ಬಗೆಯ ಬೇಸರ ಆಗುತ್ತದೆ, ವಿಷಾದ ಉಂಟಾಗುತ್ತೆ'' ಎಂದರು. ಇವರಿಗೆ ಯಾರೋ ಅಲ್ಲಿ ಪಾಕೆಟ್ ಹೊಡೆದಿರಬೇಕು ಎಂದುಕೊಂಡೆ ನಾನು. ಯಾಕೆಂದು ಕೇಳಿದೆ. ಆಗ ಅವರು ಹೇಳಿದರು ''ನನ್ನ ನಿರ್ಮಲೆ ಆತ್ಮಹತ್ಯೆ ಮಾಡಿಕೊಂಡದ್ದು ದಾದರ್‌ನಲ್ಲಿ'' ಎಂದರು. ಅರೆ, ಯಾವ ನಿರ್ಮಲೆ? ಮೂರು ದಾರಿಗಳು ಕಾದಂಬರಿಯ ನಿರ್ಮಲೆ ಪಾತ್ರ ಅಂತ ಗೊತ್ತಾಯಿತು. ''ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡದ್ದು ದಾದರ್‌ನಲ್ಲಿ ಅಲ್ಲ; ಕಾರವಾರದಲ್ಲಿ ಅಲ್ವಾ?'' ಅಂದೆ. ''ನಾನು ಹೈದರಾಬಾದ್‌ನಿಂದ ಮುಂಬಯಿಗೆ ಬರ್ತಾ ಇದ್ದೆ. ಮೂರು ದಾರಿಗಳು ಕಾದಂಬರಿಯ ಕೊನೆಯ ಅಧ್ಯಾಯ ಬರೆಯುತ್ತಾ ಇದ್ದೆ. ನಿರ್ಮಲೆ ಆತ್ಮಹತ್ಯೆ ಮಾಡಿಕೊಂಡ ಭಾಗ ಬರೆದು ಪೆನ್ನು ಇಟ್ಟು ಹೊರಗೆ ನೋಡಿದಾಗ ದಾದರ್ ಸ್ಟೇಶನ್ ಬಂದಿತ್ತು. ಆಮೇಲೆ ದಾದರ್‌ನಲ್ಲಿ ಇಳಿದಾಗ ಸೂತಕದ ಭಾವದಲ್ಲಿ ಇಳಿದೆ,'' ಅಂದರು. ಅವರೇ ಆತ್ಮಹತ್ಯೆ ಮಾಡಿಸಿದ್ದು, ಅವರೇ ಲೇಖಕ. ಆದರೆ ಲೇಖಕನಿಗೆ ಅದು ಅಷ್ಟರ ಮಟ್ಟಿಗೆ ನಿಜ. ಬರಹಗಾರನ ಈ ನಿಜ ಆತನ ಪ್ರಾಮಾಣಿಕತೆ, ಆತ್ಮಸಾಕ್ಷಿಗೆ ಸಂಬಂಧಪಟ್ಟಿದ್ದು. ಇನ್ನೊಂದು ನಮ್ಮೆಲ್ಲರ ಪ್ರೀತಿಯ ಡಾ.ರಾಜ್‌ಕುಮಾರ್‌ಗೆ ಸಂಬಂಧಪಟ್ಟಿದ್ದು. ನಾನು ಅದರ ಚಿತ್ರಕತೆ- ಸಂಭಾಷಣೆ ಬರೆದಿದ್ದೆ. ಅದರ ರೂಪುರೇಷೆ ಸಿದ್ಧಪಡಿಸುವಾಗ, ಒಂದು ಚರ್ಚೆ ಆಯಿತು. ಆ ಕತೆಯಲ್ಲಿ ಒಬ್ಬಳು ಕುರುಡಿ. ಆಕೆಯನ್ನು ಮದುವೆ ಆಗುವಂತೆ ನಾಯಕನನ್ನು ಒತ್ತಾಯಿಸಲಾಗುತ್ತೆ. ಅದಕ್ಕೆ ಆತ, ''ಇಲ್ಲ, ನಾನು ಕುರುಡಿಯನ್ನು ಮದ್ವೆ ಆಗೋಲ್ಲ'' ಎಂದು ದಿಲ್ಲಿಗೆ ಓಡಿ ಹೋಗುತ್ತಾನೆ. ಈ ದೃಶ್ಯ ಕಲ್ಪಿಸಿಕೊಂಡು ನನಗೆ ಸ್ವಲ್ಪ ಕಸಿವಿಸಿ ಆಯಿತು. ಕಾರಣ, ನಾನು ಸಿನಿಮಾ ನೋಡಿ ಬೆಳೆದವನು. ಸಿನಿಮಾ ನನಗೆ ಆದರ್ಶ. ಕುರುಡಿಯನ್ನು ಮದುವೆಯಾಗಲ್ಲ ಅಂದೆ ಹೀರೋ ಆಗುವುದು ಹೇಗೆ? ಹಾಗಂತ ಹೇಳಿದೆ. ಆಗ ರಾಜ್‌ಕುಮಾರ್, ''ಒಂದು ಕೆಲಸ ಮಾಡಿ, ನಿಧಾನಕ್ಕೆ ಯೋಚಿಸಿ, ಆಮೇಲೆ ಕತೆಯ ಬದಲಾವಣೆ ಹೇಳಿ,'' ಎಂದರು. ಮರುದಿನ ಅವರ ಮನೆಗೆ ಹೋದೆ. ''ಏನ್ ಕವಿಗಳೇ, ಏನ್ ವಿಚಾರ ಮಾಡಿದ್ರಿ?'' ಅಂತ ಕೇಳಿದರು ರಾಜ್‌ಕುಮಾರ್. ''ಅವಳನ್ನು ಕುರುಡಿ ಮಾಡೋದು ಬೇಡ, ಅವಳನ್ನು ಸಣ್ಣ ಹುಡುಗಿ ಮಾಡೋಣ. ನಾಯಕ ಆಕೆಯನ್ನು ಚಿಕ್ಕಂದಿನಿಂದ ಎತ್ತಿ ಆಡಿಸಿರುತ್ತಾನೆ. ನನ್ನ ತಂಗಿಯ ಹಾಗಿರುವವಳನ್ನು ನಾನು ಮದುವೆ ಆಗುವುದಿಲ್ಲ, ಬಾಲ್ಯವಿವಾಹ ಆಗುವುದಿಲ್ಲ ಅನ್ನುತ್ತಾನೆ ಅಂತ ಮಾಡೋಣ,'' ಎಂದು ಬಿಡಿಸಿ ಹೇಳಿದೆ. ಆಗ, ರಾಜ್, ನನ್ನ ಕೈಹಿಡಿದು, ''ತುಂಬಾ ಒಳ್ಳೇ ಕೆಲಸ ಮಾಡಿದ್ರಿ, ಕುರುಡಿ ಆಗಿದ್ದಿದ್ದರೆ, ಅವಳ ಜೀವನ ಬಹಳ ಕಷ್ಟ ಆಗುತ್ತಿತ್ತು,'' ಎಂದರು. ಮೈ ಜುಮ್ಮೆಂದಿತು. ಸಿನಿಮಾ ಅಂದರೆ ಒಂದು ಕಲ್ಪಿತ ವಾಸ್ತವ. ರಾಜ್‌ಕುಮಾರ್‌ಗೆ ಆ ಕಲ್ಪಿತ ಆವರಣದಲ್ಲೂ ಕೂಡ ಹುಡುಗಿ ಕಷ್ಟಪಡುವುದು ಬೇಕಿರಲಿಲ್ಲ. ನಾವೀಗ ಒಂದು ವರ್ಚುವಲ್ ವಿಶ್ವದಲ್ಲಿ- ಅಪವಾಸ್ತವದಲ್ಲಿ ಕಳೆದು ಹೋಗುತ್ತಿದ್ದೇವೆ. ಫೇಸ್‌ಬುಕ್, ವಾಟ್ಸ್ಯಾಪ್- ಎಲ್ಲ ಬೇಕು. ಆದರೆ ಅವುಗಳ ಮನೋದಾಸ್ಯದಲ್ಲಿ ಕಳೆದುಹೋಗಬಾರದು. 'ಹಕ್ಕಿಗಳಿಗೆ ನೀರಿಡಿ' ಎಂದು ನೂರು ಮಂದಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತೇವೆ. ಆದರೆ ಒಬ್ಬನೂ ಒಂದು ಗುಟುಕು ನೀರಿಡುವುದಿಲ್ಲ. ಜೋಗ್‌ಫಾಲ್ಸ್‌ಗೆ ಹೋಗುತ್ತೇವೆ, ಸೆಲ್ಫಿ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತೇವೆ. ಮತ್ತೆ ಅದರಲ್ಲಿ ಜೋಗ್‌ಫಾಲ್ಸ್ ಹುಡುಕುತ್ತೇವೆ. ಜನ ಈ ರೀತಿ ಮೈಮರೆಯುವುದು ಎಲ್ಲ ಕಾಲದ ರಾಜಕಾರಣಕ್ಕೂ ಇಷ್ಟ. ಈ ಎಚ್ಚರ ನಮಗೆ ಈ ಕಾಲದಲ್ಲಿ ಬಹಳ ಮಹತ್ವದ್ದು. ಈ ಕಸದಲ್ಲಿ ನಾವು ಕಳೆದುಹೋಗಬಾರದು. ನಮ್ಮ ಮನಸ್ಸು ನಮಗೆ ಮುಖ್ಯ. ನಮಗೆ ಪ್ರತಿಮೆ, ರೂಪಕಗಳು ಕಾಡುತ್ತವೆ. ನಗರದಲ್ಲಿ ಬರುವ ಟ್ರಾಕ್ಟರ್ ನನ್ನನ್ನು ಈಗ ಕಾಡುವ ಒಂದು ಪ್ರತಿಮೆ. ಅದು ಹಳ್ಳಿಯ ಹೊಲದಲ್ಲಿ ಇರಬೇಕಾಗಿತ್ತು. ಆದರೆ ನಗರದ ನಡುವೆ ಮುರಿದ ಕಟ್ಟಡಗಳ ಅವಶೇಷಗಳನ್ನು ತುಂಬಿಕೊಳ್ಳಲು ಬರುತ್ತಿದೆ. ಟ್ರಾಕ್ಟರ್‌ನ ಹಿಂದೆ ಇರುವ ಟ್ರೇಲರ್‌ನಲ್ಲಿ, ಕೆಲಸಕ್ಕಾಗಿ ಹಳ್ಳಿಯನ್ನು ತೊರೆದುಬಂದ ಇಡೀ ಕುಟುಂಬ ಕುಳಿತಿರುತ್ತದೆ. ಎಲ್ಲ ಸಂಬಂಧಗಳು ಅಲ್ಲಿರುತ್ತವೆ. ಇಂಥ ಆಧುನಿಕ ಪ್ರತಿಮೆಗಳಿಂದಲೇ ನಮ್ಮ ಈಗಿನ ಸಾಹಿತ್ಯ ಜೀವ ಪಡೆದುಕೊಳ್ಳಬೇಕು. ನಮ್ಮ ಮಕ್ಕಳು ಈ ಸ್ವರೂಪದಲ್ಲಿ ಚಿಂತಿಸಬೇಕು. ಪುಟ್ಟ ಮಗು ಕೇಳಿದ ''ದ್ರೌಪದಿ ವಸ್ತ್ರಾಪಹರಣ ಆಗದಂತೆ ಸೇಫ್ಟಿ ಪಿನ್ ಯಾಕೆ ಹಾಕಿಕೊಂಡಿರಲಿಲ್ಲ?'' ಎಂಬಂಥ ಮಾತುಗಳಿಗೆ ಸ್ತ್ರೀಶೋಷಣೆ, ಸ್ವಾಭಿಮಾನದ ಪ್ರತಿಮೆಯನ್ನು ಕಾಣಿಸುವ ಶಕ್ತಿಯಿದೆ. ಹಾಗಾಗಿ ನಾವು ಎಲ್ಲ ರಾಜಕಾರಣದ ವರಸೆಗಳನ್ನು ಬದಿಗಿಟ್ಟು, ಅಪವಾಸ್ತವಗಳನ್ನು ಆಚೆಗಿಟ್ಟು, ಪ್ರಜ್ಞಾವಂತರಾಗಿ ಬದುಕಿನಿಂದ ಹೀರಿಕೊಳ್ಳೋಣ. ಯಾವನೇ ಪ್ರಜ್ಞಾವಂತ ವ್ಯಕ್ತಿ ಇಂದು ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಲು ಶಕ್ಯವೇ ಇಲ್ಲ. ಸ್ವತಂತ್ರವಾಗಿಯೇ ಯೋಚಿಸಬೇಕು, ಬದುಕನ್ನು ಕಟ್ಟಬೇಕು. ಸಮ್ಮೇಳನದ ನೆಪದಲ್ಲಿ ಮಾನವಂತಿಕೆ, ಸಮತೆ, ಮಮತೆ ಜಾಗೃತವಾಗಲಿ. (ಮೈಸೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಮಾಡಿದ ಭಾಷಣದ ಪೂರ್ಣರೂಪ.)
ತಾರತಮ್ಯ ಇಲ್ಲದ ಅಂತರ್ಜಾಲ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದೇಶದಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ಕಾಪಾಡುವ ಬಗ್ಗೆ ಹಲವಾರು ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನೆಟ್ ನ್ಯೂಟ್ರಾಲಿಟಿಯ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಒಂದು ನೋಟ ಇಲ್ಲಿದೆ. ದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂಟರ್‌ನೆಟ್ ಸೇವೆಗಳಲ್ಲಿ ತಾರತಮ್ಯವನ್ನು ತಡೆಯುವ ಪ್ರಯತ್ನಕ್ಕೆ ಕೈಹಾಕಿದೆ. ಮುಖ್ಯವಾಗಿ ಅಂತರ್ಜಾಲ ಸೇವೆಯಲ್ಲಿ ವೇಗವನ್ನು ಇಳಿಸುವುದು ಅಥವಾ ಹೆಚ್ಚಿಸುವುದನ್ನು ನಿರ್ಬಂಧಿಸುವ ನಿಯಮವನ್ನು ಸೇರಿಸುತ್ತಿದ್ದು, ಇದಕ್ಕಾಗಿ ಟೆಲಿಕಾಂ ಕಂಪನಿಗಳ ಪರವಾನಗಿಯನ್ನು ಪರಿಷ್ಕರಿಸಲು ಮುಂದಾಗಿದೆ. ಈ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಯಥಾಪ್ರಕಾರ, ಕಂಪನಿಗಳು ''ಇದು ಉದ್ಯಮಕ್ಕೆ ಹಾನಿಕರ'' ಎನ್ನುತ್ತಿವೆ; ನೆಟ್ ನ್ಯೂಟ್ರಾಲಿಟಿಯ ಪ್ರತಿಪಾದಕರು ಸ್ವಾಗತಿಸಿದ್ದಾರೆ. ನಮ್ಮ ದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮೊದಲಿನಿಂದಲೂ ನೆಟ್ ನ್ಯೂಟ್ರಾಲಿಟಿಯ ಪರವಾಗಿ ಇದೆ. ಹಾಗಾಗಿಯೇ ಅದು ''ಅಂತರ್ಜಾಲ ಸೇವೆಯಲ್ಲಿ ಪಾರದರ್ಶಕ ನೀತಿಯನ್ನು ಕಾಯ್ದುಕೊಳ್ಳಬೇಕು; ಯಾವುದೇ ಕಂಟೆಂಟ್‌ನ್ನು ಒದಗಿಸುವಲ್ಲಿ ತಾರತಮ್ಯ ಮಾಡುವ, ವೇಗ ಇಳಿಸುವ ಅಥವಾ ಹೆಚ್ಚಿಸುವ, ಬ್ಲಾಕ್ ಮಾಡುವ, ಸೇವೆಯಲ್ಲಿ ಮಧ್ಯಪ್ರವೇಶ ಮಾಡುವ ಕ್ರಮಗಳನ್ನು ನಿರ್ಬಂಧಿಸಬೇಕು'' ಎಂದು ಹೇಳಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳ ಲೈಸೆನ್ಸನ್ನು ಪರಿಷ್ಕರಿಸುವ, ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕ್ರಮಗಳನ್ನು ಪ್ರತಿಪಾದಿಸಿದೆ. ''ಭಾರತದಂಥ ದೇಶಗಳಿಗೆ ಇದೊಂದು ಮುಖ್ಯ ವೇದಿಕೆ; ಹೀಗಾಗಿ ಅಂತರ್ಜಾಲವನ್ನು ಮುಕ್ತವಾಗಿಡುವುದು ಅಗತ್ಯ. ಅದಕ್ಕೆ ಯಾರೂ ಯಜಮಾನರಿಲ್ಲ; ಹಾಗಾಗಿ ಎಲ್ಲರೂ ಅದರ ಯಜಮಾನರು,'' ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಸಾರ್ವಜನಿಕ ಅಂತರ್ಜಾಲವನ್ನು ಬಳಸದ, ಕಂಟೆಂಟ್ ಡೆಲಿವರಿ ನೆಟ್‌ವರ್ಕ್‌ಗಳು ಮಾತ್ರ ಈ ನಿಯಮಗಳಿಂದ ವಿನಾಯಿತಿ ಪಡೆಯಲಿವೆ. ತಮ್ಮದೇ ಸ್ವಂತ ಕಂಟೆಂಟ್ ಅಂತರ್ಜಾಲವನ್ನು ಹೊಂದಲು ಮುಂದಾಗಿರುವ ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ನಂಥ ಕಂಪನಿಗಳು ಈ ವಿನಾಯಿತಿಯಿಂದ ಲಾಭ ಪಡೆಯಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ 'ವಿಶೇಷ ಸೇವೆ'ಗಳನ್ನು ನಿರ್ಧರಿಸುವ ಹೊಣೆಯನ್ನು ಟ್ರಾಯ್ ದೂರಸಂಪರ್ಕ ಇಲಾಖೆಗೇ ಬಿಟ್ಟಿದೆ. ನಿರ್ದಿಷ್ಟ ಮಟ್ಟದ ಸೇವೆಯನ್ನು ಅಪೇಕ್ಷಿಸುವವರಿಗಾಗಿ ನೀಡುವ ಸೇವಾದಾತರಿಗೆ ಮಾತ್ರ ಈ ವಿನಾಯಿತಿ ಸಲ್ಲುತ್ತದೆ ಎಂದು ಟ್ರಾಯ್ ಹೇಳಿದೆ. ಇದು ಒಂಥರಾ ಟೆಲಿ ಮೆಡಿಸಿನ್ ಇದ್ದಂತೆ. ಸೇವೆಯ ಗುಣಮಟ್ಟಕ್ಕಾಗಿ ಇದು ಬೇಕು. ಆದರೆ ಅದು ಇಂಟರ್‌ನೆಟ್‌ಗೆ ಪರಾರಯಯವಲ್ಲ ಎಂದೂ ಎಚ್ಚರಿಸಿದೆ. ಆದರೆ ಅಂತರ್ಜಾಲ ಸೇವಾದಾರರು ತಮ್ಮ ಸೇವೆಯ ಗುಣಮಟ್ಟ ಕಾಪಾಡಲು, ನೆಟ್‌ವರ್ಕ್‌ನ ಸುರಕ್ಷತೆ ಕಾಪಾಡಿಕೊಳ್ಳಲು, ತುರ್ತು ಸೇವೆಗಳನ್ನು ನೀಡಲು. ಕೋರ್ಟ್ ಅಥವಾ ಸರಕಾರದ ಆದೇಶಗಳನ್ನು ಪಾಲಿಸುವ ಸಂದರ್ಭದಲ್ಲಿ, ಅವು ಸಾಧ್ಯವಾದಷ್ಟು ಪಾರದರ್ಶಕವಾಗಿರುವಂತೆ ನೋಡಿಕೊಂಡು, ಬಳಕೆದಾರರ ಮೇಲೆ ಅವುಗಳ ಪರಿಣಾಮವನ್ನು ಮೊದಲೇ ತಿಳಿಸಿ, ಜಾಲಸೇವೆಯಲ್ಲಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಲು ಟ್ರಾಯ್ ಮರೆತಿಲ್ಲ. ಟ್ರಾಯ್‌ನ ಈ ಪ್ರಸ್ತಾವನೆಗಳನ್ನು ನೆಟ್ ನ್ಯೂಟ್ರಾಲಿಟಿಯ ಪ್ರತಿಪಾದಕರು ಸ್ವಾಗತಿಸಿದ್ದಾರೆ. ''ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿದಂತೆ ಉಳಿದ ಸಂದರ್ಭಗಳಲ್ಲಿ ಅಂತರ್ಜಾಲ ಸೇವೆಯಲ್ಲಿ ಯಾವುದೇ ತಾರತಮ್ಯ ಮಾಡಕೂಡದೆಂಬ ಈ ಪ್ರಸ್ತಾವನೆ ಅಂತರ್ಜಾಲ ಬಳಕೆದಾರರಿಗೆ ದೊರೆತ ಜಯ,'' ಎಂದು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್‌ನ ಸಹಸ್ಥಾಪಕ ನಿಖಿಲ್ ಪಾಹ್ವಾ ಹೇಳಿದ್ದಾರೆ. ಈ ಪ್ರಸ್ತಾವನೆಗಳ ಬಗ್ಗೆ ಕೊನೆಯ ತೀರ್ಮಾನವನ್ನು ದೂರಸಂಪರ್ಕ ಇಲಾಖೆ ತೆಗೆದುಕೊಳ್ಳಲಿದೆ. ಇದುವರೆಗಂತೂ ಇಲಾಖೆ ಬಳಕೆದಾರರ ಪರವಾಗಿಯೇ ಇದ್ದು, ನೆಟ್ ನ್ಯೂಟ್ರಾಲಿಟಿಯನ್ನು ಪ್ರತಿಪಾದಿಸುತ್ತಲೇ ಇದೆ. ''ಭಾರತ ಡಿಜಿಟಲ್ ದೇಶವಾಗುತ್ತಿದ್ದು, ಅದರಲ್ಲಿ ಎಲ್ಲರನ್ನೂ ಒಳಗೊಳಿಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆಗಳು ಸ್ವಾಗತಾರ್ಹ. ಸರಕಾರದ ಸ್ಟಾರ್ಟಪ್ ಇಂಡಿಯಾದಂಥ ಯೋಜನೆಗಳಿಗೆ ಇವು ಅಗತ್ಯವಿವೆ. ಸಾಮಾನ್ಯ ಹಿನ್ನೆಲೆಯ ಉದ್ಯಮಿಗಳಿಗೂ ಅಂತರ್ಜಾಲ ಸುಲಭವಾಗಿ ಲಭ್ಯವಾಗಬೇಕು. ಯಾರದೇ ಸರ್ವಾಧಿಕಾರ ನಡೆಯದಂತೆ ಈ ನಿಯಮಗಳನ್ನು ರೂಪಿಸಲಾಗುತ್ತಿದೆ,'' ಎಂದಿದ್ದಾರೆ ಐಟಿ ಸಚಿವ ರವಿಶಂಕರ ಪ್ರಸಾದ್. ಸದ್ಯಕ್ಕೆ ಉಲ್ಲಂಘನೆಯ ದಂಡ ಹೆಚ್ಚೇನಿಲ್ಲ. ಅದನ್ನು 50 ಲಕ್ಷ ರೂ.ಗೇರಿಸುವ ಇರಾದೆ ಇದೆ. ಟ್ರಾಯ್ ಹೇಳಿದ್ದೇನು? - ಅಂತರ್ಜಾಲ ಕಂಟೆಂಟ್‌ನಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. - ಪಾರದರ್ಶಕವಾಗಿರುವ ಕೆಲವೇ ಕೆಲವು ಟ್ರಾಫಿಕ್ ನಿಯಂತ್ರಣಗಳನ್ನು ಮಾತ್ರ ಸೇವಾದಾತರು ಮಾಡಬಹುದು. - ವಿಶೇಷ ಸೇವೆಗಳಿಗೆ ವಿನಾಯಿತಿ ಇದೆ. ಆದರೆ ಇದನ್ನು ದೂರಸಂಪರ್ಕ ಇಲಾಖೆ ನಿರ್ಧರಿಸಬೇಕು. - ವಸ್ತು ಅಂತರ್ಜಾಲ (ಇಂಟರ್ನೆಟ್ ಆಫ್ ಥಿಂಗ್ಸ್) ಕೂಡ ನೆಟ್ ನ್ಯೂಟ್ರಾಲಿಟಿಗೆ ಸೇವೆಯ ವಿಭಾಗದಲ್ಲಿ ಒಳಪಡುತ್ತದೆ. - ಟೆಲಿಕಾಂ ಕಂಪನಿಗಳು ಒದಗಿಸುವ ಕಂಪನಿಯೊಳಗಿನ ಕಂಟೆಂಟ್ ಒದಗಣೆ ಜಾಲಗಳು ವಿನಾಯಿತಿಗೆ ಒಳಪಡುತ್ತವೆ. - ಕಾನೂನು ಪಾಲನೆಯ ನಿಗಾ ಹಾಗೂ ಉಲ್ಲಂಘನೆಯ ವಿಚಾರಣೆ ನಡೆಸಲು ಪಾಲುದಾರಿಕೆ ಮಂಡಳಿಯೊಂದರ ರಚನೆ. - ನೆಟ್ ನ್ಯೂಟ್ರಾಲಿಟಿಯ ನಿಯಮಗಳ ಸೇರ್ಪಡೆಗಾಗಿ ಪರವಾನಗಿಗಳ ಪರಿಷ್ಕರಣೆ. ಕಂಪನಿಗಳ ಅಹವಾಲು ಟ್ರಾಯ್‌ನ ಪ್ರಸ್ತಾವನೆಗಳು ಕಠಿಣಾತಿಕಠಿಣವಾಗಿವೆ; ಅರೆಬೆಂದ ನಿರ್ಣಯಗಳು; ಇವುಗಳನ್ನು ಜಾರಿ ಮಾಡಿದರೆ ದೇಶದಲ್ಲಿ ಇಂಟರ್‌ನೆಟ್ ಸೇವೆ ಅಸ್ತವ್ಯಸ್ತಗೊಳ್ಳಬಹುದು ಎಂದು ಟೆಲಿಕಾಂ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿವೆ. ಕಂಪನಿಗಳು ಹೆಚ್ಚು ಹೆಚ್ಚು ಮಾರುಕಟ್ಟೆ ಸ್ನೇಹಿಯಾಗುತ್ತಿರುವ ಈ ಕಾಲದಲ್ಲಿ ಇಂಥ ಕಠಿಣ ನಿಯಮಗಳನ್ನು ವಿಧಿಸುವುದು ಸೂಕ್ತವಲ್ಲ,'' ಎಂದು ಇಂಟರ್‌ನೆಟ್ ಸೇವಾದಾತ ಸಂಸ್ಥೆಗಳು ಹೇಳಿವೆ. ಉಲ್ಲಂಘನೆ ತಡೆ ಸಮಿತಿಯನ್ನು ರಚಿಸಬೇಕೆಂಬ ನಿಯಮವಂತೂ ಬ್ಯೂರೋಕ್ರಸಿಯ ಹೇರಿಕೆ ಎನ್ನಲಾಗಿದೆ. ಆದರೆ, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೊನಂಥ ಕಂಟೆಂಟ್ ಡೆಲಿವರಿ ನೆಟ್‌ವರ್ಕ್‌ಗಳಿಗೆ ಈ ನಿಯಮಗಳಿಂದ ಯಾವುದೇ ಬಾಧಕವಿಲ್ಲ. ಯಾಕೆಂದರೆ ಈ ಪ್ರಸ್ತಾವನೆಗಳಿಂದ ಇವುಗಳನ್ನು ಟ್ರಾಯ್ ಹೊರಗಿಟ್ಟಿದೆ. ಇವು ತಮ್ಮದೇ ಆದ ಸಿನಿಮಾ, ಸಂಗೀತ, ಕ್ಲೌಡ್ ಮುಂತಾದ ಕಂಟೆಂಟ್ ಪ್ಲಾಟ್‌ಫಾರಂಗಳನ್ನು ಹೊಂದಿವೆ. ವಾಟ್ಸಾಪ್, ಫೇಸ್‌ಬುಕ್ ದುಬಾರಿ? 'ಓವರ್ ದಿ ಟಾಪ್'(ಒಟಿಟಿ)- ಸಂವಹನ ಸೇವೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವುದಾಗಿ ಟ್ರಾಯ್ ಹೇಳಿದೆ. ಇವುಗಳೆಂದರೆ ವಾಟ್ಸಾಪ್, ಮೆಸೆಂಜರ್, ವೈಬರ್ ಮುಂತಾದ ಸಂವಹನ ತಾಣಗಳು, ಫೇಸ್‌ಬುಕ್‌ನಂಥ ಜಾಲತಾಣಗಳು ಇತ್ಯಾದಿ. 'ಈ ವಲಯ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ನಿಯಂತ್ರಣ ಹಾಗೂ ನೀತಿ ನಿರೂಪಣೆ ಚೌಕಟ್ಟಿನಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿ ಬಂದಿದೆ' ಎಂದು ಟ್ರಾಯ್ ಹೇಳಿದೆ. ಈ ವಲಯದಲ್ಲಿ ಮಾರುಕಟ್ಟೆ ನಷ್ಟದಲ್ಲಿದೆ ಎಂದು ಕಂಪನಿಗಳು ಹೇಳುತ್ತಿವೆ. ಇದನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ವೆಚ್ಚ ಹಾಗೂ ಲಾಭದ ಪರಿಶೀಲನೆಯಿಂದ ಒಂದು ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಟ್ರಾಯ್ ಹೇಳಿದೆ. ಆದರೆ ಟ್ರಾಯ್‌ನ ಈ ನಡೆ ನೆಟ್ ನ್ಯೂಟ್ರಾಲಿಟಿಯ ಪ್ರತಿಪಾದಕರ ಅಸಮಾಧಾನಕ್ಕೆ ಗುರಿಯಾಗಿದೆ. ಇದು ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮೆಸೆಂಜರ್ ಸೇವೆಗಳನ್ನು ದುಬಾರಿಯಾಗಿಸುವ ಪ್ರಯತ್ನ ಎಂಬ ಟೀಕೆ ಕೇಳಿಬಂದಿದೆ. ಒಟಿಟಿ ವಲಯವನ್ನು ಟ್ರಾಯ್ ಪ್ರಸ್ತಾವನೆಗಳಿಂದ ಹೊರಗಿಟ್ಟರೆ ಅಥವಾ ವಿನಾಯಿತಿ ನೀಡಿದರೆ, ಅದೇ ನೆವವೊಡ್ಡಿ ಕಂಪನಿಗಳು ಈ ಸೇವೆಗಳಿಗೆ ದರ ಹೆಚ್ಚಿಸುವುದು ಖಚಿತ. ಈ ಸೇವೆಗಳಲ್ಲಿ ಕಂಪನಿಗಳು ವಾಯಿಸ್ ಕಾಲ್ ಸೌಲಭ್ಯವನ್ನೂ ನೀಡುತ್ತಿದ್ದು, ಇದರ ಈಗಿನ ದರ ಅಗ್ಗವಾಗಿದೆ. ಇದರಿಂದ ಆಗುತ್ತಿರುವ ನಷ್ಟ ಭರಿಸುವ ಚಿಂತನೆ ಕಂಪನಿಗಳದ್ದು. ನೆಟ್ ನ್ಯೂಟ್ರಾಲಿಟಿ ಎಂದರೇನು? ಎಲ್ಲರಿಗೂ ಸಮಾನವಾದ ಇಂಟರ್‌ನೆಟ್ ಸೇವೆ ಸಿಗಬೇಕು. ಇಂಟರ್‌ನೆಟ್ ಸೇವಾದಾತರು ಬಳಕೆದಾರ, ಕಂಟೆಂಟ್, ವೆಬ್‌ಸೈಟ್, ಪ್ಲಾಟ್‌ಫಾರಂ, ಆ್ಯಪ್‌ಗಳು, ಸಾಧನ, ಸಂವಹನದ ಮೋಡ್‌ಗಳಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. ಸೇವಾದಾತರು ಉದ್ದೇಶಪೂರ್ವಕವಾಗಿ ಕೆಲವು ವೆಬ್‌ಸೈಟ್‌ಗಳಿಗೆ ಹೆಚ್ಚಿನ ದರ ವಿಧಿಸುವುದು, ಬ್ಲಾಕ್ ಮಾಡುವುದು, ಸೇವೆಯ ವೇಗ ಕಡಿಮೆ ಮಾಡುವುದು ಮಾಡುವಂತಿಲ್ಲ. ಈ ಪದವನ್ನು ಹುಟ್ಟುಹಾಕಿದಾತ ಕೊಲಂಬಿಯಾ ಯೂನಿವರ್ಸಿಟಿಯ ಪ್ರೊ.ಟಿಮ್ ವು. ಅಮೆರಿಕ ಹಾಗೂ ಯುರೋಪ್‌ಗಳಲ್ಲಿ ಇಂಥ ಪ್ರಕರಣಗಳಲ್ಲಿ ಬಳಕೆದಾರರು ದನಿಯೆತ್ತಿದ ಬಳಿಕ, ಕಂಪನಿಗಳನ್ನು ನಿಯಂತ್ರಿಸುವ ಕಾನೂನುಗಳು ಸಿದ್ಧವಾದವು. ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿ 2015ರವರೆಗೂ ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ನಿಯಂತ್ರಿಸುವ ಕಾನೂನುಗಳು ಇರಲಿಲ್ಲ. 2014ರ ಡಿಸೆಂಬರ್‌ನಲ್ಲಿ ಏರ್‌ಟೆಲ್ ಕಂಪನಿ, ವಾಟ್ಸಾಪ್, ಸ್ಕೈಪ್‌ಗಳಲ್ಲಿ ತಾನು ಒದಗಿಸುವ ವಾಯಿಸ್ ಮೇಲ್ ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದಾಗಿ ಹೇಳಿತು. ಇದರಿಂದ ಬಳಕೆದಾರರು ಸಿಟ್ಟಿಗೆದ್ದರು. ಈ ತಾರತಮ್ಯವನ್ನು ನಿಯಂತ್ರಿಸುವಂತೆ ಆನ್‌ಲೈನ್ ಚಳುವಳಿ ಆರಂಭವಾಯಿತು. 2015ರಲ್ಲಿ ಫೇಸ್‌ಬುಕ್ ತಾನು ಫ್ರೀಬೇಸಿಕ್ಸ್‌ನ ಪರವಾಗಿರುವುದಾಗಿ ಹೇಳಿತು. ಫ್ರೀಬೇಸಿಕ್ಸ್ ಎಂಬುದು ಕೂಡ ತಾರತಮ್ಯವೇ. ಇದರಲ್ಲಿ ಬೇಸಿಕ್ ಸೌಲಭ್ಯಗಳು ಮಾತ್ರ ಉಚಿತವಾಗಿರುತ್ತವೆ; ಅದಕ್ಕಿಂತ ಹೆಚ್ಚಿನದು ಬೇಕಾದರೆ ಹೆಚ್ಚಿನ ಶುಲ್ಕ ತೆರಬೇಕು. ಜನ ಇದನ್ನೂ ವಿರೋಧಿಸಿದರು. ನಂತರ 2016ರ ಫೆಬ್ರವರಿಯಲ್ಲಿ, ದೇಶದಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ಕಾಪಾಡುವ ಕ್ರಾಂತಿಕಾರಕ ನಿರ್ಧಾರವನ್ನು ಟ್ರಾಯ್ ತೆಗೆದುಕೊಂಡಿತು. ಗ್ರಾಫಿಕ್ಸ್ ಗ್ಲೋಬಲ್ ಕನೆಕ್ಷನ್ ನೆಟ್ ನ್ಯೂಟ್ರಾಲಿಟಿ ಬಗ್ಗೆ ಬೇರೆ ದೇಶಗಳ ನಿಲುವು ಅಮೆರಿಕ * 2015ರ 'ಮುಕ್ತ ಇಂಟರ್‌ನೆಟ್ ಆದೇಶ'ದಿಂದ ಅಮೆರಿಕ ಇತ್ತೀಚೆಗೆ ಹಿಂದೆ ಸರಿದಿದೆ. ವೇಗದ ಲೈನ್‌ಗಳು, ಬ್ಲಾಕ್ ಮಾಡುವಿಕೆ, ಆದ್ಯತೆ ಪಾವತಿ, ವೇಗ ಏರಿಕೆ ಅಥವಾ ಇಳಿಕೆಗೆ ಅವಕಾಶವಿದೆ. * ಬೇಡಿಕೆಗಳಿಗೆ ಅನುಗುಣವಾಗಿ, ಪಾರದರ್ಶಕ ಕಾಯಿದೆಯನ್ನು ಪರಿಷ್ಕರಿಸಲು ಮುಂದಾಗಿದೆ. ಯುರೋಪ್ * ಟೆಲಿಕಾಂ ಸಿಂಗಲ್ ಮಾರ್ಕೆಟ್ ಕಾಯಿದೆಯ ಮೂಲಕ ನೆಟ್ ನ್ಯೂಟ್ರಾಲಿಟಿಯನ್ನು ಇಟ್ಟುಕೊಂಡಿದೆ. * ಇದನ್ನು ಜಾರಿಮಾಡಲು ಯುರೋಪಿನ ವಿದ್ಯುನ್ಮಾನ ಸಂವಹನ ನಿಯಂತ್ರಕರ ಸಂಸ್ಥೆ (ಬಿಇಆರ್‌ಇಸಿ) ತನ್ನ ಸದಸ್ಯರಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದು, ಅಂತರ್ಜಾಲ ಸೇವಾದಾರರು ವೇಗ ಹೆಚ್ಚಿಸುವುದು, ಇಳಿಸದಂತೆ ನಿಷೇಧಿಸಿದೆ. * ಕೆಲವು ವಿನಾಯಿತಿಗಳಿವೆ: ದೇಶದ ಐಕ್ಯತೆ ಹಾಗೂ ಭದ್ರತೆಗೆ ಸಂಬಂಧಿಸಿ ಕಾನೂನಿನ ಆದೇಶದ ಮೇರೆಗೆ ಜಾಲ ನಿರ್ಬಂಧ ಮಾಡಬಹುದು. ಒತ್ತಡ ಬಗೆಹರಿಸಲು, ನಾನಾ ವಿಧದ ನೆಟ್ ಟ್ರಾಫಿಕ್ ಸಮಾನ ಆದ್ಯತೆ ಪಡೆಯುವಂತೆ ಮಾಡಬಹುದು. *'ಶೂನ್ಯ ರೇಟಿಂಗ್' ಕ್ರಮವನ್ನು ಮರುಪರಿಶೀಲಿಸುವಂತೆ ನಿಯಂತ್ರಕರಿಗೆ ತಿಳಿಸಲಾಗಿದೆ. * ಬ್ಲಾಕ್ ಮಾಡುವ, ಸೇವೆಗಳ ವೇಗ ಇಳಿಸುವ ಇಂಟರ್ನೆಟ್ ಸೇವಾದಾರರನ್ನು ನಿರ್ಬಂಧಿಸಲಾಗುತ್ತದೆ. * ಪಾರದರ್ಶಕವಾದ, ತಾರತಮ್ಯವಿಲ್ಲದ, ಪ್ರಮಾಣಬದ್ಧವಾದ ರೀತಿಯಲ್ಲಿ ಸೇವೆ ಒದಗಿಸುವಂತೆ ತಾಕೀತು ಮಾಡಲಾಗುತ್ತದೆ. ಫ್ರಾನ್ಸ್ *ಯುರೋಪಿಯನ್ ಒಕ್ಕೂಟದ ಸದಸ್ಯನಾಗಿರುವುದರಿಂದ, ಒಕ್ಕೂಟದ ನಿಯಮಗಳನ್ನು ಪಾಲಿಸುತ್ತದೆ. * ಟೆಲಿಕಾಂ ಕಂಪನಿಗಳು ಸ್ಪಷ್ಟವಾದ, ನಿರ್ದಿಷ್ಟ ಹಾಗೂ ಪ್ರಸ್ತುತವಾದ ಮಾಹಿತಿಗಳನ್ನು ಇಂಟರ್ನೆಟ್ ಸೇವೆಯ ಬಗ್ಗೆ ನೀಡುವಂತೆ ನಿಯಂತ್ರಕ ಮಂಡಳಿ ವಿಧಿಸಿದೆ. ಬ್ರೆಜಿಲ್ * ಡಾಟಾ ಪ್ಯಾಕೇಜ್‌ಗಳ ಕಂಟೆಂಟ್‌ಗಳನ್ನು ಬ್ಲಾಕ್ ಮಾಡುವುದು, ಫಿಲ್ಟರ್ ಮಾಡುವುದು, ಮಾನಿಟರ್ ಮಾಡುವುದು, ವಿಶ್ಲೇಷಿಸುವುದನ್ನು ನಿಷೇಧಿಸಿದೆ. * ಅಂತರ್ಜಾಲ ಸೇವೆಯಲ್ಲಿ ಮಾಡುವ ಯಾವುದೇ ತಾರತಮ್ಯವು ಕಾನೂನು ಕ್ರಮಕ್ಕೆ ಎಡೆ ಮಾಡಿಕೊಡುತ್ತದೆ. ರಾಷ್ಟ್ರೀಯ ಟೆಲಿಕಾಂ ಏಜೆನ್ಸಿ ಹಾಗೂ ಇಂಟರ್‌ನೆಟ್ ಚಾಲನಾ ಸಮಿತಿಗಳು ಇದಕ್ಕೆ ಬಾಧ್ಯಸ್ಥರಾಗಿವೆ.
ನಾಮಬಲ ಭೌಗೋಳಿಕ ಸೂಚ್ಯಂಕ
ಭೌಗೋಳಿಕ ಸೂಚ್ಯಂಕ ಮಾನ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಾಂತ್ಯವೊಂದರ ಉತ್ಪನ್ನದ ಗುಣಗೌರವಗಳನ್ನು ರಕ್ಷಿಸುವ, ಅನ್ಯರಿಂದ ಅದರ ದುರ್ಬಳಕೆಯನ್ನು ತಡೆಯುವ ಬಗ್ಗೆ ಹೆಚ್ಚೆಚ್ಚು ಮಂದಿ ಜಾಗೃತರಾಗುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ. ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಹಾಗೂ ಒಡಿಸಾ ರಾಜ್ಯಗಳ ನಡುವೆ ಕುತೂಹಲಕಾರಿ ವಿಚಾರದ ಕದನವೊಂದು ನಡೆಯಿತು. 'ರಸಗುಲ್ಲಾ' ನಮ್ಮದೇ ನೆಲದ ಸಿಹಿತಿನಿಸು ಎಂದು ಎರಡೂ ರಾಜ್ಯಗಳು ಕಲಹ್ಕಕಿಳಿದವು. ಎರಡೂ ರಾಜ್ಯಗಳ ನಡುವೆ ಈ ವಿಚಾರದಲ್ಲಿ ಎರಡು ವರ್ಷಗಳ ಹಿಂದಿನಿಂದಲೇ ಈ ಕಲಹವಿದೆ. ನಮ್ಮಲ್ಲಿನ ಪುರಿ ಜಗನ್ನಾಥನ ರಥಯಾತ್ರೆಯಲ್ಲಿ 12ನೇ ಶತಮಾನದಿಂದಲೇ ರಸಗುಲ್ಲವನ್ನು ಪ್ರಸಾದ ಎಂದು ಹಂಚಲಾಗುತ್ತಿದೆ ಎಂದು ಒಡಿಶಾ ವಾದಿಸಿತು; 1868ರಲ್ಲಿ ಕೋಲ್ಕೊತಾದಲ್ಲಿ ನವೀನ್‌ಚಂದ್ರದಾಸ್ ಎಂಬವರು ರಸಗುಲ್ಲಾವನ್ನು ಆವಿಷ್ಕರಿಸಿದರು ಎಂದು ಬಂಗಾಳ ವಾದಿಸಿತು. ಈ ವಾದ ವಿವಾದಗಳು ಸಾಮಾಜಿಕ ಜಾಲತಾಣ, ಸುದ್ದಿಮಾಧ್ಯಮಗಳಲ್ಲೂ ಭರ್ಜರಿಯಾಗಿ ನಡೆದವು. ಇದರಿಂದಾಗಿ ಜನರ ಕಿವಿಗೆ 'ಭೌಗೋಳಿಕ ಸೂಚ್ಯಂಕ' (ಜಿಯೊಗ್ರಫಿಕಲ್ ಇಂಡಿಕೇಶನ್-ಜಿಐ) ಎಂಬ ಪದ ಮತ್ತೆ ಮತ್ತೆ ಕಿವಿಗೆ ಬೀಳುವಂತಾಯಿತು. ಇತ್ತೀಚೆಗೆ, ಕರ್ನಾಟಕದ 'ವಿಜಯಪುರ ನಿಂಬೆ'ಗೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಕೊಡಿಸುವ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಹೇಳಿಕೊಂಡಿದೆ. ಈ ನಿಂಬೆ ವಿಜಯಪುರ ಪ್ರಾಂತ್ಯಕ್ಕೇ ವಿಶಿಷ್ಟವಾಗಿದ್ದು, ವಿಶಿಷ್ಟ ಪರಿಮಳ, ಸ್ವಾದ ಹಾಗೂ ಸ್ಥಾನಮಾನ ಪಡೆದಿದೆ. ಜಿಐ ಮಾನ್ಯತೆ ಪಡೆಯಲು ಬೇಕಿರುವುದು ಇದೇ. ಆದರೆ ಇದು ಇಲ್ಲಿಗೇ ವಿಶಿಷ್ಟವಾದುದು ಎಂದು ಸಾಧಿಸುವ ಸಾಕ್ಷ್ಯಗಳೂ ಬೇಕು. ಪೇಟೆಂಟ್, ಕಾಪಿರೈಟ್‌ನಂತೆಯೇ ಜಿಐ ಕೂಡ ಒಂದು ಬೌದ್ಧಿಕ ಹಕ್ಕುಸ್ವಾಮ್ಯ. ಆದರೆ ಇವುಗಳಷ್ಟು ಪರಿಚಿತವಲ್ಲ. ಇದರ ಮೂಲ 1883ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಔದ್ಯಮಿಕ ಹಕ್ಕುಗಳ ಸಂರಕ್ಷಣೆಯ ಸಮಾವೇಶದಲ್ಲಿದೆ. ''ಔದ್ಯಮಿಕ ಹಕ್ಕುಸ್ವಾಮ್ಯದ ಉದ್ದೇಶವೆಂದರೆ, ಪೇಟೆಂಟ್, ಯುಟಿಲಿಟಿ ಮಾದರಿ, ಔದ್ಯಮಿಕ ವಿನ್ಯಾಸ, ಟ್ರೇಡ್‌ಮಾರ್ಕ್, ಸೇವಾಗುರುತು, ಮೂಲಗಳ ನಿರ್ದಿಷ್ಟತೆಗಳನ್ನು ಕಾಪಾಡುವುದು ಹಾಗೂ ಅನಾರೋಗ್ಯಕರ ಪೈಪೋಟಿಗಳ ಹತ್ತಿಕ್ಕುವಿಕೆ.'' ಆದರೆ ಇದು ಬೌದ್ಧಿಕ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಅಂಶವಾಗಿ ಜಾರಿಗೆ ಬಂದುದು 1994ರಲ್ಲಿ. ಜಿಐ ಎಂದರೆ ವ್ಯಾಖ್ಯೆಯ ಪ್ರಕಾರ, ''ಒಂದು ವಸ್ತು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಹುಟ್ಟಿದ್ದು, ಅಲ್ಲಿನ ನಿರ್ದಿಷ್ಟ ಗುಣಮಟ್ಟ, ಗೌರವ, ಸ್ಥಾನಮಾನ ಮತ್ತು ಇತರ ಗುಣಲಕ್ಷಣಗಳನ್ನು ಹೊಂದಿದ್ದಾಗ ಅದನ್ನು ಆ ಭೌಗೋಳಿಕ ವ್ಯಾಪ್ತಿಯ ಮೂಲದ್ದೆಂದು ಗುರುತಿಸಬಹುದು.'' ನಮ್ಮ ದೇಶವು 1999ರಲ್ಲಿ ತನ್ನ ಭೌಗೋಳಿಕ ಸೂಚ್ಯಂಕ ನಿಯಮಗಳನ್ನು ರೂಪಿಸಿಕೊಂಡಿತು. ನಾಲ್ಕು ವರ್ಷ ಬಳಿಕ ಅದು ಜಾರಿಗೆ ಬಂತು. ಇದುವರೆಗೆ ಭಾರತ ಸರಕಾರ 303 ಜಿಐಗಳನ್ನು ನೀಡಿದೆ. ಅದರಲ್ಲಿ ಸ್ಕಾಚ್, ಕೊನ್ಯಾಕ್‌ನಂಥ 11 ವಿದೇಶಿ ಉತ್ಪನ್ನಗಳೂ ಇವೆ. ಇದರಲ್ಲಿ 29 ಉತ್ಪನ್ನಗಳ ಹೆಸರು ಹಾಗೂ ಲೋಗೋ ಎರಡಕ್ಕೂ ಬೇರೆ ಬೇರೆ ಜಿಐಗಳಿವೆ. ಡಾರ್ಜಿಲಿಂಗ್ ಟೀ, ಕಾಶ್ಮೀರದ ಪಶ್ಮಿನಾ, ಲಖನೌನ ಚಿಕಾನ್ ಕಲೆ, ಹೈದರಾಬಾದ್‌ನ ಹಲೀಮ್, ಮಹಾರಾಷ್ಟ್ರದ ವರ್ಲಿ ಚಿತ್ರಕಲೆಗಳು ಹೀಗೆ ಜಿಐ ಗಳಿಸಿಕೊಂಡಿರುವ ಕೆಲವು ಸುಪ್ರಸಿದ್ಧ ಉತ್ಪನ್ನಗಳು. ಅದರಲ್ಲೂ ಕರ್ನಾಟಕವೇ ಅತಿ ಹೆಚ್ಚು ಜಿಐ ಹೊಂದಿದೆ ಎಂಬುದು ನಮ್ಮ ಹೆಮ್ಮೆ. ದೇಶದ ಜಿಐಗಳ ಹತ್ತನೇ ಒಂದು ಭಾಗ ನಮ್ಮಲ್ಲೇ ಇದೆ. ಮೊದಮೊದಲು ಬೆಳೆಗಾರರು, ಅಥವಾ ಉತ್ಪನ್ನಗಳ ತಯಾರಕರು ಅಥವಾ ಸರಕಾರದ ಒಂದು ಇಲಾಖೆಯವರು ಜಿಐಗೆ ಬೇಡಿಕೆ ಸಲ್ಲಿಸುತ್ತಿದ್ದರು. ಉದಾಹರಣೆಗೆ, ಪಶ್ಚಿಮ ಬಂಗಾಳದಿಂದ ರಸಗುಲ್ಲಾ ಮಾನ್ಯತೆಗೆ ಬೇಡಿಕೆ ಸಲ್ಲಿಸಿದ್ದು ಅಲ್ಲಿನ ಆಹಾರ ಸಂಸ್ಕರಣ ಇಲಾಖೆಯಡಿ ಒಂದು ಸಂಸ್ಥೆ. ಒಂದು ಉತ್ಪನ್ನಕ್ಕೆ ಸೇರಿದಂತೆ ಹರಿದು ಹಂಚಿಹೋಗಿರುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಒಟ್ಟು ಸೇರಿಸುವಲ್ಲಿ ಜಿಐ ಮಾನ್ಯತೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಆಕ್ಸ್‌ಫರ್ಡ್‌ನ ಬೌದ್ಧಿಕ ಆಸ್ತಿ ಕಾನೂನು ವಿವಿಯ ಪ್ರೊ.ದೇವಗಂಗಜಿ ಹೇಳುತ್ತಾರೆ. ಮಾನ್ಯತೆ ಪಡೆಯಲು ಒಂದರಿಂದ ಮೂರು ವರ್ಷ ಹಿಡಿಸಬಹುದು. ರಸಗುಲ್ಲಾಕ್ಕೆ ಎರಡು ವರ್ಷ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಮಾನ್ಯತೆ 10 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ನಂತರ ಅದನ್ನು ನವೀಕರಿಸಲಾಗುತ್ತದೆ. ಒಮ್ಮೆ ಒಬ್ಬರಿಗೆ ಜಿಐ ಮಾನ್ಯತೆ ದೊರೆತರೆ, ಹೊರಗಿನವರು ಅದನ್ನು ಅದೇ ಹೆಸರಿನಲ್ಲಿ ತಯಾರಿಸುವುದು ಮತ್ತು ಮಾರಾಟ ಮಾಡುವುದು ಕಾನೂನು ಬಾಹಿರವಾಗುತ್ತದೆ. ''ಜಿಐಗಳಿರುವುದು ಬರಿಯ ವಾಣಿಜ್ಯ ಉದ್ದೇಶಗಳಿಗಲ್ಲ. ಅದು ಆಯಾ ಭಾಗದ ಜನಜೀವನದ, ಸಂಸ್ಕೃತಿಯ, ಪರಂಪರೆಯ, ಬದುಕಿನ ರೀತಿಯ ಭಾಗ,'' ಎನ್ನುತ್ತಾರೆ ಕೋಲ್ಕೊತಾದ ಪಶ್ಚಿಮ ಬಂಗಾಳ ರಾಷ್ಟ್ರೀಯ ವಿವಿಯ ಪ್ರಾಧ್ಯಾಪಕ ಶ್ರೀನಿವಾಸುಲು ಎನ್.ಎಸ್. ಅರ್ಜಿದಾರರ ಬೇಡಿಕೆಯನ್ನು ಸಮರ್ಥಿಸುವ ಬಲವಾದ ಸಾಕ್ಷ್ಯಗಳಿಲ್ಲದಿದ್ದರೆ ಮಾನ್ಯತೆ ಸಿಗುವುದಿಲ್ಲ. ಜಿಐ ನೋಂದಣಿ ವಿಭಾಗದ ಪರೀಕ್ಷಕ ಪ್ರಶಾಂತ್‌ಕುಮಾರ್ ಭೈರಪ್ಪನವರ್ ಹೇಳುವಂತೆ, ''ಪುಸ್ತಕಗಳಲ್ಲಿ, ಸರಕಾರಿ ಗೆಜೆಟ್‌ಗಳಲ್ಲಿ, ವೈಜ್ಞಾನಿಕ ಸಂಶೋಧನ ಕೃತಿಗಳಲ್ಲಿ ಇರುವ ಉಲ್ಲೇಖಗಳನ್ನು ಒಂದು ಪ್ರಾಂತ್ಯದ ಜೊತೆ ಆ ವಸ್ತುವಿನ ನಂಟಿನ ಸಾಕ್ಷ್ಯಗಳಾಗಿ ಮಂಡಿಸಬಹುದು.'' ''ರಸಗುಲ್ಲಾ ಎಂಬುದೊಂದು ಸಾಮಾನ್ಯ ಹೆಸರು. ಆದರೆ ತಾವು ಉತ್ಪಾದಿಸುತ್ತಿರುವ ರಸಗುಲ್ಲಾದ ಇತಿಹಾಸ, ಗುಣಮಟ್ಟ, ಪ್ರಾದೇಶಿಕ ಸ್ಥಾನಮಾನಕ್ಕೆ ಸಂಬಂಧಿಸಿ ಅದರ ಹಿಂದೆ ಅಥವಾ ಮುಂದೆ ತಮ್ಮ ಹೆಸರನ್ನು ಸೇರಿಸಿ ಯಾರು ಬೇಕಾದರೂ ಜಿಐಗೆ ಬೇಡಿಕೆ ಸಲ್ಲಿಸಬಹುದು. ಒಡಿಶಾ ಕೂಡ,'' ಎಂಬುದು ತಜ್ಞರ ಮಾತು. ಅಳಿವಿನಂತಿನ ತಂತ್ರಜ್ಞಾನ ಇಕತ್ ಬಗ್ಗೆ ತೆಲಂಗಾಣ ಹಾಗೂ ಒಡಿಶಾಗಳೆರಡೂ ಮಾನ್ಯತೆ ಹೊಂದಿವೆ. ರಸಗುಲ್ಲಾದ ಮಾನ್ಯತೆ ಪಡೆಯುವುದರ ಹಿಂದೆ ಪಶ್ಚಿಮ ಬಂಗಾಳ, ಅದರ ಐತಿಹಾಸಿಕ ಉಲ್ಲೇಖಗಳನ್ನಷ್ಟೇ ಉದಾಹರಿಸಬೇಕಾಗಿ ಬಂತು. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಂಗಡಿಗಳು ಪ್ರತಿನಿತ್ಯ 200 ಕೋಟಿ ರಸಗುಲ್ಲಗಳನ್ನು ಮಾರುತ್ತವೆ ಎಂದು ಅರ್ಜಿಯಲ್ಲಿ ತಿಳಿಸಿತ್ತು. ''ನಮ್ಮದು ಶುದ್ಧ ದನದ ಹಾಲಿನಿಂದ ಮಾಡುವ ರಸಗುಲ್ಲಾ, ಉತ್ತರ ಭಾರತದ ಇತರ ಕಡೆ ಮಾಡುವ ರಸಗುಲ್ಲಾ ಎಮ್ಮೆಯ ಹಾಲಿನಿಂದ ಮಾಡುತ್ತಾರೆ,'' ಎಂದದು ಹೇಳಿದೆ. ಪಶ್ಚಿಮ ಬಂಗಾಳದ ಇನ್ನೊಂದು ಉತ್ಪನ್ನ ಡಾರ್ಜಿಲಿಂಗ್ ಟೀ, ಜಿಐ ಮಾನ್ಯತೆ ಪಡೆದ ಮೊತ್ತಮೊದಲ ಉತ್ಪನ್ನಗಳಲ್ಲಿ ಒಂದು. 2004ರಲ್ಲಿ ಇದರ ಹೆಸರು ಹಾಗೂ ಲೋಗೋಗೆ ಮಾನ್ಯತೆ ದೊರೆಯಿತು. ಇದಕ್ಕೆ ಯುರೋಪಿಯನ್ ಒಕ್ಕೂಟದಲ್ಲೂ ಜಿಐ ಮಾನ್ಯತೆ ಇದೆ. ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನವು, ತಿರುಪತಿ ಲಡ್ಡುಗಳಿಗೆ ಜಿಐ ಮಾನ್ಯತೆ ಪಡೆದಿದೆ. 2014ರಲ್ಲಿ ಚೆನ್ನೈಯ ಮಳಿಗೆಯೊಂದು ಈ ಹೆಸರಿನಲ್ಲಿ ಲಡ್ಡು ಮಾರಲು ಮುಂದಾದಾಗ ಅದಕ್ಕೆ ತಡೆಯಾಜ್ಞೆ ತಂದಿತು. ಹೀಗೆ ಕಾನೂನಾತ್ಮಕ ಲಾಭಗಳೂ ಇವೆ. ವಾಣಿಜ್ಯವಾಗಿಯೂ ಲಾಭಗಳಿವೆ. ಇಂದು ಡಾರ್ಜಿಲಿಂಗ್ ಟೀ ತನ್ನ ಹೆಸರಿನಿಂದಲೇ ಖ್ಯಾತಿ ಪಡೆದಿದೆ. ಹಾಗೆಯೇ 'ಮೈಸೂರು ಅಗರಬತ್ತಿ' ಮಾನ್ಯತೆಯನ್ನು ಅಖಿಲ ಭಾರತ ಅಗರಬತ್ತಿ ತಯಾರಕರ ಒಕ್ಕುಟ ಪಡೆದಿದೆ. ಈ ಮೈಸೂರು ಅಗರಬತ್ತಿಯೊಂದೇ ಒಟ್ಟಾರೆ ಅಗರಬತ್ತಿ ಉದ್ಯಮದ 20 ಶೇಕಡದಷ್ಟನ್ನು ಆವರಿಸಿದೆ.
ಸಮಗ್ರ ಜೀವನ ವ್ಯವಸ್ಥೆ ರೂಪಿಸಿದ ಅದ್ಭುತ ಪ್ರವಾದಿ
ಮುಹಮ್ಮದ್ ಆರಿಫ್ ಪಡುಬಿದ್ರಿ 'ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಸರ್ವಲೋಕಗಳಿಗೆ ಅನುಗ್ರಹವನ್ನಾಗಿ ಕಳುಹಿಸಲಾಗಿದೆ' ಎಂದು ಪವಿತ್ರ ಕುರಾನ್ ಹೇಳುತ್ತದೆ. ಅವರು ಮಾನವರಿಗೆ ಮಾತ್ರ ಅನುಗ್ರಹವಲ್ಲ, ಪ್ರಾಣಿ- ಪಕ್ಷಿಗಳಿಗೂ, ಸಸ್ಯ- ಲತಾದಿಗಳಿಗೂ ಅನುಗ್ರಹವಾಗಿದ್ದಾರೆ. ತಮ್ಮ ಪ್ರೀತಿ, ಮಮತೆ ಮತ್ತು ಶಾಂತಿಯ ಸಂದೇಶಗಳ ಮೂಲಕ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿ, ಅದನ್ನು ಇಡೀ ಜಗತ್ತಿಗೆ ಪಸರಿಸಿರುವ ಅದ್ಭುತ ಸಂತನಾಗಿ ಗುರುತಿಸಿಕೊಂಡಿದ್ದಾರೆ. ಇಂದಿನ ಆಧುನಿಕ ಜಗತ್ತು ಕೂಡಾ ಮೇಲು- ಕೀಳು ಎಂಬ ವರ್ಗೀಯ, ಜನಾಂಗೀಯ ಅಸಮಾನತೆ, ಲಿಂಗ ತಾರತಮ್ಯಗಳ ಮೂಲಕ ಎದುರಾಳಿ ಸಮಾಜದ ಮೇಲೆ ಶೋಷಣೆ ಮಾಡುತ್ತಿದೆ. ಅದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಕ್ರಿಸ್ತ ಶಕ ಆರನೇ ಶತಮಾನದಲ್ಲೇ ಇಂಥ ಎಲ್ಲ ರೀತಿಯ ಅಸಮಾನತೆಗಳನ್ನು ತೊಡೆದು ಹಾಕಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಿರುವ ಮಹಾನ್ ನಾಯಕನಾಗಿ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಗಮನ ಸೆಳೆಯುತ್ತಾರೆ. ಅರಬ್ ಸಾಮ್ರಾಜ್ಯದ ಮಕ್ಕಾ ನಗರದ ಅಜ್ಞಾನ ಕಾಲದ ಅಂಧಕಾರದ ಮಧ್ಯೆ, ಬೆಳಕಾಗಿ ರಬೀವುಲ್ ಅವ್ವಲ್ ತಿಂಗಳ 12ರಂದು (ಕ್ರಿ.ಶ.571) ಪ್ರವಾದಿ ಮುಹಮ್ಮದ್ ಅವರ ಜನನವಾಗುತ್ತದೆ. ಎಲ್ಲೆಡೆ ಅಧರ್ಮ, ಅನ್ಯಾಯ, ಶೋಷಣೆ ತಾಂಡವವಾಡುತ್ತಿದ್ದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ ಜನರಿಗೆ ಮರೆತು ಹೋಗಿದ್ದ ನೈಜ ಸಂದೇಶಗಳನ್ನು ಪ್ರಚುರಪಡಿಸಿ, ಇಸ್ಲಾಮ್ ಎಂಬ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಅವರ ಜನ್ಮದಿನವನ್ನು ಈದ್ ಮಿಲಾದ್ ಅಥವಾ ಮಿಲಾದುನ್ನಬಿ ಹೆಸರಿನಲ್ಲಿ ಪ್ರವಾದಿ ಸಂದೇಶಗಳನ್ನು ಸಾರಲು ವಿನಿಯೋಗಿಸಲಾಗುತ್ತದೆ. ಇಸ್ಲಾಮಿನ ಪ್ರಕಾರ, ಒಬ್ಬ ಪ್ರವಾದಿಯೇ ಜಗತ್ತಿನ ಪ್ರಥಮ ಪುರುಷ. ಜಗತ್ತು ದಾರಿ ತಪ್ಪಿದಾಗಲೆಲ್ಲಾಇಂಥ ಒಬ್ಬೊಬ್ಬ ಪ್ರವಾದಿಗಳು ಬಂದಿದ್ದಾರೆ. ಅವರ ಸಂಖ್ಯೆ ಒಂದು ಲಕ್ಷಕ್ಕಿಂತಲೂ ಹೆಚ್ಚು. ಆ ಪೈಕಿ, ಪ್ರವಾದಿ ಮುಹಮ್ಮದ್ ಕೊನೆಯವರು. ಅವರ ನಂತರ ಬೇರೊಬ್ಬ ಪ್ರವಾದಿ ಬರಲಾರರು. ಹಾಗಾಗಿ ಅವರ ಸಂದೇಶ ಒಂದು ಪ್ರದೇಶ ಅಥವಾ ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ, ಇಡೀ ಜಗತ್ತಿಗೆ ಮತ್ತು ಲೋಕಾಂತ್ಯದ ವರೆಗೂ ಮುಂದುವರಿಯಲಿದೆ. ಸ್ತ್ರೀ ವಿಮೋಚಕ: ಹೆಣ್ಣು ಮಗು ಹುಟ್ಟುವುದೇ ಶಾಪ, ಹೆಣ್ಣು ಮಗುವಿಗೆ ಜನ್ಮ ಕೊಡುವುದೇ ಕಳಂಕ ಎಂಬಂಥ ಕಾಲವದು. ಹೆಣ್ಣು ಮಗು ಹುಟ್ಟಿದ ತಕ್ಷಣ ಜೀವಂತ ಹೂಳಲಾಗುತ್ತಿತ್ತು. ಹೆಣ್ಣು ಮಗು ಕೂಡಾ ನಿಮ್ಮಂತೆಯೇ ಇರುವ ಮನುಷ್ಯ ಜೀವಿ. ಅದನ್ನು ಪ್ರೀತಿಯಿಂದ ಸಾಕಿ ಸಲಹಿ, ಉತ್ತಮ ಶಿಕ್ಷ ಣ ನೀಡಿ ಬೆಳೆಸುವುದೇ ನಿಮ್ಮ ಮೋಕ್ಷ ದ ದಾರಿ ಎಂದು 1492 ವರ್ಷಗಳ ಹಿಂದೆಯೇ ಸಾರಿದವರು ಪ್ರವಾದಿ ಮುಹಮ್ಮದ್. ಹೆಣ್ಣು ಅಥವಾ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಣ್ಣು- ಗಂಡಿನ ಮಧ್ಯೆ ತಾರತಮ್ಯ ಇರಬಾರದು. ಹೆಣ್ಣಿಗೂ ವ್ಯಕ್ತಿತ್ವ, ಅಸ್ತಿತ್ವ ಎಂಬುದಿದೆ. ಆಕೆ ಶಾಪವಲ್ಲ, ಅನುಗ್ರಹ ಎಂಬ ಬೋಧನೆ ಮೂಲಕ ಜನರ ಕಣ್ಣು ತೆರೆಸಿದರು. ನಮಗೂ ಒಂದು ಹೆಣ್ಣು ಹುಟ್ಟಲಿ ಎಂದು ಜನರು ಪ್ರಾರ್ಥಿಸುವಂಥ ಕ್ರಾಂತಿಕಾರಿ ಬದಲಾವಣೆ ತಂದಿರುವುದು ಇತಿಹಾಸ. ಗಂಡು- ಹೆಣ್ಣು ಎಂಬ ತಾರತಮ್ಯ ಇಲ್ಲದೆ ಶಿಕ್ಷಣ ಕೊಡಿ. ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿ, ಕ್ರಯವಿಕ್ರಯಗಳನ್ನು ಮಾಡಿಸಿ. ಆಸ್ತಿಯಲ್ಲಿ ಆಕೆಗೂ ಕಡ್ಡಾಯವಾಗಿ ಪಾಲು ಕೊಡಿ ಎಂದು ಸಾರಿದ ಪ್ರವಾದಿ, ಮಹಿಳೆಯರಿಗೆ ಪ್ರಾರ್ಥನೆ ಅವಕಾಶ ಇಲ್ಲದ ಸಂದರ್ಭದಲ್ಲಿ, ಜಗತ್ತಿನ ಎರಡು ಶ್ರೇಷ್ಠ ಮಸೀದಿಗಳಾದ ಮಕ್ಕಾ ಮತ್ತು ಮದೀನಾದಲ್ಲಿ ನಮಾಝಿನ ವ್ಯವಸ್ಥೆ ಮಾಡಿದ್ದು, ಇಂದಿಗೂ ಅಲ್ಲಿ ಸ್ತ್ರೀ ಪುರುಷರು ಒಟ್ಟಿಗೆ ನಮಾಝ್ ಮಾಡುತ್ತಿರುವುದು ಇಸ್ಲಾಮ್ ತಂದ ಕ್ರಾಂತಿಕಾರಿ ಬದಲಾವಣೆ ಅಲ್ಲದೆ ಇನ್ನೇನು? ಸ್ತ್ರೀಕುಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಪ್ರವಾದಿ ಪರಿಚಯಿಸಿದರು. ವಿವಾಹ ಸಂದರ್ಭದಲ್ಲಿ ವಧುದಕ್ಷಿಣೆ ಹೆಣ್ಣಿನ ಹಕ್ಕು ಎಂದು ಪರಿಗಣಿಸಿದರು. ತಾಯಿ, ಸಹೋದರಿ, ಪತ್ನಿ, ಪುತ್ರಿ ಎಂಬ ನೆಲೆಯಲ್ಲಿ ಹೆಣ್ಣಿನೊಂದಿಗೆ ಜನರ ವ್ಯವಹಾರ ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟರು. ತಾಯಿಯ ಪಾದದಡಿ ಸ್ವರ್ಗವಿದೆ ಎಂಬ ಮಾತಿನ ಮೂಲಕ ತಾಯಂದಿರಿಗೆ ಗೌರವ ತಂದುಕೊಟ್ಟರು. 'ಕಾರ್ಮಿಕನೊಬ್ಬ ಕೆಲಸ ಮುಗಿಸಿ, ಆತನ ಬೆವರು ಆರುವ ಮೊದಲೇ ಕೂಲಿ ಕೊಟ್ಟು ಬಿಡಿ' ಎನ್ನುವ ಮೂಲಕ ಕಾರ್ಮಿಕನ ಹಕ್ಕು ರಕ್ಷಣೆ ಮಾಡಿದರು. ಮಾಲೀಕರಿಂದ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆಗೆ ಇತಿಶ್ರೀ ಹಾಡಿದರು. ಮಾಲೀಕ ಮತ್ತು ಕಾರ್ಮಿಕರ ಮಧ್ಯೆ ಸೌಹಾರ್ದ ಸಂಬಂಧ ಇರಬೇಕು. ಇಬ್ಬರಿಗೂ ಜವಾಬ್ದಾರಿ ಇದೆ. ಇಬ್ಬರೂ ಅದನ್ನು ನಿಭಾಯಿಸಬೇಕು. ಎಲ್ಲಿಯೂ ಸಂಘರ್ಷಕ್ಕೆ ಅವಕಾಶ ಇಲ್ಲ ಎಂದು ಸಾರಿದರು. ಧಾರ್ಮಿಕ ಸಹಿಷ್ಣುತೆ: ಧರ್ಮದ ವಿಷಯದಲ್ಲಿ ಜನರನ್ನು ಪೀಡಿಸುತ್ತಿದ್ದ, ಶೋಷಿಸುತ್ತಿದ್ದ ಕಾಲದಲ್ಲಿ ದೇವರ ಬಳಿಗೆ ಹೋಗಲು ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ. ನಿಮ್ಮ ಎಲ್ಲ ಆಗುಹೋಗುಗಳನ್ನು ತಿಳಿಯುವ ದೇವನ ಮುಂದೆ ಯಾರು ನಿಷ್ಕಳಂಕ ಆರಾಧನೆ ಮಾಡುತ್ತಾನೋ ಆತ ಶ್ರೇಷ್ಠ. ನಿಮ್ಮ ನೋವು- ನಲಿವು, ದುಃಖ- ಸಂತೋಷಗಳಲ್ಲಿ ಆತನನ್ನು ಮಾತ್ರ ಕರೆದು ಪ್ರಾರ್ಥಿಸಿ ಎನ್ನುವ ಮೂಲಕ ಧಾರ್ಮಿಕ ಶೋಷಣೆಗಳಿಂದ ಜನರನ್ನು ಪಾರು ಮಾಡಿದರು. ಜಗತ್ತಿನಲ್ಲಿ ಯಾರೂ ಯಾರ ದಾಸರಲ್ಲ. ಯಾರೂ ಮೇಲು- ಕೀಳಲ್ಲ. ದೇವಭಯ ಮತ್ತು ಸಚ್ಚಾರಿತ್ರ್ಯ ಇದ್ದವರು ಮಾತ್ರ ದೇವನ ಎದುರು ಶ್ರೇಷ್ಠರು ಎನ್ನುವ ಮೂಲಕ ಆಗಿನ ಅರಬರು, ಅರಬೇತರರಿಗಿಂತ ಶ್ರೇಷ್ಠರು ಎಂಬ ತಾರತಮ್ಯವನ್ನು ಹೊಸಕಿ ಹಾಕಿ, ಸಾಮಾಜಿಕ ನ್ಯಾಯದ ಪ್ರತಿಪಾದಕರಾದರು. ಪ್ರವಾದಿಯ ಆಪ್ತರಾಗಿದ್ದ ಅಬೂದರ್ರ್ ಗಿಫ್ಫಾರಿ ಎಂಬವರು ಇಥಿಯೋಪಿಯಾದ ಗುಲಾಮ ಬಿಲಾಲ್ ಬಿನ್ ರಬಾಹ ಅವರನ್ನು ಕರಿಯನ ಮಗನೇ ಎಂದು ಎಂದು ಮೂದಲಿಸಿದನ್ನು ತಿಳಿದು, ಕ್ಷಮೆ ಯಾಚಿಸಲು ಹೇಳಿದ್ದರು. ಮುಂದೆ ಮಕ್ಕಾ ವಿಜಯದ ಬಳಿಕ ಇದೇ ಕರಿಮ ಗುಲಾಮ ಬಿಲಾಲ್ ಅವರನ್ನು ಪವಿತ್ರ ಕಾಬಾ ಭವನದ ಮೇಲೆ ಹತ್ತಿ ಪ್ರಾರ್ಥನೆಗೆ ಕರೆ ನೀಡುವ ಜವಾಬ್ದಾರಿ ಕೊಟ್ಟು ವರ್ಣ ವ್ಯವಸ್ಥೆಯ ತಾರತಮ್ಯ ನಾಶಪಡಿಸಿರುವುದು ಇತಿಹಾಸ ಪ್ರಸಿದ್ಧ ಘಟನೆ. ಇಂದಿಗೂ ಮಕ್ಕಾದ ಕಾಬಾ ಸುತ್ತ ಪ್ರದಕ್ಷಿಣೆ ಅಥವಾ ಯಾವುದೇ ಮಸೀದಿಗಳ ಪ್ರಾರ್ಥನೆ ವೇಳೆ ಉಚ್ಛ- ನೀಚ ಎಂಬ ಯಾವುದೇ ತಾರತಮ್ಯ ಇಲ್ಲ. ಮಸೀದಿಯಲ್ಲಿ ಎಲ್ಲರೂ ಸಮಾನರು. ಮನುಷ್ಯನ ಹುಟ್ಟು- ಸಾವಿನ ನಡುವಿನ ಎಲ್ಲ ಆಗು ಹೋಗುಗಳಾದ ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ದೈನಂದಿನ ಚಟುವಟಿಕೆಗಳು, ಶುಚಿತ್ವದ ಪಾಲನೆ, ಅನ್ನ ಪಾನೀಯ ಸೇವನೆ, ಬಟ್ಟೆ ತೊಡುವಿಕೆ, ಮಾತುಕತೆ, ಸಂಭಾಷಣೆ, ನಡವಳಿಕೆ, ನಿದ್ದೆ ಎಚ್ಚರ, ಪ್ರಾರ್ಥನೆಗಳು ಸೇರಿದಂತೆ ಯಾವ ಅಂಶವನ್ನೂ ಬಿಡದೆ ಬದುಕಿನ ಶಿಸ್ತನ್ನು ಕಲಿಸಿಕೊಟ್ಟವರು ಪ್ರವಾದಿ. ತಮ್ಮ ಹೆತ್ತವರು, ಕುಟುಂಬದ ಸದಸ್ಯರು, ಮಕ್ಕಳು, ಹಿರಿಯರು, ಅನಾಥರು, ಬಡವರು, ನೆರೆ ಹೊರೆಯವರು, ಕೈದಿಗಳು, ಶತ್ರುಗಳು ಸೇರಿದಂತೆ ಎಲ್ಲರ ಜತೆಯೂ ಸದ್ವರ್ತನೆಯ ಪಾಠ ಕಲಿಸಿದ್ದಾರೆ. ಪ್ರಾಣಿ, ಪಕ್ಷಿಗಳು ಸೇರಿದಂತೆ ಎಲ್ಲ ಚರಾಚರಗಳ ಮೇಲೆ ಕರುಣೆ ತೋರಲು, ಭೂಮಿ, ನೀರು, ಗಿಡ ಮರ, ಪರಿಸರದ ಮೇಲೂ ಅತಿರೇಕವೆಸಗದಂಥ, ಯುದ್ಧದ ಸಂದರ್ಭದಲ್ಲೂ ಮಹಿಳೆಯರು, ಮಕ್ಕಳ ಮೇಲೆ ಕೈ ಮಾಡದಂತೆ, ಬೆಳೆ ನಾಶ ಮಾಡದಂಥ ಅಸಂಖ್ಯಾತ ಬೋಧನೆಗಳನ್ನು ನೀಡಿದ್ದಾರೆ. ಪ್ರವಾದಿ ಮುಹಮ್ಮದ್ ಕೇವಲ ಧರ್ಮ ಗುರು ಅಥವಾ ಸಮಾಜ ಸುಧಾರಕರಾಗಿರದೆ, ಆಡಳಿತಗಾರ, ದಂಡ ನಾಯಕ, ವ್ಯಾಪಾರಿ, ತತ್ವಜ್ಞಾನಿ, ರಾಜಕಾರಣಿ, ವಾಗ್ಮಿ, ಅನಾಥ ರಕ್ಷ ಕ, ಗುಲಾಮ ವಿಮೋಚಕ, ಸ್ತ್ರೀ ವಿಮೋಚಕ, ಕಾನೂನು ತಜ್ಞ, ನ್ಯಾಯಾಧೀಶ, ಒಳ್ಳೆಯ ಪತಿ, ಶ್ರೇಷ್ಠ ತಂದೆಯಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ತಾನು ಬೋಧಿಸಿದ್ದನ್ನು ಸ್ವತಃ ಆಚರಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸಿದ್ದಾರೆ. ತಮ್ಮ ಜೀವನಪರ್ಯಂತ ಎಲ್ಲರಿಗೂ ಆಪ್ತರಾಗಿದ್ದ ಪ್ರವಾದಿ ಅವರ ಮುಗುಳ್ನಗು, ಸವಿನುಡಿಗಳೇ ಹೆಗ್ಗುರುತಾಗಿತ್ತು. ತನ್ನನ್ನು ಪೀಡಿಸಿದವರನ್ನು ಕ್ಷ ಮಿಸಿದರು. ಪ್ರೀತಿಯಿಂದ ಸಮಾಜವನ್ನು ತಿದ್ದಿ ತೀಡಿ ಬೆಳೆಸಿದರು. ಪ್ರೀತಿ ಎಲ್ಲವನ್ನೂ ಸೋಲಿಸುತ್ತದೆ, ಸಹಿಸುತ್ತದೆ ಮತ್ತು ಕ್ಷಮಿಸುತ್ತದೆ ಎಂಬಂತೆ ಅವರು ಮಾಡಿದ ಕ್ರಾಂತಿಯು ಇಡೀ ಜಗತ್ತನ್ನು ಗೆದ್ದಿದೆ.
ಇಂದು ಈದ್ ಮಿಲಾದ್ ಅಥವಾ ಮಿಲಾದುನ್ನಬಿ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನ. ಅಧರ್ಮ, ಅನ್ಯಾಯ, ತಾಂಡವವಾಡುತ್ತಿದ್ದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ, ಇಸ್ಲಾಮ್ ಎಂಬ ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಅವರ ಜನ್ಮದಿನವನ್ನು ಈದ್‌ಮಿಲಾದ್ ಹೆಸರಿನಲ್ಲಿ ಪ್ರವಾದಿ ಸಂದೇಶಗಳನ್ನು ಸಾರಲು ವಿನಿಯೋಗಿಸಲಾಗುತ್ತದೆ.
ಸೀರಿಯಸ್ ಬ್ಯುಸಿನೆಸ್ ಆಗಿರುವ ಸ್ಟಾಂಡಪ್ ಕಾಮಿಡಿ
ಸ್ಟಾಂಡಪ್ ಕಾಮಿಡಿಯನ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಉದ್ಯಮದ ಸ್ವರೂಪವನ್ನೂ ಪಡೆದುಕೊಳ್ಳುತ್ತಿದೆ. ಕ್ಲಬ್‌ಗಳಲ್ಲಿ, ಕಾರ್ಪೊರೇಟ್ ಸಭೆಗಳಲ್ಲಿ ಕಾಮಿಡಿ ಶೋಗಳಿಗೆ ಅವಕಾಶಗಳಿವೆ. ಎಲ್ಲ ವೃತ್ತಿಗಳಲ್ಲಿರುವಂತೆ ಇಲ್ಲೂ ಪೈಪೋಟಿ, ಗಳಿಕೆ, ಪರಿಶ್ರಮ, ಸೋಲು ಇತ್ಯಾದಿಗಳಿವೆ. ಕೆಲವು ವರ್ಷಗಳ ಹಿಂದಿನ ಮಾತು. ಆಗ ಕಾಮಿಡಿ ಎಂದರೆ ಸಿನಿಮಾಗಳಲ್ಲಿ ಸಾಧು ಕೋಕಿಲ, ದೊಡ್ಡಣ್ಣ, ಜಾನಿ ಲಿವರ್ ಮುಂತಾದವರು ಮಾಡುತ್ತಿದ್ದುದು; ಅದರಲ್ಲೂ, ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ದೃಶ್ಯಗಳನ್ನೇ ನಿರ್ದೇಶಕರು ಮತ್ತೆ ಮರುಕಳಿಸುತ್ತಿದ್ದರು. ನಂತರ ಟಿವಿಗಳಲ್ಲಿ ಗ್ರೇಟ್ ಇಂಡಿಯನ್ ಲಾಫರ್ ಚಾಲೆಂಜ್, ಕಾಮಿಡಿ ಸರ್ಕಸ್, ಕಾಮಿಡಿ ನೈಟ್ಸ್ ವಿತ್ ಕಪಿಲ್ ಮೊದಲಾದ ಕಾಮಿಡಿ ಶೋಗಳು ಬಂದವು. ಡಿನ್ನರ್ ವೇಳೆಯಲ್ಲಿ ಲಘುಹಾಸ್ಯಕ್ಕೆ ಪ್ರೇಕ್ಷಕ ತೆರೆದುಕೊಂಡ. ಸ್ಟೇಜ್ ಮೇಲೆ ನಡೆಯುವ ಕಾಮಿಡಿ ಇವುಗಳದೇ ಇನ್ನೊಂದು ರೂಪವಾಗಿತ್ತು. ಆದರೆ ಇಂದಿನ ಕಾಮಿಡಿ ಜಗತ್ತು ಮಿಮಿಕ್ರಿ, ನಾಟಕ, ಪ್ರಹಸನಗಳನ್ನೆಲ್ಲ ದಾಟಿ ತುಂಬಾ ಮುಂದೆ ಹೋಗಿದೆ. ತನಗೆ ಬೇಕಾದ ಹಾಸ್ಯದ ಮೂಲಗಳನ್ನು ಎಲ್ಲಾ ಕಡೆಯಿಂದಲೂ ಆವಿಷ್ಕರಿಸಿಕೊಳ್ಳುತ್ತಿದೆ. ಪ್ರಸ್ತುತ ಸಾಮಾಜಿಕ- ರಾಜಕೀಯ ಸನ್ನಿವೇಶ, ಸೆಲೆಬ್ರಿಟಿಗಳ ಎಡವುವಿಕೆ, ಬದುಕಿನ ನಾನಾ ಅಂಗಗಳು ಕಾಮಿಡಿಗೆ ವಸ್ತುವಾಗಿವೆ. ರಕ್ತಮಾಂಸ ತುಂಬಿಕೊಂಡ ಜೀವಂತ ಪಾತ್ರಗಳು, ಉತ್ತಮ ಸ್ಕ್ರಿಪ್ಟ್‌ಗಳು, ರೋಸ್ಟ್‌ನಂಥ ನಾನಾ ಬಗೆಗಳು ಬಂದಿವೆ. ಕ್ರಿಕೆಟರ್‌ಗಳು, ಸಿನಿಮಾ ತಾರೆಯರು ಪಾಲ್ಗೊಳ್ಳುತ್ತಿದ್ದಾರೆ. ಪ್ರೇಕ್ಷಕರು ಇವರನ್ನೆಲ್ಲ ಚೆನ್ನಾಗಿ ಗಮನಿಸುತ್ತಿದ್ದು, ಇಂಟರ್‌ನೆಟ್‌ನಲ್ಲಿ ಇವರನ್ನು ಎತ್ತಿಹಿಡಿಯುತ್ತಾರೆ; ಇಲ್ಲವೇ ಚಚ್ಚಿಹಾಕುತ್ತಾರೆ. ಸ್ಟಾಂಡಪ್ ಕಾಮಿಡಿಯನ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಉದ್ಯಮದ ಸ್ವರೂಪವನ್ನೂ ಪಡೆದುಕೊಳ್ಳುತ್ತಿದೆ. ಕ್ಲಬ್‌ಗಳಲ್ಲಿ, ಕಾರ್ಪೊರೇಟ್ ಸಭೆಗಳಲ್ಲಿ ಕಾಮಿಡಿ ಶೋಗಳಿಗೆ ಅವಕಾಶಗಳಿವೆ. ಎಲ್ಲ ವೃತ್ತಿಗಳಲ್ಲಿರುವಂತೆ ಇಲ್ಲೂ ಪೈಪೋಟಿ, ಗಳಿಕೆ, ಪರಿಶ್ರಮ, ಸೋಲು ಇತ್ಯಾದಿಗಳಿವೆ. 'ಏಳು ವರ್ಷಗಳಿಂದ ಈ ಫೀಲ್ಡ್‌ನಲ್ಲಿರುವ ನೀತಿ ಪಟ್ಲಾ ಪ್ರಕಾರ, ಏರುತ್ತಿರುವ ಇವರ ಸಂಖ್ಯೆ ಈ ಪ್ರಕಾರಕ್ಕಿರುವ 'ಕೂಲ್‌ನೆಸ್ ಫ್ಯಾಕ್ಟರ್'. ''ನಮ್ಮಲ್ಲಿ ಕೆಲವರು ಎಲ್ಲರನ್ನೂ ಹಾಸ್ಯ ಮಾಡಲು ಹೋಗಿ, ಕೆಲವರಿಗೆ ಅವಮಾನವಾಗಿ, ಅವರಿಂದ ಎಫ್‌ಐಆರ್ ಹಾಕಿಸಿಕೊಂಡದ್ದೂ ಉಂಟು. ಇದರಿಂದ ನಾವು ರೆಬೆಲ್ ಎಂಬ ಭಾವನೆ ಬಂದಿರುವುದೂ ಇದೆ. ಇದು ಸಮಾಜಕ್ಕೆ ಕನ್ನಡಿ ಹಿಡಿದಂತೆ. ಪ್ರಸ್ತುತ ಸಾಮಾಜಿಕ- ರಾಜಕೀಯ ಸನ್ನಿವೇಶದಲ್ಲಿ ಇದು ನಡೆಯುತ್ತಿರುವ ಸಂಗತಿಗಳ ಬಗ್ಗೆ ನಗೆ ಉಕ್ಕಿಸುವಂಥದು,'' ಎನ್ನುತ್ತಾರೆ ಅವರು. ಹಾಗಂತ ಎಲ್ಲ ಕಾಮಿಡಿಯನ್‌ಗಳೂ ರಾಜಕೀಯ ಮಾತಾಡುತ್ತಾರೆ ಎಂದಲ್ಲ. ಕೆಲವರು ತಮ್ಮ ಸಂಕಷ್ಟದ ಹಿನ್ನೆಲೆಯಿಂದ ಬೆಳವಣಿಗೆ, ಮಧ್ಯಮವರ್ಗದ ಪಡಿಪಾಟಲು- ಇಂಥದನ್ನೆಲ್ಲ ಮುಂದಿಟ್ಟುಕೊಳ್ಳುತ್ತಾರೆ. ವೀಕ್ಷಕರು ಇದರೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಾರೆ. ''ದಿನೇ ದಿನೇ ಸ್ಮಾರ್ಟ್ ಆಗುತ್ತಿರುವ ಪ್ರೇಕ್ಷಕರು, ಸ್ಮಾರ್ಟ್ ಆದ ಕಂಟೆಂಟ್ ಅನ್ನೇ ಬಯಸುತ್ತಿದ್ದಾರೆ. ಪ್ರೇಕ್ಷಕರು ಬದಲಾಗಿದ್ದಾರೆ; ಯುವಕರಾಗಿದ್ದಾರೆ. ಹೆಚ್ಚು ಓದಿಕೊಂಡವರು.ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಜಗತ್ತಿನೆಲ್ಲೆಡೆಯ ಮನರಂಜನೆಗೆ ತೆರೆದುಕೊಂಡಿದ್ದಾರೆ,'' ಎನ್ನುತ್ತಾರೆ ಈಸ್ಟ್ ಇಂಡಿಯಾ ಕಾಮಿಡಿ(ಇಐಸಿ) ಸಂಸ್ಥೆಯ ಸ್ಥಾಪಕ ಸದಸ್ಯ ಸಹೀಲ್ ಶಾ. ''ಕಾಲದಿಂದ ಕಾಲಕ್ಕೆ ಕಂಟೆಂಟ್‌ನಲ್ಲಿ ಬದಲಾವಣೆಯಾಗುವುದು ಸಹಜ. ಸ್ಲಾಪ್‌ಸ್ಟಿಕ್ ಕಾಮಿಡಿ, ವ್ಯಂಗ್ಯ, ಮಿಮಿಕ್ರಿ, ವಿಡಂಬನೆ, ಒನ್‌ಲೈನರ್ ಕಾಮಿಡಿ ಎಲ್ಲವೂ ಜತೆಗೇ ಇವೆ; ಎಲ್ಲದಕ್ಕೂ ಪ್ರೇಕ್ಷಕರಿದ್ದಾರೆ,'' ಎನ್ನುತ್ತಾರೆ ಇಐಸಿಯ ಇನ್ನೊಬ್ಬ ಸದಸ್ಯ ಸಪನ್ ವರ್ಮಾ. ಎಂಟು ವರ್ಷಗಳಿಂದ ಸ್ಟಾಂಡಪ್ ಕಾಮಿಡಿ ಶೋ ನೀಡುತ್ತಿರುವ ಬೆಂಗಳೂರು ಮೂಲದ ಸಂಜಯ್ ಮಾನಕ್ತಲ ಹೇಳುವ ಪ್ರಕಾರ, ಕಾಮಿಡಿ ರಂಗ ಇಂದು ಹೆಚ್ಚು ಭಾರತೀಯಕರಣಗೊಂಡಿದೆ. ಇಂದು ಯಾರು ಬೇಕಾದರೂ ತಮ್ಮ ಕಾಮಿಡಿಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ವೈರಲ್ ಆಗಬಹುದು. ಹೀಗೆ ಬಗೆಬಗೆಯ ಕಾಮಿಡಿಗಳಿಗೆ ತೆರೆದುಕೊಂಡಿರುವುದರಿಂದ, ಪ್ರೇಕ್ಷಕರಲ್ಲೂ ತುಂಬಾ ವ್ಯತ್ಯಾಸವಾಗಿದೆ. ಅವರೂ ಪ್ರಜ್ಞಾವಂತರಾಗಿದ್ದಾರೆ. 10 ವರ್ಷ ಹಿಂದೆ ರಸ್ಸೆಲ್ ಪೀಟರ್ ಇಲ್ಲಿ ಬಂದು 'ನಾವು ಮಾತಾಡೋದೇ ಹೀಗೆ' ಅಂತ ಭಾರತೀಯ ಇಂಗ್ಲಿಷ್ ಅನ್ನು ಮಿಮಿಕ್ರಿ ಮಾಡುತ್ತಿದ್ದಾಗ ಜನ ನಗುತ್ತಿದ್ದರು. ಇಂದು ಹಾಗಿಲ್ಲ. ಹೆಚ್ಚು ಸೂಕ್ಷ್ಮವಾದ, ಇಂಟಲಿಜೆಂಟ್ ವಿಚಾರವನ್ನು ಹಾಸ್ಯದಲ್ಲಿ ಇಷ್ಟಪಡುತ್ತಾರೆ ಎನ್ನುತ್ತಾರೆ ಮಾನಕ್ತಲ. ಇಂದು ಬೆಂಗಳೂರಿನಂಥ ನಗರಗಳಲ್ಲಿ ಕಾಮಿಡಿ ಕ್ಲಬ್‌ಗಳಿವೆ; ಪಬ್ ಇತ್ಯಾದಿ ಕಡೆ ಕಾಮಿಡಿ ಶೋಗಳು ನಿತ್ಯ ನಡೆಯುತ್ತವೆ. ಕಳೆದೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ಟಾಂಡಪ್ ಕಾಮಿಡಿ ಎಷ್ಟು ಜನಪ್ರಿಯವಾಗಿದೆ ಎಂದರೆ, ಯಾವುದೇ ಕಾರ‍್ಯಕ್ರಮದಲ್ಲಿ ಅದನ್ನು ಮೊದಲು ಅಳವಡಿಸಿ ನಂತರ ಉಳಿದ ಸಮಯವನ್ನು ತುಂಬಿಸುತ್ತಾರೆ. ಇಂದಿನ ಜನರಿಗೆ ಸಾಕಷ್ಟು ಒತ್ತಡವಿದೆ. ಸಿನಿಮಾಗಳಿಗೆ ಹೋಗುವುದಕ್ಕಿಂತ ಸ್ಟಾಂಡಪ್ ಕಾಮಿಡಿಗಳನ್ನು ಜನ ಇಷ್ಟಪಡುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಕಾಮಿಡಿಯನ್ ಪ್ರವೀಣ್‌ಕುಮಾರ್. ದೇಶದ ಮೊತ್ತಮೊದಲ ಮಹಿಳಾ ಸ್ಟಾಂಡಪ್ ಕಾಮಿಡಿಯನ್‌ಗಳಲ್ಲೊಬ್ಬರಾದ ಅದಿತಿ ಮಿತ್ತಲ್ ಹೇಳುವ ಪ್ರಕಾರ, ಜನರಿಗೆ ಕೆಲವೇ ಗಂಟೆಗಳ ವಿರಾಮವಿದ್ದರೂ ಕಾಲಹರಣಕ್ಕಾಗಿ ಇಂತ ಶೋಗಳಿಗೆ ಬರುತ್ತಾರೆ. ಶೋಗಳ ದರವಂತೂ ಮೇಲ್ಮಧ್ಯಮ ವರ್ಗಗಳಿಗೆ ಹೇಳಿ ಮಾಡಿಸಿದಂತಿದೆ. ಇವುಗಳ ಜನಪ್ರಿಯತೆಗೆ ಇನ್ನೊಂದು ಕಾರಣ, ಪ್ರೊಡಕ್ಷನ್ ತುಂಬಾ ಅಗ್ಗ. ಬೇಕಾದ್ದೆಂದರೆ ಒಂದು ಮೈಕ್ರೋಫೋನ್ ಮತ್ತು ಒಳ್ಳೆಯ ಸೌಂಡ್ ಸಿಸ್ಟಂ ಅಷ್ಟೇ! ಈ ಪ್ರಕಾರಕ್ಕೆ ಯಾವುದೇ ಸೀಮೆಗಳೇ ಇಲ್ಲ. ಎಲ್ಲ ಗೋಡೆಗಳನ್ನೂ ಅದು ಮುರಿದುಹಾಕಿದೆ. ಆಪ್ತವೆನಿಸುತ್ತದೆ. 300 ಜನರ ನಡುವೆ ಕುಳಿತಿದ್ದರೂ, ಇದು ನನ್ನ ದೈನಂದಿನ ಜೀವನಕ್ಕೇ ಸಂಬಂಧಿಸಿದ್ದು ಅನಿಸುತ್ತದೆ ಎನ್ನುತ್ತಾರೆ ಅದಿತಿ ಮಿತ್ತಲ್. ಒಂದು ಕಡೆ ಮೆಟ್ರೋ ನಗರಗಳಲ್ಲಿ ಇದು ಮನರಂಜನೆಯ ಇನ್ನೊಂದು ಪ್ರಕಾರವಾಗಿ ಜನಪ್ರಿಯವಾಗುತ್ತಿದ್ದರೆ, ಇನ್ನೊಂದು ಕಡೆ ಸಣ್ಣ ನಗರಗಳ ಜನ ಕೂಡ ಇದರ ರುಚಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ''ಸಣ್ಣ ನಗರಗಳಲ್ಲೂ ಇದಕ್ಕೆ ಎಷ್ಟು ಜನ ಸೇರುತ್ತಾರೆ ಎಂದರೆ, ನೋಡಿದರೆ ಆಶ್ಚರ‍್ಯವಾಗಬಹುದು. ಮೆಟ್ರೋಗಳಲ್ಲಿ ನಿರ್ದಿಷ್ಟವಾದ ಶೋಗಳನ್ನು ಆಯ್ದುಕೊಂಡು ಅದಕ್ಕೆ ಬರುತ್ತಾರೆ. ಆದರೆ ಸಣ್ಣ ನಗರಗಳಲ್ಲಿ ಯಾವುದೇ ಶೋ ನಡೆದರೂ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ನಕ್ಕು ಹಗುರಾಗುತ್ತಾರೆ,'' ಎನ್ನುತ್ತಾರೆ ಶಾ. ಸಣ್ಣ ನಗರಗಳಲ್ಲಿ ಪ್ರೇಕ್ಷಕರನ್ನು ಇದಕ್ಕೆ ಸಜ್ಜುಗೊಳಿಸಿದವರು ಸ್ಥಳೀಯ ಭಾಷೆಗಳ, ರಾಜ್ಯದಲ್ಲಿ ಕನ್ನಡದ ಸ್ಟಾಂಡಪ್ ಕಾಮಿಡಿಯನ್‌ಗಳು. ಹಿಂದಿಯಲ್ಲಿ ಈ ಕೆಲಸವನ್ನು ಝಕೀರ್ ಖಾನ್, ಅಮಿತ್ ಟಂಡನ್ ಮುಂತಾದವರು ಮಾಡಿದರೆ, ಕನ್ನಡದಲ್ಲಿ ಈ ಕೆಲಸವನ್ನು ಗಂಗಾವತಿ ಪ್ರಾಣೇಶ್, ರಿಚರ್ಡ್ ಲೂಯಿಸ್, ಕೃಷ್ಣೇಗೌಡ ಮುಂತಾದವರು ಮಾಡಿದರು. ಮೆಟ್ರೋಗಳಿಂದ ಆಚೆ ಹೋದಾಗ ಹೆಚ್ಚೆಚ್ಚು ಸ್ಥಳೀಯವಾಗಿರಬೇಕಾಗುತ್ತದೆ. ಸ್ಥಳೀಯ ಸಂಗತಿಗಳ ಅರಿವು ಇರಬೇಕಾಗುತ್ತದೆ. ಅಲ್ಲಿ ಮೆಟ್ರೋಗಳಲ್ಲಿದ್ದಷ್ಟು ಕಾಮಿಡಿಯನ್‌ಗಳು ಇರುವುದಿಲ್ಲ. ಹೀಗಾಗಿ ಜನ ನಿಮ್ಮತ್ತ ಹೆಚ್ಚು ಗಮನ ಕೊಡುತ್ತಾರೆ. ಹೀಗೆ ಲಾಭವೂ ಇದೆ, ಕಷ್ಟವೂ ಇದೆ. ಸಾಮಾನ್ಯವಾಗಿ ಈ ಶೋಗಳಲ್ಲಿ ಪ್ರದರ್ಶನ ನೀಡುವವರು ಬಹಳ ಸುಲಭವಾಗಿ ಅದನ್ನು ನೆರವೇರಿಸಿದಂತೆ ಕಾಣುತ್ತದೆ. 'ಬೇರೇನಿದೆ, ಹಾಸ್ಯಮಯವಾಗಿ ಮಾತನಾಡುವುದಷ್ಟೇ' ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ 30 ನಿಮಿಷದ ಒಂದು ಕಾಮಿಡಿ ಶೋ ನೀಡಬೇಕಾದರೆ ಅದಕ್ಕೆ ತಿಂಗಳುಗಳ ತಯಾರಿ, ಸ್ಥೂಲ ಸ್ಕ್ರಿಪ್ಟ್ ರಚನೆ ಬೇಕಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ. ''ಕಂಟೆಂಟ್ ತಯಾರಿಸುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಕಳೆದ ವರ್ಷ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಿದ ನನ್ನ ಮೊದಲ ವಿಶೇಷ ಶೋ 'ಅಬ್ಸೆಸ್ಸಿವ್ ಕಾಮೆಡಿಕ್ ಡಿಸಾರ್ಡರ್' ಅನ್ನು ರೂಪಿಸುವುದಕ್ಕೆ ಒಂದುವರೆ ವರ್ಷ ಸಮಯ ತೆಗೆದುಕೊಂಡಿತು. ಅದೊಂದು ನಿಧಾನ ಪ್ರಕ್ರಿಯೆ. ಬರೆಯುವುದು, ಪ್ರಯೋಗಿಸುವುದು, ತಿದ್ದಿ ಬರೆಯುವುದು, ಪ್ರಯೋಗಿಸುವುದು, ಅಂತಿಮ ಪ್ರಯೋಗದವರೆಗೆ. ಬರೆಯುವಾಗ ನಾನು ಪ್ರೇಕ್ಷಕರನ್ನು ತಲೆಯಲ್ಲಿಟ್ಟುಕೊಳ್ಳುವುದಿಲ್ಲ. ನನಗೆ ಯಾವುದರ ಬಗ್ಗೆ ಮಾತಾಡಬೇಕೆಂದು ಅನಿಸುತ್ತದೋ ಆ ಬಗ್ಗೆ ಬರೆಯುತ್ತೇನೆ. ಅದು ಪ್ರಾಮಾಣಿಕವಾಗಿದ್ದರೆ, ತಮಾಷೆಯಾಗಿದ್ದರೆ ಅದಕ್ಕೆ ಪ್ರೇಕ್ಷಕರಿದ್ದೇ ಇರುತ್ತಾರೆ,'' ಎನ್ನುತ್ತಾರೆ ವರ್ಮಾ. ಹೀಗಾಗಿ ಕಾಮಿಡಿಯನ್‌ಗಳ ಮೇಲೆ ಒಂದು ಒತ್ತಡವಿದೇ ಇದೆ. ಅವರ ವಿಡಂಬನೆಯ ವಸ್ತು ಉತ್ತಮವಾಗಿರಲೂಬೇಕು, ಹೊಸದಾಗಿರಬೇಕು ಹಾಗೂ ನಗಿಸಲೂಬೇಕು. ಅವರ ಜೀವನ ಹೇಗಿದೆ ಎಂದು ಯಾರಿಗೂ ಬೇಕಾಗಿಲ್ಲ. ''ಬೆಂಗಳೂರಿನಲ್ಲಿ ನೀವು ಎಲ್ಲಿಗಾದರೂ ವಾಹನ ಚಲಾಯಿಸುತ್ತಾ ಹೋಗುತ್ತಿದ್ದರೆ, ನಿಮ್ಮ ಸ್ಥಳ ತಲುಪುವಷ್ಟರಲ್ಲಿ ಸುಸ್ತಾಗಿ ಕಿರಿಕಿರಿಯಾಗಿರುತ್ತದೆ. ಹೀಗಾಗಿ ಸ್ವಲ್ಪ ಮೊದಲೇ ಸ್ಥಳ ತಲುಪಿಕೊಂಡು, ಶಾಂತವಾಗಿ ಕುಳಿತು ಮನಸ್ಸನ್ನು ನಿಯಂತ್ರಿಸಿಕೊಂಡು ನಂತರ ಪ್ರದರ್ಶನ ನೀಡಬೇಕಾಗುತ್ತದೆ. ಯಾಕೆಂದರೆ ದಿನದ ಕೊನೆಯಲ್ಲಿ ಇದೇ ನನ್ನ ಆದಾಯದ ಮೂಲವಲ್ಲವೆ? ನನ್ನ ಬದುಕಿನಲ್ಲಿ ಏನಾಗುತ್ತಿದೆಯೋ ಎಂಬುದು ಆಚೆಗಿಟ್ಟು ನಾನಿದನ್ನು ನಡೆಸಲೇಬೇಕು,'' ಎನ್ನುತ್ತಾರೆ ಕುಮಾರ್. ನಿಮ್ಮ ಸ್ನೇಹಿತರ ನಡುವೆ ಮತ್ತು ಕುಟುಂಬದಲ್ಲಿ ತುಂಬಾ ವಿನೋದ ಸ್ವಭಾವದ ವ್ಯಕ್ತಿ ಎಂದು ಅನ್ನಿಸಿಕೊಳ್ಳುವುದು ಸುಲಭ. ಆದರೆ ಇದನ್ನೇ ಒಂದು ವೃತ್ತಿಯಾಗಿ ಸ್ವೀಕರಿಸಿದಾಗ ಅದರಲ್ಲಿ ಹೆಸರು, ಹಣ ಮಾಡುವುದು ಇತರ ಕ್ಷೇತ್ರಗಳಲ್ಲಿರುವಷ್ಟೇ ಕಷ್ಟ. ''ನಾನಿದನ್ನು ಏಳು ವರ್ಷಗಳಿಂದ ಪೂರ್ಣಕಾಲಿಕ ಉದ್ಯೋಗವಾಗಿ ಮಾಡಿಕೊಂಡಿದ್ದೇನೆ. ನನಗೆ ಬೇರೇನೂ ಕೆಲಸವೇ ಇರಲಿಲ್ಲ. ಈಗ ತಮ್ಮ ಕೆಲಸಗಳನ್ನು ತೊರೆದು, ಇದರಲ್ಲೇ ಪೂರ್ಣವಾಗಿ ತೊಡಗಿಕೊಂಡ ಕೆಲವರನ್ನು ನಾನು ಬಲ್ಲೆ. ಇದು ಒಳ್ಳೆ ಪ್ರಯಾಣವೇ. ಆದರೆ, ಒಮ್ಮೆ ಇದರಲ್ಲಿ ಹೆಸರು ಮಾಡುವವರೆಗೆ ಇರುವ ಕೆಲಸ ಬಿಡದಿರುವುದು ಒಳಿತು,'' ಎನ್ನುತ್ತಾರೆ ಶಾ. 'ಈ ವೃತ್ತಿಯಲ್ಲಿ ನೆಲೆಯಾಗುವುದಕ್ಕೆ ನಿರಂತರತೆ, ತಾಳ್ಮೆ ಹಾಗೂ ಸತತ ಪರಿಶ್ರಮ ಅಗತ್ಯ. ನಟನೆ ಅಥವಾ ಸಂಗೀತದಂತೆಯೇ ಇದೂ ಕೂಡ ಒಂದು ಕಲೆ. ಅಲ್ಲಿನಂತೆಯೇ ಇಲ್ಲೂ ಉನ್ನತ ಮಟ್ಟ ತಲುಪಿದವರಿಗೆ ಸಾಕಷ್ಟು ಗಳಿಕೆ ಇದೆ. ಆದರೆ ಇಲ್ಲಿ ವಿಚಿತ್ರವಾದ ಹೋರಾಟ ಸಾಕಷ್ಟಿದೆ. ಖ್ಯಾತನಾಮ ಕಾಮಿಡಿಯನ್‌ಗಳು ಇಲ್ಲಿ ವರ್ಷಕ್ಕೆ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಆದರೆ ಈ ಕ್ಷೆತ್ರದಲ್ಲಿ, ತಳಮಟ್ಟದಲ್ಲಿ ನೂರಾರು ಕಾಮಿಡಿಯನ್‌ಗಳು ವೃತ್ತಿಯಲ್ಲಿ ಮೇಲೇರಲು ಸತತ ಶ್ರಮಪಡುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಪ್ರಯತ್ನಿಸಿಯೂ ಹೆಸರು ಮಾಡಲಾಗದೆ ಹೋದವರಿದ್ದಾರೆ. ಕಾರ್ಪೊರೇಟ್ ಮತ್ತು ಕ್ಲಬ್ ಶೋ ಕಾರ್ಪೊರೇಟ್ ಶೋಗಳು ದೊರೆತರೆ ಈ ಕಾಮಿಡಿಯನ್‌ಗಳಿಗೆ ಸಾಕಷ್ಟು ಗಳಿಕೆ ಖಾತ್ರಿ. ಆದರೆ ಇವರಿಗೆ ಅಭಿವ್ಯಕ್ತಿಯ ಮುದವನ್ನು ಕೊಡುವುದು ಮಾತ್ರ ಕ್ಲಬ್ ಶೋಗಳಂತೆ. ''ಕಾರ್ಪೊರೇಟ್ ಶೋಗಳು ಕಠಿಣ. ಅಲ್ಲಿರುವ ಪ್ರೇಕ್ಷಕರು ಸಾಮಾನ್ಯವಾಗಿ ನಗಲು ಗೊತ್ತಿಲ್ಲದವರು. ಮತ್ತು 30-50 ವಯೋಮಾನದವರು. ಯುವಕರಾದರೆ ಇಂಟರ್‌ನೆಟ್‌ನಲ್ಲಿ ಕಾಮಿಡಿಗಳಿಗೆ ತೆರೆದುಕೊಂಡವರಾಗಿರುತ್ತಾರೆ. ಅವರು ಅಲ್ಲಿರುವುದು ತಮ್ಮ ನೆಟ್‌ವರ್ಕ್ ಬೆಳೆಸಿಕೊಳ್ಳಲು, ಅಥವಾ ಕಚೇರಿ ಇವೆಂಟ್ ಎಂಬ ಕಾರಣಕ್ಕಾಗಿ. ಅಲ್ಲಿ ನಿಮ್ಮನ್ನು ನೀವೇ ಸ್ವಲ್ಪ ಸೆನ್ಸಾರ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅಲ್ಲಿಂದ ಬರುವ ದುಡ್ಡು ಮಾತ್ರ ನಮ್ಮ ದೊಡ್ಡಮಟ್ಟದ ಗಳಿಕೆ,'' ಎನ್ನುತ್ತಾರೆ ವರ್ಮಾ. ''ಕಾರ್ಪೊರೇಟ್ ಶೋಗಳು ನಿಮ್ಮನ್ನು ಶ್ರೀಮಂತ ಕಾಮಿಡಿಯನ್‌ಗಳಾಗಿಸಿದರೆ, ಕ್ಲಬ್ ಶೋಗಳು ನಿಮ್ಮನ್ನು ಉತ್ತಮ ಕಾಮಿಡಿಯನ್ ಆಗಿಸುತ್ತವೆ,'' ಎಂಬುದು ಕುಮಾರ್ ಅಭಿಪ್ರಾಯ. ನೆಟ್‌ಫ್ಲಿಕ್ಸ್‌ನಂಥ, ಸಿನಿಮಾ ಹಂಚಿಕೆ ಆನ್‌ಲೈನ್ ತಾಣಗಳು ಕೂಡ ಸ್ಟಾಂಡಪ್ ಕಾಮಿಡಿಯ ಸಾಧ್ಯತೆಗಳನ್ನು ಕಂಡುಕೊಂಡಿವೆ. ಶೋಗಳನ್ನು ಏರ್ಪಡಿಸಿ, ಅವುಗಳನ್ನು ಲೈವ್ ಅಥವಾ ರೆಕಾರ್ಡ್ ಆಗಿ ತೋರಿಸುತ್ತಿವೆ. ಭಾರತದಾಚೆ ಬೇರೆ ದೇಶಗಳ ಕಾಮಿಡಿಯನ್‌ಗಳು ಇಲ್ಲಿ ಬಂದು ಸ್ಟಾಂಡಪ್ ಶೋ ಕೊಡುವಂತೆ, ಇಲ್ಲಿನ ಕಾಮಿಡಿಯನ್‌ಗಳು ಕೂಡ ದೇಶದಾಚೆಗೆ ಹೋಗಿ ಶೋಗಳನ್ನು ಕೊಡುತ್ತಿದ್ದಾರೆ. 'ಬ್ರಿಟಿಷ್- ಇಂಡಿಯನ್ ಜನರಿಂದ ಹೆಚ್ಚೆಚ್ಚು ಭಾರತೀಯ ಕಾಮಿಡಿಯನ್‌ಗಳ ಶೋಗಳಿಗಾಗಿ ಬೇಡಿಕೆ ಬರುತ್ತಿದೆ. ಹೀಗಾಗಿ ನಾವು ಭಾರತೀಯ ಕಾಮಿಡಿಯನ್‌ಗಳನ್ನು ಕರೆಸುತ್ತಿದ್ದೇವೆ. ನಮ್ಮಲ್ಲಿ ನಡೆದ ಶೋಗಳನ್ನು ಫಿಲಂ ಮಾಡಿಕೊಂಡಿದ್ದು, ಅವುಗಳನ್ನು ಬ್ರಿಟನ್ ಕಾಮಿಡಿ ಸೆಂಟ್ರಲ್ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದ್ದೇವೆ. ಭಾರತದಲ್ಲಿರುವ ನಮ್ಮ ಸಹಭಾಗಿಗಳಿಗೂ ಪ್ರಸಾರ ಮಾಡಲು ಸೂಚನೆ ನೀಡಿದ್ದೇವೆ,'' ಎಂದು ಲಂಡನ್‌ನ ಸೋಹೋ ಥಿಯೇಟರ್‌ನ ಕಾರ‍್ಯಕಾರಿ ನಿರ್ದೇಶಕ ಮಾರ್ಕ್ ಗೋಡ್‌ಫ್ರೇ ಹೇಳುತ್ತಾರೆ. 17 ವರ್ಷದ ಸೋಹೋ ಥಿಯೇಟರ್, ಅಮೆರಿಕ, ಆಸ್ಪ್ರೇಲಿಯಾ ಮತ್ತು ಇತ್ತೀಚೆಗೆ ಭಾರತದಿಂದ ಕಾಮಿಡಿಯನ್‌ಗಳನ್ನು ಹೆಚ್ಚಾಗಿ ಕರೆಸಿ ಶೋಗಳನ್ನು ನೀಡುತ್ತಿದೆ. ಕನ್ನಡದ ಕಾಮಿಡಿ ಬೆಂಗಳೂರಿನ ಹೊರಗಿನ ಕನ್ನಡಿಗರಿಗೆ ಸ್ಟಾಂಡಪ್ ಕಾಮಿಡಿ ಎಂಬ ಪದ ಅಪರಿಚಿತವಾಗಿರಬಹುದು. ಆದರೆ ಈ ಪ್ರಕಾರ ಅಪರಿಚಿತವಲ್ಲ. ಇದು ನಗೆಹಬ್ಬ, ನಗೆಮೇಳ, ಹಾಸ್ಯೋತ್ಸವ ಮುಂತಾದ ಹೆಸರುಗಳಿಂದ ಹತ್ತಾರು ವರ್ಷಗಳಿಂದ ಇಲ್ಲಿ ಪ್ರಚಲಿತವಾಗಿದೆ. ಕನ್ನಡ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಜಿಪಿ ರಾಜರತ್ನಂ, ಬೀಚಿ, ನಾಕಸ್ತೂರಿ ಮುಂತಾದ ಹಿರಿಯ ಸಾಹಿತಿಗಳು ತಮ್ಮ ಬರಹಗಳಿಂದಲೂ ಭಾಷಣಗಳಿಂದಲೂ ದಶಕಗಳ ಹಿಂದೆ ಮಾಡಿದ್ದನ್ನು ಇಂದಿನವರು ಮುಂದುವರಿಸುತ್ತಿದ್ದಾರೆ. ಬಹುಶಃ ಕನ್ನಡ ಟಿವಿ ಸೀರಿಯಲ್‌ಗಳಲ್ಲಿ ಜನಪ್ರಿಯವಾಗತೊಡಗಿದ ಕಾಮಿಡಿ ಸೀರಿಯಲ್‌ಗಳು ಮುಂದೆ ಕನ್ನಡ ಹಾಸ್ಯೋತ್ಸವಗಳಿಗೆ ಜನ ಸಜ್ಜಾಗುವಂತೆ ಮಾಡಿದವು. ಇಲ್ಲಿ ಮಾತ್ರ ಸಾಹಿತ್ಯದ ಹಿನ್ನೆಲೆಯಿದ್ದವರೇ ಜನರನ್ನು ಮಾತಿನ ಮೂಲಕ ನಗಿಸುತ್ತಿರುವುದನ್ನು ನಾವು ಗಮನಿಸಬಹುದು. ಎಂ.ಎಸ್.ನರಸಿಂಹಮೂರ್ತಿ, ಹಿರೇಮಗಳೂರು ಕಣ್ಣನ್, ಸುಧಾ ಬರಗೂರು, ವೈ.ವಿ.ಗುಂಡೂರಾವ್, ಪ್ರೊ.ಕೃಷ್ಣೇಗೌಡ, ರಿಚರ್ಡ್ ಲೂಯಿಸ್ ಮುಂತಾದವರು ತಮ್ಮ ವಿನೋದಪ್ರಜ್ಞೆಯಿಂದ ಕನ್ನಡಿಗರನ್ನು ನಗಿಸುತ್ತಿದ್ದಾರೆ. ಬರಗೂರು ಹಾಗೂ ಕೃಷ್ಣೇಗೌಡ ಅಕಾಡೆಮಿಕ್ ಹಿನ್ನೆಲೆಯವರಾದರೆ, ನರಸಿಂಹಮೂರ್ತಿ ಹಾಸ್ಯಬರಹಗಾರರು. ಹನಿಗವಿ ಡುಂಡಿರಾಜರೂ ಜನರನ್ನು ನಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಕಣ್ಣನ್ ಚುಟುಕು ಕವಿತೆಗಳಿಗೆ ಖ್ಯಾತರು. ಇವರಲ್ಲೆಲ್ಲ ಎದ್ದು ಕಾಣುವ ನಗೆಗಾರ ಎಂದರೆ ಗಂಗಾವತಿ ಪ್ರಾಣೇಶ್. ಬ್ಯಾಂಕ್ ನೌಕರರಾಗಿದ್ದ ಇವರು, ಮಾತುಗಳ ಮೂಲಕ ನಗಿಸುವ ತಮ್ಮ ಸಾಮರ್ಥ್ಯವನ್ನು ಕಂಡುಕೊಂಡ ಬಳಿಕ ಇದನ್ನೇ ವೃತ್ತಿಯಾಗಿ ಮಾಡಿಕೊಂಡರು. ಪ್ರಸ್ತುತ ಕನ್ನಡದ ಅತ್ಯಂತ ಬ್ಯುಸಿ ಸ್ಟಾಂಡಪ್ ಕಾಮಿಡಿಯನ್‌ಗಳಲ್ಲೊಬ್ಬರಾದ ಅವರು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ, ನಗರಗಳಲ್ಲಿ, ಹೊರದೇಶಗಳಲ್ಲೂ ಶೋ ನೀಡುತ್ತಿರುತ್ತಾರೆ. ಇವರ ಕಾಮಿಡಿಯ ಗಟ್ಟಿ ಹಿನ್ನೆಲೆಯಾಗಿರುವುದು ಬೀಚಿ, ಭೈರಪ್ಪ ಮುಂತಾದ ಹಿರಿಯ ಸಾಹಿತಿಗಳ ಓದಿನ ಅಧ್ಯಯನ. ಕನ್ನಡದ ಸ್ಟಾಂಡಪ್ ಕಾಮಿಡಿ ಮಾತ್ರ ಇನ್ನೂ ಸಾಕಷ್ಟು ಕಾರ್ಪೊರೇಟ್ ಆಗಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಬಹುಭಾಷಿಕ ಸಿಬ್ಬಂದಿಗಾಗಿ ಈ ಸಂಸ್ಥೆಗಳು ಇಂಗ್ಲಿಷ್ ಕಾಮಿಡಿಯನ್‌ಗಳನ್ನೇ ಆರಿಸಿಕೊಳ್ಳುತ್ತವೆ. ಕನ್ನಡದ ಸಂಸ್ಥೆಗಳು ಮಾತ್ರ ಹಾಸ್ಯೋತ್ಸವಗಳನ್ನು ಸಂಘಟಿಸುತ್ತವೆ. ಇವುಗಳಲ್ಲಿ ಮಾತ್ರ ಸಾವಿರಾರು ಮಂದಿ ಪ್ರೇಕ್ಷಕರು ನೆರೆದು ಎಂಜಾಯ್ ಮಾಡುತ್ತಾರೆ.
ಮೋದಿ ಚಿಂತೆ ಹೆಚ್ಚಿಸಿರುವ ಹಳ್ಳಿ ಹುಡುಗರು
- ಸುಭಾಷ್ ಹೂಗಾರ, ಅಹಮದಾಬಾದ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹೋಲಿಸಿದರೆ 20 ವರ್ಷ ಹಿರಿಯರಾಗಿರುವ ಪ್ರಧಾನಿ ಮೋದಿಯೇ ದೇಶದ ಯುವ ನಾಯಕ ಎಂಬುದು 2014ರಿಂದ ಇಲ್ಲಿಯವರೆಗೂ ಸಾಬೀತಾಗಿರುವ ಸತ್ಯ. ಬಿಜೆಪಿಗೆ ಪ್ರತಿಷ್ಠೆ ಮತ್ತು ಕಾಂಗ್ರೆಸ್‌ಗೆ ಅಸ್ತಿತ್ವದ ಕಾಳಗವೆನಿಸಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ಇಂಥದೇ ಸ್ಥಿತಿ ಇದೆಯೇ? ಎಂಬ ಪ್ರಶ್ನೆಗೆ ಥಟ್ಟನೇ 'ಹೌದು' ಎಂದು ಉತ್ತರಿಸಲಾಗದು. ಗುಜರಾತ್ ಚುನಾವಣೆಯನ್ನು ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿರುವ ಮೂರು ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾಣಿ ಮತ್ತು ಅಲ್ಪೇಶ್ ಠಾಕೂರ್ ಕಾರಣದಿಂದಾಗಿ ಮಾತ್ರ ಈ ಅಭಿಪ್ರಾಯ ರೂಪಗೊಂಡಿಲ್ಲ. ಇಡೀ ರಾಜ್ಯದ ಯುವಕರ ರಾಜಕೀಯ ನಡೆಯ ಬಗ್ಗೆಯೇ ಈಗ ಬಿಜೆಪಿ ಹೆಚ್ಚು ಚಿಂತೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ರಾಜಧಾನಿ ಸೇರಿದಂತೆ ಗುಜರಾತಿನ ನಗರ ಪ್ರದೇಶಗಳಲ್ಲಿ ಈಗಲೂ ಪ್ರಧಾನಿ ನರೇಂದ್ರ ಮೋದಿ ಮ್ಯಾಜಿಕ್ ಮುಂದುವರೆದಿದೆ. ಇಲ್ಲಿನ ಯುವಕರ ಮೊದಲ ಆಯ್ಕೆ ಮೋದಿಯೇ ಎಂಬುದು ನಿಸ್ಸಂಶಯ. ನಗರಗಳಲ್ಲಿ ಮೋದಿಯೇ ಹೀರೋ ಅಹಮದಾಬಾದಿನ ಫಾರ್ಮಾ ಕಂಪೆನಿಯ ಉದ್ಯೋಗಿ ವಿಕಾಸ್ ಗಾಂಧಿ, ''ಸದ್ಯ ದೇಶದಲ್ಲಿ ಮೋದಿಗೆ ಹೋಲಿಸಬಹುದಾದ ಮತ್ತೊಬ್ಬ ನಾಯಕ ಇಲ್ಲ, ನಮಗೆ ಬೇರೆಯವರ ಮೇಲೆ ನಂಬಿಕೆಯೂ ಇಲ್ಲ, ಹೀಗಾಗಿ ನಮಗೆ ಬಿಜೆಪಿಗಿಂತ ಮೋದಿ ಮುಖ್ಯ,'' ಎನ್ನುತ್ತಾನೆ. ಹೀಗೆಯೇ ನಗರ ಪ್ರದೇಶದ ಹತ್ತು ಯುವಕರನ್ನು ಮಾತಿಗೆಳೆದರೆ ಕನಿಷ್ಠ 6-8 ಯುವಕರು ಮೋದಿ ಫ್ಯಾನ್ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಇದೇ ಮಾತನ್ನು ಗ್ರಾಮೀಣ ಯುವಕರ ಬಗ್ಗೆ ಹೇಳಲಾಗದು. ಗ್ರಾಮೀಣ ಪ್ರದೇಶಗಳ ಯುವಕರು ಮೋದಿ ಮತ್ತು ಬಿಜೆಪಿಯ ಚಿಂತೆ ಹೆಚ್ಚಿಸುವಂಥ ಹತ್ತು ಹಲವು ಪ್ರಶ್ನೆ ಕೇಳುತ್ತಿದ್ದಾರೆ. ಇಂಥ ಅನೇಕ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವೂ ಅವರಿಗೆ ಸಿಗುತ್ತಿಲ್ಲ. ರಾಜಧಾನಿ ಅಹಮದಾಬಾದ್‌ನಿಂದ ಕೇವಲ 30 ಕಿ.ಮೀ. ದೂರದ ಬಾವಲಾ ಗ್ರಾಮಕ್ಕೆ ಹೋದರೆ ಸಾಕು, ಯುವಕರ ಮುಖಚರ್ಯೆ ಮತ್ತು ಮಾತುಗಳ ದಾಟಿ ಎಲ್ಲವೂ ನಗರದ ಯುವಕರಿಂತ ಎಷ್ಟೊಂದು ಭಿನ್ನ ಎಂಬುದು ಗೊತ್ತಾಗುತ್ತದೆ. ಮಾತು ಹೆಚ್ಚು ಕೆಲಸ ಕಡಿಮೆ ಬಾವಲಾ ಗ್ರಾಮದ 21 ವರ್ಷದ ತುಷಾರ್ ಪಟೇಲ್, ''ಮೋದಿ ಅವರದು ಮಾತು ಜಾಸ್ತಿ, ಕೆಲಸ್ ಕಡಿಮೆ, ನನ್ನ ವಯಸ್ಸಿಗಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಈಗಲೂ ನಮ್ಮ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿದರೆ ನಂಬಬೇಕೇ?'' ಎಂದು ಕೇಳುತ್ತಾನೆ. ತುಷಾರ್ ರೀತಿಯಲ್ಲೇ ಬಿಜೆಪಿಯನ್ನು ಚಿಂತೆಗೀಡು ಮಾಡುವಂಥ ಪ್ರಶ್ನೆಗಳನ್ನು ಗ್ರಾಮೀಣ ಭಾಗದ ಅನೇಕ ಯುವಕರು ಕೇಳುತ್ತಿದ್ದಾರೆ. ಹಾಗಾದರೆ, ನಗರ ಪ್ರದೇಶ ಮತ್ತು ಹಳ್ಳಿಗಳ ಯುವಕರ ರಾಜಕೀಯ ವಿಚಾರಗಳ ನಡುವೆ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸಕ್ಕೆ ಕಾರಣಗಳೇನು? ಕಾರಣಗಳೇನು? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಗುಜರಾತ್ ಚುನಾವಣೆಯನ್ನು ಹತ್ತಿರದಿಂದ ಗಮನಿಸುತ್ತಿರುವ, ಅಶೋಕ ವಿಶ್ವವಿದ್ಯಾಲಯದ ರಿಸರ್ಚ್ ಸ್ಕಾಲರ್ ಆಶೀಷ್ ರಂಜನ್ ಅವರನ್ನು ಸಂಪರ್ಕಿಸಿದರೆ ಅವರು ಉತ್ತರಿಸುವುದು ಹೀಗೆ. ನಗರ ಪ್ರದೇಶದ ಯುವಕರು ದೊಡ್ಡ ಕನಸು ಕಾಣುತ್ತಾರೆ ಮತ್ತು ಕಣ್ಣಿಗೆ ಕುಕ್ಕುವಂಥ, ಮೇಲ್ನೋಟಕ್ಕೆ ಎದ್ದು ಕಾಣುವಂಥ ಅಭಿವೃದ್ಧಿಯ ಮೋಹಪಾಶದಲ್ಲಿ ಸಿಲುಕಿರುತ್ತಾರೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅರಿವು ಹೊಂದಿರುವ ಈ ಸಮೂಹ ಸಂಕೇತಗಳನ್ನು ಹೆಚ್ಚು ನಂಬುತ್ತದೆ. ಆದರೆ, ಗ್ರಾಮೀಣ ಭಾಗದ ಯುವಕರ ವಿಚಾರ ಮತ್ತು ಜೀವನ ಶೈಲಿಯೇ ಭಿನ್ನವಾಗಿರುತ್ತದೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ವಿಷಯಗಳಿಗಿಂತ ಹೆಚ್ಚಾಗಿ ತಮ್ಮ ಕುಟುಂಬ ಮತ್ತು ಸುತ್ತಮುತ್ತಲಿನ ವಿಷಯಗಳನ್ನು ಗಮನಿಸಿ, ಅವರು ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆ ಅವರಿಗೆ ಬಹಳ ದೊಡ್ಡದಾಗಿ ಕಾಣಿಸುತ್ತವೆ ಎಂಬುದು ಅವರ ಅಭಿಪ್ರಾಯ. ''ನಗರ ಪ್ರದೇಶದ ಯುವಕರು ಮೋದಿ ಮ್ಯಾಜಿಕ್‌ಗೆ ಒಳಗಾಗಿರೋದು ಮತ್ತು ಗ್ರಾಮೀಣ ಯುವಕರು ಪ್ರಶ್ನೆ ಮಾಡುತ್ತಿರುವುದು ನಿಜವಾದರೂ ಇದರಲ್ಲೂ ಒಂದು ಸಣ್ಣ ವ್ಯತ್ಯಾಸವಿದೆ,'' ಎನ್ನುತ್ತಾರೆ ಆಶೀಷ್ ರಂಜನ್. ಮೋದಿ ಅವರನ್ನು ಪ್ರಶ್ನಿಸುವ ಯುವಕರ ತೀವ್ರತೆಗಿಂತ ಮೋದಿ ಬೆಂಬಲಿಗ ಯುವಕರ ತೀವ್ರತೆಯೇ ಹೆಚ್ಚು ಎಂಬುದು ರಂಜನ್ ಅಭಿಪ್ರಾಯ. ಗುಜರಾತ್‌ನ 182 ವಿಧಾನಸಭೆ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿನ ಕ್ಷೇತ್ರಗಳ ಸಂಖ್ಯೆ 42. ಉಳಿದ 142 ಕ್ಷೇತ್ರಗಳು ತಾಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳೇ. ಹೀಗಿರುವಾಗ ಚುನಾವಣೆ ಮೇಲೆ ಈ ಯವ ಮತದಾರರ ಪ್ರಭಾವ ಹೇಗೆ ಕೆಲಸ ಮಾಡುತ್ತದೆ?, ಉಳಿದಿರುವ ದಿನಗಳಲ್ಲಿ ಈ ಪರಿಸ್ಥಿತಿಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಮುಖಂಡರು ಏನೇನು ಕಸರತ್ತು ಮಾಡುತ್ತಾರೆ ಎಂಬುದು ಗಮನಾರ್ಹ ಸಂಗತಿ. 12,37,606 18 ರಿಂದ 19 ವಯಸ್ಸಿನವರು 1,01,11,676 20 ರಿಂದ 29 ವಯಸ್ಸಿನವರು 1,12,53,348 30 ರಿಂದ 39 ವಯಸ್ಸು 84,71,874 40 ರಿಂದ 49 ವಯಸ್ಸಿನವರ ಸಂಖ್ಯೆ 62,95,237 50 ರಿಂದ 59 ವಯಸ್ಸಿನವರ ಸಂಖ್ಯೆ 36,78,207 60 ರಿಂದ 69 ವಯಸ್ಸಿನವರು 18,54,051 70 ರಿಂದ 79 ವಯಸ್ಸು 5,43,540 80 ರಿಂದ 89 ವಯಸ್ಸಿನೊಳಗಿನವರು 75,410 90 ರಿಂದ 99 ವಯಸ್ಸಿನವರು 7670 99 ಹಾಗೂ ಅದಕ್ಕಿಂತ ಮೇಲ್ಪಟ್ಟವರು ಆತ್ಮವೇ ಇಲ್ಲದೇ ಸಮಾಜವಾಗುವ ಆತಂಕ- ಗಾಂಧಿವಾದಿ ಅಮೃತಭಾಯ್ ಮೋದಿ - ಇದು 84 ವರ್ಷದ ಹಿರಿಯ ಜೀವ, ಗುಜರಾತಿನ ಸಾಕ್ಷಿಪ್ರಜ್ಞೆಯಂತಿರುವ ಗಾಂಧಿವಾದಿ ಅಮೃತಭಾಯ… ಮೋದಿ ಅವರ ಸ್ಪಷ್ಟ ಅಭಿಮತ. ವಿಧಾನಸಭೆ ಚುನಾವಣೆಯ ಪ್ರಚಾರದ ಭರಾಟೆ ಮುಗಿಲು ಮುಟ್ಟಿರುವಾಗ ಗಾಂಧಿನಗರದ ವಿಧಾನ ಸಭೆಯಿಂದ ಸುಮಾರು 20 ಕಿ.ಮೀ.ದೂರ ಸಾಬರಮತಿ ನದಿ ದಂಡೆಯ ಮೇಲಿನ ಮಹಾತ್ಮಾ ಗಾಂಧೀಜಿ ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಕುಳಿತು ಆಶ್ರಮದ ಆಗುಹೋಗುಗಳನ್ನು ನಿರ್ವಹಿಸುವ ದೈನಂದಿನ ಕಾಯಕದಲ್ಲಿ ನಿರತರಾಗಿದ್ದರು ಈ ಅಜ್ಜ. ಕಳೆದ ಸುಮಾರು ನಾಲ್ಕು ದಶಕಗಳಿಂದ ಸಾಬರಮತಿ ಆಶ್ರಮ ಸಂರಕ್ಷ ಣೆ ಮತ್ತು ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಆಗಿರುವ ಅಮೃತಭಾಯ… 'ವಿಜಯ ಕರ್ನಾಟಕ'ದ ಜತೆ ಮಾತಿಗೆ ಸಿಕ್ಕರು. - ಚುನಾವಣೆ ಕುರಿತು - ಒಲ್ಲದ ಮನಸ್ಸಿನಿಂದಲೇ ಮಾತು ಆರಂಭಿಸಿದ ಅವರು, ''ಈಗ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನನಗೆ ಅನ್ನಿಸುತ್ತಿಲ್ಲ, ಇದ್ದರೆ ಅದು ಕಾಗದದ ಮೇಲಷ್ಟೇ ಇದೆ,'' ಎಂದರು. ನನ್ನ ಪ್ರಕಾರ ಪ್ರಜಾಪ್ರಭುತ್ವ ಎಂದರೆ ನೀತಿ, ನಿರ್ಧಾರ, ಕಾರ್ಯಕ್ರಮಗಳು ಕೆಳಗಿನಿಂದ ಮೇಲಕ್ಕೆ ಹೋಗಬೇಕು, ಅವುಗಳನ್ನು ಮೇಲಿನಿಂದ ಕೆಳಕ್ಕೆ ಹೇರಿದರೆ ಅದು ಪ್ರಜಾಪ್ರಭುತ್ವ ಹೇಗಾಗುತ್ತದೆ ಎಂಬುದು ಅಮೃತಭಾಯ… ಪ್ರಶ್ನೆ. ಈಗ ದೇಶದಲ್ಲಿ ವಿಶ್ವಾಸಾರ್ಹ ನಾಯಕತ್ವದ ಕೊರತೆ ಇದೆ, ನಮ್ಮ ನಾಯಕರ ಮಾತುಗಳು ಮತಗಳಿಕೆಗಾಗಿ ಆ ಕ್ಷ ಣದ ಅಗತ್ಯಕ್ಕೆ ತಕ್ಕ ಮಾತುಗಳಾಗಿರುತ್ತವೆಯೇ ಹೊರತು ಅವುಗಳಲ್ಲಿ ದೂರದೃಷ್ಟಿ, ಹುರುಳು ಇರುವುದಿಲ್ಲ, ಇಂಥ ಸ್ಥಿತಿಗೆ ರಾಜಕಾರಣಿಗಳನ್ನಷ್ಟೇ ದೂಷಿಸಲಾಗದು. ನಾವು, ನೀವು, ಜನತೆ ಎಲ್ಲರೂ ಇದಕ್ಕೆ ಕಾರಣರು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟೊಂದು ದುರ್ಬಲ ಆಗುವುದರಲ್ಲಿ ರಾಜಕೀಯ ಪಕ್ಷ ಗಳ ಹೈಕಮಾಂಡ್ ಸಂಸ್ಕೃತಿ ಪ್ರಮುಖ ಕಾರಣ, ಶಾಸಕರು ಮುಖ್ಯಮಂತ್ರಿಯನ್ನು, ಸಂಸದರು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಪದ್ಧತಿಯೇ ಈಗ ಉಳಿದಿಲ್ಲ. ಸಂಸದೀಯ ಮಂಡಳಿ, ವರ್ಕಿಂಗ್ ಕಮಿಟಿ ಹೆಸರಿನಲ್ಲಿ ಒಬ್ಬಿಬ್ಬರು ಕುಳಿತು ಸಿಎಂ, ಪಿಎಂ ಆಯ್ಕೆ ಮಾಡಿದಾಗ ಅವರು ಜನರಿಗೆ ಉತ್ತರದಾಯಿ ಆಗಿರುವ ಅಗತ್ಯವೇ ಇರುವುದಿಲ್ಲ, ಹೈಕಮಾಂಡಿಗೆ ಉತ್ತರದಾಯಿ ಆಗಿದ್ದರೆ ಸಾಕಲ್ಲವೇ ಎಂದು ಕೇಳಿದರು. ಆದರೆ, ಯಾರೂ ನಿರಾಶರಾಗಬೇಕಿಲ್ಲ, ಒಳ್ಳೆಯವರು ಬೇಕಾದಷ್ಟು ಜನ ಇದ್ದಾರೆ. ಗುಜರಾತ್ ಶಾಸಕರಿಗೆ ಪಿಂಚಣಿ ಅಗತ್ಯವಿಲ್ಲ ಎಂದು ನಾವು ಹೋರಾಟ ಮಾಡಿದಾಗ ಕೆಲ ಬಿಜೆಪಿ, ಕಾಂಗ್ರೆಸ್ ಶಾಸಕರೂ ಉಪವಾಸ ಕುಳಿತರು. ಹೀಗಾಗಿ ಪಿಂಚಣಿ ತಡೆದೆವು. ಇಂಥ ರಾಜಕಾರಣಿಗಳೂ ಇದ್ದಾರೆ, ಅವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು. ಪ್ರಸಕ್ತ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ. ಏಕೆಂದರೆ, ನೈಜ ಕಾಳಜಿ ಯಾರಿಗೂ ಇಲ್ಲ. ಈಗ್ ನಡೆಯುತ್ತಿರುವುದು ಬರೀ ನಾಟಕ ಎಂದು ಮಾತು ಮುಗಿಸಿದರು ಗುಜರಾತಿನ ಈ ಸೀನಿಯರ್ ಮೋದಿ.
''ಮನುಷ್ಯ ಜೀವಂತವಾಗಿರಲು ಶ್ವಾಸ ಹೇಗೆ ಅತ್ಯಗತ್ಯವೋ ಹಾಗೆಯೇ ಸಮಾಜ ಜೀವಂತವಾಗಿರಲು ವಿಶ್ವಾಸ ಬಹಳ ಮುಖ್ಯ. ಆ ವಿಶ್ವಾಸವೇ ಇಲ್ಲವಾದರೆ ನಾವು ಒಂದು ಆತ್ಮವೇ ಇಲ್ಲದ ಸಮಾಜವಾಗುವ ಆತಂಕವಿದೆ''.
ಗುಜರಾತ್‌ನಲ್ಲಿ ಕ್ರಿಮಿನಲ್ ಅಭ್ಯರ್ಥಿಗಳಿಗೇನೂ ಬರವಿಲ್ಲ
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪೈಕಿ 137 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆಂಬ ಮಾಹಿತಿಯು ಸರಕಾರೇತರ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ವ್ಯಕ್ತವಾಗಿದೆ. ಚುನಾವಣಾ ಕಣ ಕಾವೇರುತ್ತಿರುವ ಹೊತ್ತಿನಲ್ಲಿ ಈ ಅಂಕಿ ಅಂಶಗಳು ನಿಮ್ಮನ್ನು ಕುತೂಹಲಕ್ಕೆ ತಳ್ಳಲಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ಇಡೀ ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೊದಲ ಹಂತದ ಮತದಾನಕ್ಕೆ ದಿನಗಣನೆಯೂ ಆರಂಭವಾಗಿದೆ. ಹಾಗೆಯೇ ಗಾಂಧಿ ನಾಡಿನಿಂದ ಹೊರ ಬರುತ್ತಿರುವ ಮಾಹಿತಿಗಳು ಕೂಡ ಕುತೂಹಲ ಮೂಡಿಸುತ್ತಿವೆ. 89 ಕ್ಷೇತ್ರಗಳಿಗೆ ಡಿಸೆಂಬರ್ 9ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 923 ಅಭ್ಯರ್ಥಿಗಳ ಪೈಕಿ 137 ಅಭ್ಯರ್ಥಿಗಳು ಅಥವಾ ಶೇ.15ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರ ವಿರುದ್ಧ ಕೊಲೆ, ಅಪಹರಣ, ಅತ್ಯಾಚಾರ ಸೇರಿದಂತೆ ಇನ್ನಿತರ ಗಂಭೀರ ಆರೋಪಗಳಿವೆ. ಹಾಗೆಯೇ 198(ಶೇ.21) ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದರೆ, 923 ಅಭ್ಯರ್ಥಿಗಳ ಸರಾಸರಿ ಆದಾಯ 2.16 ಕೋಟಿ ರೂಪಾಯಿ! ಇಂಥದೊಂದು ಮಾಹಿತಿಯನ್ನು ಹೊರ ಹಾಕಿದ್ದು ಸರಕಾರೇತರ ಸಂಸ್ಥೆಗಳಾದ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್'(ಎಡಿಆರ್) ಮತ್ತು 'ಗುಜರಾತ್ ಎಲೆಕ್ಷ ನ್ ವಾಚ್'. ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ 977 ಅಫಿದವಿತ್ ಪೈಕಿ 923 ಅಫಿದವಿತ್‌ಗಳಲ್ಲಿನ ಮಾಹಿತಿಯನ್ನಾಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕೊಲೆ, ರೇಪ್ 137 ಅಭ್ಯರ್ಥಿಗಳ ಪೈಕಿ 78 ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಪಕ್ಷ ವಾರು ವಿಶ್ಲೇಷಣೆಗೊಳಪಡಿಸಿದರೆ, ಬಿಜೆಪಿಯ 89 ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್‌ನ 20 ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ)ಯ ಅಭ್ಯರ್ಥಿ ಮಹೇಶ್ ವಾಸವಾ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಒಟ್ಟು 24 ಕ್ರಿಮಿನಲ್ ಪ್ರಕರಣಗಳಿವೆ. ಬಿಟಿಪಿ ಮತ್ತು ಕಾಂಗ್ರೆಸ್ ಮಧ್ಯೆ ಮೈತ್ರಿ ಏರ್ಪಟ್ಟಿದ್ದು, ಬಿಟಿಪಿ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಹಾಗೆಯೇ, 8 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಗಾಂಧಿಧಾಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಿಶೋರ್ ಪಿನಗೊಳ್ ಹಾಗೂ ಆಲ್ ಇಂಡಿಯಾ ಹಿಂದೂಸ್ತಾನ್ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿ ಲೋಮೇಶ್ ಚಂದೇಗರ್(ಜಾಮನಗರ್ ಗ್ರಾಮೀಣ ಕ್ಷೇತ್ರ) ವಿರುದ್ಧ ಅತ್ಯಾಚಾರದ ಪ್ರಕರಣಗಳಿವೆ. ಸ್ವತಂತ್ರ ಅಭ್ಯರ್ಥಿ ಗಿರಿರಾಜ್‌ಸಿನ್ಹ್ ಝಾಲಾ ವಿರುದ್ಧವೂ ಇಂಥದ್ದೇ ಕೇಸ್ ಇದೆ. ಶ್ರೀಮಂತ ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಯಲ್ಲಿ ಕಣದಲ್ಲಿ ಉಳಿದವರ ಪೈಕಿ ಹೆಚ್ಚು ಶ್ರೀಮಂತ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದಾರೆ. ರಾಜಕೋಟ್ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ್ ರಾಜಗುರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ವಿಜಯ ರೂಪಾನಿ ವಿರುದ್ಧ ಸ್ಪರ್ಧಿಸಿರುವ ಇಂದ್ರನೀಲ್ ಅವರು ಒಟ್ಟು ಆಸ್ತಿ 141 ಕೋಟಿ ರೂ. ಮೌಲ್ಯದ್ದಾಗಿದೆ. ನಂತರದ ಸ್ಥಾನದಲ್ಲಿ ಬಿಜೆಪಿಯ ಅಭ್ಯರ್ಥಿ ಸೌರಭ ಪಟೇಲ್(123 ಕೋಟಿ ರೂ.), ಧಂಜಿ ಪಟೇಲ್(113 ಕೋಟಿ ರೂ.) ಇದ್ದಾರೆ. 198 ಕೋಟ್ಯಧೀಶ ಅಭ್ಯರ್ಥಿಗಳಿದ್ದು ಈ ಪೈಕಿ ಬಿಜೆಪಿಗೆ ಸೇರಿದವರು 76 ಆಗಿದ್ದರೆ, ಕಾಂಗ್ರೆಸ್‌ನಲ್ಲಿ 60 ಅಭ್ಯರ್ಥಿಗಳಿದ್ದಾರೆ. ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ಬಿಜೆಪಿಯ ಶೇ.85ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದರೆ, ಕಾಂಗ್ರೆಸ್‌ನಲ್ಲಿ ಈ ಪ್ರಮಾಣ ಶೇ.70ರಷ್ಟಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಸರಾಸರಿ ಆದಾಯ 10.7 ಕೋಟಿ ರೂ. ಇದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆದಾಯ 8.46 ಕೋಟಿ ರೂ. ವಾದ್ವಾನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಧಂಜಿ ಪಟೇಲ್ ಅವರ ವಾರ್ಷಿಕ ಆದಾಯ 3.94 ಕೋಟಿ ರೂ.(201-18). ಇವರ ಒಟ್ಟಾರೆ ಆದಾಯ 113 ಕೋಟಿ ರೂ.(ಇದರಲ್ಲಿ ಪತ್ನಿ, ಅವಲಂಬಿತರ ಆಸ್ತಿಯೂ ಸೇರಿದೆ). ಗಾಂಧಿಧಾಮ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲ್ತಿ ಮಹೇಶ್ವರಿ ಅತ್ಯಂತ ಬಡ ಅಭ್ಯರ್ಥಿಯಾಗಿದ್ದು, ಇವರ ವಾರ್ಷಿಕ ಆದಾಯ 11.76 ಲಕ್ಷ ರೂ. ಮಾತ್ರ. ಶೈಕ್ಷ ಣಿಕ ಅರ್ಹತೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಶೈಕ್ಷ ಣಿಕ ಅರ್ಹತೆ ಮಾತ್ರ ಗಾಬರಿ ಹುಟ್ಟಿಸುವಂತಿದೆ. ಒಟ್ಟು ಅಭ್ಯರ್ಥಿಗಳ ಪೈಕಿ ಶೇ.27ರಷ್ಟು ಅಭ್ಯರ್ಥಿಗಳು ಮಾತ್ರ 12 ತರಗತಿಗೂ ಮೇಲ್ಮಟ್ಟದ ಶಿಕ್ಷ ಣ ಪಡೆದಿದ್ದಾರೆ. ಶೇ.17ರಷ್ಟು ಅಭ್ಯರ್ಥಿಗಳು ಅನಕ್ಷ ರಸ್ಥರಾಗಿದ್ದಾರೆ. ಅಂದರೆ, 923 ಅಭ್ಯರ್ಥಿಗಳ ಪೈಕಿ 673 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ. ಹೆಚ್ಚು ಸುಶಿಕ್ಷಿತರು ಶೈಕ್ಷ ಣಿಕ ಅರ್ಹತೆ ಮತ್ತು ವಿವರಕ್ಕೆ ಸಂಬಂಧಿಸಿ ಹೇಳುವುದಾದರೆ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಹೆಚ್ಚಿನವರು ಸುಶಿಕ್ಷಿತರಾಗಿದ್ದಾರೆ ಹಾಗೆಯೇ ತರುಣರೂ ಹೌದು. ಬಿಜೆಪಿಯ 32 ಅಭ್ಯರ್ಥಿಗಳು(ಶೇ.36) ಪದವೀಧರರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಪ್ರಮಾಣ ಶೇ.44ರಷ್ಟು(38 ಅಭ್ಯರ್ಥಿಗಳು). ಅಭ್ಯರ್ಥಿಗಳ ವಯಸ್ಸಿನ ಬಗ್ಗೆ ಹೇಳುವುದಾದರೆ, ಬಿಜೆಪಿಯು ವಯಸ್ಸಾದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿದೆ. ಬಿಜೆಪಿಯ 42 ಅಭ್ಯರ್ಥಿಗಳು 55 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಹಾಗೆಯೇ ಕಾಂಗ್ರೆಸ್ 28 ಅಭ್ಯರ್ಥಿಗಳು 55 ವರ್ಷ ದಾಟಿದ್ದಾರೆ. ಅಪಾಯಕಾರಿ ಕ್ಷೇತ್ರಗಳು ಎಡಿಆರ್ ಸಿದ್ಧಪಡಿಸಿರುವ ಈ ವಿಶ್ಲೇಷಣೆಯಲ್ಲಿ ರೆಡ್ ಅಲರ್ಟ್ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಅಂದರೆ, ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರವನ್ನು ಹೆಚ್ಚು ಅಪಾಯಕಾರಿ ಎಂದು ಗುರುತಿಸಿದೆ. ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 923 ಅಭ್ಯರ್ಥಿಗಳ ಪೈಕಿ ಶ್ರೀಮಂತ ಅಭ್ಯರ್ಥಿಗಳ ಸಂಖ್ಯೆ. ಇದರಲ್ಲಿ ಎಲ್ಲ ಪ್ರಮುಖ ಪಕ್ಷ ದ ಅಭ್ಯರ್ಥಿಗಳಿದ್ದಾರೆ. 85% ಬಿಜೆಪಿಯ ಅಭ್ಯರ್ಥಿಗಳು(86 ಪೈಕಿ 76 ಅಭ್ಯರ್ಥಿಗಳು) 70% ಕಾಂಗ್ರೆಸ್ ಅಭ್ಯರ್ಥಿಗಳು(86 ಪೈಕಿ 60 ಅಭ್ಯರ್ಥಿಗಳು) 25% ಎನ್‌ಸಿಪಿ ಅಭ್ಯರ್ಥಿಗಳು(86 ಪೈಕಿ 7 ಅಭ್ಯರ್ಥಿಗಳು) 32% ಆಪ್ ಅಭ್ಯರ್ಥಿಗಳು(19 ಪೈಕಿ 6 ಅಭ್ಯರ್ಥಿಗಳು) 3% ಬಿಎಸ್‌ಪಿ ಅಭ್ಯರ್ಥಿಗಳು(60 ಪೈಕಿ 2 ಅಭ್ಯರ್ಥಿಗಳು) 6% ಸ್ವತಂತ್ರ ಅಭ್ಯರ್ಥಿಗಳು(146 ಪೈಕಿ 25 ಅಭ್ಯರ್ಥಿಗಳು) ಟಾಪ್ 3 ಶ್ರೀಮಂತರು - 141 ಕೋಟಿ ರೂ. ಆಸ್ತಿ ಘೋಷಿಸಿರುವ ಕಾಂಗ್ರೆಸ್‌ನ ಇಂದ್ರನೀಲ್ ರಾಜುಗುರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. - ಸೌರಭ್ ಪಟೇಲ್ (123 ಕೋಟಿ ರೂ.), ಬಿಜೆಪಿ - ಧಂಜಿ ಪಟೇಲ್(113 ಕೋಟಿ ರೂ.), ಬಿಜೆಪಿ ಬಡ ಅಭ್ಯರ್ಥಿ 11.76 ಲಕ್ಷ ರೂ. ಆದಾಯ ಹೊಂದಿರುವ ಬಿಜೆಪಿಯ ಮಾಲ್ತಿ ಮಹೇಶ್ವರಿ ಅತ್ಯಂತ ಬಡ ಅಭ್ಯರ್ಥಿಯಾಗಿದ್ದಾರೆ. - 24 ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ)ಯ ಅಭ್ಯರ್ಥಿ ಮಹೇಶ್ ವಾಸವಾ ವಿರುದ್ಧದ ಕ್ರಿಮಿನಲ್ ಪ್ರಕರಣಗಳು. ಇದರಲ್ಲಿ ಕೊಲೆ ಪ್ರಕರಣವೂ ಇದೆ.
ನಮ್ಮ ಸಾಹಿತ್ಯ ಸಮ್ಮೇಳನಗಳು ಹೇಗಿರಬಾರದು..?
ಮೈಸೂರಿನಲ್ಲಿ ನಡೆದ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ‘ರಾಜಕೀಕರಣ’ಗೊಂಡ ವಿವಾದದ ಸುಳಿಯಲ್ಲಿ ಸಿಲುಕಿದೆ. ಕನ್ನಡ ನಾಡು, ನುಡಿಗೆ ಸೀಮಿತವಾಗಿರಬೇಕಿದ್ದ ಸಮ್ಮೇಳನವನ್ನು ಸರ್ವಾಧ್ಯಕ್ಷರೇ ‘ರಾಜಕೀಯ’ ಮಾಡಿದರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಹೇಗೆ ಇರಬಾರದು, ಎಲ್ಲಿ ಎಡವಟ್ಟಾಯಿತು, ಇಂಥದ್ದೇ ಅಪಸವ್ಯಗಳು ಮುಂಬರುವ ಸಮ್ಮೇಳನಗಳಲ್ಲಿ ಜರುಗಿದರೆ ಅದಕ್ಕೆ ಯಾರು ಹೊಣೆ ಎಂಬಂಥ ಗಂಭೀರ ಪ್ರಶ್ನೆಗಳನ್ನು ಲೇಖಕರು ಇಲ್ಲಿ ಎತ್ತಿದ್ದಾರೆ.
- ಡಾ. ಜಿ.ಬಿ. ಹರೀಶ್
ಈಚಿನ ಕನ್ನಡ ಸಾಹಿತ್ಯ ಸಮ್ಮೇಳನ (ಮೈಸೂರು) ನಡೆದ ವೈಖರಿ, ಸಮ್ಮೇಳನಾಧ್ಯಕ್ಷರ ‘ಜಾತ್ಯತೀತ’ ಮಾತುಗಳು... ಇವನ್ನು ಓದಿದವರಿಗೆ, ಪ್ರತ್ಯಕ್ಷ ನೋಡಿದವರಿಗೆ ಸಾಹಿತ್ಯ ಸಮ್ಮೇಳನ ‘ತಪ್ಪಿದ ತಾಳ’ ಎಂದು ಥಟ್ಟನೆ ಗೊತ್ತಾಗುತ್ತದೆ. ‘‘ಸಾಹಿತ್ಯ ಸಮ್ಮೇಳನ ಏಕೆ ಬೇಕು, ಇದೊಂದು ರೀತಿಯ ಜಾತ್ರೆ,’’ ಎಂದು ನವ್ಯ ಕವಿ ಬಿ.ಸಿ. ರಾಮಚಂದ್ರ ಶರ್ಮ ಹೇಳಿದ್ದುಂಟು. ರಾಜ್ಯದ ವಿವಿಧ ಭಾಗಗಳ ಜನರು ಒಂದು ಊರಿನಲ್ಲಿ ಓಡಾಡುವುದು, ಎರಡು -ಮೂರು ದಿನ ಅದೇ ಊರಿನವರೇ ಆಗಿಬಿಡುವುದು ಈ ಸಮ್ಮೇಳನಗಳ ಸೋಜಿಗ. ಅಡಿಗರು ಹೇಳುವ ‘ನಾನು ನೀನು ಅದು ಇದು ಕನ್ನಡ’ ಎಂಬ ಮಾತು ನಿಜವೆನಿಸುತ್ತದೆ.
ಸಾಹಿತಿಗಳು ಎಷ್ಟೇ ಹಾಳಾಗಿ ಹೋಗಿರಲಿ, ತಮ್ಮ ತಮ್ಮಲ್ಲೇ ಕಿತ್ತಾಡಿಕೊಂಡು ‘ನೀ ಹಾವು, ನೀ ಚೇಳು’ ಅಂತ ಕರೆದುಕೊಳ್ಳಲಿ, ಜನರಿಗಂತೂ ಸಾಹಿತ್ಯ ಸಮ್ಮೇಳನ ಜಾತ್ರೆಯೇ. ಆದರೂ ಅದು ಬೇಕು. ಜನ ಸಾಮಾನ್ಯ ಕನ್ನಡಿಗರ ಪಾಲಿಗೆ ಅದೊಂದು ಭಾಷಾಸ್ನಾನ. ಮೂರು ದಿನಗಳೂ ಕಂಡಲ್ಲಿ, ಕೇಳಿದಲ್ಲಿ ಕನ್ನಡದ್ದೇ ಕಲರವ. ಈ ಸಲದ ಸಮ್ಮೇಳನ ಹಾಗಿರಲಿಲ್ಲ. ಮೈಸೂರಿನ ಯದುವಂಶದ ಮನೆತನದವರು ಮೈಸೂರು ಪ್ರಾಂತದಲ್ಲಿ ಕನ್ನಡದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದವರು. ಇವತ್ತು ಮಾಧ್ಯಮ ನಿಂತಿರುವುದು ಹರಿತವಾದ ಆಧುನಿಕ ಗದ್ಯದ ಮೇಲೆ. ಪತ್ರಿಕಾ ಭಾಷೆ ಗದ್ಯದ ಭಾಷೆ. ಈ ಗದ್ಯಕ್ಕೆ ದೊಡ್ಡ ಪೋಷಣೆ ನೀಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರು. ಅವರ ಮನೆತನದವರಿಗೆ ಕನಿಷ್ಠ ಒಂದು ಆಹ್ವಾನ ಪತ್ರಿಕೆ ನೀಡುವ ಸೌಜನ್ಯವನ್ನೂ ಪರಿಷತ್ತು ತೋರಲಿಲ್ಲ. ಹೀಗೇಕೆ? ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಶಿಂಷಾ ಜಲವಿದ್ಯುತ್ ಆಗರ, ಕೋಲಾರದ ಚಿನ್ನದ ಗಣಿ... ಹೀಗೆ ಹತ್ತಾರು ಜನೋಪಯೋಗಿ ಕಾರ್ಯಗಳನ್ನು ಪ್ರಜಾಪ್ರಭುತ್ವದ ಬದಲು ರಾಜಪ್ರಭುತ್ವವಿದ್ದ ಕಾಲದಲ್ಲಿ ಮಾಡಿಸಿದವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದವರೇ ಮೈಸೂರಿನ ಮಹಾರಾಜರು. ಅವರ ಕುಟುಂಬಕ್ಕೆ ಆಹ್ವಾನ ಪತ್ರಿಕೆ ಏಕೆ ತಲುಪಲಿಲ್ಲ? ಸುತ್ತೂರು ಮಠ, ಮೈಸೂರಿನ ಶ್ರೀ ರಾಮಕೃಷ್ಣಾಶ್ರಮಗಳನ್ನು ಅಷ್ಟೇ ದೂರದಲ್ಲಿ ಇಡಲಾಯಿತು.
ಕನ್ನಡ ಭಾಷೆ ಯಾವುದೇ ಶ್ರೀಮಂತ- ಧೀಮಂತ ಭಾಷೆಗಳಷ್ಟೇ ಪ್ರಾಚೀನ ಗಾಂಭೀರ್ಯ, ಈಗಿನ ಗಾಂಭೀರ್ಯ ಇಟ್ಟುಕೊಂಡಿರುವ ಭಾಷೆ. ಅದರ ನುಡಿಗಟ್ಟು ಎಂದಿನಿಂದಲೂ ಸಾಂಕೇತಿಕ, ರೂಪಕಾತ್ಮಕ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಗೆ ತಕ್ಕಂತೆ ‘ಆದಿಪುರಾಣ’, ‘ವಿಕ್ರಮಾರ್ಜುನ ವಿಜಯ’ ಬರೆದವನು ಆದಿಕವಿ ಪಂಪ. ಅವನು ತನ್ನನ್ನು ‘ಹಿತ ಮಿತ ಮೃದು ವಚನಂ’ ಎಂದು ಕರೆದುಕೊಂಡಿದ್ದಾನೆ. ಆದರೆ, ‘ಪಂಪನಿಂದ ಚಂಪಾವರೆಗೆ’ (ಈ ಶೀರ್ಷಿಕೆಯೇ ಅಸಂಬದ್ಧ) ಎಂಬ ಮಾತುಗಳು ಸಮ್ಮೇಳನದ ಸಂದರ್ಭದಲ್ಲಿ ಹರಿದಾಡಿದವು. ಪಂಪ, ಅಲ್ಲಮ, ಬಸವ, ಕುಮಾರವ್ಯಾಸರ ನೆನಪು ಸಮ್ಮೇಳನದ ಸಭಾಂಗಣದಲ್ಲಿ ಸುಳಿದಾಡಲೇ ಇಲ್ಲ. ಇದಕ್ಕೆ ಕಾರಣ ಕನ್ನಡ ಸಾಹಿತ್ಯ-ಸಂಸ್ಕೃತಿ ಚರ್ಚೆ, ಮಂಡನೆಗಳಿಗಿಂತ ಪಕ್ಷ ರಾಜಕಾರಣಕ್ಕೆ ಹತ್ತಿರವಾದ ವ್ಯಾಕರಣ ರೂಪಿಸುವಂತೆ ಮಾತನಾಡಲು ‘ಚಂಪಾ ಗ್ಯಾಂಗ್’ ತಯಾರಿ ಮಾಡಿಕೊಂಡಿದ್ದುದು.
ಇದಕ್ಕೆ ನಿದರ್ಶನಗಳು ಕೆ.ಎಸ್. ಭಗವಾನ್, ಚಂಪಾ ಮಾತಿನಲ್ಲೇ ಸಿಗುತ್ತವೆ. ಭಗವಾನ್, ರಾಮಾಯಣ ಮಹಾಕಾವ್ಯ ಕುರಿತು ಭಗವಾನ್ ಶ್ರೀರಾಮಚಂದ್ರನನ್ನು ಕುರಿತು, ರಾಮರಾಜ್ಯದ ಕುರಿತು ನಾಲಗೆ ಹರಿಬಿಟ್ಟರು. ಅವರ ಬಾಯಿಹರಕುತನ ಮತ್ತೆ ಮತ್ತೆ ಕನ್ನಡಿಗರ ಎದುರು ಬಯಲಾಗುತ್ತಲೇ ಇದೆ. ರಾಮರಾಜ್ಯ ಎಂದರೆ ದಲಿತರನ್ನು ಶೋಷಿಸುವ ರಾಜ್ಯ ಎಂದು ವ್ಯಾಖ್ಯಾನಿಸಿದರು, ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ ಇದಕ್ಕಿಂತ ಭಿನ್ನವಿಲ್ಲ ಎಂಬುದು ಅವರ ಧೋರಣೆ. ಯಾವ ಮುಕ್ತ ಚರ್ಚೆಗೂ ಬರದೆ, ಕೈಗೆ ಸಿಕ್ಕಿಕೊಳ್ಳದೆ ಓಡಿ ಹೋಗುವ ‘ಉತ್ತರಕುಮಾರ’ ಕೆ.ಎಸ್. ಭಗವಾನ್ (ವಾಸ್ತವವಾಗಿ ಉತ್ತರ ಕುಮಾರ ಮಹಾಭಾರತದಲ್ಲಿ ಎಂಥ ಶ್ರೇಷ್ಠ ಪಾತ್ರ ಎಂಬುದು ದ.ರಾ. ಬೇಂದ್ರಯವರ ಲೇಖನ ಓದಿದವರಿಗೆ ಗೊತ್ತು). ಕರ್ನಾಟಕದಲ್ಲಿ ‘ವಾದರಹಿತ, ಗದ್ದಲ ಸಹಿತ, ಆಧಾರ ಶೂನ್ಯ’ ವಾತಾವರಣ ಸೃಷ್ಟಿಸುತ್ತಿರುವ ಗ್ಯಾಂಗ್, ಈ ಸಲ ಮೈಸೂರಿನಲ್ಲಿ ನೆರೆದಿತ್ತು.
ಪ್ರಧಾನ ಗುರುದತ್ತ, ಜಯಂತ್ ಕಾಯ್ಕಿಣಿಯವ ರಂಥ ಕೆಲವು ಪ್ರಾಜ್ಞರನ್ನು ಬಿಟ್ಟರೆ ಸಂಪೂರ್ಣ ರಾಜಕೀಯ ವಾಸನೆ ಹೊಡೆಯುವಂತೆ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಿತ್ತು. ರಾಜಕೀಯ ಕೆಟ್ಟ ವಸ್ತುವಲ್ಲ, ಆದರೆ ಅದನ್ನು ಸಮಕಾಲೀನ ಸಂವೇದನೆ, ಚರಿತ್ರೆಯ ಆಳ ಎರಡೂ ಗೊತ್ತಿರದ ‘ಚಂಪಾ ಭಗವಾನ್’ ಅಥವಾ ‘ ಭಗವಾನ್ ಚಂಪಾ’ ಅವರು ಬಳಸಿದಾಗ ಕೆಡುಕೆನಿಸುತ್ತದೆ.
ತಾನು ಎಡಪಂಥೀಯ ಮತ್ತು ತಾನು ಲೋಹಿಯಾವಾದಿ ಎನ್ನುವ ಚಂಪಾ ಅವರ ಸಮಯ ಸಾಧಕತನ ಎಲ್ಲರಿಗೂ ತಿಳಿದಿರುವ ವಿಷಯ. ಧಾರವಾಡದ ಸಾಹಿತ್ಯ ಸಂಭ್ರಮದ ಕಣದಲ್ಲಿ ಧುಮುಕಿ ಏನಾದರೂ ಅಸಡ್ಡಾಳ ಪ್ರಶ್ನೆ ಕೇಳಿ ನಗೆಗಾರ ಎನಿಸಿಕೊಳ್ಳುವ ವಿದೂಷಕತನ ಪ್ರತಿ ವರ್ಷವೂ ಕಾಣಿಸುವಂಥದ್ದೆ. ಕಳೆದ ಬಾರಿಯ ಸಂಭ್ರಮದಲ್ಲಿ ದೇವದತ್ತ ಪಟ್ನಾಯಕ ಎಂಬ ಪುರಾಣ ತಜ್ಞ ಇಂಗ್ಲಿಷ್ ಲೇಖಕರೊಡನೆ ಪುರಾಣ ಲೋಕ, ಅದರ ಸಂಕೇತ, ಸಾಂಸ್ಕೃತಿಕ ಅರ್ಥ ಕುರಿತು ಸಂವಾದ ಇಟ್ಟುಕೊಂಡಿದ್ದರು. ನನಗೆ ದೇವದತ್ತರೊಡನೆ ಸಂವಾದ ಮಾಡಲು ಸಂಘಟಕರು ಸೂಚಿಸಿದ್ದರು. ಪ್ರಶ್ನೋತ್ತರದಲ್ಲಿ ಸನಾತನ ಧರ್ಮ, ಹಿಂದೂ ಧರ್ಮ, ಹಿಂದುತ್ವ... ಹೀಗೆ ಸಭೆಗೆ ಸಂಬಂಧವೇ ಇರದ ಮಾತಿನ ನೊರೆಯನ್ನು ಚಂಪಾ ಸುರಿಸಿದರು. ಭೈರಪ್ಪನವರ ಉತ್ತರ ಕಾಂಡ ಆಗಷ್ಟೆ ಹೊರ ಬಿದ್ದಿತ್ತು. ಯಾರೂ ಕೇಳದಿದ್ದರೂ ಚಂಪಾ ಅವರು ತಾವೇ ಕೆಲವು ‘ರಹಸ್ಯ’ಗಳನ್ನು ಹೇಳಿದರು. ಪೋಲಂಕಿ ಮೈಸೂರಿನವರು, ಭೈರಪ್ಪ ಮೈಸೂರಿನವರು. ಪೋಲಂಕಿ ಯವರ ಸೀತಾಯಣ ಓದಿ ಭೈರಪ್ಪ ಅವರು ಉತ್ತರಕಾಂಡ ಬರೆದಿದ್ದಾರೆ ಎಂದು ಬಿಟ್ಟರು. ಆಗ ತಾನೆ ಅದನ್ನು ಸಂಪೂರ್ಣ ಓದಿ ವಿಮರ್ಶಾ ಲೇಖನ ಬರೆದಿದ್ದ ನನಗೆ ಗಾಬರಿ! ‘‘ನೀವು ಉತ್ತರಕಾಂಡ ಓದಿದ್ದೀರಾ?’’ ಎಂದು ಪ್ರಶ್ನಿಸಿದೆ. ‘‘ಇಲ್ಲ,’’ ಎಂದರು ಭಗವಾನ್ ಚಂಪಾ. ನಾನಂದೆ ‘‘ಓದಿ ಮತ್ತೆ ಚರ್ಚಿಸೋಣ’’. ಹೇಗಿದೆ ನೋಡಿ ಚಂಪಾಶೈಲಿ.
ಮೈಸೂರಿನಲ್ಲಿ ಮತ್ತೆ ರಹಸ್ಯ ಹೊರಗೆಡವಿದರು. ಜಾತ್ಯತೀತ ಪಕ್ಷಕ್ಕೆ ವೋಟು ಹಾಕಿ ಎಂದರು. ಓಟು ಹಾಕಿ, ಹಾಕಬೇಡಿ ಎನ್ನಲು ಇವರ್ಯಾರು? ರಾಜಕೀಯ ಚರ್ಚೆಯೇ ಮಾಡುವುದಿದ್ದರೆ ಹತ್ತಾರು ವೇದಿಕೆಗಳಿವೆ. ಅಲ್ಲಿ ಅವರು ಪಕ್ಷಗಳ ಪರ ಬ್ಯಾಟಿಂಗ್ ಮಾಡಲಿ. ಇನ್ನು ಸನ್ಮಾನ್ಯ ಎಚ್.ಡಿ. ದೇವೇಗೌಡರು ಅಷ್ಟು ದೀರ್ಘಕಾಲ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಏಕೆ ಅವಕಾಶ ಮಾಡಿಕೊಟ್ಟಿತು? ರಾಮಾಯಣದ ವಿರೋಧ, ರಾಮರಾಜ್ಯದ ವಿರೋಧ, ಸೆಕ್ಯುಲರಿಸಂ ತಮಟೆ, ಗಂಟೆ ಜಾಗಟೆ, ದೇವೇಗೌಡರ ಭಾಷಣ... ಇದು ಈ ಸಲದ ಸಾಹಿತ್ಯ ಸಮ್ಮೇಳನದ ಮುಖ್ಯಾಂಶ. ಕನ್ನಡ ಸಾಹಿತ್ಯ ಪರಿಷತ್ತಿಗೆ ಏನು ಮಂಕು ಕವಿದಿದೆ? ಇಂಥ ಸಾಹಿತ್ಯ ಸಮ್ಮೇಳನ ಮಾಡಿದೆವು ಎಂಬ ಅಪಕೀರ್ತಿ ಹೊರಲು ಮೈಸೂರಿನ ಘಟಕ ಸಿದ್ಧವೇ?
ರಾಜಕಾರಣಿಗಳನ್ನು ನೇರವಾಗಿ ವೇದಿಕೆ ಹತ್ತಿಸುವ ಪರಿಪಾಠ ಬೇರೆ ರಾಜ್ಯಗಳ ಸಾಹಿತ್ಯ ಸಮ್ಮೇಳನಗಳಲ್ಲಿ ಇಲ್ಲ. ಮರಾಠಿ ಸಾಹಿತ್ಯ ಸಮ್ಮೇಳನ ಇದಕ್ಕೊಂದು ಉತ್ತಮ ಉದಾಹರಣೆ. ಸಾಹಿತಿಗಳು ಸೈದ್ಧಾಂತಿಕವಾಗಿ ತಮ್ಮ ನಿಲುವುಗಳನ್ನು ಹೇಳಲಿ, ದೂರು ಬೇಡ ಎನ್ನುತ್ತಾರೆ. ಆದರೆ, 2018ರಲ್ಲಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಇದೆ. ಅದಕ್ಕೆ ಮೊದಲು (ಪೂರ್ವಭಾವಿಯಾಗಿ ಅಲ್ಲ!) ನಡೆದ ಸಮ್ಮೇಳನ ಇದು. ಒಟ್ಟು ಚಿತ್ರ ನೋಡಿದರೆ ನನಗೆ ಹೀಗೆ ಅನಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ಮೈಸೂರು. ಮುಂದಿನ ವರ್ಷ ಚುನಾವಣೆ, ಅದರ ಮುಂದಿನ ವರ್ಷ ಲೋಕಸಭೆ ಚುನಾವಣೆ. ಯಾತಕ್ಕೂ ಇರಲಿ ಅಂತ ಕೆಲವು ‘ಹಿರಿಯ’ ಸಾಹಿತಿಗಳು ಕಾಂಗ್ರೆಸ್ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಹಿಂದೆ ಕೂಡ ಉತ್ತಮ ಬ್ಯಾಟಿಂಗ್ ಮಾಡಿದವರು ಪ್ರಾಧಿಕಾರಗಳ ಕುರ್ಚಿ ಏರಿದ್ದು ಸುಳ್ಳಲ್ಲವಲ್ಲ?
ರಾಮರಾಜ್ಯ, ಭಗವಾನ್ ಶ್ರೀ ರಾಮಚಂದ್ರನ ಮೇಲೆ ಅವಹೇಳನಕಾರಿಯಾಗಿ ಕೆ.ಎಸ್. ಭಗವಾನ್ ಮಾತನಾಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಯಾಕೆ ಅಂತರ ಕಾಯ್ದುಕೊಳ್ಳಲಿಲ್ಲ? ‘ಚಂಪಾ-ಭಗವಾನ್’ ಆಗ ಹೇಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೋ ಈಗಲೂ ಅವರು ತಮ್ಮದೇ ‘ಗುಣಮಟ್ಟ’ ಕಾಪಾಡಿಕೊಂಡು ಬಂದಿದ್ದಾರೆ. ಬದಲಾಗುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ತು. ನಾಳೆ ಹಿಂದುತ್ವ ಎಂದು ಅಬ್ಬರಿಸಿ, ಬೊಬ್ಬಿರಿಯುವವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೋ, ಯಾವುದಾದರೂ ಗೋಷ್ಠಿಯಲ್ಲೋ ತಮ್ಮ ವರಸೆಯಲ್ಲಿ ಮಾತನಾಡಿದರೆ ಯಾರು ಹೊಣೆ? ಖಂಡಿತ ಚಂಪಾ, ಭಗವಾನ್ ಮತ್ತು ಕಸಾಪ ಇದಕ್ಕೆ ಹೊಣೆಯಾಗಲೇಬೇಕು.
ತಿಂಟಾಜೆಲ್ ಆಕರ್ಷಣೆ
*ಎನ್.ವಿ. ರಮೇಶ್ ಅಲ್ಲಲ್ಲಿ ಕೋಟೆ, ಕಣಿವೆ, ಗುಹೆ ಒಟ್ಟಾರೆ ನೈಸರ್ಗಿಕ ಆಕರ್ಷಣೆಗಳಿಂದ ಗಮನ ಸೆಳೆಯುತ್ತದೆ ಇಂಗ್ಲೆಂಡಿನ ಕೆಲವು ಪ್ರವಾಸಿ ತಾಣಗಳು. ಅಪರೂಪದ ಇತಿಹಾಸ ಹೊಂದಿರುವುದರ ಜತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ ಇಂಗ್ಲೆಂಡ್‌ಗೆ ಭೇಟಿ ನೀಡಿದರೆ ತಿಂಟಾಜೆಲ್ ನಡುಗಡ್ಡೆಯ ಸುತ್ತಮುತ್ತ ಪ್ರಯಾಣ ಮಾಡಲೇಬೇಕು. ತಿಂಟಾಜೆಲ್ ನಡುಗಡ್ಡೆಯ ಪರ್ಯಾಯ ದ್ವೀಪದಲ್ಲಿ ಇರುವ ಮಧ್ಯಯುಗದ ಎಲ್ಲೆಕಟ್ಟು ಕೋಟೆಯು ಉತ್ತರ ಕಾರ್ನ್‌ವಾಲ್‌ದಲ್ಲಿದೆ. ತಿಂಟಾಜೆಲ್ ಇಂಗ್ಲಿಷ್ ಪರಂಪರೆಯ ಅತಿ ಮುಖ್ಯ 5 ಆಕರ್ಷಣೆಗಳಲ್ಲಿ ಇದು ಕೂಡ ಒಂದು. ಪ್ರತಿವರ್ಷ 2 ಲಕ್ಷ ಹಾಗೂ ಪ್ರತಿ ದಿನ 3000 ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ರೋಮನೋ ಬ್ರಿಟಿಷ್ ಕಾಲದ್ದು ಎನ್ನಲಾಗಿದೆ. 13ನೇ ಶತಮಾನದಲ್ಲಿ ಕಾರ್ನ್‌ವಾಲ್‌ನ ಆರಂಭದ ರಾಜ ರಿಚರ್ಡ್ ಇಲ್ಲಿ ಒಂದು ಕೋಟೆ ಕಟ್ಟಿಸಿದ್ದಾನೆ. ಮುಂದೆ ಇದು ದುರಸ್ತಿಯಿಲ್ಲದೇ ನಾಶವಾಯಿತು. 19ನೇ ಶತಮಾನದಲ್ಲಿ ಪುರಾತತ್ವ ಶಾಸ್ತ್ರದ ತನಿಖೆ ಆರಂಭವಾದಾಗ, ರಿಚರ್ಡ್‌ನ ಕೋಟೆಯ ಅವಶೇಷ ನೋಡಲು, ಪ್ರವಾಸಿಗಳು ಬರುತ್ತಾ, ಇದು ಒಂದು ಪ್ರವಾಸಿ ಕೇಂದ್ರವಾಗಿದೆ. ರೋಮನ್ ಅವಧಿಯ ಕೊನೆಯಲ್ಲಿ, ಮೆಡಿಟೇರಿಯನ್ ಪ್ರದೇಶದೊಂದಿಗಿದ್ದ ವ್ಯಾಪಾರಿ ಕೊಂಡಿಗಳ ಬಗ್ಗೆ ಪ್ರಮುಖ ಅಂಶಗಳು ಕಂಡು ಬಂದವು. ಈ ಕೋಟೆಯೊಂದಿಗೆ ಅರ್ಥರ್ ರಾಜನ ಬಗೆಗಿನ ಅನೇಕ ಪ್ರತೀತಿಗಳು ಹಾಸುಹೊಕ್ಕಾಗಿವೆ. 12ನೇ ಶತಮಾನದಲ್ಲಿ ಮಾನ್‌ಮೌತ್‌ನ ಜಿಯೋಫ್ರೆ ತಿಂಟಾಜೆಲ್‌ನ್ನಲ್ಲಿ ಇತಿಹಾಸದ ಬಗೆಗಿನ ತನ್ನ ಕಾಲ್ಪನಿಕ ಗ್ರಹಿಕೆಯಲ್ಲಿ, ಅರ್ಥರ್‌ನ ವಿಚಾರವನ್ನು ವಿವರಿಸಿದಾಗ ಇದು ಆರಂಭವಾಯಿತು. ಅರ್ಥರ್‌ನ ದಂತಕಥೆ: ಜಿಯೋಫ್ರೆ ಹೇಳಿದ ಕಥೆಯಂತೆ ಅರ್ಥರ್‌ನ ತಂದೆ ಯೂಥರ್ ಪೆನ್‌ಡ್ರಾಗನ್ ಬ್ರಿಟನ್ನಿನ ರಾಜನಾಗಿದ್ದ. ಆತ ಕಾರ್ನ್‌ವಾಲ್‌ದ ದಳಪತಿ ಗೋರ್ಲೋಯಿಸ್ ಮೇಲೆ ಯುದ್ಧಕ್ಕೆ ಹೊರಟ. ಆತನ ಉದ್ದೇಶ, ತಾನು ಪ್ರೀತಿಸುತ್ತಿದ್ದ ಗೋರ್ಲೋಯಿಸ್‌ನ ಹೆಂಡತಿ ಇಗ್ರಾಐನ್‌ಳನ್ನು ವಶಪಡಿಸಿಕೊಳ್ಳಲು. ತನ್ನ ಕೋಟೆ ಡಿಮಿಲಿಯಾಕ್‌ನಿಂದ ಗೋರ್ಲೋಯಿಸ್ ಯೂಥರ್‌ನ ಸೈನ್ಯದ ವಿರುದ್ಧ ಹೋರಾಡಿ, ತನ್ನನ್ನು ರಕ್ಷಿಸಿಕೊಂಡ. ಯೂಥರ್ ಡಿಮಿಲಿಯಾಕ್‌ಗೆ ಮುತ್ತಿಗೆ ಹಾಕಿದ. ತನ್ನ ಗೆಳೆಯ ಉಲ್ಫಿನ್‌ಗೆ 'ನಾನು ಇಗ್ರಾಐನ್‌ಳನ್ನು ಬಹಳ ಪ್ರೀತಿಸುತ್ತೇನೆ' ಎಂದು ಹೇಳಿದ ಯೂಥರ್. ಆಗ ಉಲ್ಫಿನ್ ಹೇಳಿದ 'ತಿಂಟಾಜೆಲ್‌ನ್ನು ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸಮುದ್ರದ ಬಲದಿಂದಿದ್ದು, ಎಲ್ಲ ಕಡೆಗಳಿಂದ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದೆ. ಅಲ್ಲಿ ಹೋಗಲು ಬೇರೆ ದಾರಿಯಿಲ್ಲ. ಒಂದೇ ದಾರಿ. ಬಂಡೆಗಳ ಮಧ್ಯೆ ಇರುವ ಪುಟ್ಟ ಮಾರ್ಗ. ಅಲ್ಲಿ ಸದಾ 3 ಶಸ್ತ್ರಸಜ್ಜಿತ ಯೋಧರು ಕಾವಲು ಕಾಯುತ್ತಿದ್ದು, ಯಾರನ್ನೂ ಬಿಡುವುದಿಲ್ಲ. ನೀನು ಒಳಹೋಗಲು ಅಸಾಧ್ಯ'. ಮಾನ್‌ಮೌತ್‌ನ ಜಿಯೋಫ್ರೆಯ ಕಥೆ ಮುಂದುವರಿದಂತೆ, ಇವರು ಮಾಂತ್ರಿಕ ಮರ್ಲಿನ್‌ನನ್ನು ಕರೆಯುತ್ತಾರೆ. ಮಾಂತ್ರಿಕ, ಯೂಥರ್‌ನನ್ನು ಗೋರ್ಲೋಯಿಸ್‌ನನ್ನಾಗಿ ಪರಿವರ್ತಿಸುತ್ತಾನೆ. ಮಾಂತ್ರಿಕ ತನ್ನನ್ನು ಹಾಗೂ ಉಲ್ಫಿನ್‌ನನ್ನೂ, ಗೋರ್ಲೋಯಿಸ್‌ನ ಸಂಗಾತಿಗಳನ್ನಾಗಿ ಪರಿವರ್ತಿಸಿ ಕೊಳ್ಳುತ್ತಾನೆ. ಈ ಛದ್ಮರೂಪದಲ್ಲಿ ತಿಂಟಾಜೆಲ್‌ನಲ್ಲಿ ಯೂಥರ್ ಇಗ್ರಾಐನ್‌ಳ ಬಳಿ ಹೋಗಿ, ಆ ರಾತ್ರಿ ಆಕೆಯನ್ನು ಕೂಡಿದಾಗ ಆಕೆಯ ಗರ್ಭದಲ್ಲಿ ಅರ್ಥರ್ ಅಂಕುರಿಸುತ್ತಾನೆ. ಈ ದಂತಕಥೆ ಹಾಗೂ ಪುಸ್ತಕ ಅತ್ಯಂತ ಜನಪ್ರಿಯವಾಯಿತು. ಮರ್ಲಿನ್‌ನ ಗವಿ: ಕಾರ್ನ್‌ವಾಲ್‌ನಲ್ಲಿ ರೋಮನೋ - ಬ್ರಿಟಿಷ್ ಅವಧಿಯಲ್ಲಿ ಸ್ಥಾಪಿಸಲಾದ 5 ಮೈಲುಗಲ್ಲುಗಳು ಅಥವಾ ಮಾರ್ಗನಿರ್ದೇಶಕಗಳನ್ನು ಪುರಾತತ್ವ ಶಾಸ್ತ್ರ ಅರಿತಿದೆ. ಇದುವರೆಗೆ ಇಲ್ಲಿ ಯಾವುದೋ ರಚನೆಯ ಉತ್ಖನನವಾಗಿಲ್ಲ. ಹೀಗಾಗಿ ಇದು ರೋಮನ್ ಅವಧಿಯ ವಸಾಹತು ರೋಮನೋ ಬ್ರಿಟಿಷ್ ಅವಧಿಯ ಮಣ್ಣಿನ ಪಾತ್ರೆಗಳು ಇಲ್ಲಿ ಸಿಕ್ಕಿವೆ. ಎಳೆಯುವ ತಂತಿಕಟ್ಟಿನ, ಹಣಹಾಕುವ ಚರ್ಮದ ಕೈ ಚೀಲದಲ್ಲಿ ಕ್ರಿ.ಶ 270ರಿಂದ 272ರ ಟೆಟ್ರಿಕಸ್ ಆಡಳಿತದ ಕಡಿಮೆ ಬೆಲೆಯ ರೋಮನ್ ನಾಣ್ಯಗಳು ಸಿಕ್ಕಿವೆ. 2015-16ರಲ್ಲಿ ಪೀಟರ್ ಗ್ರಹಾಂ ಎಂಬ ಕಲಾವಿದ, ಒಂದು ಅಡಿ ಎತ್ತರದ ಗಡ್ಡದ ಮುಖದ ಮರ್ಲಿನ್‌ನ್ನು ಇಲ್ಲಿಯ ಗವಿಯ ಬಳಿಯ ಬಂಡೆಯ ಮೇಲೆ ಕೆತ್ತಿದ್ದಾನೆ. ಈ ಗವಿಗೆ ಮರ್ಲಿನ್‌ನ ಗವಿ ಎನ್ನುತ್ತಾರೆ. ಟೆನ್ನಿಸನ್ ಕವಿಯ ರಾಜನ ಬಗೆಗಿನ ಜನಪದ ಗೀತೆಯಲ್ಲಿ ಈ ಅಂಶ ಬಂದಿದೆ. ತಿಂಟಾಜೆಲ್‌ನ ಇತಿಹಾಸ ಹಾಗೂ ಈ ನಡುಗಡ್ಡೆಯ ಸ್ಥಳದ ದಂತಕಥೆಗಳನ್ನು, ಪುನರ್ ಕಲ್ಪಿಸಲು, ಇಂಗ್ಲಿಷ್ ಪರಂಪರೆಯ ಒಂದು ಯೋಜನೆಯಾಗಿ ಈ ಕೆಲಸ ನಡೆದಿದೆ. 1998ರಲ್ಲಿ ಆರ್ಟೋಗ್ನೌ ಕಲ್ಲು ಸಿಕ್ಕಿ, ಅದರಲ್ಲಿಯ ಲ್ಯಾಟಿನ್ ಭಾಷೆಯ ಕೆತ್ತನೆ ತಿಳಿಸುವಂತೆ, ರೋಮನ್ ಬ್ರಿಟನ್ ಆಡಳಿತ ಬಿದ್ದು ಹೋದರೂ ಆ ಸ್ಥಳದಲ್ಲಿ ಲ್ಯಾಟಿನ್ ಭಾಷೆ ಉಳಿದಿತ್ತು ಎಂದು ಹೇಳುತ್ತದೆ. ಮರ್ಲಿನ್ನ್‌ನ ಗವಿ: ತಿಂಟಾಜೆಲ್ ಕೋಟೆಯ ಕೆಳಗಿರುವ ಗವಿಯಿದು. ಕಾರ್ನ್‌ವಾಲ್‌ದ ಬಾಸ್ ಕೋಟೆಯ ನೈರುತ್ಯಕ್ಕೆ, 5 ಕಿ.ಮಿ ದೂರದಲ್ಲಿ ಇದೆ. ಇದು 100 ಮೀಟರ್ ಉದ್ದವಿದ್ದು ಪೂರ್ವಕ್ಕೆ ತಿಂಟಾಜೆಲ್ ಸ್ವರ್ಗ ಹಾಗೂ ಪಶ್ಚಿಮಕ್ಕೆ ಪಶ್ಚಿಮಕೂವ್ ಮುಲ್, ತಿಂಟಾಜೆಲ್ ನಡುಗಡ್ಡೆಯನ್ನು ಸಂಪೂರ್ಣ ಹಾದು ಹೋಗುತ್ತದೆ. ಇದು ಸಮುದ್ರ ಗವಿಯಾಗಿದ್ದು, ಕಪ್ಪ್ಪು ಪದರು ಕಲ್ಲು ಹಾಗೂ ಜ್ವಾಲಾಮುಖಿ ಬಂಡೆಗಳ ನಡುವೆ ಒತ್ತಲ್ಪಟ್ಟ ಪ್ರಸ್ತ ಭೂಮಿ. ಈ ಗವಿಗೆ ಕರೆದೊಯ್ಯುವ ಕೆಳಗಿನ ಭಾಗದ ಮೆಟ್ಟಿಲುಗಳು, ನೀರಿನ ಹೊಡೆತದಿಂದ ಮಾಯವಾಗಿದೆ. ತೆವಳಿಕೊಂಡು ಕೆಳಗಿಳಿದು, ಅಲ್ಲಿಯ ಕಡಲ ಕಿನಾರ ತಲುಪಲು, ದೊಡ್ಡ ಬಂಡೆಯ ನೆರವು ಬೇಕಾಗುತ್ತದೆ. ಗವಿಯಲ್ಲಿ ಪೂರ್ಣ ಉಬ್ಬರವಿದ್ದು, ಮಳಲ ತಡಿಯಲ್ಲಿ ಕಡಲ ಇಳಿತವಿದೆ. ಹೋಗುವುದು ಹೇಗೆ?: ಇಂಗ್ಲೆಂಡಿನ ಪ್ಲೈಮೌತ್ ವಿಮಾನ ನಿಲ್ದಾಣಕ್ಕೆ ಹೋಗಲು ಬೆಂಗಳೂರು ವಿಮಾನ ನಿಲ್ದಾಣದಿಂದ ದೋಹಾ ತಲುಪಿ. ದೋಹಾದ ಹಮಾದ್ ವಿಮಾನ ನಿಲ್ದಾಣದಿಂದ ಏರ್ ಬಸ್‌ನಲ್ಲಿ ಲಂಡನ್ನಿನ ಹೀಥ್ರೊ ವಿಮಾನ ನಿಲ್ದಾಣದಿಂದ ಬಸ್ ಮಾರ್ಗದಲ್ಲಿ ಹೊರಟರೆ, ಪ್ಲೈಮೌತ್ ನಗರ ಸೇರಬಹುದು. ಬಾಡ್‌ಮಿನ್ ಪಾರ್ಕ್‌ವೇ ರೇಲ್ವೆ ನಿಲ್ದಾಣದಿಂದ, ಟಾಕ್ಸಿಯಲ್ಲಿ ತಿಂಟಾಜೆಲ್ ಕೋಟೆಗೆ 35 ನಿಮಿಷÜ ಪ್ರಯಾಣ. ಒಟ್ಟೂ ಪ್ರಯಾಣದ ಅವಧಿ 24 ಗಂಟೆ 15 ನಿಮಿಷ. ಅಂದಾಜು ಪ್ರಯಾಣ ದರ ರೂ 69,574.
ಬೀಚ್‌ನಲ್ಲಿ ತೇಲುವಾಸೆ
* ಸಾತ್ವಿಕಾ ಅಪ್ಪಯ್ಯ, ನಟಿ/ನಿರೂಪಣೆ-ನಂದಿನಿ ಕೆ.ಎಲ್ ವೈವಿಧ್ಯಮಯ ಸಂಸ್ಕೃತಿ: ನನ್ನದು ಯಾವಾಗಲೂ ಪ್ಲಾನ್ಡ್ ಟ್ರಿಪ್ ಆಗಿರುತ್ತದೆ. ಹೋದಂತಹ ಸ್ಥಳಗಳಲ್ಲಿ ಅಲ್ಲಿಯ ಜನಜೀವನ, ಸಂಸ್ಕೃತಿ ಎಲ್ಲವನ್ನು ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿದೆ. ಅಲ್ಲಿಯ ಜನಜೀವನದ ಜತೆ ಬೆರೆತು ಮಾತನಾಡುತ್ತೇನೆ. ಆಹಾರವನ್ನು ಟೇಸ್ಟ್ ಮಾಡುತ್ತೇನೆ. ಹೋದಂತಹ ಸ್ಥಳಗಳಲ್ಲಿರುವ ವಿಶೇಷತೆಯನ್ನು ತಪ್ಪದೇ ತಿಳಿದುಕೊಳ್ಳಬೇಕು. ಲೈಟ್ ಲಗೇಜ್: ಹೋದಂತಹ ಸ್ಥಳಗಳಲ್ಲಿ ತಪ್ಪದೇ ಶಾಪಿಂಗ್ ಮಾಡುವುದರಿಂದ ಲೈಟ್ ಲಗೇಜ್ ಕ್ಯಾರಿ ಮಾಡುತ್ತೇನೆ. ಇದರಿಂದ ತಿರುಗಾಡಲು ಅನುಕೂಲಕರವಾಗುತ್ತದೆ. ಮ್ಯಾಚಿಂಗ್ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಜತೆಯಲ್ಲಿ ವಾಟರ್ ಬಾಟಲ್, ಮೇಕಪ್ ಕಿಟ್ ಇರುತ್ತದೆ. ಅದರ ಜತೆಗೆ ಫೋನ್ ಹಾಗೂ ಖರ್ಚನ್ನು ಸರಿದೂಗಿಸಿಕೊಳ್ಳುವಷ್ಟು ಹಣ ನಮ್ಮಲ್ಲಿರಬೇಕು. ಮನಸ್ಸಿಗೆ ಉಲ್ಲಾಸ: ಇಂದಿನ ಬಿಝಿ ಲೈಫ್‌ನಲ್ಲಿ ಒಂದೇ ಸ್ಥಳದಲ್ಲಿದ್ದರೆ ಬೇಸರವಾಗುತ್ತದೆ. ಟೆನ್ಷನ್ ನಿವಾರಣೆಯಾಗಬೇಕೆಂದರೆ ಹೊಸ ತಾಣಗಳಿಗೆ ತಮ್ಮ ಆಪ್ತರೊಂದಿಗೆ ಭೇಟಿ ನೀಡಿದಾಗ ಮನದಲ್ಲಿ ಉಲ್ಲಾಸ ಮೂಡುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಟ್ರಿಪ್ ಹೊರಡಲು ಸಿದ್ಧರಾಗಿ. ಜೀನದಲ್ಲಿ ದೇಶ ಸುತ್ತಿದಾಗಲೇ ಬದುಕನ್ನು ಕಟ್ಟಿಕೊಳ್ಳುವ ಬಗೆ ಗೊತ್ತಾಗುತ್ತದೆ.
ಟ್ರಾವೆಲ್ ಮಾಡುವುದರಲ್ಲಿ ನನಗೆ ತುಂಬಾ ಕ್ರೇಜ್ ಇರುವುದರಿಂದ ಆಗಾಗ ಹಲವು ತಾಣಗಳಿಗೆ ಭೇಟಿ ನೀಡುತ್ತಿರುತ್ತೇನೆ. ಪದೇಪದೆ ಹೋಗಬೇಕೆನಿಸುವ ಸ್ಥಳವೆಂದರೆ ಮಂಗಳೂರು. ಹಲವಾರು ದೇಶಗಳನ್ನು ಸುತ್ತಿಲ್ಲ. ಆದರೆ ಥಾಯ್ಲೆಂಡ್‌ಗೆ ಹೋಗಿ ಬಂದಿದ್ದೇನೆ. ಅಲ್ಲಿನ ಜನಜೀವನ ಇಷ್ಟವಾಯಿತು. ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ, ಯುರೋಪಿನ ತಾಣಗಳಿಗೆ ಹೋಗಬೇಕನ್ನುವ ಆಸೆ ಇದೆ. ನನಗೆ ಸಮುದ್ರ ತೀರಗಳಿಗೆ ಮತ್ತೆಮತ್ತೆ ಹೋಗಬೇಕು ಅನಿಸುತ್ತದೆ. ಅದಕ್ಕಾಗಿ ಕರಾವಳಿ ತೀರ ನನ್ನನ್ನು ಕೈಬೀಸಿ ಕರೆಯುತ್ತದೆ. ಅಲ್ಲಿ ಹೋದಾಗ ಅಲ್ಲಿನ ತಂಗಾಳಿಗೆ ಮೈಗೆ ಸೋಕಿದಾಗ ಸಿಗುವ ಮಜವೇ ಬೇರೆ. ಬೀಚ್‌ನಲ್ಲಿ ತೇಲಾಡಿ ಪೋಟೋ ಕ್ಲಿಕ್ಕಿಸಿಕೊಂಡರೆ ಮನಸ್ಸಿಗೆ ಸಮಾಧಾನವಾಗುತ್ತದೆ. ಬೀಚ್‌ನಲ್ಲಿ ಈಜಾಡಿದರೆ ಆರೋಗ್ಯಕ್ಕೂ ಒಳ್ಳೆಯದು.
ಹೊಗೇನಕಲ್‌ನಲ್ಲಿ ಜೀವನದ ಹೊಯ್ದಾಟ
ಸದಾಶಿವ್ ಸೊರಟೂರು ಅವತ್ತು ಮಹದೇಶ್ವರ ಬೆಟ್ಟದಲ್ಲಿ ತಂಗಿ ಮರು ದಿನ ಸೂರ‍್ಯ ಹುಟ್ಟುವ ಕಾಲಕ್ಕಾಗಲೇ ಹೊಗೇನಕಲ್‌ನಲ್ಲಿರಬೇಕೆಂದು ಪ್ಲಾನ್ ಮಾಡಿಕೊಂಡು ಹೊರಟಿದ್ದೆವು. ಎಲ್ಲವೂ ಪ್ಲಾನ್ ಪ್ರಕಾರವೇ ಸಾಗಿತ್ತು. ಬೇಸಿಗೆಯ ದಿನಗಳು. ಕಾವೇರಿ ಮಂದವಾಗಿದ್ದಳು. ಹರಿವು ನಿಧಾನ. ಬಾಡೂಟಕ್ಕೆ ಆರ್ಡರ್ ನೀಡಿ ಪಾಲ್ಸ್ ಕಡೆ ನಮ್ಮ ಪ್ರಯಾಣ ಸಾಗಿತ್ತು. ಪಾಲ್ಸ್‌ನ್ನು ಹತ್ತಿರದಿಂದ ನೋಡಬೇಕಾದರೆ ನೀವು ತೆಪ್ಪದಲ್ಲಿ ಹೋಗಬೇಕು. ಬೇರೆ ದಾರಿಯಿಲ್ಲ. ತೀರ ನೀರು ಬಂದಾಗ ಅದಕ್ಕೆಲ್ಲ ಅವಕಾಶವಿಲ್ಲ. ಕಾವೇರಿಯ ಸೆಳೆತ ಕಡಿಮೆಯಿದ್ದದರಿಂದ ಅಂದು ಅದಕ್ಕೆ ಅವಕಾಶವಿತ್ತು. ಮೂರು ತೆಪ್ಪಗಳಲ್ಲಿ ಹೊರಟಿದ್ದಾಯ್ತು. ನಾವು ಕರ್ನಾಟಕದ ಕಡೆಯಿಂದ ಹೋಗಿದ್ದೆವು. ಅದ್ದರಿಂದ ಕನ್ನಡಿಗರೇ ಸಿಕ್ಕಿದ್ದರು ತೆಪ್ಪ ಹಾಯಿಸಲು. ಒಂದು ತೆಪ್ಪದಲ್ಲಿ ಮೂರು ಜನರಂತೆ ಹಾಯ್ದು ಹೋದೆವು. ಫಾಲ್ಸ್ ಹತ್ತಿರ ಹೋಗುವುದೊಂದು ಅದ್ಭುತ ಅನುಭವ. ಒಂದು ಕಿಲೋಮೀಟರ್ ನಷ್ಟು ನೀರಿನ ಮೇಲೆಯೇ ಸಾಗಬೇಕು. ಅದು ನೀರಿನ ಮೇಲಿನ ಪ್ರಪಂಚ. ಬೇರೆ ಬೇರೆ ತೆಪ್ಪಗಳ ಮೇಲೆ ಅಂಗಡಿಗಳು ತೆರೆದು ಕೊಂಡಿದ್ದವು. ಕೊಳ್ಳುವವರೂ ಇದ್ದರು. ನಮ್ಮ ತೆಪ್ಪದವ ಫಾಲ್ಸ್‌ನ ಬಳಿ ಕರೆದೊಯ್ದು, ತೆಪ್ಪದ ಮೇಲಿಂದಲೇ ನಮ್ಮನ್ನು ಮುಳುಗಿಸಿದ, ತೇಲಿಸಿದ, ತಿರುಗಿಸಿ ಖುಷಿ ಪಡಿಸಿ ತಮಿಳುನಾಡಿನ ಭಾಗದ ಒಂದು ಕಡೆ ತುಂಬು ಮರಳಿರುವ ಕಡೆ ತಂದು ಬಿಟ್ಟು ನೀರಿನಲ್ಲಿ ಆಟವಾಡಿಕೊಳ್ಳಿ ಎಂದು ನಮ್ಮನ್ನು ಬಿಟ್ಟು ದಡ ದಲ್ಲಿ ಕೂತ. ನಮ್ಮದು ನೀರಿನಲ್ಲಿ ಆಡಿದ್ದೆ ಆಟ. ನನಗೆ ಈಜು ಬಾರದು! ನಮ್ಮ ಗುಂಪಿನಲ್ಲಿ ಎಲ್ಲರಿಗೂ ಈಜು ಗೊತ್ತಿತ್ತು. ಅವರಂತೆ ನಾನೂ ಸಾಹಸಕ್ಕಿಳಿದು ತೀರ ದೂರ ಹೋಗಿಬಿಟ್ಟೆ. ನೀರಿನ ಸೆಳೆತ ಹೆಚ್ಚಾಯಿತು. ಎಳೆದುಕೊಂಡು ಹೋಗಲಾರಂಭಿಸಿತು. ಭಯವಾಯಿತು, ಬೆವೆತುಕೊಂಡೆ. ಒದ್ದಾಡಿದೆ. ಕೂಗಿದೆ. ಕರೆದೆ. ಗೆಳೆಯರಲ್ಲ ನಾನು ಜೋಕ್ ಮಾಡುತ್ತಿದ್ದೇನೆ ಎಂಬಂತೆ ನಗತೊಡಗಿದರು. ಬರ್ರೋ ನಾ ಸತ್ತು ಹೋಗ್ತೀನಿ ಅಂತ ಅರಚಿಕೊಂಡೆ. ನೋಡು ನೋಡುತ್ತಿದ್ದಂತೆ ದೂರ ಹೋಗಿಬಿಟ್ಟೆ. ಸದ್ಯಕ್ಕೆ ನಾನವತ್ತು ಸೇಪ್ಟಿ ಜಾಕೆಟ್ ಹಾಕಿದ್ದೆ. ತೇಲಿಕೊಂಡೆ ಹೋಗುತ್ತಿದ್ದೆ. ಆದರೆ ಭಯದಲ್ಲಿ ಒದ್ದಾಡುತ್ತಿದ್ದೆ. ಮುಳುಗಿ ಮುಳುಗಿ ಏಳುತ್ತಿದ್ದೆ. ಗೆಳೆಯ ಪ್ರಸನ್ನ ಜೋರಾಗಿ ಈಜಿಕೊಂಡು ಬಂದನಾದರೂ ಸೆಳೆವಿಗೆ ನನ್ನ ಕೈಯಲ್ಲಾಗದು ಎಂದು ವಾಪಸ್ಸು ಹೋಗಿಬಿಟ್ಟ. ದಡದಲ್ಲಿ ಬೀಡಿ ಸೇದುತ್ತಿದ್ದವನಿಗೆ ಭೀಕರತೆ ಅರ್ಥವಾಯಿತು ಅನಿಸುತ್ತೆ. ಒಂಚೂರು ತಡ ಮಾಡಿದರೂ ನಾನೆಲ್ಲಿ ಹೋಗಿ ಬಿಡುತ್ತಿದ್ದೆ ಎಂಬುದನ್ನು ತಿಳಿದುಕೊಂಡಿದ್ದ ಅವರು ತೆಪ್ಪದೊಂದಿಗೆ ನೀರಿಗೆ ಇಳಿದರು. ಕೂಗಿ ಗಾಬರಿಪಟ್ಟುಕೊಳ್ಳಬೇಡಿ ಎಂದು ಹೇಳುತ್ತಲೇ ವೇಗವಾಗಿ ಹುಟ್ಟು ಹಾಕುತ್ತ ಬರತೊಡಗಿದರು. ನೀರಿನ ಸೆಳೆತಕ್ಕೆ ನಾನು ಮತ್ತೊಷ್ಟು ದೂರ ಹೋಗುತ್ತಲೇ ಇದ್ದೆ. ನನಗಾಗಲೇ ಕಣ್ಣುಗಳು ತಿರುಗಲು ಆರಂಭಿಸಿದವು. ತೆಪ್ಪದವ ಅದೆಷ್ಟು ವೇಗವಾಗಿ ಬಂದ. ಕೂಗಿ ಕೂಗಿ ಧೈರ‍್ಯ ನೀಡಿದ. ತೆಪ್ಪದ ಮೇಲೆ ಹತ್ತಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ನಾನು ಗಾಬರಿಯಲ್ಲಿ ತೆಪ್ಪವನ್ನು ಹತ್ತಲು ಹೋಗಿ ಅದನ್ನು ಕೆಡವಿ ಮುಳುಗಿಸಿ ಬಿಡುತ್ತಾನೆ ಎಂಬ ಅರಿವಿತ್ತು ಅನಿಸುತ್ತೆ! ತೆಪ್ಪವನ್ನು ಎರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಳ್ಳಲು ಹೇಳಿದ. ನೀರಿನ ಹರಿವಿನ ಜಾಡು ಹಿಡಿದು ಹೇಗೋ ದೂರದ ದಡಕ್ಕೆ ತಂದು ನಿಲ್ಲಿಸಿದ. ದಡಕ್ಕೆ ಹೇಗೆ ಬಿದ್ದು ಬಿದ್ದೆನೊ ಗೊತ್ತಿಲ್ಲ. ಎಚ್ಚರವಾದಾಗ ಒಂದು ಹುಲ್ಲಿನ ಗುಡಿಸಲ ಒಳಗಿದ್ದೆ.
ಹಸಿರು ತಾಣಗಳಿಷ್ಟ
ನನಗೆ ಹಸಿರು ಬನಸಿರಿಗಳಿಂದ ತುಂಬಿದ ಪ್ರದೇಶಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿ ಕುಂದಾಪುರ, ಮಡಿಕೇರಿ, ಹಾಸನ, ಸಕಲೇಶಪುರಕ್ಕೆ ಆಗಾಗ ಹೋಗಿ ಬರುತ್ತೇನೆ. ನನಗೆ ಚಾಲೆಂಜ್ ತೆಗೆದುಕೊಳ್ಳುವುದೆಂದರೆ ಇಷ್ಟ. ಹಾಗಾಗಿ ಇಂತಹ ತಾಣಗಳಿಗೆ ಹೋಗಲು ಮನಸ್ಸು ಚಡಪಡಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರಕ್ಕೆ ಹೋಗಿ ಬರಬೇಕೆಂಬ ಆಸೆ ಇದೆ. ಲೋಕಲ್ ಫುಡ್‌ಗಾಗಿ ಟ್ರಾವೆಲ್ ನನ್ನದು ಯಾವಾಗಲೂ ಅನ್‌ಪ್ಲಾನ್ಡ್ ಟ್ರಿಪ್ ಆಗಿರುತ್ತದೆ. ತಿನ್ನುವುದಕ್ಕಾಗಿ ಹೆಚ್ಚಾಗಿ ಟ್ರಾವೆಲ್ ಮಾಡುವೆ. ಇಡ್ಲಿಗೆ ಬಿಡದಿ, ಕಾಫಿ ಕುಡಿಯಲು ಮೈಸೂರು, ನಾಟಿ ಸ್ಟೈಲ್ ಊಟಕ್ಕೆ ಚನ್ನಪಟ್ಟಣ್ಣ, ಬೆಟ್ಟ ನೋಡಲು ತುಮಕೂರಿಗೆ ಮನಸ್ಸು ಬಂದಾಗಲೆಲ್ಲಾ ಗೆಳೆಯರೊಟ್ಟಿಗೆ ಹೋಗಿ ಬಂದಾಗಲೇ ಸಮಾಧಾನ. ಕೆಲವೊಂದನ್ನು ಯಾವ ಸ್ಥಳದಲ್ಲಿ ತಿನ್ನಬೇಕೆಂದುಕೊಂಡಿರುತ್ತೆನೋ ಅಲ್ಲಿಯೇ ತಿಂದಾಗ ಖುಷಿ. ಯಾವ ಸ್ಥಳಕ್ಕೆ ಹೋದರೂ ಕೂಡ ನಾನು ಮೊದಲು ನೋಡುವುದು ಊಟ. ಉತ್ತಮ ಕಂಪಾನಿಯನ್ ಎಲ್ಲೇ ಟ್ರಾವೆಲ್ ಮಾಡಬೇಕೆಂದರೂ ಬೆಸ್ಟ್ ಕಂಪಾನಿಯನ್ ಮುಖ್ಯ. ನಮ್ಮ ಮನಸ್ಥಿತಿಗೆ ಹೊಂದಿಕೊಂಡು ಹೋದಾಗಲೇ ಮುಂದಿನ ಊರುಗಳನ್ನು ಸುತ್ತಲೂ ಅನುಕೂಲ. ಒಂಟಿಯಾಗಿ ಊರು ಸುತ್ತಲು ಇಷ್ಟವಾಗುವುದಿಲ್ಲ. ಯಾರಾದರೂ ಜತೆಗಿದ್ದರೆ ಸೇಫ್ ಹಾಗೂ ಸಾಕಷ್ಟು ಎಂಜಾಯ್ ಮಾಡಬಹುದು. ಅದಕ್ಕಾಗಿಯೇ ಲಾಂಗ್ ಡ್ರೈವ್ ಹೋಗುತ್ತಿರುತ್ತೇನೆ. ಟ್ರಿಪ್‌ನಲ್ಲಿ ಹೊಂದಾಣಿಕೆ ಬಹುಮುಖ್ಯ. ನಮ್ಮೊಟ್ಟಿಗೆ ಇರುವವರಿಗೆ ತಕ್ಕಂತೆ ಹೊಂದಿಕೊಂಡು ಹೋದಾಗ ಪ್ರಯಾಣ ಸುಖಕರವಾಗಿರುತ್ತದೆ. ಫಾರೆಸ್ಟ್‌ನಲ್ಲಿ ಮನೆಕಟ್ಟುವಾಸೆ ನನಗೆ ಹಸಿರು ಬನಸಿರಿಗಳೆಂದರೆ ತುಂಬಾ ಇಷ್ಟ. ಜೀವನದಲ್ಲಿ ದಟ್ಟವಾದ ಕಾಡಿನ ಮಧ್ಯೆ ಮನೆಕಟ್ಟಬೇಕೆಂಬ ಆಸೆ ಇದೆ. ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡುವೆ. ಅಲ್ಲಿ ನಮ್ಮದೇ ಆದ ಪುಟ್ಟ ಗೂಡಿದ್ದರೆ ಹಕ್ಕಿಗಳ ಚಿಲಿಪಿಲಿ ಸದ್ದಿನಲ್ಲಿ ನಮ್ಮ ಸದ್ದು ಇಂಪಾಗಿರುತ್ತದೆ. ಫೋಟೋಕ್ರೇಝ್ ನಾನು ಯಾವಾಗಲೂ ಹೆವಿ ಲಗೇಜ್ ಕ್ಯಾರಿ ಮಾಡುತ್ತಿರುತ್ತೇನೆ. ಮ್ಯಾಚಿಂಗ್ ಸ್ಲಿಪ್ಪರ್, ಮ್ಯಾಚಿಂಗ್ ಡ್ರೆಸ್ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಹೋದಂತಹ ಸ್ಥಳಗಳಲ್ಲಿ ಸಿಕ್ಕಾಪಟ್ಟೆ ಫೋಟೊ ತೆಗೆದುಕೊಂಡು ಇಟ್ಟುಕೊಳ್ಳುತ್ತೇನೆ. ಅಲ್ಲಿರುವ ಜನಜೀವನ, ಸಂಸ್ಕೃತಿ, ಆಹಾರ, ವಿಶೇಷತೆಯನ್ನು ತಿಳಿದುಕೊಳ್ಳುವ ಕುತೂಹಲವಿದೆ. ಅದಲ್ಲದೇ ತಪ್ಪದೇ ಶಾಪಿಂಗ್ ಮಾಡುವೆ. ಪ್ರಯಾಣವೆಂದರೆ ಜೀವನದಲ್ಲಿ ಮರೆಯಲಾಗದಂತಹ ಸಂಗತಿ. ಅಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ನೆನಪು ಮಾಡಿಕೊಂಡು ಖುಷಿ ಪಡುತ್ತೇವೆ. ಆದ್ದರಿಂದ ಕನಿಷ್ಟ 3 ತಿಂಗಳಿಗೊಮ್ಮೆಯಾದರೂ ಆಪ್ತರೊಂದಿಗೆ ಟ್ರಿಪ್‌ಗೆ ಹೋಗಲು ರೆಡಿಯಾಗಿ. ನಟಿ, ಮಮತಾ ರಾವತ್ ನಿರೂಪಣೆ-ನಂದು
ಹಿರೋಷಿಮಾ ಎಂಬ ಹಸಿರ ತಾಣ
ನಳನಳಿಸುವ ಹಸಿರು, ಋುತುಮಾನಕ್ಕೆ ತಕ್ಕಂತೆ ಅರಳಿ ನಿಲ್ಲುವ ಹೂಗಳ ರಾಶಿ, ಅದ್ಭುತ ವಿನ್ಯಾಸದ ಕಟ್ಟಡಗಳನ್ನು ನೋಡಿದರೆ ಜಪಾನೀಯರ ಎದ್ದುನಿಲ್ಲುವ ಶಕ್ತಿಗೆ, ಛಲಕ್ಕೆ ಹ್ಯಾಟ್ಸ್ ಆಫ್. ಎಸ್. ಪಿ. ವಿಜಯಲಕ್ಷ್ಮಿ ಹಿರೋಷಿಮಾ ಅಂದಾಗ ಯುದ್ಧ, ಸಾವು, ನೋವು ಅಷ್ಟೆ ನನ್ನ ಮನಸ್ಸಿನೊಳಗೆ ಉಳಿದು ಬಿಟ್ಟಿತ್ತು. ಆದರೆ ಯಾವಾಗ ಜಪಾನಿನೊಳಗೆ ಕಾಲಿಟ್ಟೆನೋ ಆಗಲೇ ತೆರೆದುಕೊಂಡಿದ್ದು ಅಲ್ಲಿನ ಸೌಂದರ‍್ಯ. ಒಸಾಕಾದಿಂದ ಹಿರೋಷಿಮಾಗೆ ಹೋಗುವ ಹಾದಿಯೇ ಅದ್ಭುತ. ಜಪಾನಿನಲ್ಲಿ ಊರುಗಳು ಬಹಳ ಹತ್ತಿರಹತ್ತಿರದಲ್ಲೇ ಇರುತ್ತವೆ. ನಡುವಿನ ಹಾದಿ ದಟ್ಟಹಸಿರು, ಸುಂದರವಾದ ಭೂಭಾಗವನ್ನು ಹೊಂದಿದ್ದು ಕಸಕೊಳಕು ಕಾಣುವುದೇ ಇಲ್ಲ. ಹಿರೋಷಿಮಾ ತಲುಪುವವರೆಗೆ, ತಲುಪಿದ ಮೇಲೆ ನಾಕಂಡ ಹಿರೋಷಿಮಾ ಭಗ್ನಾವಶೇಷಿಯಾಗಿರಲಿಲ್ಲ, ಪಳೆಯುಳಿಕೆಗಳ ದಾರುಣಗೂಡಾಗಿರಲಿಲ್ಲ, ಪಾಪ ಎನ್ನುವ ಸ್ಥಿತಿಯೂ ಅದರದ್ದಾಗಿರಲಿಲ್ಲ, ಬದಲಾಗಿ ಅದೊಂದು ಅತಿಸುಂದರವಾಗಿ ಅರಳಿ ನಿಂತ ಊರಾಗಿ ಪರಿವರ್ತಿತವಾಗಿತ್ತು. ಎಲ್ಲೆಲ್ಲಿ ನೋಡಲಿ ನಳನಳಿಸುವ ಹಸಿರು, ಋುತುಮಾನಕ್ಕೆ ತಕ್ಕಂತೆ ಅರಳಿ ನಿಲ್ಲುವ ಹೂಗಳ ರಾಶಿ, ಅದ್ಭುತ ವಿನ್ಯಾಸದ ಕಟ್ಟಡಗಳು, ವಾರೆವ್ಹಾ...ಜಪಾನೀಯರ ಎದ್ದುನಿಲ್ಲುವ ಶಕ್ತಿಗೆ, ಛಲಕ್ಕೆ ಹ್ಯಾಟ್ಸ್ ಆಫ್. ಹಿರೋಷಿಮಾ, ಜಪಾನಿನ ಕೈಗಾರಿಕೆ ಮತ್ತು ಮಿಲಿಟರಿಯ ಮುಂಚೂಣಿಯಲ್ಲಿರುವ ಪ್ರಮುಖ ನಗರ. ಶಾಂತತೆಯ ಪ್ರತೀಕ ಇಲ್ಲಿಯ ಜನಸಂಖ್ಯೆ ಹನ್ನೊಂದು ಲಕ್ಷ ದಷ್ಟು. ಇಂದು ಜಪಾನ್ ಅತ್ಯಂತ ಶಾಂತಿಯುತವಾದ ದೇಶ. ಇಲ್ಲಿಯ ಜನ ಗಟ್ಟಿಯಾಗಿ ಮಾತೂ ಆಡುವುದಿಲ್ಲ. ಶಿಸ್ತು, ಸಂಯಮ, ಶಾಂತಿ ಅಲ್ಲಿ ಹೆಜ್ಜೆಹೆಜ್ಜೆಗೂ ನಾವು ಕಾಣುತ್ತೇವೆ. ಎದುರು ಬಂದವರಿಗೊಂದು ಸೌಮ್ಯ ನಗೆ, ಪರಿಚಿತರಿಗೆ ತಲೆಬಗ್ಗಿ ವಂದನೆ, ಗಟ್ಟಿಯಾಗಿ ನಡೆದರೆ ಎಲ್ಲಿ ಭೂತಾಯಿ ನೊಂದುಕೊಳ್ಳುವಳೋ ಎಂಬಂಥ ಮೆಲ್ಲನಡೆ, ನಿಜಕ್ಕೂ ನನಗಂತೂ ಅತ್ಯಾಶ್ಚರ್ಯಕರವಾಗಿ ಕಂಡಿತು. ನಾವು ಕಂಡ ಜಪಾನ್ ಅದೆಷ್ಟು ಸ್ವಚ್ಛ ಎಂದರೆ, ಹೇಮಂತ ಹೆಜ್ಜೆಯಿಟ್ಟಿದ್ದಕ್ಕೆ ಉದುರುತ್ತಿರುವ ಹತ್ತಾರು ಹಣ್ಣೆಲೆಗಳ ಬಿಟ್ಟರೆ ಮತ್ತಾವ ಕಸಕಡ್ಡಿಯನ್ನೂ ಕಾಣಲಿಲ್ಲ. ಇಂಥಾ ಸುವ್ಯವಸ್ಥಿತ ಜನಜೀವನವಿರುವ ಹಿರೋಷಿಮಾದಲ್ಲಿ, ಈಗ್ಗೆ ಎಪ್ಪತ್ತೆರಡು ವರ್ಷಗಳ ಹಿಂದೆ ವಿನಾಶಕಾರಿಯಾದ ಅಣುಬಾಂಬ್ ದೈತ್ಯ ದಾಳಿ ನಡೆದು ಛಿದ್ರಛಿದ್ರವಾದ ದುರಂತವೊಂದು ನಡೆದಿತ್ತೆನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈ ನಗರ ಈ ದುರಂತವನ್ನು ಮರೆತಿಲ್ಲ. ಅದನ್ನು ಬುನಾದಿಯನ್ನಾಗಿಸಿಕೊಂಡೇ ಮೇಲೊಂದು ಸುಂದರವಾದ ಸ್ವರ್ಗವನ್ನೇ ಸೃಷ್ಟಿಸಿಬಿಟ್ಟಿದೆ. ಹೌದು ಹಿರೋಷಿಮಾ ಪೀಸ್ ಮೆಮೊರಿಯಲ್ ಪಾರ್ಕ್‌ಗೆ ಭೇಟಿಯಿತ್ತಾಗ ಇಲ್ಲಿನ ಕಣಕಣವೂ ಆ ದುರಂತವನ್ನು ಬಿಚ್ಚಿಟ್ಟಿತು. ಕಾಣುವ, ಕೇಳುವ ನಮ್ಮದಿಗಳಿಂದ ನಿಟ್ಟುಸಿರು ಹೊರಬಿದ್ದರೂ, ಇಲ್ಲೀಗ ಸೃಷ್ಟಿಯಾಗಿರುವ ನಂದನವನದ ಸ್ವಚ್ಛ ಸುಂದರ ಹವೆಯಲ್ಲಿ ಹಳೆಯ ಪರಿಣಾಮದ ಘೋರತೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಿಸಿತು. ಹಿರೋಷಿಮಾದ ಹಿನ್ನೋಟ ಜಪಾನ್ ಒಂದಿಷ್ಟು ಬೇಡದ ಧಾಷ್ಟ್ರ್ಯ ತೋರಿಸಿಬಿಟ್ಟಿತೇ,ಅಮಾಯಕವಿತ್ತೇ, ದೇಶದ ಬಗ್ಗೆ ತೀವ್ರಕಾಳಜಿ ಹೊತ್ತಿತ್ತೇ? ಗೊತ್ತಿಲ್ಲ. ಆದರೆ, ಅಮೆರಿಕದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಜಪಾನ್ ಅಪಾರವಾದ ಬೆಲೆಯನ್ನು ತೆರಬೇಕಾಯ್ತು. ಇತಿಹಾಸದ ಪುಟಗಳಲ್ಲಿ ರಕ್ತದ ಅಧ್ಯಾಯ ಬರೆಯಲು ನಾಂದಿಯಾಯಿತು. 1945 ಆಗಸ್ಟ್ 6 ರಂದು ಅಮೆರಿಕ ಹಿರೋಷಿಮಾದ ಮೇಲೆ ಪ್ರಬಲವಾದ ಅಣುಬಾಂಬನ್ನು ನಿರ್ದಾಕ್ಷಿಣ್ಯವಾಗಿ ಹಾಕಿಯೇಬಿಟ್ಟಿತು. ಮನುಕುಲದ ಸ್ವಾರ್ಥದ ಕರಿನೆರಳು ಹಿರೋಷಿಮಾ ನೆಲದಲ್ಲೊಂದು ದುರಂತ ಅಧ್ಯಾಯ ಬರೆದಿಟ್ಟಿತು,್ತ ಎಂದೆಂದೂ ಅಳಿಸದಂತೆ. ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್ ಒಂದೊದು ಹೆಜ್ಜೆ ನಡೆದಾಗಲೂ, ಹೀಗೆ ಮೇಲಿನ ಆ ಕರಾಳ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಈ ಪಾರ್ಕ್ ನಿರ್ಮಾಣವಾಗಿರುವುದೇ ಮಡಿದ ಆತ್ಮಗಳಿಗೆ ಶಾಂತಿಕೋರಿ, ಮನುಕುಲಕ್ಕೆ ಶಾಂತಿಮಂತ್ರ ನೆನಪಿಸುವುದಕ್ಕೆ. ಇಲ್ಲಿ ಹರಿಯುವ ನದಿಯ ಇಕ್ಕೆಲದಲ್ಲಿ ಈ ಪಾರ್ಕ್ ನಿರ್ಮಾಣವಾಗಿದೆ. ಇಡೀ ಪ್ರದೇಶ ಹೆಚ್ಚಿಗೆ ಎತ್ತರವಿಲ್ಲದ ಮೇಪಲ್, ಗಿಂಕೋ ಮರಗಳಿಂದ, ದಟ್ಟಹಸಿರಿನ ಗಿಡಗಳಿಂದ ಅತಿಸುಂದರವಾಗಿದೆ. ಇಲ್ಲಿ ಗೆನ್‌ಬಾಕೊ ಡೋಮ್ ಎಂಬ ಸ್ಮಾರಕ ಧಾಳಿಯಲ್ಲಿ ಬದುಕುಳಿದ ಕಟ್ಟಡ. ಎಂಥದೇ ದುಷ್ಟಶಕ್ತಿಯ ಆಕ್ರಮಣದಲ್ಲೂ ಅಲುಗಾಡದೇ ನಿಂತ, ಮಾನವನಿರ್ಮಿತ ಅತ್ಯಂತ ಬಲಶಾಲಿ ಕಟ್ಟಡ ಇದೆನ್ನುವುದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ಮಡಿದ 6000ಮಕ್ಕಳ ನೆನಪಿನ ಸ್ಮಾರಕ, ಮಡಿದಆತ್ಮಗಳ ಶಾಂತಿಗಾಗಿ ಸದಾ ಉರಿಯುವ ಜ್ಯೋತಿ, ಬೇರೆಬೇರೆ ಸ್ಮಾರಕಗಳು ಅಂದಿನ ದುರಂತಕತೆಯ ಮೂಕಸಾಕ್ಷಿಯಾಗಿ ನಿಂತು ನಮ್ಮ ಹೃದಯವನ್ನು ದ್ರವಿಸಿಬಿಡುತ್ತವೆ. ಇಲ್ಲಿನ ಮ್ಯೂಸಿಯಮ್‌ನಲ್ಲಿ ಈ ದುರಂತದ ಚಲನಚಿತ್ರ ಪ್ರದರ್ಶನವಾಗುತ್ತದೆ. ಆ ದಿನದ ಸಾಕ್ಷಿಯಾಗಿ ಉಳಿದ ಭಗ್ನಾವಶೇಷಗಳನ್ನು ಅಂದರೆ ಚಿಂದಿಚಿಂದಿಯಾದ ಮಕ್ಕಳ ಬಟ್ಟೆಗಳು, ತಲೆಬುರುಡೆ, ಮೂಲರೂಪ ಕಳೆದುಕೊಂಡ ನೆಲದ ಟೈಲ್ಸ್, ಇತ್ಯಾದಿ-ಪ್ರದರ್ಶನಕ್ಕಿಟ್ಟಿರುವುದಲ್ಲದೇ, ನೆಲಸಮವಾದ ಹಿರೋಷಿಮಾದ ನೂರಾರು ಫೋಟೋಗಳಿವೆ. ಹೋಗುವುದು ಹೇಗೆ? ಬೆಂಗಳೂರಿನಿಂದ ಹಾಂಗ್‌ಕಾಂಗ್ ಮೂಲಕ ಜಪಾನಿನ ಒಸಾಕಾಪಟ್ಟಣ ತಲುಪಬಹುದು. ಒಸಾಕಾದಿಂದ ರಸ್ತೆಮಾರ್ಗದ ಮೂಲಕ ಹಿರೋಷಿಮಾ ನಾಲ್ಕುಗಂಟೆಯ ಪ್ರಯಾಣ. ವ್ಯವಸ್ಥಿತವಾದ ರೈಲುಮಾರ್ಗವೂ ಇದೆ. ಇದಲ್ಲದೆ ಮುಂಬೈ, ದಿಲ್ಲಿ, ಚೆನ್ನೈಗಳಿಂದ ಜಪಾನಿನ ಟೋಕಿಯೋಗೆ ಹೋಗಿ ಅಲ್ಲಿಂದಲೂ ಬಸ್ಸು, ರೈಲುಮಾರ್ಗವಾಗಿ ಹಿರೋಷಿಮಾ ತಲುಪಬಹುದು. ಪ್ಯಾಕೇಜ್ ಟೂರ್ ಕಂಪೆನಿಗಳ ಮುಖಾಂತರ ಹೋದರೆ ಕಡಿಮೆ ಖರ್ಚಿನಲ್ಲಿ, ಪ್ರಯಾಸ ಹೆಚ್ಚಿಲ್ಲದೆ ಈ ಸ್ಥಳಗಳನ್ನೆಲ್ಲ ನೋಡಬಹುದು.